ಅತ್ಯುತ್ತಮವಾದ ಕಲಿಕಾ ಕೇಂದ್ರವಾಗಲಿ ನಾನು ಬಯಸುತ್ತೇನೆ – ಡಾ| ಸುಕುಮಾರ ಗೌಡ
ಉತ್ತಮ ಸಂಸ್ಥೆಗೆ ಎಲ್ಲರ ಪ್ರೋತ್ಸಾಹವಿರಲಿ – ದಿವಾಕರ ಆಚಾರ್ಯ ಗೇರುಕಟ್ಟೆ
ಭಾರತೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಉದ್ದೇಶ – ವೆಂಕಟ್ರಮಣ ಕಳುವಾಜೆ
ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿದ್ದೇವೆ – ಎ.ವಿ.ನಾರಾಯಣ
ಪುತ್ತೂರು: ಆಧುನಿಕತೆಯೊಂದಿಗೆ ವೇಗವಾಗಿ ಬದಲಾಗುತ್ತಿರುವ ಸಮಾಜದ ಆಶೋತ್ತರಗಳಿಗನುಗುಣವಾಗಿ ನಾಳಿನ ಪ್ರಜೆಗಳಾಗುವ ವಿದ್ಯಾರ್ಥಿ ಸಮೂಹವನ್ನು ಸಂಸ್ಕಾರಯುತವಾಗಿ ರೂಪಿಸುವ ಬದ್ಧತೆ, ಸಿದ್ಧತೆಗಳೊಂದಿಗೆ ‘ಭಾರತೀಯ ಮೌಲ್ಯಗಳನ್ನು ಪೋಷಿಸಿರಿ’ ಎಂಬ ಧ್ಯೇಯವಾಕ್ಯವನ್ನು ಇರಿಸಿಕೊಂಡು ಎವಿಜಿ ಎಜ್ಯುಕೇಶನಲ್ ಮತ್ತು ಚಾರಿಟೇಬ್‌ಲ್ ಟ ಸ್ಟ್ ವತಿಯಿಂದ ಬನ್ನೂರು ಕೃಷ್ಣನಗರದ ಅಲುಂಬುಡ ಎಂಬಲ್ಲಿ ನೂತನವಾಗಿ ಆರಂಭಗೊಂಡಿರುವ ಎ.ವಿ.ಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿ ಪ್ರಥಮ ತರಗತಿಗಳಿಗೆ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ ಜೂ. 5ರಂದು ವಿಶ್ವ ಪರಿಸರದ ದಿನಾಚರಣೆಯೊಂದಿಗೆ ನಡೆಯಿತು. ಬೆಳಿಗ್ಗೆ ವೈದಿಕ ಕಾರ್ಯಕ್ರಮಗಳ ಬಳಿಕ ಮಕ್ಕಳ ತರಗತಿಯ ಪ್ರವೇಶೋತ್ಸವ ಮಹೂರ್ತ ನಡೆಯಿತು. ಬಳಿಕ ಶ್ರೀ ಸತ್ಯನಾರಾಯಣ ಪೂಜೆ, ಸಭಾ ಕಾರ್ಯಕ್ರಮ ನಡೆಯಿತು.
