ಪುತ್ತೂರು:2019ರಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ನಡೆದಿತ್ತು ಎನ್ನಲಾದ ಯುವತಿಯ ಅತ್ಯಾಚಾರ ಪ್ರಕರಣದ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
2019ರ ಮೇ ತಿಂಗಳಲ್ಲಿ ಯುವತಿಯೋರ್ವರು ಕಾರ್ತಿಕ್ ಎಂಬಾತನೊಂದಿಗೆ ಮಂಗಳೂರು-ಸುಬ್ರಹ್ಮಣ್ಯ ರೈಲಿನಲ್ಲಿ ಪುತ್ತೂರಿಗೆ ಬರುತ್ತಿದ್ದ ಸಮಯದಲ್ಲಿ ಕಲ್ಲಡ್ಕ ತಲುಪುವಾಗ ಕಾರ್ತಿಕ್ ಆಕೆಯ ಇಚ್ಚೆಗೆ ವಿರುದ್ಧವಾಗಿ ಅತ್ಯಾಚಾರವೆಸಗಿದ್ದ.ನಂತರ ಅದೇ ವರ್ಷದ ಸೆಪ್ಟೆಂಬರ್ ಮತ್ತು ನವೆಂಬರ್ ತಿಂಗಳಲ್ಲಿ ಅದೇ ರೀತಿ ರೈಲಿನಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ ಎಂದು ಆರೋಪಿಸಲಾಗಿತ್ತು.ಯುವತಿಯು ಬಳಿಕ ಹೊಟ್ಟೆನೋವು ಎಂದು ಮಂಗಳೂರು ಲೇಡಿಗೋಷನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾಗ ಆಕೆ ಗರ್ಭಿಣಿ ಎನ್ನುವುದು ಬೆಳಕಿಗೆ ಬಂದಿತ್ತು.
ಪೊಲೀಸರಿಗೆ ದೂರು:
ಆರಂಭದಲ್ಲಿ ಯುವತಿ ಘಟನೆ ಕುರಿತು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿ ಕಾರ್ತಿಕ್ ವಿರುದ್ಧ ದೂರು ನೀಡಿದ್ದರು.ಪುತ್ತೂರು ಮಹಾಲಿಂಗೇಶ್ವರ ದೇವಳದ ಹಿಂಭಾಗ ಈ ಕೃತ್ಯ ನಡೆದಿರುವುದಾಗಿ ದೂರಿನಲ್ಲಿ ತಿಳಿಸಿದ್ದರು.2020ರ ಜನವರಿ 4ರಂದು ದೂರು ನೀಡಲಾಗಿತ್ತು.ರೈಲಿನಲ್ಲಿ ಘಟನೆ ನಡೆದಿದೆ ಎಂದು, ಬಳಿಕ ಆಕೆ ತಿಳಿಸಿದ್ದರಿಂದ ಪ್ರಕರಣ ಮಂಗಳೂರು ರೈಲ್ವೇ ಪೊಲೀಸರಿಗೆ ಹಸ್ತಾಂತರಿಸಲ್ಪಟ್ಟಿತ್ತು.ರೈಲ್ವೇ ಪೊಲೀಸರು ಆರೋಪಿ ಕಾರ್ತಿಕ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಮಂಗಳೂರಿನ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ನಡೆಸಿತ್ತು.28 ಸಾಕ್ಷಿಗಳ ಪೈಕಿ 11 ಸಾಕ್ಷಿಗಳನ್ನು ತನಿಖೆ ನಡೆಸಿತ್ತು.ವಿಳಂಬವಾಗಿ ದೂರು ನೀಡಿರುವುದು, ಸೂಕ್ತ ಸಾಕ್ಷ್ಯಧಾರ ಮತ್ತು ದಾಖಲೆಗಳ ಕೊರತೆ, ಘಟನೆ ನಡೆದಿದೆ ಎನ್ನಲಾದ ಸ್ಥಳದಲ್ಲಿ ಘಟನೆಯ ಯಾವುದೇ ಕುರುಹುಗಳು ಕಂಡು ಬಂದಿರುವುದಿಲ್ಲ.
ತನಿಖೆಯಲ್ಲಿನ ಹಲವಾರು ವಿರೋಧಾಭಾಸಗಳು, ನ್ಯಾಯಾಲಯದ ಮುಂದೆ ಸಾಕ್ಷಿಗಳು ನೀಡಿರುವ ವ್ಯತಿರಿಕ್ತ ಹೇಳಿಕೆಗಳು, ಡಿಎನ್‌ಎ ಋಣಾತ್ಮಕ ವರದಿ, ಸಾಕ್ಷ್ಯಗಳನ್ನು ಗಮನಿಸಿದಾಗ ಆರೋಪಿ ಕಾರ್ತಿಕ್ ಆಕೆಯನ್ನು ಅತ್ಯಾಚಾರವೆಸಗಿದ್ದಾನೆ ಎಂಬುದಕ್ಕೆ ಪೂರಕವಾದ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳು ಲಭ್ಯವಿರುವುದಿಲ್ಲ ಎಂದು, ಆರೋಪಿ ಪರ ವಕೀಲ ಮಹೇಶ್ ಕಜೆ ಅವರು ವಾದ ಮಂಡಿಸಿದ್ದರು.ಅವರ ವಾದವನ್ನು ಪುರಸ್ಕರಿಸಿದ ಮಂಗಳೂರು ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಪೊಕ್ಸೋ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ಅವರು, ಪ್ರಕರಣವನ್ನು ಸಂಶಯಾತೀತವಾಗಿ ಸಾಬೀತುಪಡಿಸಲು ಪ್ರಾಸಿಕ್ಯೂಶನ್ ವಿಫಲವಾಗಿದೆ ಎಂದು ತೀರ್ಮಾನಿಸಿ ಆರೋಪಿಯನ್ನು ನಿರಪರಾಧಿಯೆಂದು ಖುಲಾಸೆಗೊಳಿಸಿ ಆದೇಶಿಸಿದ್ದಾರೆ.