ರೋಟರಿ ಕ್ಲಬ್ ಪುತ್ತೂರು ಯುವ, ಇಲೈಟ್,ಪ್ಲೋರಿಡಾದ ನ್ಯೂ ಟಾಂಪಾನೂನ್‌ದಿಂದ ಪುತ್ತೂರು ಸರಕಾರಿ ಆಸ್ಪತ್ರೆಗೆ 6 ಡಯಾಲಿಸಿಸ್ ಮೆಷಿನ್, ಆರ್.ಓ ಪ್ಲಾಂಟ್ ಹಸ್ತಾಂತರ

0

ಡಯಾಲಿಸಿಸ್ ಮೆಷಿನ್ ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ
ಆರ್.ಓ ಪ್ಲಾಂಟ್ ಉದ್ಘಾಟಿಸಿದ ಮಾಜಿ ಶಾಸಕ ಸಂಜೀವ ಮಠಂದೂರು

ಪುತ್ತೂರು:ರೋಟರಿ ಕ್ಲಬ್ ಪುತ್ತೂರು ಯುವ ಮತ್ತು ರೋಟರಿ ಕ್ಲಬ್ ಪುತ್ತೂರು ಇಲೈಟ್ ಇವರು, ಅಮೇರಿಕಾದ ಪ್ಲೋರಿಡಾದಲ್ಲಿರುವ ರೋಟರಿ ಕ್ಲಬ್ ನ್ಯೂ ಟಾಂಪಾನೂನ್ ಇವರ ಜಂಟಿ ಸಹಯೋಗದಲ್ಲಿ ಪುತ್ತೂರಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಕೊಡಮಾಡಿದ 6 ಹೊಸ ಡಯಾಲಿಸಿಸ್ ಮೆಷಿನ್‌ಗಳ ಮತ್ತು ಆರ್.ಓ ಪ್ಲಾಂಟ್ ಇದರ ಹಸ್ತಾಂತರ ಕಾರ್ಯಕ್ರಮವು ಜೂ.9 ರಂದು ಬೆಳಿಗ್ಗೆ ಪುತ್ತೂರಿನ ಸರಕಾರಿ ಆಸ್ಪತ್ರೆಯ ವಠಾರದಲ್ಲಿ ನಡೆಯಿತು.ಶಾಸಕ ಅಶೋಕ್ ಕುಮಾರ್ ರೈ ಅವರು ಡಯಾಲಿಸಿಸ್ ಘಟಕವನ್ನು ಉದ್ಘಾಟಿಸಿದರು.ಮಾಜಿ ಶಾಸಕ ಸಂಜೀವ ಮಠಂದೂರು ಅವರು ಆರ್.ಓ ಪ್ಲಾಂಟ್‌ನ್ನು ಉದ್ಘಾಟಿಸಿದರು.ಬಳಿಕ ಆಸ್ಪತ್ರೆಯ ವಠಾರದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.


ನೋವಿಗೆ ಸ್ಪಂದನೆ ಮಾಡುವ ಕೆಲಸ ಈ ಭಾಗದ ರೋಟರಿಯಿಂದಾಗಿದೆ:
ಡಯಾಲಿಸಿಸ್ ಘಟಕ ಮತ್ತು ಸಭಾ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಸುಮಾರು ೧೨೦ಕ್ಕೂ ಮಿಕ್ಕಿ ರೋಗಿಗಳು ಡಯಾಲಿಸೀಸ್‌ಗಾಗಿ ಕಾಯುತ್ತಿರುವುದನ್ನು ನೋಡಿದ್ದೆ.ಪ್ರತಿ ದಿನ ಪುತ್ತೂರಿನಲ್ಲಿ ಒಂದಲ್ಲ ಒಂದು ವಿಚಾರದಲ್ಲಿ ಅತೀ ಹೆಚ್ಚು ಕಿಡ್ನಿ ಫೈಲ್ ಆಗುತ್ತಿದ್ದರೂ ಇಷ್ಟು ವರ್ಷಗಳಲ್ಲಿ ಸ್ಪಂದಿಸುವಲ್ಲಿ ನಾವು ಹಿಂದಿದ್ದೆವು.ಸುಮಾರು ಮೂರ‍್ನಾಲ್ಕು ವರ್ಷಗಳಿಂದ ಪ್ರತಿ ಬಡವರು ಬಂದು ರೂ.೧,೪೦೦ರಿಂದ ೧,೪೫೦ ರೂ.ಖರ್ಚು ಮಾಡಿ ಖಾಸಗಿಯಾಗಿ ಡಯಾಲಿಸೀಸ್ ಮಾಡಿಸಿಕೊಳ್ಳುತ್ತಿದ್ದರು.ಸರಕಾರಿ ಆಸ್ಪತ್ರೆಯಲ್ಲಿ ಕೇವಲ ೬೦ ರೋಗಿಗಳಿಗೆ ಡಯಾಲಿಸೀಸ್ ವ್ಯವಸ್ಥೆಯಿದ್ದು ಇನ್ನೂ ೭೦ ರೋಗಿಗಳು ಸರದಿಯಲ್ಲಿದ್ದಾರೆ.ಇದಕ್ಕೆ ಪರಿಹಾರ ಕಂಡುಕೊಳ್ಳಲು ಇಲ್ಲಿನ ಆರೋಗ್ಯ ಸಮಿತಿಯಲ್ಲಿದ್ದವರೂ ಪ್ರಯತ್ನ ಮಾಡುತ್ತಿದ್ದರು.ಡಯಾಲಿಸೀಸ್ ವ್ಯವಸ್ಥೆಗೆ ಏನಾದರೂ ಮಾಡುವಂತೆ ಆಗಾಗ ರಾಜೇಶ್ ಬನ್ನೂರು ಅವರಿಗೆ ಹೇಳುತ್ತಿದ್ದೆ.ಆದರೆ ಈ ಸಮಸ್ಯೆಗಳನ್ನು ಮನಗಂಡಿರುವ ರೋಟರಿ ಕ್ಲಬ್‌ನವರೆಲ್ಲ ಸೇರಿಕೊಂಡು ಈಗ ಕೊಡುವ ದೇಣಿಗೆ ನೋಡಿದರೆ ಇದು ಸಮಾಜಕ್ಕೆ ಅರ್ಪಣೆಯಾಗುವ ವಿಚಾರ.ಇದರಲ್ಲಿ ಯಾವುದೇ ಭ್ರಷ್ಟತೆ ಇಲ್ಲ.ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಯನ್ನು ಸ್ಪಂದಿಸುವ ಕೆಲಸವನ್ನೂ ರೋಟರಿ ಕ್ಲಬ್ ಮಾಡಿ ತೋರಿಸಿದೆ.ಇದಕ್ಕಾಗಿ ಒಬ್ಬ ಶಾಸಕನ ನೆಲೆಯಲ್ಲಿ ಯಾವ ರೀತಿ ಧನ್ಯವಾದ ಹೇಳಿದರೂ ಸಾಕಾಗುವುದಿಲ್ಲ.ನೋವಿಗೆ ಸ್ಪಂದನೆ ಮಾಡುವ ಕೆಲಸ ಈ ಭಾಗದ ರೋಟರಿಯವರು ಮಾಡಿದ್ದಾರೆ ಎಂದರು.