ಅತ್ಯುತ್ತಮವಾದ ಕಲಿಕಾ ಕೇಂದ್ರವಾಗಿರಲಿ ನಾನು ಬಯಸುತ್ತೇನೆ:
ಶಿಕ್ಷಣ ತಜ್ಞ ಮಕ್ಕಳ ಮಂಟಪದ ಸಂಚಾಲಕ ಡಾ| ಸುಕುಮಾರ ಗೌಡ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಉದ್ಘಾಟಿಸುವುದು ನನ್ನ ಸೌಭಾಗ್ಯ. ಆ ಮೂಲಕ ಇವತ್ತು ಪುಟಾಣಿಗಳನ್ನು ನೋಡುವ ಸೌಭಾಗ್ಯ ಸಿಕ್ಕಿದೆ. ಒಬ್ಬ ವ್ಯಕ್ತಿ ವೈಯುಕ್ತಿವಾಗಿ ಶಿಕ್ಷಣ ತಜ್ಞ ಎಂದು ಹೇಳುವುದಿಲ್ಲ. ಆದರೆ ಶಿಕ್ಷಣ ತಜ್ಞನಾಗಿ ಅನಿಸಿಕೊಳ್ಳಬೇಕಾದರೆ ಅಲ್ಲಿ ಕಾಳಜಿ ಬೇಕು. ಇಂಜಿನಿಯರ್ ಆದ ವ್ಯಕ್ತಿ ಇಂತಹ ಸಂಸ್ಥೆ ಕಟ್ಟುತ್ತಾನೆ ಎಂದು ಕನಸಿನಲ್ಲೂ ನಾನು ನೋಡಿಲ್ಲ. ಮಕ್ಕಳ ಮಂಟಪ್ಪ ಮಾಡುವಾಗ ನನಗೆ ಆರ್ಥಿಕ ದುಸ್ಥಿತಿ ಇತ್ತು. ಆಗ ನಾನು ಡಾ. ಶಿವರಾಮ ಕಾರಂತರನ್ನು ಸಂಪರ್ಕಿಸಿದೆ. ಅವರೇ ನನ್ನ ಸಂಸ್ಥೆಯನ್ನು ಉದ್ಘಾಟಿಸಿ ಹೋದರು. ಅದೇ ರೀತಿ ಎ.ವಿ.ಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಉದ್ಘಾಟನೆ ನನ್ನ ಸೌಭಾಗ್ಯ. ಈ ಸಂಸ್ಥೆ ಅತ್ಯುತ್ತಮವಾದ ಕಲಿಕಾ ಕೇಂದ್ರವಾಗಿರಲಿ ನಾನು ಬಯಸುತ್ತೇನೆ ಎಂದು ಹೇಳಿದ ಅವರು ಸಂಸ್ಥೆಯ ಸುತ್ತಲಿನ ಕಾಡು ಮರಗಳನ್ನು ಕಂಡು ಈ ಕಾಡನ್ನು ತೆಗೆಯಬೇಡಿ. ಕಾಡನ್ನು ಕಾಡಾಗಿಯೇ ಇರಲಿ. ಅದು ನಿಜವಾಗಿಯೂ ಕಟ್ಟಡದ ಮಧ್ಯೆ ಕಾಡು ಇರುವಂಹತದ್ದೆ ದೊಡ್ಡದು. ದಯಾಮಾಡಿ ಕಾಡನ್ನು ತೆಗೆಯಲು ಹೋಗಬೇಡಿ. ಮೈದಾನ ಮಾಡುವ ಉದ್ದೇಶದಿಂದ ಅದನ್ನು ತೆರವು ಮಾಡಬೇಡಿ. ಅದನ್ನು ಹಾಗೆಯೇ ನೀರು ಕೊಟ್ಟು ಬದುಕಿಸಿ. ಅದೇ ರೀತಿ ಮಕ್ಕಳು ಮತ್ತು ಮಕ್ಕಳನ್ನು ಕಳಿಸುವವರು ತೃಪ್ತಿಪಡುವಂತೆ ನೋಡಿ ಎಂದರು.
