ವಿದ್ಯಾಮಾತಾ ಅಕಾಡೆಮಿಯಲ್ಲಿ ಕೆ.ಎ.ಎಸ್ ಪರೀಕ್ಷಾ ತರಬೇತಿಗೆ ಶಾಸಕ ಅಶೋಕ್ ಕುಮಾರ್ ರೈ ಯವರಿಂದ ಚಾಲನೆ

0

ಪುತ್ತೂರು: ಪುತ್ತೂರಿನಲ್ಲಿ ಕಳೆದ 2 ವರ್ಷಗಳಿಂದ ಬ್ಯಾಂಕಿಂಗ್ , ಶಿಕ್ಷಕರ ನೇಮಕಾತಿ, ಭಾರತೀಯ ಸೇನೆ, ಪೊಲೀಸ್ ಸೇರಿದಂತೆ ವಿವಿಧ ನೇಮಕಾತಿಗಳಿಗೆ ತರಬೇತಿ ನೀಡಿ, ನೂರಾರು ವಿದ್ಯಾರ್ಥಿಗಳು ಸರಕಾರಿ ಉದ್ಯೋಗವನ್ನು ಪಡೆಯುವಂತೆ ಮಾಡಿದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ‘ವಿದ್ಯಾಮಾತಾ ಅಕಾಡೆಮಿ’ಯು ಇದೀಗ ಕೆ.ಎ.ಎಸ್ ಪರೀಕ್ಷೆಗೆ ತರಬೇತಿಯನ್ನು ಪ್ರಾರಂಭ ಮಾಡುತ್ತಿದ್ದು ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈ ಯವರು ಚಾಲನೆಯನ್ನು ನೀಡಿದರು.


ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈಯವರು, ಕರಾವಳಿ ಭಾಗದಲ್ಲಿ ಸರಕಾರಿ ನೇಮಕಾತಿಗಳಿಗೆ ಪ್ರಯತ್ನ ಮಾಡುವವರ ಸಂಖ್ಯೆ ತುಂಬಾ ಕಡಿಮೆ ಇರುವ ಸಂದರ್ಭದಲ್ಲಿ, ಕಳೆದ 2 ವರ್ಷಗಳಿಂದ ವಿವಿಧ ನೇಮಕಾತಿಗಳಿಗೆ ನೂರಾರು ಯುವಕ ಯುವತಿಯರು ಈ ಭಾಗದಿಂದ ಆಯ್ಕೆಯಾಗುವಂತೆ ಮಾಡಿದ ‘ವಿದ್ಯಾಮಾತಾ ಅಕಾಡೆಮಿ’ಯ ಪರಿಶ್ರಮಕ್ಕೆ ಶ್ಲಾಘಿಸಿದರು.


ಈ ಸಂದರ್ಭದಲ್ಲಿ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದು ‘ಬೀಟ್ ಫಾರೆಸ್ಟರ್’ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸನತ್ ಕುಮಾರ್ ರೈ ಹಾಗೂ ವಿವಿಧ ಕಾರ್ಯ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಶಾಸಕರು ಪದಕ ನೀಡಿ ಗೌರವಿಸಿದರು. ವಿದ್ಯಾಮಾತಾ ಅಕಾಡೆಮಿ ವತಿಯಿಂದ ಶಾಸಕರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಾವು ಹೇಮನಾಥ ಶೆಟ್ಟಿ ಅವರು ವಿದ್ಯಾಮಾತಾ ಅಕಾಡೆಮಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿಯ ತರಬೇತಿಯನ್ನು ಮುಗಿಸಿರುವ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಿ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾಮಾತಾ ಅಕಾಡೆಮಿಯ ನಿರ್ದೇಶಕರು, ತರಬೇತುದಾರರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸೂಕ್ತ ದಾಖಲಾತಿ ಇದ್ದರೂ ಸತಾಯಿಸುವವರ ಬಗ್ಗೆ ಶಾಸಕರ ಗಮನ ಸೆಳೆಯಲು ಕರೆ…
ಗ್ರಾಮೀಣ ಪ್ರದೇಶಗಳಲ್ಲಿ ಅದರಲ್ಲೂ ಗಡಿ ಭಾಗದ ಗ್ರಾಮಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ವಿವಿಧ ನೇಮಕಾತಿಗಳಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸೂಕ್ತ ದಾಖಲಾತಿಗಳು ಸಿಗುವಾಗ ವಿಳಂಬವಾಗುತ್ತಿದ್ದು, ಇದನ್ನು ನಿವಾರಿಸುವಂತೆ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ಯವರು ಮನವಿ ಮಾಡಿಕೊಂಡ ಮೇರೆಗೆ ಶಾಸಕರು “ಗ್ರಾಮೀಣ ಅಭ್ಯರ್ಥಿಗಳು / ಜಾತಿ, ಆದಾಯ ಇತ್ಯಾದಿ ಪ್ರಮಾಣ ಪತ್ರಗಳನ್ನು ಪಡೆಯುವಲ್ಲಿ ಇರುವ ತೊಡಕುಗಳು / ತಾಂತ್ರಿಕ ತೊಂದರೆಗಳು / ಸಂಬಂಧಪಟ್ಟ ಅಧಿಕಾರಿಗಳಿಂದ ಆಗುವ ವಿಳಂಬ ಎಲ್ಲವನ್ನೂ ಶೀಘ್ರವಾಗಿ ಪರಿಹರಿಸಲು ಮೇಲಧಿಕಾರಿಗೆ ಸೂಚಿಸಲು ಭರವಸೆ ನೀಡಿದರು. ಅಲ್ಲದೇ ವಿದ್ಯಾರ್ಥಿಗಳಲ್ಲಿ ಸೂಕ್ತ ದಾಖಲಾತಿ ಇದ್ದರೂ ಸತಾಯಿಸುವವರ ಬಗ್ಗೆ ಶಾಸಕರ ಗಮನ ಸೆಳೆಯುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

LEAVE A REPLY

Please enter your comment!
Please enter your name here