ಪುತ್ತೂರು: ಜೂ. 11 ರಂದು ಮಧ್ಯಾಹ್ನ ಒಂದು ಗಂಟೆಗೆ, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಒಂದಾಗಿರುವ ಮಹಿಳೆಯರಿಗೆ ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ( ನಮ್ಮ ಪ್ರಮಾಣ ನಿಮ್ಮ ಪ್ರಯಾಣ) ಯೋಜನೆಯ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. ಅದೇ ಸಮಯಕ್ಕೆ ಪುತ್ತೂರಿನಲ್ಲಿಯೂ ಯೋಜನೆಯ ಉದ್ಘಾಟನಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದ್ದು ಆ ದಿನ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರಿನ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾಹಿತಿ ನೀಡಿದ ಶಾಸಕರು, ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ೫ ಉಚಿತ ಯೋಜನೆಗಳ ಭರವಸೆಯನ್ನು ನೀಡಿತ್ತು. ಈ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಣ ಯೋಜನೆಯನ್ನು ಜೂ. 11 ರಂದು ಸರಕಾರ ಆರಂಭಿಸಲಿದೆ. ಪುತ್ತೂರಿನಲ್ಲಿ ಮಧ್ಯಾಹ್ನ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಗ್ರಾಮಗ್ರಾಮಗಳಲ್ಲಿ ಐದು ಉಚಿತ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಮತ್ತು ಮತದಾರರಿಗೆ ಮನವರಿಕೆ ಮಾಡುವ ಪ್ಲೆಕ್ಸ್ ಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.
ಮಹಿಳೆಯರಿಂದ ನೃತ್ಯ ಕಾರ್ಯಕ್ರಮ:
ಉಚಿತ ಯೋಜನೆಯ ಅಂಗವಾಗಿ ಮಹಿಳೆಯರಿಂದ ನೃತ್ಯ ಕಾರ್ಯಕ್ರಮ ಇರುತ್ತದೆ. ವಿಶೇಷ ಬ್ಯಾಂಡ್, ವಾದ್ಯ ಮೇಳದವರು ಭಾಗವಹಿಸಲಿದ್ದಾರೆ. ನೃತ್ಯ ಕಾರ್ಯಕ್ರಮದ ಬಳಿಕ ಸಭಾ ಕಾರ್ಯಕ್ರಮವಿದ್ದು ಆ ಬಳಿಕ ಸಾರ್ವಜನಿಕರಿಗೆ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ಕೊಟ್ಟ ಭರವಸೆ ಎಲ್ಲವೂ ಈಡೇರಿಸುತ್ತೇವೆ: ಅಶೋಕ್ ರೈ:
ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಏನೆಲ್ಲಾ ಭರವಸೆಯನ್ನು ಕೊಟ್ಟಿದೆಯೋ ಅದೆಲ್ಲವನ್ನೂ ಒಂದೊಂದಾಗಿ ಈಡೇರಿಸಲಿದ್ದು ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು. ಕಾಂಗ್ರೆಸ್ ಎಂದೆಂದೂ ಬಡವರ ಪರವಾಗಿಯೇ ಇರುತ್ತದೆ ಎಂಬುದಕ್ಕೆ ಐದು ಉಚಿತ ಗ್ಯಾರಂಟಿಗಳೇ ಸಾಕ್ಷಿಯಾಗಿದೆ. ಎಲ್ಲಾ ಐದು ಗ್ಯಾರಂಟಿಗಳೂ ಬಡವರ ಪರವಾಗಿಯೇ ಇದೆ. ಪುತ್ತೂರು ಕ್ಷೇತ್ರದಾದ್ಯಂತ ಸರಕಾರದ ಐದು ಗ್ಯಾರಂಟಿ ಬಗ್ಗೆ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತೇವೆ. ಹಳ್ಳಿ ಹಳ್ಳಿಗಳಲ್ಲಿ ಫ್ಲೆಕ್ಸ್ ಹಾಕುವ ಮೂಲಕ ಪ್ರಚಾರ ಕಾರ್ಯ ನಡೆಸಲು ಈಗಾಗಲೇ ಕಾರ್ಯಕರ್ತರು ಸಜ್ಜಾಗಿದ್ದಾರೆ ಎಂದು ಶಾಸಕರು ತಿಳಿಸಿದರು.
