ನಗರಸಭೆ ವ್ಯಾಪ್ತಿಯಲ್ಲಿ ತೂಗಾಡುತ್ತಿವೆ ಜೋಡಿ ಕಸದ ಬುಟ್ಟಿಗಳು !

0

ಲಘು ಕಸ ಸಂಗ್ರಹಕ್ಕಾಗಿ 42 ಕಡೆಗಳಲ್ಲಿ ಅಳವಡಿಕೆ
ಹಸಿ ಕಸ, ಒಣ ಕಸಕ್ಕಾಗಿ ಪ್ರತ್ಯೇಕ ತೊಟ್ಟಿ

ಪುತ್ತೂರು: ರಸ್ತೆ ಬದಿಯಲ್ಲಿ ಕಸದ ತೊಟ್ಟಿ ಇದ್ದರೆ ದುರ್ನಾತವೋ ದುರ್ನಾತ. ನಾಗರಿಕರು ಮೂಗು ಮುಚ್ಚಿಕೊಂಡೇ ಹೋಗಬೇಕಾದ ಪರಿಸ್ಥಿತಿ. ಬಡಾವಣೆ, ರಸ್ತೆಗಳ ಅಕ್ಕಪಕ್ಕದಲ್ಲಿ ಕಸದ ತೊಟ್ಟಿಗಳನ್ನು ಕಂಡಾಗ ಬಹುತೇಕ ಮಂದಿ ಬೇಸರದಿಂದ ಹೇಳುವ ಮಾತುಗಳಿವು. ಈ ರೀತಿ ಅಲ್ಲಲ್ಲಿ ಕಸದ ತೊಟ್ಟಿಗಳನ್ನು ಇಡುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಜೊತೆಗೆ ಸ್ವಚ್ಛ ನಗರದ ಅಂದಕ್ಕೆ ಕಪ್ಪುಚುಕ್ಕೆಯಾಗಲಿದೆ ಎನ್ನುವ ಕಾರಣಕ್ಕೆ ಈ ಹಿಂದೆ ರಸ್ತೆ ಬದಿ ಕಸದ ತೊಟ್ಟಿಗಳಿಗೆ ಮುಕ್ತಿ ನೀಡಿ, ಮನೆ ಮನೆ ಮತ್ತು ಅಂಗಡಿ ಮಳಿಗೆಗಳಿಂದಲೇ ಕಸ ಸಂಗ್ರಹ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಆದರೂ ರಸ್ತೆ ಬದಿ ಬಿಸ್ಕತ್, ಚಾಕಲೇಟ್, ತಿಂಡಿ, ಗುಟ್ಕಾ ಪ್ಯಾಕೆಟ್‌ಗಳ ಕಸಗಳ ರಾಶಿ ದಿನೇ ದಿನೆ ಹೆಚ್ಚುತ್ತಿರುವುದರಿಂದ ಅದರ ನಿಯಂತ್ರಣಕ್ಕಾಗಿ ಇದೀಗ ಘನ ತ್ಯಾಜ್ಯದ ಬದಲು ಲಘು ಕಸಗಳ ಸಂಗ್ರಹಣೆಗಾಗಿ ಪುತ್ತೂರು ನಗರಸಭೆ ವ್ಯಾಪ್ತಿಯ ವಿವಿಧ ಕಡೆಗಳಲ್ಲಿರಿಸಲಾಗಿರುವ ‘ಕಸದ ಡಬ್ಬಿಗಳು’ ಸಾರ್ವಜನಿಕರ ಗಮನ ಸೆಳೆಯುತ್ತಿವೆ.

ಬಿಸಿಲಿಗೆ ಹೊಳೆಯುತ್ತ ನೆಲದಿಂದ ಸ್ವಲ್ಪ ಮೇಲೆತ್ತರದಲ್ಲಿ ಗಾಳಿಯಲ್ಲಿ ನೇತಾಡುವ ರೀತಿಯಲ್ಲಿ ಈ ಡಬ್ಬಿಗಳು ಕಾಣುತ್ತವೆ. ದೂರದಿಂದ ಇವುಗಳನ್ನು ಕಂಡವರು ‘ಅರೆರೆ ಇದೇನಿದು’ ಎಂದು ಆಶ್ಚರ್ಯಚಕಿತರಾಗಿ ಬಳಿಕ ಹತ್ತಿರ ಹೋಗಿ ನೋಡುವಂತೆ ಮಾಡುತ್ತಿವೆ. ಸ್ವಚ್ಛಭಾರತ್ ಮಿಷನ್ ಯೋಜನೆಯಡಿ ನಗರದ ಆಯ್ದ ಸಾರ್ವಜನಿಕ ಪ್ರದೇಶಗಳಲ್ಲಿ ಸುಮಾರು ರೂ.10 ಲಕ್ಷ ವೆಚ್ಚದಲ್ಲಿ ಒಟ್ಟು 42 ಕಡೆಗಳಲ್ಲಿ ಈ ತೂಗು ಜೋಡಿ ಕಸದ ಬುಟ್ಟಿ (ಟ್ವಿನ್ ಬಿನ್)ಅಳವಡಿಸಲಾಗಿದೆ. ನಗರಸಭೆ ವ್ಯಾಪ್ತಿಯ ಪಾರ್ಕ್‌ಗಳ ಮುಂದೆ, ಹೊಟೇಲ್‌ಗಳು, ಸಾರ್ವಜನಿಕ ಬಸ್ ತಂಗುದಾಣದ ಬಳಿ, ಮೂರು ರಸ್ತೆ ಸೇರುವ ಜಂಕ್ಷನ್‌ಗಳ ಬಳಿ ಈ ಟ್ವಿನ್ ಬಿನ್‌ಗಳನ್ನು ಅಳವಡಿಸಲಾಗಿದೆ.