ಖಾಸಗಿ ಆಸ್ಪತ್ರೆಗಳಿಗೆ ಸರಕಾರಿ ಸೌಲಭ್ಯದ ಮೊತ್ತ ಬಾಕಿ:
ಕೇಂದ್ರ ಸರಕಾರದ ಆಯುಷ್ಮಾನ್ ಮತ್ತು ಯಶಸ್ವಿನಿ ಯೋಜನೆಯಲ್ಲಿ ಖಾಸಗಿ ಆಸ್ಪತ್ರೆಯ ಹೆಸರು ಇದ್ದರೂ ಸರಕಾರದಿಂದ ಕಳೆದ ಎರಡು ವರ್ಷಗಳಿಂದ ಸರಿಯಾದ ಮೊತ್ತ ಬಾರದ ಹಿನ್ನೆಲೆಯಲ್ಲಿ ಅವರು ಸೇವೆ ನೀಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ.ಸಾರ್ವಜನಿಕರು ರೂ. ೫೦೦ ಪಾವತಿಸಿ ಸದಸ್ಯರಾಗಿದ್ದಾರೆ.ದಕ್ಷಿಣ ಕನ್ನಡಲ್ಲಿ -ದರ್ ಮುಲ್ಲರ್ ಅಸ್ಪತ್ರೆಯಲ್ಲಿ ಮಾತ್ರ ಸೌಲಭ್ಯ ಸಿಗುತ್ತಿದೆ.ಮಣಿಪಾಲ ಆಸ್ಪತ್ರೆಯವರೂ ಯೋಜನೆಯಿಂದ ಹಿಂದೆ ಸರಿದಿದ್ದಾರೆ.ಮುಂದೆ ಈ ಯೋಜನೆಗಳನ್ನು ಆಸ್ಪತ್ರೆಗಳಲ್ಲಿ ಕಡ್ಡಾಯ ಮಾಡುವ ಅವಶ್ಯಕತೆ ಇದೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.


ಪುತ್ತೂರಿನಲ್ಲಿ ಕಣ್ಣಿನ ಆಸ್ಪತ್ರೆ ಅತೀ ಶೀಘ್ರ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಅವರು ಮಾತನಾಡಿ ಅತ್ಯಂತ ಅಪೇಕ್ಷಿತರಿಗೆ ಉನ್ನತಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಕಾರ್ಯಕ್ರಮವಾಗಿ ಆರೋಗ್ಯ ಸಿರಿ ಮೂರು ಕ್ಲಬ್‌ಗಳ ನೇತೃತ್ವದಲ್ಲಿ ಆಗಿರುವುದು ಸಂತೋಷದ ವಿಚಾರ ಎಂದರು.ಇಚ್ಚಾ ಶಕ್ತಿ ಇದ್ದಲ್ಲಿ ಪರ್ವತವನ್ನೂ ಮುಂದೂಡಬಹುದೆನ್ನುವ ಮಾತಿನಂತೆ ಅದಕ್ಕೆ ಪೂರಕವಾದ ಚಿಂತನೆ ಇಲ್ಲಿ ಜ್ವಲಂತ ಸಾಕ್ಷಿಯಾಗಿದೆ.ಈ ವರ್ಷದ ಕೊನೆಗೆ ಈ ಯೋಜನಾ ಪ್ರಸ್ತಾವನೆ ಹೋಗಿತ್ತು.ಆದರೆ ಉದ್ಘಾಟನೆ ಪ್ರಪ್ರಥಮವಾಗಿ ಈ ಯೋಜನೆಯದ್ದೇ ಆಗಿದೆ.ಇವತ್ತು ರೋಟರಿಯಲ್ಲಿ ನಾಲ್ಕುವರೆ ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚು ನೆರವು ಪ್ರಪಂಚದಾದ್ಯಂತ ಬೇರೆ ಬೇರೆ ಕಡೆಗಳಿಗೆ ಒದಗಿ ಬಂದಿದೆ.ರೋಟರಿ ಫೌಂಡೇಶನ್ ನಮ್ಮಲ್ಲಿರುವ ತ್ಯಾಗದ ಫಲವಾಗಿದೆ.ಕಣ್ಣಿಗೆ ಕಾಣದ ದೇವರನ್ನು ಪೂಜಿಸುತ್ತೇವೆ ಆದರೆ ಡಯಾಲಿಸೀಸ್‌ನಲ್ಲಿ ರೋಗಿಗಳಿಗೆ ಸೇವೆ ಮಾಡುವ ತ್ಯಾಗದ ದೇವರಿಗೆ ಪೂಜೆ ಸಲ್ಲಿಸಿದಂತೆ ಎಂದ ಅವರು ಮಂಗಳೂರಿನಲ್ಲಿ ರೋಟರಿಯಿಂದ ಮಕ್ಕಳಿಗಾಗಿ ಸ್ತನದ ಹಾಲಿನ ಸೆಂಟರ್ ಮಾಡಿದ್ದೇವೆ.ಅದೆ ರೀತಿ ಡಯಾಲಿಸೀಸ್ ಸೆಂಟರ್, ಬ್ಲಡ್ ಬ್ಯಾಂಕ್‌ಗಳನ್ನು ಪ್ರತಿ ತಾಲೂಕುಗಳಲ್ಲಿ ಮಾಡುತ್ತಿದ್ದೇವೆ.ಈ ವರ್ಷ ಪುತ್ತೂರು ರೋಟರಿ ಕ್ಲಬ್ ವತಿಯಿಂದ ರೂ.೨ ಕೋಟಿ ವೆಚ್ಚದಲ್ಲಿ ಕಣ್ಣಿನ ಅಸ್ಪತ್ರೆ ಮಾಡಲು ತಯಾರಾಗಿದ್ದೇವೆ.ಕಿವುಡರ, ಮೂಗರ ಆಸ್ಪತ್ರೆಗೆಳನ್ನು ಜಿಲ್ಲೆಯಲ್ಲಿ ಮಾಡುತ್ತಿದ್ದೇವೆ.ಅದೇ ರೀತಿ ಇಲ್ಲಿನ ನೂತನ ಡಯಾಲಿಸೀಸ್ ಸೆಂಟರ್ ಅತ್ಯಂತ ಉತ್ತಮ ರೀತಿಯಲ್ಲಿ ನಡೆಯಲಿದೆ.ಇದರ ನಿರ್ವಹಣೆಯೂ ಉತ್ತಮ ಆಗಿರಲಿ ಎಂದು ಹೇಳಿದರು.