ಉತ್ತಮ ಸಂಸ್ಥೆಗೆ ಎಲ್ಲರ ಪ್ರೋತ್ಸಾಹವಿರಲಿ;
ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ದಿವಾಕರ ಆಚಾರ್ಯ ಗೇರುಕಟ್ಟೆ ಅವರು ಶಿಕ್ಷಣದ ಕುರಿತು ಉಪನ್ಯಾಸ ನೀಡಿದರು. ಭಾರತ ದೇಶದ ಬಗ್ಗೆ ಗೌರವ ಮತ್ತು ಸಂಸ್ಕೃತಿಯನ್ನು ಮಕ್ಕಳನ್ನು ಬೆಳೆಸುವ ಉದಾತ್ತ ಕಲ್ಪಣೆ ಇರಿಸಿಕೊಂಡು ಆರಂಭಗೊಂಡಿರುವ ಈ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಶೈಕ್ಷಣಿಕ ಸಿಗಲಿದೆ. ಇವತ್ತು ಶಿಕ್ಷಣ ಕೊಡುವ ವ್ಯವಸ್ಥೆಗಳು ಎಲ್ಲಾ ಕಡೆ ಇದ್ದರೂ ಕೂಡಾ ಅದನ್ನು ಅರ್ಥಪೂರ್ಣವಾಗಿ ಮಾಡಲು ಒಳ್ಳೆಯ ಮನಸ್ಸು ಇರಬೇಕು. ಈಗಾಗಲೇ ಸಾಕಷ್ಟು ಶಿಕ್ಷಣ ಸಂಸ್ಥೆಗಳು ಬಂದಿವೆ. ಆದ್ದರಿಂದ ಆರ್ಥಿಕ ಲಾಭವನ್ನು ಪಡೆಯುವ ದೃಷ್ಟಿಯಿಂದ ಎ.ವಿ.ನಾರಾಯಣ ಅವರು ಈ ಸಂಸ್ಥೆಯನ್ನು ಆರಂಭ ಮಾಡದೆ ಪರಿಸರದ ಕಾಳಜಿ, ಮಾನವೀಯ ಸಂಬಂಧವನ್ನು ಮಕ್ಕಳಲ್ಲಿ ಬೆಳೆಸುವುದು, ಸಂಸ್ಕೃತಿಗೆ ಪ್ರಾದಾನ್ಯತೆ ಕೊಡುವುದು, ಶಿಶು ಕೇಂದ್ರಿತ ಶಿಕ್ಷಣ, ರಾಷ್ಟ್ರ ಜಾಗೃತಿ, ಮಾನವೀಯ ಗುಣಗಳನ್ನು ಬೆಳೆಸುವುದು ಸೇರಿದಂತೆ ಹಲವು ವಿಚಾರಗಳನ್ನು ಅವರು ಇಟ್ಟು ಕೊಂಡು ಶಾಲೆ ಆರಂಭಿಸಿದ್ದಾರೆ. ಇಲ್ಲಿ ಸ್ವಚ್ಚ ಗಾಳಿ, ತಂಪಾದ ಪರಿಸರ, ವಾಹನದ ಕಿರಿಕಿರಿ ಇಲ್ಲದೆ ವಿದ್ಯಾರ್ಥಿಗಳು ತಮ್ಮ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರು ಸಂಸ್ಥೆಗೆ ಪ್ರೋತ್ಸಾಹ ನೀಡಬೇಕೆಂದರು.
ಮಕ್ಕಳಿಗೆ ಒತ್ತಡದ ಶಿಕ್ಷಣ ಕೊಡಬೇಡಿ:
ಒಂದುವ್ಯವಸ್ಥೆಯಲ್ಲಿ ಪೋಷಕರು, ಶಿಕ್ಷಕರು, ಆಡಳಿತ ಮಂಡಳಿ ಕೈ ಜೋಡಿಸಿದಾಗ ಶಾಲೆ ಅನ್ನುವ ವ್ಯವಸ್ಥೆ ಕಟ್ಟಡವಾಗಿ ಉಳಿಯದೆ ದೇವಮಂದಿರವಾಗಿ ಉಳಿಯುತ್ತದೆ. ಅಲ್ಲಿ ವಿದ್ಯಾರ್ಥಿಗಳು ಸಂಸ್ಕರಿಸಲ್ಪಡುತ್ತಾರೆ. ಅಲ್ಲಿ ಕೊಡಬೇಕಾದ ಶಿಕ್ಷಣಕ್ಕೆ ಬದ್ದತೆಯಿಂದ ದುಡಿಯುವ ಶಿಕ್ಷಕರಿದ್ಧಾಗ ಖಂಡಿತವಾಗಿಯೂ ಶಾಲೆಯಲ್ಲಿ ಮಗುವಿಗೆ ಅರ್ಥಪೂರ್ಣವಾದ ಕಲಿಕೆಯಗುತ್ತದೆ. ಆದರೆ ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳು ಕಲಿಯುವ ಯಂತ್ರಗಳು. ಶಿಕ್ಷಕರು ಕಲಿಸುವ ಯಂತ್ರಗಳಾಗಿದ್ದಾರೆ ಎಂದ ದಿವಾಕರ ಅಚಾರ್ಯ ಗೇರುಕಟ್ಟೆಯವರು ಈ ರೀತಿಯ ವ್ಯವಸ್ಥೆ ಸರಿಯಲ್ಲ. ಮಕ್ಕಳಿಂದ ನೂರಕ್ಕೆ ನೂರು ಅಂಕ ಪಡಯುವ ಭಾವನೆ ಇರಿಸಿಕೊಂಡಿದ್ದೇವೆ. ಇದು ಶಿಕ್ಷಣವಲ್ಲ. ಎಲ್ಲರು ನೂರಕ್ಕೆ ನೂರು ಅಂಕ ಪಡೆಯಲು ಸಾಧ್ಯವಿಲ್ಲ. ಮಗುವಿನ ಸಾಮಾರ್ಥ್ಯ ಏನಿದೆ ಅದಕ್ಕೆ ಅವಕಾಶ ಕೊಡಬೇಕು. ಆಗ ಆ ಮಗು ಶಾಲೆಯಲ್ಲಿ ಬೆಳವಣಿಗೆ ಆಗುತ್ತದೆ. ಪೂಷಕರು ಮಗುವಿಗೆ ಒತ್ತಾಯ, ಒತ್ತಡ ಯಾವುದೇ ಬೇರೆ ರೀತಿಯ ತಂತ್ರದಿಂದ ಮಗುವಿನ ಮೇಲೆ ಒತ್ತಡ ಹಾಕಿದರೆ ಮಗುವಿನ ವ್ಯಕ್ತಿತ್ವ ಕಂಡಿತವಾಗಿಯೂ ಮುಂದಕ್ಕೆ ಒಳ್ಳೆಯದಾಗುವುದಿಲ್ಲ. ಅದೇ ರೀತಿ ಕೇವಲ ಪೀಸು, ಡೊನೇಷನ್ ಕೊಡುವುದರಿಂದ ಮಗುವಿನ ವ್ಯಕ್ತಿತ್ವ ರೂಪುಗೊಳ್ಳುವುದಿಲ್ಲ. ಮನೆಗಿಂತ ದೊಡ್ಡ ಪಾಠ ಶಾಲೆ ಬೇರೆ ಯಾವುದು ಇಲ್ಲ. ಶಾಲೆ ಔಪಚಾರಿಕ ಶಿಕ್ಷಣ ನೀಡಬಹುದು. ಮಗುವಿನ ವ್ಯಕ್ತಿತ್ವ ರೂಪಿಸುವಲ್ಲಿ ತಾಯಂದಿರ ಪಾತ್ರ ದೊಡ್ಡದು. ಮಗುವಿನಲ್ಲಿ ಪರಿವರ್ತನೆ ಬಂದರೆ ಮಾತ್ರ ನಿಜವಾದ ಶಿಕ್ಷಣ ಆಗುತ್ತದೆ. ಜೀವನದಲ್ಲಿ ಧರ್ಯದಿಂದ ತಾನು ಬದುಕಬಲ್ಲೆ ಎಂಬ ಶಿಕ್ಷಣ ಕೊಡಬೇಕು. ಅಂತಹ ಶಿಕ್ಷಣ ಇಂತಹ ಶಿಕ್ಷಣ ಸಂಸ್ಥೆಗಳಿಂದ ಮೂಡಿ ಬರಲಿದೆ ಎಂದರು.
ಭಾರತೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಉದ್ದೇಶ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎ.ವಿ.ಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಅಧ್ಯಕ್ಷ ಕಳುವಾಜೆ ವೆಂಕಟ್ರಮಣ ಗೌಡ ಅವರು ಮಾತನಾಡಿ ಶಿಕ್ಷಣ ಸಂಸ್ಥೆ ಪ್ರಾರಂಭ ಮಾಡಬೇಕೆಂದು ಶಿಕ್ಷಣ ಇಲಾಖೆಯಲ್ಲಿ ಕೇಳಿಕೊಂಡಾಗ ಹಣದ ಉದ್ದೇಶವಿಟ್ಟುಕೊಂಡು ಶಿಕ್ಷಣ ಸಂಸ್ಥೆ ನಡೆಸಬೇಡಿ. ಅದರಿಂದ ಏನು ಸಾಧ್ಯವಿಲ್ಲ. ನೀರಿನಲ್ಲಿ ಇಟ್ಟ ಹೋಮದ ಹಾಗೆ ಎಂದು ಸಲಹೆ ನೀಡಿದ್ದರು. ಅದೇ ರೀತಿ ನಾವು ಶಿಕ್ಷಣ ನೀಡುವ ಕಾಳಜಿಯಿಂದ ಈ ಸಂಸ್ಥೆಯನ್ನು ಆರಂಭಿಸಿದ್ದೇವೆ ಹೊರತು ಹಣ ಮಾಡುವ ಉದ್ದೇಶದಿಂದ ಅಲ್ಲ ಎಂದರು. ಭಾರತೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಈ ಸಂಸ್ಥೆ ಅರಂಭಿಸಿದ್ದೇವೆ. ಇಲ್ಲಿ ಯಾವುದೇ ಸಮುದಾಯ, ಜಾತಿ, ಧರ್ಮ, ರಾಜಕೀಯವನ್ನು ಈ ಸಂಸ್ಥೆಯ ಒಳಗೆ ನಸುಳಬಾರದು ಎಂಬ ಚಿಂತನೆಯಿಂದ ಡಾ. ಸುಕುಮಾರ ಗೌಡ ಅವರ ಪರಿಕಲ್ಪನೆಯಲ್ಲಿ ಈ ಸಂಸ್ಥೆಯನ್ನು ಮುಂದುವರಿಸಲಿದ್ದೇವೆ. ಇದೊಂದು ವಿಶಿಷ್ಟ ವಿನೂತನ ರೀತಿಯಲ್ಲಿ ಸಂಸ್ಥೆ ನಡೆಯಲಿದೆ. ಶ್ರೀ ಮಹಾಲಿಂಗೇಶ್ವರ ದೇವರ ಮತ್ತು ಊರವರ ಸಹಕಾರವಿದ್ದರೆ ಎಷ್ಟರ ಮಟ್ಟಿಗೆ ಸಾಧ್ಯವೋ ಅಷ್ಟರಮಟ್ಟಿಗೆ ಇನ್ನು ತರಗತಿಯನ್ನು ಹೆಚ್ಚು ಆರಂಭಿಸಲಿದ್ದೇವೆ ಎಂದು ಹೇಳಿದರು.
ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿದ್ದೇವೆ:
ಎ.ವಿ.ಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಸಂಚಾಲಕ ಎ.ವಿ.ನಾರಾಯಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಯುನ್ನು ಆರಂಭಿಸುವ ಕನಸು ಮೊದಲೇ ತ್ತು. ಆದರೆ ನಡುವೆ ಕೋವಿಡ್ ಬಂದಾಗ ವೇಗ ಕಡಿಮೆಯಾಗಿ ಮತ್ತೆ ಆರಂಭಿಸಿದ್ದೇವೆ. ಅರಣ್ಯದ ಪರಿಸರಕ್ಕಾಗಿ ಅರಣ್ಯದೊಳಗೆ ಶಾಲೆ ಮಾಡಿದ್ದೇವೆ. ಪ್ರಸ್ತುತ ಎಲ್.ಕೆ.ಜಿ, ಯು.ಕೆ.ಜಿ ಯಿಂದ ಪ್ರೀ ಕೇಜಿಯ ತನಕ ಈ ವರ್ಷ ಶಾಲೆಯಲ್ಲಿ ತರಗತಿ ನಡೆಲಿದ್ದು, ಮುಂದಿನ ವರ್ಷ ೧ನೇ ತರಗತಿ ಆರಂಭಗೊಳ್ಳಲಿದೆ. ಪದವಿ ತನಕವೂ ತರಗತಿ ಮಾಡುವ ಇರಾದೆಯಿದೆ. ನಮ್ಮಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿದ್ದೇವೆ. ಎಲ್ಲಾ ಭಾಷೆ ಕಲಿಸುವ ಯೋಜನೆಯನ್ನೂ ಹಾಕಿಕೊಂಡಿದ್ದೇವೆ. ಸ್ಮಾರ್ಟ್ ಕ್ಲಾಸ್, ಮಕ್ಕಳ ಆಟಕ್ಕೆ ಮೈದಾನ ಇದೆ. ಮೋಡರ್ನೈಸ್ ತರಗತಿಗಳು ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿದೆ ಎಂದರು.