6 ವರ್ಷ ಪ್ರಾಯದಿಂದ ಎಲ್ಲರಿಗೂ ಉಚಿತ:
6 ವರ್ಷ ಪ್ರಾಯದ ಹೆಣ್ಣು ಮಗುವಿನಿಂದ ಹಿಡಿದು ವಯೋವೃದ್ದರ ವರೆಗೆ ಎಲ್ಲಾ ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣವಾಗಿರುತ್ತದೆ. ನಿರ್ವಾಹಕ ಟಿಕೆಟ್ ನೀಡುತ್ತಾರೆ ಆದರೆ ಹಣ ಪಾವತಿ ಇಲ್ಲ. ಪ್ರತಿಯೊಬ್ಬ ಪ್ರಯಾಣಿಕೆಗೂ ಟಿಕೆಟ್ ನೀಡಲಾಗುತ್ತದೆ. ಝೀರೋದಿಂದ 6 ವರ್ಷದ ತನಕ ಯಾವುದೇ ಮಕ್ಕಳಿಗೂ ಬಸ್ಸಿನಲ್ಲಿ ಟಿಕೆಟ್ ಇಲ್ಲ ಎಂದು ಪುತ್ತೂರು ಕೆಎಸ್‌ಆರ್‌ಟಿಸಿ ಡಿಪೋ ಮೆನೇಜರ್ ಇಸ್ಮಾಯಿಲ್ ಸಭೆಗೆ ಮಾಹಿತಿ ನೀಡಿದರು.
ಅಂತರರಾಜ್ಯ ಬಸ್ಸುಗಳಿಗೆ ಟಿಕೆಟ್ ಇದೆ:
ಕರ್ನಾಟಕಕ್ಕೆ ಸೇರಿದ ಅಂತರರಾಜ್ಯ ಪ್ರಯಾಣದ ಬಸ್ಸುಗಳಲ್ಲಿ ಕರ್ನಾಟಕದ ಗಡಿತನಕ ಉಚಿತವಾಗಿ ಸಂಚಾರ ಮಾಡಬಹುದಾಗಿದೆ. ಬೇರೆ ರಾಜ್ಯದಲ್ಲಿ ಉಚಿತ ಪ್ರಯಾಣ ಇರುವುದಿಲ್ಲ.ಪುತ್ತೂರಿನಿಂದ ಗಾಳಿಮುಖಕ್ಕೆ ತೆರಳುವ ಸರಕಾರಿ ಬಸ್ಸುಗಳಲ್ಲಿ ಗಾಳಿಮುಖ ತನಕ ಉಚಿತವಾಗಿ ಸಂಚಾರ ಮಾಡಬಹುದಾಗಿದೆ. ಗಾಳಿಮುಖಕ್ಕೆ ಸಂಚಾರ ಮಾಡುವಾಗ ರಸ್ತೆ ಮಧ್ಯೆ ಕೇರಳ ರಸ್ತೆ ಸಿಕ್ಕಿದರೂ ಆ ಬಳಿಕ ಮಯಗಯರ ಕರ್ನಾಟಕ ಸೇರುವ ಕಾರಣ ಅಲ್ಲಿಗೆ ತೆರಳುವ ಬಸ್ಸುಗಳಲ್ಲಿ ಪ್ರಯಾಣ ಉಚಿತವಾಗಿದೆ. ಶಾಲಾ, ಕಾಲೇಜು ವಿದ್ಯಾರ್ಥಿನಿಯರಿಗೂ ಉಚಿತ ಪ್ರಯಾಣ ಅನ್ವಯವಾಗುತ್ತದೆ ಎಂದು ಡಿಪೋ ಮೆನೆಜರ್ ಇಸ್ಮಾಯಿಲ್ ತಿಳಿಸಿದರು.