ಸಣ್ಣ ಕ್ಲಬ್ ದೊಡ್ಡ ಕೆಲಸಕ್ಕೆ ಕೈ ಹಾಕಿ ಯಶಸ್ವಿಯಾಗಿದೆ:
ರೋಟರಿ ಕ್ಲಬ್ ಪಿಡಿಜಿ ಕೃಷ್ಣ ಶೆಟ್ಟಿ ಅವರು ಮಾತನಾಡಿ ಸಣ್ಣ ಕ್ಲಬ್ ದೊಡ್ಡ ಕಾರ್ಯಕ್ರಮಕ್ಕೆ ಕೈ ಹಾಕಿ ಯಶಸ್ವಿಯಾಗಿರುವುದು ಉತ್ತಮ ಕೆಲಸ.ಇಂತಹ ಕೆಲಸ ಈ ಕ್ಲಬ್‌ಗಳಿಂದ ನಿಂತರ ನಡೆಯಲಿ ಎಂದು ಹಾರೈಸಿದರು.


ರೋಟರಿ ಪುತ್ತೂರಿನ ಜನತೆಯ ಅವಿಭಾಜ್ಯ ಅಂಗವಾಗಿದೆ:
ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಅನ್ನ ಅಕ್ಷರ ಆರೋಗ್ಯವನ್ನು ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವುದು ಸರಕಾರದ ಜವಾಬ್ದಾರಿ.ಆ ಸರಕಾರದ ಜೊತೆ ಒಂದು ಸಂಘ ಸಂಸ್ಥೆ, ವ್ಯಕ್ತಿ ಕೈಜೋಡಿಸಿದಾಗ ಯಾವ ರೀತಿ ಅಗಬಹುದು ಎಂಬುದಕ್ಕೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಡೆದ ಡಯಾಲಿಸೀಸ್ ಮೆಷಿನ್ ಲೋಕಾರ್ಪಣೆ ಕಾರ್ಯಕ್ರಮ ಉತ್ತಮ ಉದಾಹರಣೆಯಾಗಿದೆ.ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಕೊಡಲು ನಾವು ಬದ್ದರು ಎಂದು ರೋಟರಿಯಂತಹ ಸಂಸ್ಥೆ ಮುಂದೆ ಬಂದಾಗ ಪುತ್ತೂರಿನ ಜನತೆ ಸರಕಾರಿ ಆಸ್ಪತ್ರೆಯಲ್ಲಿ ಸ್ವರ್ಗ ಸುಖವನ್ನು ಕಾಣಬಹುದು ಎಂದು ತೋರಿಸಿಕೊಟ್ಟಿದ್ದಾರೆ ಎಂದು ಶ್ಲಾಸಿದರು.ಬಹುತೇಕ ಕಡೆಗಳಲ್ಲಿ ರೋಗಿಗಳ ಸಂಬಂಧಿಕರು ಸರಕಾರಿ ಆಸ್ಪತ್ರೆಯಲ್ಲಿ ನರಕಯಾತನೆ ಅನುಭವಿಸುತ್ತೇವೆಂದು ಹೇಳುತ್ತಾರೆ.ಆದರೆ ಅದಕ್ಕೆ ಭಿನ್ನವಾಗಿ ಪುತ್ತೂರು ಸರಕಾರಿ ಅಸ್ಪತ್ರೆ ರೋಗಿಗಳಿಗೆ ಉತ್ತಮ ಸೇವೆ ನೀಡುತ್ತಿದೆ ಎಂದರು.ಕಳೆದ ೫ ವರ್ಷದಲ್ಲಿ ನಾನು ಶಾಸಕನಾಗಿದ್ದಾಗ ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಗೆ ಏನೇನು ಬೇಕೆಂದು ಕೇಳಿ, ನಿಮ್ಮ ಜೊತೆ ನಾವಿದ್ದೇವೆ ಎಂದು ಆಸ್ಕರ್ ಆನಂದ್ ಅವರು ಕೈಜೋಡಿಸಿದರು.ಕೋವಿಡ್ ಸಂದರ್ಭದಲ್ಲಿ ಜನರಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ಆರೋಗ್ಯ ಸೇವೆ ನೀಡಿದಾಗ ಅದರೊಂದಿಗೆ ಕೈ ಜೋಡಿಸಿದ್ದು ಇಂತಹ ಸಂಘ ಸಂಸ್ಥೆಗಳು.ಪುತ್ತೂರು ತಾಲೂಕು ಆಸ್ಪತ್ರೆಗೂ ಕ್ಯಾಂಪ್ರೋದಿಂದ ರೂ.೭೦ಲಕ್ಷದ ಆಕ್ಸಿಜನ್ ಪ್ಲಾಂಟ್, ನವಚೇತನ ಟ್ರಸ್ಟ್‌ನಿಂದ ಆಕ್ಸಿಜನ್ ಕಾನ್ಸ್ಟ್ರೇಷನ್ ಕೊಡುವ ಕೆಲಸ ಆಗಿದೆ.ನಾನು ಕೂಡಾ ಮೂಲಭೂತ ಸೌಕರ್ಯ ಇಲಾಖೆಯಿಂದ ಪ್ರಯೋಗಾಲಯಕ್ಕೆ ಬೇಕಾದ ಲ್ಯಾಬ್ ಮೆಷಿನರಿಗಳನ್ನು ಕೊಡುವ ಕೆಲಸ ಮಾಡಿದ್ದೆ.ಶವ ಶೀತಲೀಕರಣ ನೀಡುವ ಕೆಲಸ ರೋಟರಿ ಸಂಸ್ಥೆ ಮಾಡಿದೆ.ಈ ರೀತಿಯಾಗಿ ಹತ್ತು ಹಲವು ಸಮಾಜಮುಖಿ ಕಾರ್ಯ ಮಾಡುವ ಮೂಲಕ ಸಮಾಜಕ್ಕೆ ಪರಿಚಯಿಸುವ ಕೆಲಸವನ್ನು ವೈದ್ಯರ ಜೊತೆ ಮಾಡಿದೆ.ರೋಟರಿ ಸಂಸ್ಥೆ ಇವತ್ತು ಪುತ್ತೂರಿನ ಜನತೆಯ ಅವಿಭಾಜ್ಯ ಅಂಗವಾಗಿದೆ.ಅದೇ ರೀತಿ ಆರೋಗ್ಯ ರಕ್ಷಾ ಸಮಿತಿ ಕೂಡಾ ಉತ್ತಮ ಕೆಲಸ ಮಾಡುತ್ತಿದೆ ಎಂದರು.