ಏನಿದು ತೂಗು ಕಸದ ಬುಟ್ಟಿಗಳು: ಎರಡು ತೂಗು ಕಸದ ಬುಟ್ಟಿಗಳನ್ನು ಜೊತೆಯಾಗಿ ಇರಿಸಲಾಗಿದೆ. ಒಂದು ಬುಟ್ಟಿ ಹಸಿ ಕಸ ಸಂಗ್ರಹಕ್ಕೆ ಮತ್ತೊಂದು ಒಣ ಕಸಸಂಗ್ರಹಕ್ಕೆ ನಿಗದಿ ಪಡಿಸಲಾಗಿದೆ. ಸ್ಟೈನ್‌ಲೆಸ್ ಸ್ಟೀಲ್‌ನ ಈ ಬುಟ್ಟಿಗಳು ಘಳಘಳ ಹೊಳೆಯುತ್ತವೆ. ಈ ಬುಟ್ಟಿಗಳ ಮೇಲೆ ಹಸಿ ಕಸ,ಒಣಕಸ ಎಂದು ಬರೆಯಲಾಗುವುದು. ಈ ಬುಟ್ಟಿಗಳ ವಿಶೇಷತೆ ಎಂದರೆ ಮಳೆ ಮತ್ತು ಬಿಸಿಲಿನ ತಾಪಮಾನಕ್ಕೆ ಅಂದರೆ ಉಷ್ಣ ನಿರೋಧಕವಾಗಿದೆ. ಅಲ್ಲದೆ ತುಕ್ಕು ಹಿಡಿಯುವುದಿಲ್ಲ. ಒಂದೊಂದು ಬುಟ್ಟಿಯಲ್ಲಿ 50 ಕೆ.ಜಿಯಷ್ಟು ಕಸ ಸಂಗ್ರಹ ಸಾಮರ್ಥ್ಯ ಹೊಂದಿದೆ.ಅತ್ಯಂತ ಕಡಿಮೆ ಸ್ಥಳಗಳಲ್ಲಿ ಯಾರಿಗೂ ಅಡಚಣೆ ಆಗದ ರೀತಿಯಲ್ಲಿ ಮತ್ತು ಆಯಕಟ್ಟಿನ, ಹೆಚ್ಚು ಕಸ ಬೀಳುವ ಸ್ಥಳಗಳನ್ನು ಗುರುತಿಸಿ ಇವುಗಳನ್ನು ಅಳವಡಿಸಲಾಗಿದೆ. ಕಬ್ಬಿಣದ ಎರಡು ಪಟ್ಟಿಗಳನ್ನು ನೆಲದಲ್ಲಿ ನಿಲ್ಲಿಸಿ ಕಾಂಕ್ರೀಟ್ ಹಾಕಿ ಆ ಪಟ್ಟಿಗೆ ಎರಡೂ ಕಸದ ಬುಟ್ಟಿಗಳನ್ನು ಅಳವಡಿಸಲಾಗಿದೆ.

ಲಘು ಕಸಗಳನ್ನು ಹಾಕುವ ವ್ಯವಸ್ಥೆ

ಈಗಾಗಲೇ ಮನೆ ಮನೆ ಘನ ತ್ಯಾಜ್ಯ ಸಂಗ್ರಹಣೆಗೆ ನಗರಸಭೆಯಿಂದ ವಾಹನಗಳು ಹೋಗುತ್ತವೆ. ಆದರೆ ನಗರಸಭೆ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಪರವೂರಿನಿಂದ ಬಂದವರು ಆಥವಾ ಊರಿನವರೇ ಅಂಗಡಿಗಳಿಂದ ತಿಂಡಿ ತಿನಸು ಖರೀದಿ ಮಾಡಿ ದಾರಿಯಲ್ಲಿ ತಿಂಡಿಗಳ ಪ್ಯಾಕೇಟ್ ಬಿಸಾಡುವ ಸಾಧ್ಯತೆ ಇದೆ. ಸಣ್ಣ ಸಣ್ಣ ಚಾಕಲೇಟ್, ಬಿಸ್ಕಟ್ ರ‍್ಯಾಪರ್‌ಗಳನ್ನು ಹಾಕಲೆಂದು ಈ ಬಿನ್‌ಗಳನ್ನು ಅಳವಡಿಸಲಾಗಿದೆ. ಪ್ರತಿ ದಿನ ಪೌರ ಕಾರ್ಮಿಕರು ಅದನ್ನು ಸ್ವಚ್ಛಗೊಳಿಸುತ್ತಾರೆ. ಹಸಿ ಮತ್ತು ಒಣ ಕಸ ಎಂದು ಅದಕ್ಕೆ ಸ್ಟಿಕ್ಕರ್ ಅಂಟಿಸುವ ಕೆಲಸ ಕಾರ್ಯ ನಡೆಯುತ್ತಿದೆ.
ಮಧು ಎಸ್ ಮನೋಹರ್,
ಪೌರಾಯುಕ್ತರು ನಗರಸಭೆ ಪುತ್ತೂರು

LEAVE A REPLY

Please enter your comment!
Please enter your name here