ಮಳೆಗಾಲ ಎದುರಿಸಲು ಕೆದಂಬಾಡಿ ಗ್ರಾಪಂ ಸನ್ನದ್ಧ-ಗ್ರಾಪಂ ಸಾಮಾನ್ಯ ಸಭೆ

0


ಪುತ್ತೂರು: ಇನ್ನೇನು ಮಳೆಗಾಲ ಆರಂಭವಾಗಲಿದ್ದು ಗ್ರಾಮಸ್ಥರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೆದಂಬಾಡಿ ಗ್ರಾಪಂ ಎಲ್ಲಾ ರೀತಿಯಲ್ಲಿ ಸನ್ನದ್ಧವಾಗಿದೆ ಎಂದು ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ ತಿಳಿಸಿದರು.

ಗ್ರಾಪಂ ರಸ್ತೆಗಳ ಚರಂಡಿ ದುರಸ್ತಿ, ಶಾಲೆ, ಅಂಗನವಾಡಿ ಕೇಂದ್ರಗಳ ಬಳಿ ಇರುವ ಅಪಾಯಕಾರಿ ಮರಗಳ ತೆರವುಗೊಳಿಸುವುದು ಸೇರಿದಂತೆ ಸಾರ್ವಜನಿಕರಿಗೆ ಆರೋಗ್ಯ ಜಾಗೃತಿ ಮಾಹಿತಿ ನೀಡುವ ಕೆಲಸವನ್ನು ಆರೋಗ್ಯ ಇಲಾಖೆಯೊಂದಿಗೆ ಸೇರಿಕೊಂಡು ಮಾಡಲಾಗುವುದು, ಗ್ರಾಮಸ್ಥರು ಗ್ರಾಪಂನೊಂದಿಗೆ ಸಹಕರಿಸುವಂತೆ ಅವರು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಕೇಳಿಕೊಂಡರು.


ಸಭೆಯು ಜೂ.01 ರಂದು ಗ್ರಾಪಂ ಸಭಾಂಗಣದಲ್ಲಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಳೆಗಾಲಕ್ಕೆ ಗ್ರಾಪಂ ಯಾವ ರೀತಿಯಲ್ಲಿ ತಯಾರಿಗೊಂಡಿದೆ ಎಂಬ ವಿಷಯದಲ್ಲಿ ಅವರು ಸದಸ್ಯರಿಗೆ ಮಾಹಿತಿ ನೀಡುತ್ತಾ, ಪ್ರತಿ ವಾರ್ಡ್‌ನ ಸದಸ್ಯರು ತಮ್ಮ ವಾರ್ಡ್‌ನ ಗ್ರಾಪಂ ರಸ್ತೆಗಳ ಚರಂಡಿ, ಕಣಿಗಳ ಬಗ್ಗೆ ಗಮನ ಹರಿಸುವಂತೆ ಕೇಳಿಕೊಂಡರು. ಅಲ್ಲದೆ ಶಾಲೆ, ಅಂಗನವಾಡಿ ಕೇಂದ್ರಗಳ ಬಳಿ ಅಪಾಯಕಾರಿ ಮರಗಳಿವೆಯಾ ಎಂಬ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು.


ಅಪಾಯಕಾರಿ ಮರಗಳ ತೆರವು
ಶಾಲೆ ಮತ್ತು ಅಂಗನವಾಡಿ ಕೇಂದ್ರಗಳ ಬಳಿ ಅಪಾಯಕಾರಿ ಮರಗಳು ಇದ್ದರೆ ಅದನ್ನು ತಕ್ಷಣವೇ ಗ್ರಾಪಂ ವತಿಯಿಂದ ತೆರವುಗೊಳಿಸುವ ಕೆಲಸ ಮಾಡಲಾಗುವುದು, ಇನ್ನು ರಸ್ತೆ ಬದಿಗಳಲ್ಲಿ ವಿದ್ಯುತ್ ಕಂಬಗಳಿಗೆ ಹಾನಿಯುಂಟು ಮಾಡುವ ಮರಗಳಿದ್ದರೆ ಅವುಗಳನ್ನು ಸಾಧ್ಯವಾದರೆ ಗ್ರಾಪಂನಿಂದ ತೆರವುಗೊಳಿಸುವುದು ಇಲ್ಲದಿದ್ದರೆ ಅರಣ್ಯ ಇಲಾಖೆಗೆ ಬರೆದುಕೊಳ್ಳುವುದು ಎಂದು ತಿಳಿಸಿದರು. ಖಾಸಗಿ ಜಾಗದಲ್ಲಿರುವ ಅಪಾಯಕಾರಿ ಮರಗಳನ್ನು ಖಾಸಗಿ ಜಮೀನಿನವರೇ ತೆರವು ಮಾಡಬೇಕಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಅಪಾಯಕಾರಿ ಮರಗಳಿದ್ದರೆ ಗ್ರಾಪಂಗೆ ಮಾಹಿತಿ ನೀಡುವಂತೆ ಕೇಳಿಕೊಂಡರು.