ಆರೋಗ್ಯ ಕಾರ್ಯಕ್ರಮ ಊರಿನ ಜನರಿಗೆ ಆಯುಷ್ಯ ವೃದ್ಧಿ ಮಾಡಲಿ:
ಜಿಲ್ಲಾ ರೋಟರಿ ಚಯರ್‌ಮ್ಯಾನ್ ಡಾ.ಸೂರ್ಯನಾರಾಯಣ ಕೆ ಆವರು ಮಾತನಾಡಿ ಗ್ಲೋಬಲ್ ಗ್ರ್ಯಾಂಟ್ ಅಂದರೆ ನಾವು ಕೊಟ್ಟ ಹಣವೇ ನಮಗೆ ಪುನಃ ಬರುತ್ತಿರುವುದು.ಹಾಗಾಗಿ ಇದು ರೊಟೇರಿಯನ್‌ಗಳ ಕೊಡುಗೆ.ಆರೋಗ್ಯ ಕಾರ್ಯಕ್ರಮ ಊರಿನ ಜನರಿಗೆ ತಮ್ಮ ಆಯುಷ್ಯವನ್ನು ವೃದ್ಧಿ ಮಾಡುವಲ್ಲಿ ಸಹಕಾರಿಯಾಗಲಿ ಎಂದು ಹಾರೈಸುತ್ತೇನೆ.ಗ್ಲೋಬಲ್ ಗ್ರ್ಯಾಂಟ್‌ನ ಇನ್ನೊಂದು ವಿಭಾಗ ಕಿಡ್ನಿ ರೋಗಗಳು ಬಾರದ ರೀತಿಯಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವಾಗಿದೆ ಎಂದರಲ್ಲದೆ,ರೋಟರಿಯಿಂದ ಈ ವರ್ಷ ನಡೆದ ಜಿಲ್ಲೆಯ ಕಾರ್ಯಕ್ರಮಗಳ ಮಾಹಿತಿ ನೀಡಿದರು.


ಡಯಾಲಿಸೀಸ್ ಸೆಂಟರ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಿ:
ರೋಟರಿ ಜಿಲ್ಲೆ ೩೧೮೧ ಇದರ ಜಿಲ್ಲಾ ಗವರ್ನರ್ ನಾಮಿನಿ ವಿಕ್ರಮದತ್ತ ಅವರು ಮಾತನಾಡಿ ಗ್ಲೋಬಲ್ ಗ್ರ್ಯಾಂಟ್ ಮಾಡುವುದು ದೊಡ್ಡ ಕ್ಲಬ್‌ನ ಕನಸು ಎಂದು ಆಡಿಕೊಳ್ಳುತ್ತಿದ್ದರು.ಆದರೆ ಸಣ್ಣ ಕ್ಲಬ್ ಕೂಡಾ ಸಾಧನೆ ಮಾಡುತ್ತದೆ ಎಂದು ನಮಗೆ ದಾರಿದೀಪ ಮಾಡಿದ್ದಾರೆ.ಮುಂದೆ ಈ ಡಯಾಲಿಸೀಸ್ ಸೆಂಟರ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಎಂದು ಹಾರೈಸಿದರು.


ರೋಗಕ್ಕೆ ತುತ್ತಾಗುವವರ ಸಂಖ್ಯೆ ಕಡಿಮೆ ಮಾಡಬೇಕಾಗಿದೆ:
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಅಶಾಜ್ಯೋತಿ ಕೆ ಅವರು ಮಾತನಾಡಿ ರೋಗಿಗಳ ಸಂಖ್ಯೆ ಹೆಚ್ಚಳ ಆದಂತೆ ಮೆಷಿನ್‌ಗಳ ಅವಶ್ಯಕತೆಯೂ ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಮೊದಲು ನಮಗೆ ಸ್ಪಂಧನೆ ನೀಡಿದವರು ಈ ಹಿಂದಿನ ಶಾಸಕ ಸಂಜೀವ ಮಠಂದೂರು ಮತ್ತು ಆರೋಗ್ಯ ರಕ್ಷಾ ಸಮಿತಿ ಸದಸ್ಯರು.ಆಸ್ಕರ್ ಆನಂದ್ ಅವರು ಇದರ ರೂಪುರೇಶೆಗೆ ಸಿದ್ದರಾದರು.ಅವರ ಮೂಲಕ ರೋಟರಿ ಎಲೈಟ್ ಮತ್ತು ರೋಟರಿ ಯುವ ನಮಗೆ ಉತ್ತಮ ಸೌಲಭ್ಯ ನೀಡಿದೆ.ಇವರಿಗೆ ಆಸ್ಸತ್ರೆಯ ಪರವಾಗಿ ಧನ್ಯವಾದ ಸಮರ್ಪಿಸುತ್ತೇನೆ.ಇದರ ನಿರ್ವಹಣೆಗೂ ಹೆಚ್ಚು ವೆಚ್ಚ ತಗಲುತ್ತದೆ.ಆದರೆ ನಾವು ಅದನ್ನು ಚೆನ್ನಾಗಿ ನಿರ್ವಹಿಸುತ್ತೇವೆ ಎಂದು ಭರವಸೆ ನೀಡಿದರು.ರೋಗಿಗಳ ಸಂಖ್ಯೆ ಹೆಚ್ಚಾದಂತೆ ಮೆಷಿನ್ ವ್ಯವಸ್ಥೆಯ ಚಿಂತೆಗಿಂತ ರೋಗಕ್ಕೆ ತುತ್ತಾಗುವವರ ಸಂಖ್ಯೆ ಕಡಿಮೆ ಮಾಡಬೇಕು.ಅದಕ್ಕಾಗಿ ರೋಗದ ಬಗ್ಗೆ ಅರಿವು ಮೂಡಿಸಬೇಕೆಂದವರು ಹೇಳಿದರು.