ಗುರುವಂದನೆ:
ಸಂಸ್ಥೆಯ ಸಂಚಾಲಕ ಎ.ವಿ.ನಾರಾಯಣ ಮತ್ತು ಕೋಶಾಧಿಕಾರಿ ವನಿತಾ ಅವರಿಗೆ ಬನ್ನೂರು ಶಾಲೆಯಲ್ಲಿ ಪ್ರಥಮ ಶಿಕ್ಷಕರಾಗಿದ್ದ ಕುಸುಮಾವತಿ ಟೀಚರ್ ಅವರಿಗೆ ಸಂಸ್ಥೆಯಿಂದ ಗುರುವಂದನೆ ಸಲ್ಲಿಸಲಾಯಿತು. ಎ.ವಿ.ನಾರಾಯಣ, ಅವರ ಪತ್ನಿ ಪ್ರಭಾದೇವಿ ಸನ್ಮಾನ ನೆರವೇರಿಸಿದರು. ಸನ್ಮಾನಿತ ಕುಸುಮಾವತಿ ಟೀಚರ್ ಶುಭ ಹಾರೈಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುಡ್ಡಪ್ಪ ಬಲ್ಯ ಅವರು ಅತಿಥಿಯಾಗಿರುವ ದಿವಾಕರ ಆಚಾರ್ಯ ಗೇರುಕಟ್ಟೆ ಅವರ ಪರಿಚಯ ಪತ್ರ ಮಂಡಿಸಿದರು. ಇದೇ ಸಂದರ್ಭದಲ್ಲಿ ಶಾಲೆಗೆ ಪ್ರಥಮ ದಾಖಲಾತಿಯಾದ ಅನಿಕಾ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸಂಸ್ಥೆಯ ದಾನಿಗಳನ್ನು ಗೌರವಿಸಲಾಯಿತು.
ಪುಟಾಣಿಗಳಿಂದ ಹೂವಿನ ಕುಂಡಕ್ಕೆ ನೀರೆರೆದು ವಿಶ್ವಪರಿಸರ ದಿನಾಚಾರಣೆ:
ವಿಶ್ವಪರಿಸರ ದಿನದ ಅಂಗವಾಗಿ ಸಂಸ್ಥೆಯಲ್ಲಿ ದಾಖಲಾದ ಪುಟಾಣಿಗಳ ಪೈಕಿ ಐವರು ಪುಟಾಣಿಗಳು ಹೂವಿನ ಕುಂಡಕ್ಕೆ ನೀರು ಹಾಕಿ ಆಚರಿಸಲಾಯಿತು. ಎಲ್ಲಾ ಮಕ್ಕಳಿಗೆ ಹೂವಿನ ಕುಂಡ ವಿತರಿಸಲಾಯಿತು. ಅವರು ಪಡೆದ ಗಿಡಗಳಿಗೆ ನೀರು ಹಾಕಿ ಪೋಷಿಸುವಂತೆ ವಿನಂತಿಸಲಾಯಿತು. ಶಾಲಾ ನಿರ್ದೇಶಕಿ ಡಾ.ಅನುಪಮ, ಜೊತೆ ಕಾರ್ಯದರ್ಶಿ ಮನೋಹರ್ ರೈ, ನಿರ್ದೇಶಕರಾದ ಸೀತಾರಾಮ ಪೂಜಾರಿ, ಗಂಗಾದರ ಗೌಡ, ಗೌರಿ ಬನ್ನೂರು ಅತಿಥಿಗಳನ್ನು ಗೌರವಿಸಿದರು. ಶಾಲಾ ಶಿಕ್ಣಕರಿಂದ ಪ್ರಾರ್ಥನೆ ನಡೆಯಿತು. ಸಂಸ್ಥೆಯ ಸಂಚಾಲಕ ಎ.ವಿ.ನಾರಾಯಣ ಸ್ವಾಗತಿಸಿ, ಉಪಾಧ್ಯಕ್ಷ ಉಮೇಶ್ ಮಳವೇಲು ವಂದಿಸಿದರು. ಸಂಸ್ಥೆಯ ಮುಖ್ಯಗುರು ಉಷಾಕಿರಣ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯಾಗಿ ಶ್ರೀಮತಿ ಯಶುಭಾ ರೈ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪುಟಾಣಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಜಿ.