ಸುದಾನ ಪಿಯು ಕಾಲೇಜಿನಲ್ಲಿ ಯೂತ್ ರೆಡ್ ಕ್ರಾಸ್ ಘಟಕದ ಉದ್ಘಾಟನೆ

0

ಸೇವೆ ಮಾಡುವುದಕ್ಕೆ ಸಂಸ್ಥೆಗಳ ಅಗತ್ಯವಿಲ್ಲ, ಮನಸ್ಸು ಮುಖ್ಯ-ಮಹೇಶ್ ಶೆಟ್ಟಿ

ಪುತ್ತೂರು: ಸುದಾನ ಪದವಿ ಪೂರ್ವ ಕಾಲೇಜಿನಲ್ಲಿ  ಯೂತ್ ರೆಡ್ ಕ್ರಾಸ್ ಘಟಕದ ಉದ್ಘಾಟನೆ ಮತ್ತು ಮಾರ್ಗದರ್ಶನ ಕಾರ್ಯಕ್ರಮವು ಕಾಲೇಜಿನ ಎಡ್ವರ್ಡ್ ಹಾಲ್‌ನಲ್ಲಿ ಇತ್ತೀಚೆಗೆ ನಡೆಯಿತು.

ಸೇವೆ ಮಾಡುವುದಕ್ಕೆ ಸಂಸ್ಥೆಗಳ ಅಗತ್ಯವಿಲ್ಲ, ಮನಸ್ಸು ಮುಖ್ಯ-ಮಹೇಶ್ ಶೆಟ್ಟಿ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಣಿಯ ಬಾಲವಿಕಾಸ ಟ್ರಸ್ಟ್,  ಕಾರ್ಯದರ್ಶಿ ಮಹೇಶ್ ಶೆಟ್ಟಿ, ಘಟಕವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಇಂದಿನ ಯುವಕರು ಕೇವಲ ಅಕಾಡೆಮಿಕ್ ಸಾಧನೆಯವರೆಗೂ ಸೀಮಿತರಾಗಬಾರದು. ಅವರ ಹೃದಯದಲ್ಲಿ ದಯೆ, ಕರುಣೆ, ಮತ್ತು ಪರೋಪಕಾರದ ಜ್ಯೋತಿ ಹೊತ್ತಿರಬೇಕು. ರೆಡ್ ಕ್ರಾಸ್ ಈ ಜ್ಯೋತಿಯನ್ನು ಪ್ರಜ್ವಲಿಸುವ ಅತಿ ಪವಿತ್ರ ವೇದಿಕೆ ಎಂದ ಅವರು ಸಮಾಜಕ್ಕೆ ನಿಮ್ಮ ಉಪಸ್ಥಿತಿ ಅಗತ್ಯವಾಗುವ ಕ್ಷಣಗಳಲ್ಲಿ ಓಡಿ ಹೋಗುವ ಬದಲು, ನೆರವಿಗೆ ಓಡುವ ಗುಣವನ್ನು ಯುವಕರು ಬೆಳೆಸಬೇಕು. ಸೇವೆ ಮಾಡುವುದಕ್ಕೆ ಸಂಸ್ಥೆಗಳ ಅಗತ್ಯವಿಲ್ಲ. ಮನಸ್ಸು ಮುಖ್ಯ. ರೆಡ್ ಕ್ರಾಸ್ ನಂತಹ ಘಟಕಗಳಿಂದ ನಿಮ್ಮ ವ್ಯಕ್ತಿತ್ವವನ್ನು ರೂಪಿಸುವ ಹಲವಾರು ವಿಚಾರಗಳನ್ನು ಮೈಗೂಡಿಸಿಕೊಂಡು ಉತ್ತಮ ನಾಗರಿಕನಾಗಿ ಬೆಳೆಯಲು ಸಾಧ್ಯ. ಸಮಯದ ಪರಿಪಾಲನೆ ಜೀವನದಲ್ಲಿ ಅತೀ ಮುಖ್ಯ.ಅದನ್ನು ಎಲ್ಲಿ, ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಅತೀ ಮುಖ್ಯ ಎಂದು ಅವರು ಹೇಳಿದರು.