ಇನ್ನೊಬ್ಬರ ಬದುಕಿನಲ್ಲಿ ನಮ್ಮಿಂದಾಗುವ ಉತ್ತಮ ಬದಲಾವಣೆಯೇ ಸೇವೆ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಎಲೈಟ್ ಅಧ್ಯಕ್ಷ ಡಾ|ಪೀಟರ್ ವಿಲ್ಸನ್ ಪ್ರಭಾಕರ್ ಅವರು ಮಾತನಾಡಿ ರೋಟರಿ ವರ್ಷ ಆರಂಭ ಆಗುವ ಸಂದರ್ಭ ಜಿಲ್ಲಾ ಗವರ್ನರ್ ಮಾತನಾಡಿ ಈ ವರ್ಷ ಅತ್ಯಂತ ಉತ್ತಮ ಯೋಜನೆಗಳು ಕಾರ್ಯಗತಗೊಳ್ಳಬೇಕೆಂದು ಸೂಚಿಸಿದ್ದರು.ಅವರ ಮಾತಿನಂತೆ ಇವತ್ತು ಈ ಎರಡು ಚಿಕ್ಕ ರೋಟರಿ ಕ್ಲಬ್‌ಗಳ ಮೂಲಕ ಉತ್ತಮ ಯೋಜನೆ ಕಾರ್ಯಗತಗೊಂಡಿದೆ.ಯಾವಾಗ ರೋಗಿಗಳ ನೋವಿಗೆ ನಾವು ಸ್ಪಂದಿಸುತ್ತೇವೋ ಆಗ ಅವರ ಕೃತಜ್ಞತಾ ಭಾವನೆ ಮೂಲಕ ಸಾರ್ಥಕ್ಯವನ್ನು ಕಾಣುತ್ತೇವೆ.ಮನುಷ್ಯನ ಜೀವನದಲ್ಲಿ ಕೊನೆಯ ತನಕ ಉಳಿಯುವುದು ಕೃತಜ್ಞತೆ ಮನೋಭಾನೆ.ಇನ್ನೊಬ್ಬನ ಬದುಕಿನಲ್ಲಿ ನಮ್ಮಿಂದಾಗುವ ಉತ್ತಮ ಬದಲಾವಣೆಯೇ ಸೇವೆ ಎಂದರು.


ಸುಸಜ್ಜಿತ ಕಟ್ಟಡ ಡಯಾಲಿಸೀಸ್ ಅಳವಡಿಕೆಗೆ ಸಹಕಾರಿಯಾಯಿತು:
ಗ್ಲೋಬಲ್ ಗ್ರ್ಯಾಂಟ್ ಪ್ರೊಜೆಕ್ಟ್‌ನ ಪ್ರೈಮರಿ ಕಾಂಟ್ಯಾಕ್ಟ್ ರತ್ನಾಕರ ರೈ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಡಯಾಲಿಸೀಸ್‌ಗೆ ಪೂರಕವಾಗಿ ಇಲ್ಲಿ ಸುಸಜ್ಜಿತವಾದ ಕಟ್ಟಡ ಮಾಜಿ ಶಾಸಕ ಸಂಜೀವ ಮಠಂದೂರು ಅವಽಯಲ್ಲಿ ಪುನರ್ ನಿರ್ಮಾಣ ಆಗಿರುವುದು ಈ ಯೋಜನೆ ಕೈಗೆತ್ತಿಕೊಳ್ಳಲು ಅನುಕೂಲವಾಯಿತು.ರೋಟರಿ ಗ್ಲೋಬಲ್ ಕಾರ್ಯಕ್ರಮದಲ್ಲಿ ಹಾಕಿಕೊಳ್ಳಬೇಕೆನ್ನುವಾಗ ನಮಗೆ ರೋಟರಿ ಇಂಟರ್‌ನ್ಯಾಷನಲ್ ಸಂಸ್ಥೆ ಅಗತ್ಯತೆ ಇತ್ತು.ಈ ಸಂದರ್ಭ ವಿಶ್ವಾಸ್ ಶೆಣೈ ಅವರ ಮಾರ್ಗದರ್ಶನದಲ್ಲಿ ವಿನಾಯಕ ಕುಡ್ವ ಅವರನ್ನು ಸಂಪರ್ಕ ಮಾಡಿ ಅವರ ಮೂಲಕ ಅಮೇರಿಕಾದ ನ್ಯೂ ಟಂಪಾನೂನ್ ಮೂಲಕ ೧೮ ಸಾವಿರ ಡಾಲರ್ ಕೊಡುವ ಘೋಷಣೆ ಮಾಡಿದರು.ಅದು ಕಡಿಮೆ ಆದಾಗ ಮತ್ತೆ ೨ ಸಾವಿರ ಡಾಲರ್ ನೀಡುವ ಘೋಷಣೆ ಮಾಡಿದರು.ಜಿಲ್ಲಾ ಗವರ್ನರ್ ಮೂಲಕ ೧೫ ಸಾವಿರ ಡಾಲರ್ ಕೊಟ್ಟರು.ಗ್ಲೋಬಲ್ -ಂಡ್‌ನಿಂದ ಶೇ.೮೦ ಬಂತು. ಹಾಗೆ ರೋಟರಿ ಜಿಲ್ಲೆ ೩೧೮೧ರ ವಲಯ ಐದರ ವ್ಯಾಪ್ತಿಯಲ್ಲಿ ಬರುವ ರೋಟರಿ ಕ್ಲಬ್ ಪುತ್ತೂರು ಯುವ ಮತ್ತು ರೋಟರಿ ಕ್ಲಬ್ ಪುತ್ತೂರು ಇಲೈಟ್ ಇವರು ಸಮುದಾಯ ಅಭಿವೃದ್ಧಿ ಯೋಜನೆಯನ್ವಯ ಕಾರ್ಯಗತಗೊಳಿಸುವ ಈ ಯೋಜನೆಯು ಅಂತರ್ರಾಷ್ಟ್ರೀಯ ರೋಟರಿ ಫೌಂಡೇಶನ್‌ನ ಗ್ಲೋಬಲ್ ಗ್ರ್ಯಾಂಟ್‌ನೊಂದಿಗೆ ಅನುಷ್ಠಾನಗೊಂಡಿದೆ.ಈ ಮಹತ್ತರ ಸಮಾಜಮುಖಿ ಕಾರ್ಯದಲ್ಲಿ ಅಮೆರಿಕಾದ ಪ್ಲೋರಿಡಾದಲ್ಲಿರುವ ರೋಟರಿ ಕ್ಲಬ್ ನ್ಯೂ ಟಾಂಪಾನೂನ್, ರೋಟರಿ ಜಿಲ್ಲೆ ೬೮೯೦ ಮತ್ತು ರೋಟರಿ ಜಿಲ್ಲೆ ೩೧೮೧ರ ಸಹಯೋಗದೊಂದಿಗೆ ಈ ಯೋಜನೆಯನ್ವಯ ಒಟ್ಟು ೬೩,೫೦೦ ಡಾಲರ್ ಅಂದರೆ ರೂ.೫೨.೫೦ ಲಕ್ಷ ವೆಚ್ಚದಲ್ಲಿ ಒಟ್ಟು ೬ ಹೊಸ ಡಯಾಲಿಸಿಸ್ ಮೆಷಿನ್‌ಗಳನ್ನು ಮತ್ತು ಅದಕ್ಕೆ ಅಗತ್ಯವಿರುವ ಆರ್.ಓ ಪ್ಲಾಂಟ್‌ನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಕೊಡುಗೆಯಾಗಿ ನೀಡಲಾಗಿದೆ. ಇದಕ್ಕೆ ಪೂರಕವಾಗಿ ನಮಗೆ ಮಾರ್ಗದರ್ಶನ ನೀಡಿದವರು ಆಸ್ಕರ್ ಆನಂದ್.ಡಿಸೆಂಬರ್‌ನಲ್ಲಿ ಮಾಡಿದ ಪ್ರೊಜೆಕ್ಟ್ ಎಪ್ರಿಲ್‌ಗೆ ಅಪ್ರೂವಲ್ ಆಗಿ ಬಂತು.ಬಳಿಕ ನಾವು ಬಹಳಷ್ಟು ಕ್ವಾಲಿಟಿ ಮೆಷಿನ್ ಖರೀದಿ ಮಾಡಿದ್ದೆವು.ಮೆಷಿನ್ ಅಳವಡಿಕೆಯಾದ ಬಳಿಕ ರೋಗಿಗಳಿಗೆ ಮನೋರಂಜನೆ ನೀಡಲು ಎರಡು ಟಿ.ವಿ ಅಳವಡಿಸುವ ಕಾರ್ಯವು ನಡೆಯಿತು.ಅದಕ್ಕೆ ಟಿ.ವಿ.ಕ್ಲಿನಿಕ್,ಭದ್ರ ಎಲೆಕ್ಟ್ರೋನಿಕ್ಸ್, ನವೀನ್ ರೈ ದಾನಿಗಳ ಸಹಕಾರದಿಂದ ಅಳವಡಿಸಲಾಯಿತು.ಒಟ್ಟಿನಲ್ಲಿ ಡಯಾಲಿಸೀಸ್ ಉಚಿತ ಸೇವೆ ಸಿಗಲಿದೆ.ಮುಂದೆ ಡಯಾಲಿಸೀಸ್‌ಗೆ ತುತ್ತಾಗದಂತೆ ಕಾಳಜಿ ವಹಿಸಲುವ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ರೋಟರಿ ಕ್ಲಬ್ ಮೂಲಕ ಆಗುತ್ತದೆ.ರೋಟರಿ ಸೇವೆ ನಿರಂತರ ನಡೆಯಲಿದೆ ಎಂದು ಹೇಳಿದರು.