ಚರಂಡಿ, ಕಣಿ ದುರಸ್ತಿ
ಮಳೆಗಾಲದಲ್ಲಿ ಮುಖ್ಯವಾಗಿ ಕಾಡುವ ಸಮಸ್ಯೆ ಎಂದರೆ ರಸ್ತೆ ಬದಿಯ ಚರಂಡಿ ಮತ್ತು ಕಣಿಗಳ ದುರಸ್ತಿ. ಚರಂಡಿಯಲ್ಲಿ ಸರಿಯಾಗಿ ನೀರು ಹರಿದು ಹೋಗದೇ ಇರುವುದರಿಂದ ರಸ್ತೆ ಮೇಲೆ ನೀರು ಬಂದು ಕೆಸರುಮಯವಾಗುವ ಸಾಧ್ಯತೆ ಹೆಚ್ಚು ಇದಲ್ಲದೆ ಕಚ್ಚಾ ರಸ್ತೆಗಳಲ್ಲಿ ಗುಂಡಿ ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗುತ್ತದೆ. ಆದ್ದರಿಂದ ತುರ್ತು ದುರಸ್ತಿಯನ್ನು ಗ್ರಾಪಂ ಅನುದಾನದಲ್ಲಿ ಮಾಡುವುದು, ಇನ್ನುಳಿದ ದೊಡ್ಡ ಮೊತ್ತದ ದುರಸ್ತಿಗೆ ಕ್ರಿಯಾ ಯೋಜನೆ ತಯಾರಿಸಿ ದುರಸ್ತಿ ಮಾಡುವುದು ಎಂದು ಅಧ್ಯಕ್ಷ ರತನ್ ರೈ ತಿಳಿಸಿದರು.


ರಸ್ತೆ ಹಾಳಾಗದಂತೆ ತಡೆಯುವಲ್ಲಿ ಗ್ರಾಮಸ್ಥರ ಪಾತ್ರವೂ ಇದೆ
ಮಳೆಗಾಲದಲ್ಲಿ ಮಳೆನೀರನ್ನು ರಸ್ತೆಗೆ ಬಿಡುವುದರಿಂದ ನೀರಿನೊಂದಿಗೆ ಮಣ್ಣು ಸೇರಿಕೊಂಡು ಬಂದು ರಸ್ತೆಯಲ್ಲಿ ಶೇಖರಣೆಯಾಗುತ್ತದೆ ಇದರಿಂದ ರಸ್ತೆ ಹಾಳಾಗುವುದರೊಂದಿಗೆ ವಾಹನ ಸಂಚಾರಕ್ಕೂ ತೊಂದರೆಯಾಗುತ್ತದೆ ಆದ್ದರಿಂದ ಗ್ರಾಮಸ್ಥರು ರಸ್ತೆಗೆ ಮಳೆನೀರನ್ನು ಬಿಡದೆ ರಸ್ತೆ ಹಾಳಾಗದಂತೆ ತಡೆಯುವುದು ಬಹುಮುಖ್ಯವಾಗಿದೆ ಎಂದು ಅಧ್ಯಕ್ಷ ರತನ್ ರೈ ತಿಳಿಸಿದರು.