ಯೂತ್ ರೆಡ್ ಕ್ರಾಸ್ ಎಂದರೆ ಮಾನವೀಯ ಮೌಲ್ಯಗಳ ಶಾಲೆ-ಡಾ.ಪೀಟರ್ ವಿಲ್ಸನ್:
ವಿಶೇಷ ಅತಿಥಿಯಾಗಿ ಉಪಸ್ಥಿತರಿದ್ದ ಸುದಾನ ಪಿಯು ಕಾಲೇಜಿನ ಸಂಚಾಲಕರಾದ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ರವರು ಮಾತನಾಡಿ, ಯೂತ್ ರೆಡ್ ಕ್ರಾಸ್ ಎಂದರೆ ಕೇವಲ ಒಂದು ಸಂಘಟನೆ ಅಲ್ಲ; ಇದು ಮಾನವೀಯ ಮೌಲ್ಯಗಳ ಶಾಲೆ. ನೋವಿನ ನಡುವೆ ನಂಬಿಕೆಯನ್ನು ನೀಡುವ, ಸಂಕಟದ ಕ್ಷಣದಲ್ಲಿ ನೆರವು ನೀಡುವ, ಭಯದೊಳಗೆ ಧೈರ್ಯ ತುಂಬುವ ಜವಾಬ್ದಾರಿ — ಇದೇ ರೆಡ್ ಕ್ರಾಸ್‌ನ ಆತ್ಮ ಎಂದ ಅವರು ನಮ್ಮ ಸ್ವಂತ ಆರೋಗ್ಯದ ಬಗ್ಗೆ ಮೊದಲ ಗಮನ ಎಷ್ಟು ಅಗತ್ಯವೋ, ನಾಗರಿಕ ಪ್ರಜ್ಞೆಯೂ ಕೂಡಾ ನಮ್ಮ ಮನಸ್ಸಿನಲ್ಲಿ ಅತೀ ಅಗತ್ಯವಾಗಿರಬೇಕು. ಶಿಸ್ತು ಜೀವನದ ಒಂದು ಭಾಗ. ಅಶಿಸ್ತಿನ ಜೀವನ ಬದುಕಿಗೊಂದು ಪಾಠ ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದು ಅವರು ಹೇಳಿದರು. 

ಮನುಷ್ಯತ್ವದ ಮರ್ಮ ತಿಳಿಯದ ವಿದ್ಯೆ ಅಪೂರ್ಣ-ಸುಪ್ರೀತ್ ಕೆ.ಸಿ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಸುಪ್ರೀತ್ ಕೆ.ಸಿ.ರವರು ಮಾತನಾಡಿ, ಒಬ್ಬ ವಿದ್ಯಾರ್ಥಿಯ ಸಂಪೂರ್ಣ ಬೆಳವಣಿಗೆ ಪುಸ್ತಕ ಮತ್ತು ಪಾಠಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಮನುಷ್ಯತ್ವದ ಮರ್ಮ ತಿಳಿಯದ ವಿದ್ಯೆ ಅಪೂರ್ಣ. ರೆಡ್ ಕ್ರಾಸ್ ಸೇವೆಯ ಮೂಲಕ ವಿದ್ಯಾರ್ಥಿಗಳು ಬದುಕಿಗಾಗಿ ಕಲಿಯುವುದರ ಜೊತೆಗೆ, ಬದುಕನ್ನು ಉಳಿಸುವ ಕಲೆಯನ್ನೂ ಅರಿತುಕೊಳ್ಳುತ್ತಾರೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲ ಸುಪ್ರೀತ್ ಕೆ.ಸಿರವರು ‘ಪ್ರತಿಜ್ಞಾ ವಿಧಿ’ಯನ್ನು ಬೋಧಿಸಿದರು. ಯೂತ್ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಲತಾಶ್ರೀ ಕಾರ್ಯಕ್ರಮವನ್ನು ನಿರೂಪಿಸಿ, ಗಣಿತ ಶಾಸ್ತ್ರ ವಿಭಾಗದ ಉಪನ್ಯಾಸಕಿ ಪಲ್ಲವಿ ಸ್ವಾಗತಿಸಿದರು. ಗಣಕಶಾಸ್ತ್ರ ವಿಭಾಗದ ಉಪನ್ಯಾಸಕಿ  ಧನ್ಯಶ್ರೀ ಅತಿಥಿಗಳ ಪರಿಚಯ ಮಾಡಿದರು. ಆಂಗ್ಲ ಭಾಷಾ ವಿಭಾಗದ ಉಪನ್ಯಾಸಕಿ ಮೆಲೀಷ ಪ್ರಿಯ ಡಿಸೋಜಾ ವಂದಿಸಿದರು. 

ವಿದ್ಯಾರ್ಥಿ ಸಂಯೋಜಕರಾದ ಮುಹಮ್ಮದ್ ಹುಸೈನ್ ಮತ್ತು ಭುವಿ ಆಳ್ವ ಅವರು ಕಾರ್ಯಕ್ರಮದ  ಯಶಸ್ಸಿಗೆ ಶ್ರಮಿಸಿದರು. ಈ ಸಮಾರಂಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here