ಡಯಾಲಿಸೀಸ್ ಘಟಕದ ಹೊರಗೆ ಕಾಯುವ ರೋಗಿಗಳಿಗೆ ಮತ್ತು ಒಳಗಡೆ ಇರುವವರಿಗಾಗಿ ಒಟ್ಟು ಮೂರು ಟಿ.ವಿ.ಗಳನ್ನು ಅಳವಡಿಸಲಾಗಿದೆ.ಟಿ.ವಿ.ಕ್ಲಿನಿಕ್‌ನ ಸತ್ಯಶಂಕರ್ ಭಟ್ ಅವರ ತಂತ್ರಜ್ಞಾನದ ಲೋಕಲ್ ಬ್ರ್ಯಾಂಡ್‌ನ ‘ಎಸ್‌ಟಿವಿಸಿ’ ಎಲ್‌ಇಡಿ ಸ್ಮಾರ್ಟ್ ಟಿವಿಯನ್ನು ಅಳವಡಿಸಲಾಗಿದೆ.ಒಂದು ಟಿವಿಯನ್ನು ಅವರು ಕೊಡೆಗೆಯಾಗಿ ನೀಡಿದರೆ ಇನ್ನೆರಡು ಟಿವಿಗಳನ್ನು ದಾನಿಗಳ ನೆರವಿನಿಂದ ಅಳವಡಿಸಲಾಗಿದೆ.ಆ ಮೂಲಕ ರೋಟರಿ ಕ್ಲಬ್ ಸ್ಥಳೀಯ ತಂತ್ರಜ್ಞಾನಕ್ಕೆ ಪ್ರೋತ್ಸಾಹ ನೀಡಿದೆ.
ಗೌರವಾರ್ಪಣೆ: ಡಯಾಲಿಸೀಸ್ ಘಟಕಕ್ಕೆ ಮೂಲ ಕಾರಣ ಮತ್ತು ಪ್ರೇರಣದಾಯಕರಾದ ರೋಟರಿ ಎಲೈಟ್‌ನ ಸದಸ್ಯ ಆಸ್ಕರ್ ಆನಂದ್ ಮತ್ತು ಎಲೈಟ್‌ನ ಕಾರ್ಯದರ್ಶಿ ಸೆನೊರಿಟಾ ಆನಂದ್ ಅವರನ್ನು ಅಸ್ಪತ್ರೆಯ ವತಿಯಿಂದ ಗೌರವಿಸಲಾಯಿತು.ಶಾಸಕ ಅಶೋಕ್ ಕುಮಾರ್ ರೈ ಮತ್ತು ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಅವರನ್ನೂ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಡಯಾಲಿಸೀಸ್ ಘಟಕದ ಎಲ್ಲಾ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.ಡಾ. ಜಯದೀಪ್ ಅವರು ಗೌರವ ಕಾರ್ಯಕ್ರಮ ನಿರ್ವಹಿಸಿದರು.ದಾನಿಗಳನ್ನೂ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.


