ಪುತ್ತೂರು : ಪುತ್ತೂರು ನಗರಸಭೆ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಮತ್ತು ಅಂತರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆಯನ್ನು ಜೂನ್ 5 ರಂದು ನಗರದ ಬಾಲವನದಲ್ಲಿ ಆಚರಿಸಲಾಯಿತು.
ಗಿಡ ನೆಡುವ ಮೂಲಕ ನಡೆದ ಸರಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಅಶೋಕ್ ಕುಮಾರ್ ರೈ ಕಾಡು ಕಡಿಮೆಯಾಗಿದ್ದು ನಗರ ಬೆಳೆಯುತ್ತಿದೆ. ಕಾಡಿನಲ್ಲಿರುವ ಪ್ರಾಣಿಗಳು ನಗರಕ್ಕೆ ಬರುತ್ತಿದೆ. ನಗರದ ಬೆಳವಣಿಗೆಗೆ ಮರ ಕಡಿಯುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಗಿಡ ನೆಡುವ ಕೆಲಸ ನಮ್ಮಿಂದ ಆಗುತ್ತಿಲ್ಲ. ಮಕ್ಕಳಲ್ಲಿ ಗಿಡ ನೆಡುವ ಪ್ರವೃತ್ತಿಯನ್ನು ಬೆಳೆಸುವುದರಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಗಿಡ ನೆಡುವ ಕಾರ್ಯ ಪರಿಸರ ದಿನಾಚರಣೆಗೆ ಸೀಮಿತವಾಗಿರಬಾರದು ಎಂದ ಅವರು ಪರಿಸರ ಉಳಿದರೆ ಮಾತ್ರ ಮಾನವನ ಉಳಿವು ಎಂದು ಹೇಳಿದರು.
ಪುತ್ತೂರು ಉಪ ವಿಭಾಗಾಧಿಕಾರಿ ಗಿರೀಶ್ ನಂದನ್ ಮಾತನಾಡಿ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು. ಈಗಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಮುಂದಿನ ಪೀಳಿಗೆಗೂ ಈ ಪರಿಸರ ಉಪಯೋಗವಾಗುವಂತೆ ನೋಡಿಕೊಳ್ಳಬೇಕು. ವನ ಮತ್ತು ವನ್ಯಜೀವಿಗಳನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾದ ಅವಶ್ಯಕತೆ ಇದೆ. ಈ ಕಾರ್ಯಕ್ರಮ ಈ ದಿನಕ್ಕೆ ಸೀಮಿತವಾಗದೆ ವರ್ಷಪೂರ್ತಿ ನಡೆಯಲಿ ಎಂದು ಹೇಳಿದರು.
ನಗರ ಸಭೆಯ ಪ್ರಭಾರ ಪೌರಾಯುಕ್ತ ದುರ್ಗ ಪ್ರಸಾದ್ ಮಾತನಾಡಿ ನೆಲ,ಜಲ ಮತ್ತು ಪರಿಸರದ ಸಂರಕ್ಷಣೆ ನಮ್ಮ ಕರ್ತವ್ಯ. ಇದು ಈ ಬಾರಿ ನಮ್ಮ ಧ್ಯೇಯವು ಆಗಿದೆ ಎಂದು ಹೇಳಿದರು.
ನಗರ ಸಭೆಯ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಚ್ ಟಿ ಆರ್ ಮತ್ತು ಪ್ರಗತಿ ವಿದ್ಯಾ ಸಂಸ್ಥೆ ಕೈಜೋಡಿಸಿತ್ತು. ಕಾರ್ಯಕ್ರಮದಲ್ಲಿ ಪ್ರಗತಿ ವಿದ್ಯಾಸಂಸ್ಥೆಯ ಪಿವಿ ಗೋಕುಲ್ ನಾಥ್, ನಗರಸಭಾ ಸದಸ್ಯ ಯೂಸುಫ್, ಆರೋಗ್ಯ ಅಧಿಕಾರಿ ಶ್ವೇತಾ ಕಿರಣ್, ನಗರಸಭೆ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದು ಭಾಗವಹಿಸಿದ್ದರು.