ರಸ್ತೆ ಬದಿಯಲ್ಲಿ ಹೆಚ್ಚುತ್ತಿರುವ ಕಸ,ತ್ಯಾಜ್ಯ
ಗ್ರಾಪಂ ವ್ಯಾಪ್ತಿಯ ಕಜೆಯಿಂದ ಕುಂಬ್ರ ತನಕ ರಸ್ತೆ ಬದಿಯಲ್ಲಿ ಕಸ, ತ್ಯಾಜ್ಯದ ರಾಶಿ ಹೆಚ್ಚುತ್ತಿದ್ದು ಇದನ್ನು ಮಳೆಗಾಲದ ಮೊದಲು ತೆರವುಗೊಳಿಸಬೇಕಾಗಿದೆ ಎಂದು ಕೃಷ್ಣ ಕುಮಾರ್ ಇದ್ಯಪೆ ತಿಳಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ರತನ್ ರೈಯವರು, ರಸ್ತೆ ಬದಿಗೆ ಕಸ, ತ್ಯಾಜ್ಯ ಸುರಿಯುವವರನ್ನು ತಡೆಯುವ ಬಗ್ಗೆ ಬಹಳಷ್ಟು ಪ್ರಯತ್ನ ಪಟ್ಟಿದ್ದೇವೆ. ಕಸ ಹಾಕುವವರನ್ನು ಹಿಡಿದು ದಂಡ ಹಾಕುವುದು ಆಗಿದೆ. ಸೂಚನಾ ಫಲಕಗಳನ್ನು ಕೂಡ ಹಾಕಿದ್ದೇವೆ. ಆದರೂ ಕಸ,ತ್ಯಾಜ್ಯ ಹಾಕುವವರು ಹಾಕುತ್ತಲೇ ಇದ್ದಾರೆ. ಕಸ, ತ್ಯಾಜ್ಯ ಹಾಕುವವರಿಗೆ ಇಲ್ಲಿ ಕಸ ಹಾಕಬಾರದು ಎಂಬ ಬುದ್ದಿ ಬರುವ ತನಕ ಏನೂ ಮಾಡಲು ಸಾಧ್ಯವಿಲ್ಲ, ಮಳೆಗಾಲ ಆರಂಭಕ್ಕೆ ಮುನ್ನ ಕಸ, ತ್ಯಾಜ್ಯಗಳನ್ನು ತೆರವುಗೊಳಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.


ಆರೋಗ್ಯ ಜಾಗೃತಿ ಮೂಡಿಸುವುದು
ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಬಾಧೆ ಹೆಚ್ಚಾಗುತ್ತದೆ ಈ ಬಗ್ಗೆ ಪಂಚಾಯತ್ ಏನು ಕ್ರಮ ಕೈಗೊಂಡಿದೆ ಎಂದು ಕೃಷ್ಣ ಕುಮಾರ್ ಇದ್ಯಪೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ರತನ್ ರೈ ಈ ಬಗ್ಗೆ ಆರೋಗ್ಯ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಮಳೆಗಾಲದಲ್ಲಿ ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದರು.


ಗ್ರಾಪಂ ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿ, ಸದಸ್ಯರುಗಳಾದ ಪ್ರವೀಣ್ ಶೆಟ್ಟಿ ತಿಂಗಳಾಡಿ, ವಿಠಲ ರೈ ಮಿತ್ತೋಡಿ, ಜಯಲಕ್ಷ್ಮೀ ಬಲ್ಲಾಳ್, ಸುಜಾತ ಮುಳಿಗದ್ದೆ, ಅಸ್ಮಾ ಗಟ್ಟಮನೆ, ಸುಜಾತ ರೈ, ರೇವತಿ ಬೋಳೋಡಿ ಚರ್ಚೆಯಲ್ಲಿ ಪಾಲ್ಗೊಂಡರು. ಗ್ರಾಪಂ ಸಿಬ್ಬಂದಿ ಜಯಂತ ಮೇರ್ಲ ಅರ್ಜಿಗಳನ್ನು ಓದಿದರು. ಸಿಬ್ಬಂದಿ ಮೃದುಳ ನಿರ್ಣಯಗಳನ್ನು ದಾಖಲಿಸಿಕೊಂಡರು. ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ಸ್ವಾಗತಿಸಿ, ಸರಕಾರಿ ಸುತ್ತೋಲೆಗಳನ್ನು ಓದಿ ಕೊನೆಯಲ್ಲಿ ವಂದಿಸಿದರು. ಸಿಬ್ಬಂದಿಗಳಾದ ಗಣೇಶ್, ವಿದ್ಯಾಪ್ರಸಾದ್,ಶಶಿಪ್ರಭಾ ರೈ ಸಹಕರಿಸಿದ್ದರು.