ರೋಟರಿ ಜಿಲ್ಲೆ ೩೧೮೧ ಇದರ ಜಿಲ್ಲಾ ಗವರ್ನರ್ ನಾಮಿನಿ ಡೆಸಿಗ್ನೇಟ್ ಪಿ.ಕೆ.ರಾಮಕೃಷ್ಣ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಜಿಲ್ಲಾ ರೋಟರಿ ಕಾರ್ಯದರ್ಶಿಗಳಾದ ನಾರಾಯಣ ಹೆಗ್ಡೆ ಮತ್ತು ಕೆ.ವಿಶ್ವಾಸ್ ಶೆಣೈ, ರೋಟರಿ ಡಿಸ್ಟ್ರಿಕ್ಟ್ ಸೆಕ್ರೆಟರಿ ಪ್ರಾಜೆಕ್ಟ್ ಇದರ ರಾಜೇಂದ್ರ ಕಲ್ಬಾವಿ, ಅಸಿಸ್ಟೆಂಟ್ ಗವರ್ನರ್‌ಗಳಾದ ಎ.ಜೆ.ರೈ ಮತ್ತು ಶಿವರಾಮ ಏನೆಕಲ್ಲು, ರೋಟರಿ ವಲಯ ಸೇನಾನಿಗಳಾದ ಹರ್ಷಕುಮಾರ್ ರೈ ಮತ್ತು ಸೆನೊರಿಟಾ ಆನಂದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಚೈತ್ರಿಕಾ ಪ್ರಾರ್ಥಿಸಿದರು.ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷೆ ರಾಜೇಶ್ವರಿ ಕೆ. ಆಚಾರ್ ಸ್ವಾಗತಿಸಿದರು. ರೋಟರಿ ಎಲೈಟ್‌ನ ಕಾರ್ಯದರ್ಶಿ ಸಿಲ್ವಿಯ ಡಿ ಸೋಜ ವಂದಿಸಿದರು.ಅನಿಲ ದೀಪಕ್ ಶೆಟ್ಟಿ, ಮೌನೇಶ್ ವಿಶ್ವಕರ್ಮ ಕಾರ್ಯಕ್ರಮ ನಿರೂಪಿಸಿದರು.ರೋಟರಿ ಯುವ ಕಾರ್ಯದರ್ಶಿ ಅಶ್ವಿನಿಕೃಷ್ಣ ಮುಳಿಯ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಆಸ್ಪತ್ರೆಯ ಬಗ್ಗೆಯೂ ದೊಡ್ಡ ದೂರು ಇಲ್ಲ:
ರೋಟರಿ ಡಯಾಲಿಸೀಸ್ ಯೋಜನೆಯನ್ನು ಒಳ್ಳೆಯ ರೀತಿಯಲ್ಲಿ ಕೊಟ್ಟಿದ್ದಾರೆ.ಅದನ್ನು ಸಮಾಜಕ್ಕೆ ಅರ್ಪಣೆ ಮಾಡುವುದು ಆಸ್ಪತ್ರೆಯವರ ಕೈಯಲ್ಲಿದೆ.ಇಲ್ಲಿನ ಗುತ್ತಿಗೆ ಆಧಾರದಲ್ಲಿ ಡಯಾಲಿಸೀಸ್ ನಿರ್ವಹಣೆ ಉತ್ತಮ ವಿಚಾರ.ಡಾ.ಪುತ್ತೂರಾಯ ಮತ್ತು ಅವರ ತಂಡ ಉತ್ತಮ ಕೆಲಸ ಮಾಡುತ್ತಿದ್ದಾರೆ.ಆಸ್ಪತ್ರೆಯ ಬಗ್ಗೆ ದೊಡ್ಡ ದೂರು ಯಾವುದೇ ಇಲ್ಲ.ಆಸ್ಪತ್ರೆಯ ಬೇಡಿಕೆಯಂತೆ ಹೆರಿಗೆ ತಜ಼ೆ, ಅನಸ್ತೇಷಿಯಾ, ಟೆಕ್ನೀಷಿಯನ್‌ಗೆ ಆರೋಗ್ಯ ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ.ಇದರ ಜೊತೆಗೆ ಡಯಾಲಿಸೀಸ್‌ಗೆ ಗುತ್ತಿಗೆದಾರರ ಅವಧಿ ರಿನಿವಲ್ ಆಗಲಿದೆ.ಆ ಗುತ್ತಿಗೆದಾರರು ಈಗಿರುವ ದರಕ್ಕಿಂತ ಕಡಿಮೆ ದರದಲ್ಲಿ ಮೆಷಿನ್ ಇನ್‌ಸ್ಟಾಲ್ ಆದಲ್ಲಿ ಶೇ.೫೦ರ ದರಪಟ್ಟಿಯಲ್ಲಿ ಕೆಲಸ ಮಾಡಬೇಕಾಗಿದೆ.ಬಿಪಿಎಲ್
ಕಾರ್ಡ್‌ದಾರರಿಗೆ ಉಚಿತವಾಗಿ ಡಯಾಲಿಸೀಸ್ ನಡೆಯಲಿದೆ.ಒಟ್ಟಿನಲ್ಲಿ ಸರಕಾರ ಎಷ್ಟು ಮಾಡಿದ್ದರೂ ಸಾರ್ವಜನಿಕರ ಸಹಕಾರ ಅಗತ್ಯ.ಸರಕಾರಿ ಆಸ್ಪತ್ರೆಯಲ್ಲಿ ಉತ್ತಮ ವೈದ್ಯರ ತಂಡವಿದೆ.ಮುಂದೆ ಡಯಾಲಿಸೀಸ್ ಘಟಕಕ್ಕೆ ಎರಡು ಸ್ಟ್ಯಾಂಡಿಂಗ್ ಮೆಷಿನ್ ಕೂಡಾ ಅಗತ್ಯವಿದೆ.ಅದನ್ನು ಕೊಡಿಸುವ ವ್ಯವಸ್ಥೆ ಮಾಡುತ್ತೇನೆ.ಆಸ್ಪತ್ರೆಯ ಎಲ್ಲಾ ವಿಚಾರಗಳನ್ನು ನನ್ನ ಪರ್ಸನಲ್ ಸಬ್ಜೆಕ್ಟ್ ಎಂದು ಗಮನಿಸುತ್ತೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

 ಮೆಡಿಕಲ್   ಕಾಲೇಜಿಗೆ ಪ್ರಸ್ತಾವನೆ ಹೋಗಿರಲಿಲ್ಲ -ಅಶೋಕ್ ರೈ
      ಮೆಡಿಕಲ್    ಕಾಲೇಜಿಗೆ ಮೊದಲು ೩೦೦ ಬೆಡ್‌ನ ಆಸ್ಪತ್ರೆಗೆ ಪ್ರಯತ್ನಿಸಿದ್ದೆ -ಮಠಂದೂರು

