ದರ್ಬೆಯ ಲಾಂಡ್ರಿ ಮಾಲಕ, ತಾಯಿಗೆ ಬಾರ್ ಸಿಬ್ಬಂದಿಗಳಿಂದ ಹಲ್ಲೆ ಆರೋಪ-ಪ್ರಕರಣ ದಾಖಲು

0

ಪುತ್ತೂರು:ಬಾರೊಂದರ ಸಿಬ್ಬಂದಿಗಳ ತಂಡ ಪಕ್ಕದ ಲಾಂಡ್ರಿ ಮಾಲಕ ಹಾಗೂ 53 ವರ್ಷದ ಮಹಿಳೆಯ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಘಟನೆ ದರ್ಬೆಯಲ್ಲಿ ಜೂ.5ರಂದು ನಡೆದಿದ್ದು, ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಜೂ.6ರಂದು ಪ್ರಕರಣ ದಾಖಲಾಗಿದೆ.

ದರ್ಬೆ ಪ್ರಶಾಂತ್ ಮಹಲ್‌ನಲ್ಲಿರುವ ವಿ ವಾಶ್ ಲ್ಯಾಂಡ್ರಿ ಮಾಲಕ, ಆರ್ಯಾಪು ಗ್ರಾಮದ ಪಂಜಳ ನಿವಾಸಿ ಹರ್ಷಿತ್ ಕುಮಾರ್ ಪಿ.ವಿ(28ವ.)ರವರು ಹಲ್ಲೆಗೊಳಗಾದವರು. ‘ನಾನು ಜೂ. 5ರಂದು ನನ್ನ ಅಂಗಡಿಯ ಮುಂದೆ ಒಮ್ನಿ ಕಾರಿನಲ್ಲಿ ಬಂದು ಬಟ್ಟೆಗಳನ್ನು ಕಾರಿಗೆ ತುಂಬಿಸುತ್ತಿದ್ದ ಸಂದರ್ಭ ಪಕ್ಕದಲ್ಲಿರುವ ಹೆರಿಟೇಜ್ ಬಾರ್‌ನ ಸಿಬ್ಬಂದಿ ಶಿವ ಯಾನೆ ಶಿವಜಿತ್ ಪೂಂಜಾ ಎಂಬವರು ಬಂದು ಒಮ್ನಿಯನ್ನು ಅಲ್ಲಿಂದ ತೆಗೆಯುವಂತೆ ಸೂಚಿಸಿದರು. ಬಟ್ಟೆ ಲೋಡ್ ಆದ ಮೇಲೆ ಕಾರು ತೆಗೆಯುತ್ತೇನೆ ಎಂದಾಗ ಬಾರ್‌ನ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಇತರ ಸಿಬ್ಬಂದಿಗಳನ್ನು ಕರೆಸಿ ಕೊಲೆ ಬೆದರಿಕೆಯೊಡ್ಡಿದ್ದಾರೆ. ಬಳಿಕ ಒಮ್ನಿಯನ್ನು ಸ್ವಲ್ಪ ಮುಂದಕ್ಕೆ ಚಲಾಯಿಸಿಕೊಂಡು ಹೋದಾಗ ಬಾರಿನ ಮ್ಯಾನೇಜರ್ ಮಧುಸೂದನ್ ಎಂಬವರು ಬಂದು ಹಲ್ಲೆ ನಡೆಸಿದ್ದಾರೆ. ಆಗ ನನ್ನ ತಾಯಿ ತಡೆಯಲು ಬಂದಾಗ ಅವರಿಗೆ ಕೈಯಿಂದ ಹಲ್ಲೆ ನಡೆಸಿದ್ದಾರೆ’ ಎಂದು ಹರ್ಷಿತ್ ಕುಮಾರ್ ಆರೋಪಿಸಿದ್ದಾರೆ. ಹರ್ಷಿತ್ ಕುಮಾರ್ ಮತ್ತು ಅವರ ತಾಯಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಟನೆ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿ ವಾಶ್ ಲಾಂಡ್ರಿ ಮಾಲಕ ಮತ್ತು ಹೆರಿಟೇಜ್ ಬಾರ್ ನವರಿಗೆ ಹಿಂದಿನಿಂದಲೂ ಸಣ್ಣ ಪುಟ್ಟ ವಿಚಾರಗಳಿಗೆ ಮನಸ್ತಾಪ ಇದ್ದು ಹಲವು ಬಾರಿ ಗಲಾಟೆ ನಡೆದಿತ್ತು. ಇದೇ ವಿಚಾರದಲ್ಲಿ ಮತ್ತೆ ಈ ಕೃತ್ಯ ಎಸಗಿರುವುದಾಗಿದೆ ಎಂದು ಪೊಲೀಸರು ಪ್ರಕರಣದಲ್ಲಿ ದಾಖಲಿಸಿಕೊಂಡಿದ್ದಾರೆ.

ಸಹೋದರನಿಗೆ ಜೀವ ಬೆದರಿಕೆ: ಹಲ್ಲೆಗೊಳಗಾದ ನಾನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದ ಬಳಿಕ ಅಲ್ಲಿಗೆ ಬಂದ ಸಾತು ಎಂಬವರು ನನ್ನ ಸಹೋದರ ಹಿತೇಶ್‌ರವರಿಗೆ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಹರ್ಷಿತ್ ಕುಮಾರ್ ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here