ಗ್ರಾಪಂ ಸದಸ್ಯರಿಗೆ ಆರೋಗ್ಯ ವಿಮೆ ಬೇಕು
ಸ್ಥಳೀಯ ಸರಕಾರ ಎನಿಸಿಕೊಂಡಿರುವ ಗ್ರಾಮ ಪಂಚಾಯತ್‌ನಲ್ಲಿ ಸೇವೆ ಮಾಡುವ ಜನಪ್ರತಿನಿಧಿಗಳಾದ ಗ್ರಾಪಂ ಸದಸ್ಯರಿಗೆ ಆರೋಗ್ಯ ವಿಮೆಯ ಅಗತ್ಯವಿದೆ. ಮಳೆಗಾಲ, ಬೇಸಿಗೆಗಾಲ ಎನ್ನದೇ ವರ್ಷವಿಡೀ ಗ್ರಾಮದ ಅಭಿವೃದ್ಧಿಗಾಗಿ ಸೇವೆ ಮಾಡುವ ಗ್ರಾಪಂ ಸದಸ್ಯರ ಆರೋಗ್ಯದ ಬಗ್ಗೆ ಸರಕಾರ ಕಾಳಜಿ ವಹಿಸಬೇಕು.ಗ್ರಾಪಂ ಸದಸ್ಯರಿಗೆ ಅನಾರೋಗ್ಯ ಉಂಟಾದರೆ ಅವರಿಗೆ ಸರಕಾರದ ಮಟ್ಟದಿಂದಲೇ ಚಿಕಿತ್ಸೆ ಕೊಡಿಸುವ ವಿಮೆ ಜಾರಿಯಾಗಬೇಕು ಎಂದು ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿ ಆಗ್ರಹಿಸಿದರು. ಈ ಬಗ್ಗೆ ಸರಕಾರಕ್ಕೆ, ಆರೋಗ್ಯ ಸಚಿವರಿಗೆ ಮನವಿ ಮಾಡಬೇಕು ಎಂದು ಕೇಳಿಕೊಂಡರು.

ಶಾಸಕ ಅಶೋಕ್ ಕುಮಾರ್ ರೈಗೆ ಅಭಿನಂದನೆ
ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಪಂಚಾಯತ್ ವತಿಯಿಂದ ಅಧ್ಯಕ್ಷ ರತನ್ ರೈ ಕುಂಬ್ರರವರು ಅಭಿನಂದನೆಗಳನ್ನು ಸಲ್ಲಿಸಿದರು. ಈ ಹಿಂದಿನ ಶಾಸಕ ಸಂಜೀವ ಮಠಂದೂರುರವರು ಸುಮಾರು 13 ಕೋಟಿ ರೂ.ಅನುದಾನವನ್ನು ಕೆದಂಬಾಡಿ ಗ್ರಾಪಂಗೆ ಕೊಟ್ಟಿದ್ದಾರೆ ಅವರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದ ರತನ್ ರೈಯವರು, ಅಶೋಕ್ ಕುಮಾರ್ ರೈಯವರು ಕೂಡ ನಮ್ಮ ಪಂಚಾಯತ್‌ಗೆ ಇನ್ನಷ್ಟು ಹೆಚ್ಚಿನ ಅನುದಾನವನ್ನು ಒದಗಿಸುತ್ತಾರೆ ಎಂಬ ವಿಶ್ವಾಸ ನಮಗಿದೆ. ಅವರ ಅವಧಿಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ಇನ್ನಷ್ಟು ಅಭಿವೃದ್ಧಿಯನ್ನು ಕಾಣಲಿ ಎಂದು ಶುಭ ಹಾರೈಸಿದರು.

LEAVE A REPLY

Please enter your comment!
Please enter your name here