ಪುತ್ತೂರಿಗೆ ಮೆಡಿಕಲ್ ಕಾಲೇಜು ವಿಚಾರವನ್ನು ಹಾಲಿ ಮತ್ತು ಮಾಜಿ ಶಾಸಕರು ತಮ್ಮ ಮಾತಿನ ಮಧ್ಯೆ ಪ್ರಸ್ತಾಪಿಸಿದ ಘಟನೆಯೂ ನಡೆಯಿತು.ಆರಂಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಆಸ್ಪತ್ರೆ ಬರಬೇಕೆಂದು ಪುತ್ತೂರಿನ ಭಾಗದ ಜನರ ಅಪೇಕ್ಷೆಯಂತೆ ಸುಮಾರು ೪೦ ಎಕ್ರೆ ಜಾಗವನ್ನು ಸುಮಾರು ವರ್ಷದ ಹಿಂದೆ ಬನ್ನೂರು ಬಳಿ ಕಾದಿರಿಸಲಾಗಿದೆ.ಆದರೆ ಮೆಡಿಕಲ್ ಕಾಲೇಜಿಗೆ ಪ್ರಸ್ತಾವನೆ ಮಾತ್ರ ಹೋಗಿರಲಿಲ್ಲ.ಮೊನ್ನೆ ಮೇ ೧೮ಕ್ಕೆ ಮೆಡಿಕಲ್ ಕಾಲೇಜಿನ ಪ್ರಸ್ತಾವನೆ ಇಲ್ಲಿಂದ ಹೋಗುವ ಕೆಲಸ ಆಗಿದೆ.ಇದಕ್ಕೆ ಮೊದಲು, ಈಗಿರುವ ಆಸ್ಪತ್ರೆಯನ್ನು ೩೦೦ ಬೆಡ್ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆ ಕಳಿಸುವ ಕೆಲಸ ೨೦೨೦ರಲ್ಲಿ ಆಗಿದೆ. ಆದರೆ ಇವತ್ತಿನ ತನಕ ಯಾವುದೇ ಮುಂದುವರಿಕೆ ಆಗಿಲ್ಲ.ನಿನ್ನೆ ಕೂಡಾ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಮೂಲಕ ಎಲ್ಲಾ ಮಾಹಿತಿ ಪಡೆದುಕೊಂಡಿದ್ದೇನೆ.ಅವರು ಸರಕಾರದ ಆರೋಗ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.ಆದರೆ ಅಲ್ಲಿಂದ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಬದಲಿ ವ್ಯವಸ್ಥೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.ಕೆಲವು ಕಟ್ಟಡ ಉಳಿಸಿ ಬೇರೆ ಆಸ್ಪತ್ರೆ ಕಟ್ಟುತ್ತೇವೆ ಎಂಬ ಉತ್ತರಕ್ಕೆ ಅಲ್ಲಿಂದ ಸರಿಯಾದ ಪ್ರತ್ಯುತ್ತರ ಬಂದಿಲ್ಲ.ನಾವು ಮುಂದಿನ ದಿವಸ ಇಲ್ಲಿನ ಸ್ಥಳೀಯಾಡಳಿತದ ಮೂಲಕ ಮೆಡಿಕಲ್ ಕಾಲೇಜು ಆಸ್ಪತ್ರೆಯನ್ನು ಬನ್ನೂರಿನಲ್ಲಿ ಮಾಡುವುದೆಂದು ತೀರ್ಮಾನ ತೆಗೆದುಕೊಂಡು ಇಲ್ಲಿ ೩೦೦ ಬೆಡ್‌ನ ಆಸ್ಪತ್ರೆಯನ್ನು ಮತ್ತೆ ಮೇಲ್ದರ್ಜೆಗೆ ಏರಿಸುವ ಕೆಲಸ ಮಾಡಿ ಮೆಡಿಕಲ್ ಕಾಲೇಜಿಗೆ ಟೈಯಪ್ ಮಾಡಲಿದ್ದೇವೆ ಎಂದರು.

ಮೆಡಿಕಲ್ ಕಾಲೇಜಿಗೂ ಮೊದಲು ೩೦೦ ಬೆಡ್‌ನ ಆಸ್ಪತ್ರೆ ಆಗಬೇಕು: 
ಶಾಸಕ ಸಂಜೀವ ಮಠಂದೂರು ತಮ್ಮ ಭಾಷಣದಲ್ಲಿ, ಈ ಆಸ್ಪತ್ರೆ ೩೦೦ ಬೆಡ್‌ನ ಆಸ್ಪತ್ರೆ ಆಗಬೇಕೆಂದು ನಮ್ಮ ಶಾಸಕರು ಉಲ್ಲೇಖ ಮಾಡಿದರು.ಆದರೆ ಈ ಮೊದಲೇ ನಾನು ರಾಜ್ಯದ ಆರೋಗ್ಯ ಸಚಿವರಲ್ಲಿ ಮೆಡಿಕಲ್ ಕಾಲೇಜಿಗೆ ಬೇಡಿಕೆ ಇಟ್ಟಾಗ ಅವರು ಮೊದಲು ಮೆಡಿಕಲ್ ಆಸ್ಪತ್ರೆ ಮಾಡಿ ಎಂದು ಸೂಚಿಸಿದ್ದರು.ಇಂಡಿಯನ್ ಮೆಡಿಕಲ್ ಕೌನ್ಸಿಲ್ ಅನುಮತಿ ಕೊಡಬೇಕಾದರೆ ಅಲ್ಲಿ ಒಂದಷ್ಟು ಮೆಡಿಕಲ್ ಕಾಲೇಜಿಗೆ ಪೂರಕವಾದ ಅಸ್ಪತ್ರೆಗಳ ವ್ಯವಸ್ಥೆ ಇರಬೇಕು.ಈ ನಿಟ್ಟಿನಲ್ಲಿ ೩೦೦ ಬೆಡ್‌ನ ಆಸ್ಪತ್ರೆಗೆ ಮೊದಲು ಕಾಯಕಲ್ಪ ಮಾಡುವಂತೆ ಅವರು ಹೇಳಿದಾಗ, ನಾನು ಇಲ್ಲಿನ ಸುತ್ತಮುತ್ತ ಇರುವ ಸಬ್‌ಜೈಲ್, ತಾಲೂಕು ಕಚೇರಿ ಕಟ್ಟಡ, ಸಬ್‌ರಿಜಿಸ್ಟರ್ ಆಫೀಸ್, ಅಂಬೆಡ್ಕರ್ ಭವನಕ್ಕೆ ಕಾಯ್ದಿರಿಸಿದ ಜಾಗ, ಲೋಕೋಪಯೋಗಿ ಇಲಾಖೆ ಜಾಗವನ್ನು ಈ ಆಸ್ಪತ್ರೆಗೆ ಕಾಯ್ದಿರಿಸುವ ಕೆಲಸ ಮಾಡಿದೆ.ಈ ಮೂಲಕ ಒಂದು ಸುಸಜ್ಜಿತ ಆಸ್ಪತ್ರೆಗೆ ಪೂರಕ ಕೆಲಸ ಆಗಿದೆ.ಪುತ್ತೂರು ದ.ಕ.ಜಿಲ್ಲೆಗೆ ಕೇಂದ್ರ ಆದಾಗ ಇಲ್ಲಿ ಏನೇನು ಮಾಡಬೇಕೋ ಅದೆಲ್ಲವನ್ನು ಮಾಡಲು ಆಸ್ಪತ್ರೆಗೆ ಜಾಗ ಕಾಯ್ದಿರಿಸುವ ಕೆಲಸ ಆಗಿದೆ.ಆ ಮೂಲಕ ಆಸ್ಪತ್ರೆಯಲ್ಲಿ ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ಭಾಗದ ಜನರಿಗೆ ವೈದ್ಯಕೀಯ ಸೇವೆಗೆ ಸ್ಥಳಾವಕಾಶ ಮಾಡಲಾಗಿದೆ ಎಂದು ಹೇಳಿದರಲ್ಲದೆ, ನಮ್ಮ ಶಾಸಕರು ಹೇಳಿದಂತೆ ಮುಂದಿನ ದಿನ ಎಲ್ಲಾ ಯೋಜನೆ ಕಾರ್ಯಗತವಾಗಲಿ ಎಂದು ಹೇಳಿದರು.

LEAVE A REPLY

Please enter your comment!
Please enter your name here