ಪಂ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭೆ ಸ್ಥಳೀಯ ಸದಸ್ಯ ಗೌರಿ ಬನ್ನೂರು, ಸೀತಾರಾಮ ಗೌಡ ಮುಂಡಾಲ, ಡಾ ವಿಶ್ವನಾಥ, ಭವಾನಿ ಗೌಡ, ಸುಂದರ ಗೌಡ ಕಳುವಾಜೆ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ವ್ಯವಸ್ಥಾಪಕ ನಿರ್ದೇಶಕ ಡಾ.ಯು.ಪಿ..ಶಿವಾನಂದ, ನ್ಯಾಯವಾದಿ ಭಾಸ್ಕರ್ ಕೋಡಿಂಬಾಳ, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾತ ಗೌಡ ತೆಂಕಿಲ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ನ್ಯಾಯವಾದಿ ಮಹೇಶ್, ಪುರುಷೋತ್ತಮ ಮುಂಗ್ಲಿಮನೆ ಸಹಿತ ಹಲವಾರು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವ್ಯವಸ್ಥೆಗಳು ಪೂರ್ಣ
ಶಾಲೆಗೆ ಈಗಾಗಲೇ ಸಿಬ್ಬಂದಿ ನೇಮಕಾತಿ ಪೂರ್ಣಗೊಂಡಿದ್ದು ಶಾಲಾ ವಾಹನವು ಕಾರ್ಯನಿರತವಾಗಿದೆ. ಸುಸಜ್ಜಿತ ಸ್ಮಾರ್ಟ್ ಬೋರ್ಡ್, ಆಕರ್ಷಕ ಪೀಠೋಪಕರಣ, ಶುದ್ಧ ಕುಡಿಯುವ ನೀರು, ಆಟದ ಮೈದಾನಗಳು ಈಗಾಗಲೇ ಸಜ್ಜುಗೊಂಡಿವೆ. ಮಕ್ಕಳಿಗೆ ಲಘು ಉಪಾಹಾರ ಮತ್ತಿ ಮಧ್ಯಾಹ್ನದ ಊಟಗಳನ್ನು ಶಾಲೆಯಲ್ಲಿಯೇ ನೀಡುವ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಶಿಕ್ಷಕರಲ್ಲಿ ತಾಳ್ಮೆ ಇರಲಿ
ಶಿಕ್ಷಣ ತಜ್ಞ ಡಾ. ಸುಕುಮಾರ ಗೌಡ ಅವರು ಭಾಷಣ ಮಾಡುತ್ತಿರುವ ನಡುವೆ ಪುಟಾಣಿಗಳು ತಮ್ಮದೆ ಲೋಕದಲ್ಲಿ ಈ ಚಯರ್‌ಗಳಿಗಾಗಿ ಚರ್ಚಿಸುತ್ತಿದ್ದರು. ಇದನ್ನು ಗಮನಿಸಿದ ಡಾ. ಸುಕುಮಾರ ಗೌಡ ಅವರು ‘ ಇದು ಮುಗಿಯದ ಯುದ್ದ. ಆ ಚಯರ್ ನನಗೆ ಬೇಕು. ಈ ಚಯರ್ ಅವನಿಗೆ ಬೇಕು ಎಂಬ ಹಠ ಮಕ್ಕಳಲ್ಲಿ ಇರುವುದು ಸಾಮಾನ್ಯ’ ಇಂತಹ ಸಂದರ್ಭದಲ್ಲಿ ಟೀಚರ್‌ಗಳು ಬಹಳಷ್ಟು ತಾಳ್ಮೆಯಿಂದಿರಬೇಕು. ಮಕ್ಕಳೊಡನೆ ತಾಳ್ಮೆ ಇಲ್ಲದಿದ್ದರೆ ಯಾವ ಶಾಲೆ ಮಾಡಿದರೂ ಆಗುವುದಿಲ್ಲ ಎಂದು ಕವಿ ಮಾತು ಹೇಳಿದರು.