ಪುತ್ತೂರು: ಕಾಂಗ್ರೆಸ್ ನ ತುಘಲಕ್ ದರ್ಬಾರ್ ಆರಂಭವಾಗಿದೆ. ಮಹಾತ್ಮಾ ಗಾಂಧಿಯೇ ಗೋ ಸಂತತಿಯ ಉಳಿವಿನ ಬಗ್ಗೆ ಮಾತನಾಡಿದ್ದರು.
ಗೋವು ತಾಯಿಯ ಸ್ವರೂಪವಾಗಿದೆ. ಗೋವು ಉಳಿದರೆ ಕೃಷಿ ಉಳಿಯುತ್ತದೆ. ಹಿಂದೆ ಎಲ್ಲಾ ರಾಜ್ಯದಲ್ಲೂ ಗೋಹತ್ಯೆ ನಿಷೇಧ ಖಾಯಿದೆ ಇತ್ತು. ಕಾಂಗ್ರೆಸ್ ನ ತುಷ್ಠೀಕರಣ ನೀತಿಯಿಂದ ಖಾಯಿದೆ ವಾಪಾಸ್ ಆಗಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಸಿದ್ಧರಾಮಯ್ಯ ಸರ್ಕಾರದಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಗೋಹತ್ಯೆಗಳಾಗಿದೆ. ಗೋ ಹಂತಕರಿಗೆ ಕಾಂಗ್ರೆಸ್ ಸರ್ಕಾರ ರಕ್ಷಣೆ ನೀಡಿದೆ. ಗೋಹತ್ಯೆ ನಿಷೇಧ ವಾಪಸ್ ತೆಗದುಕೊಂಡರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ವಿದ್ಯುತ್ ಯುನಿಟ್ ಗೆ ದರ ಏರಿಕೆ ಮಾಡಿದ್ದಾರೆ. ರಾಷ್ಟ್ರ ಭಕ್ತ ಸೂಲಿಬೆಲೆಯನ್ನು ಬಂಧನ ಮಾಡೋದಾಗಿ ಸಚಿವರು ಹೇಳಿದ್ದಾರೆ. ಕಾಂಗ್ರೆಸ್ ಮೆರವಣಿಗೆಯಲ್ಲಿ ಪಾಕ್ ಪರ ಘೋಷಣೆ ಕೂಗಲಾಗುತ್ತದೆ. ಇದರ ಮೇಲೆ ಯಾವುದೇ ಕ್ರಮ ಕಾಂಗ್ರೆಸ್ ಕೈಗೊಳ್ಳುತ್ತಿಲ್ಲ. ಇದು ತುಘಲಕ್ ಸರ್ಕಾರದ ಆರಂಭದ ಹೆಜ್ಜೆಯಾಗಿದೆ ಎಂದು ಹೇಳಿದ ಕಟೀಲ್, ಕಾಂಗ್ರೆಸ್ ದ್ವೇಷದ ರಾಜಕಾರಣಕ್ಕೆ ಇಳಿದಿದೆ. ಕಾಂಗ್ರೆಸ್ ನ ಜಾಯಮಾನವೇ ತುಷ್ಠೀಕರಣದ ನೀತಿ. ಗೋಹತ್ಯೆ ನಿಷೇಧ,ಮತಾಂತರ ನಿಷೇಧ ಖಾಯಿದೆ ರಾಜ್ಯದ ಬಹುಜನರ ಬೇಡಿಕೆಯಾಗಿದೆ.
ಕಾಂಗ್ರೆಸ್ ಗೆ ಚುನಾವಣಾ ಸಂಧರ್ಭದಲ್ಲಿ ರಾಮ, ಹನುಮನ ನೆನಪಾಗುತ್ತದೆ. ಚುನಾವಣಾ ಬಳಿಕ ಹಿಂದೂ ಭಾವನೆಗಳನ್ನು ಧಿಕ್ಕರಿಸುತ್ತಿದೆ. ಇದರ ಬಗ್ಗೆ ಬಿಜೆಪಿ ಹೋರಾಟವನ್ನು ಮಾಡಲಿದೆ.
ಆರ್ ಎಸ್ ಎಸ್ ನಿಷೇಧ ಮಾಡುವ ಅಧಿಕಾರ ಕಾಂಗ್ರೆಸ್ ಗೆ ಇಲ್ಲ. ಸಿದ್ಧರಾಮಯ್ಯನ ಮುತ್ತಾತನಿಗೇ ಆರ್ ಎಸ್ ಎಸ್ ನಿಷೇಧ ಮಾಡಲು ಸಾಧ್ಯವಾಗಿಲ್ಲ ಎಂದು ವ್ಯಂಗ್ಯವಾಗಿ ಹೇಳಿದ ಸಂಸದ ಕಟೀಲ್, ತಾಕತ್ ಇದ್ದರೆ ಮೊದಲು ಪಾಕ್ ಪರ ಘೋಷಣೆ ಕೂಗಿದರವನ್ನು ಅರೆಸ್ಟ್ ಮಾಡಿ ಎಂದರು.