ಉಚಿತ ಪ್ರಯಾಣಕ್ಕೆ ಏನು ಬೇಕು:
ಉಚಿತ ಪ್ರಯಾಣಕ್ಕೆ ಮೂರು ತಿಂಗಳ ಅವಽಗೆ ಆಧಾರ್ ಕಾರ್ಡು, ರೇಶನ್ ಕಾರ್ಡು ಅಥವಾ ಇತರೆ ವಾಸ್ತವ್ಯದ ದಾಖಲೆಗಳನ್ನು ಪ್ರಯಾಣಿಸುವ ವೇಳೆ ನಿರ್ವಾಹಕನಿಗೆ ತೋರಿಸಬೇಕು. ಮೂರು ತಿಂಗಳ ಬಳಿಕ ಸ್ಮಾರ್ಟ್ ಕಾರ್ಡು ರೀತಿಯಲ್ಲಿ ಪ್ರಯಾಣದ ಕಾರ್ಡನ್ನು ವಿತರಣೆ ಮಾಡಲಾಗುವುದು ಎಂದು ಡಿಪೋ ಮೆನೇಜರ್ ತಿಳಿಸಿದರು.
ಲಗೇಜ್ ಚಾರ್ಜ್ ಇರುತ್ತದೆ:
ಬಸ್ಸಿನಲ್ಲಿ ಪ್ರಯಾಣಿಸುವಾಗ ಲಗೇಜ್ ದರ ಈ ಹಿಂದಿನಂತೆಯೇ ಚಾಲ್ತಿಯಲ್ಲಿರುತ್ತದೆ. ಸಣ್ಣ ಪ್ರಮಾಣದ ಅಂದ್ರೆ ಕೈಯ್ಯಲ್ಲಿ ಹಿಡಿದುಕೊಳ್ಳುವ ಸಾಮಾನ್ಯ ಲಗೇಜ್‌ಗೆ ದರ ಇರುವುದಿಲ್ಲ ಎಂದು ಇಸ್ಮಾಯಿಲ್ ತಿಳಿಸಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಮಾತನಾಡಿ ಗ್ಯಾರಂಟಿ ಯೋಜನೆ ಅನುಷ್ಠಾನಗೊಳ್ಳುತ್ತಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ. ಕಾಂಗ್ರೆಸ್ ಜನರ ಆಶೋತ್ತರಗಳನ್ನು ಈಡೇರಿಸಲಿದೆ ಎಂದು ಹೇಳಿದರು. ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ರಾಜ್ಯದಲ್ಲಿ ಜನತೆಗೆ ಮುಂದಿನ ದಿನಗಳಲ್ಲಿ ನೆಮ್ಮದಿಯ ಜೀವನ ದೊರೆಯಲಿದೆ. ಪಕ್ಷ ಬೇದವಿಲ್ಲದೆ ಎಲ್ಲಾ ಮಹಿಳೆಯರಿಗೂ ಉಚಿತ ಐದು ಗ್ಯಾರಂಟಿ ಯೋಜನೆಗಳು ಲಭ್ಯವಾಗಲಿದೆ ಎಂದು ಹೇಳಿದರು. ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ ಮಾತನಾಡಿ ದುಷ್ಟ ಸರಕಾರ ರಾಜ್ಯದಿಂದ ತೊಲಗಿದೆ ಮುಂದೆ ಬೆಸ್ಟ್ ಸರಕಾರ. ಬೆಸ್ಟ್ ಸರಕಾರ ಜನರ ಸೇವೆ ಮಾಡಲಿದೆ ಎಂದು ಹೇಳಿದರು.
ಕಾಂಗ್ರೆಸ್ ಸೇವಾದಳದ ಜಿಲ್ಲಾ ಅಧ್ಯಕ್ಷ ಜೋಕಿಂ ಡಿಸೋಜಾ, ಮಾಜಿ ಪುಡಾ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಉಪಸ್ಥಿತರಿದ್ದರು.
ಬಸ್ಸು ನಿಲ್ಲಿಸದೇ ಇದ್ದರೆ ವಿಡಿಯೋ ಮಾಡಿ ಕಳಿಸಿ:
ವಿದ್ಯಾರ್ಥಿಗಳನ್ನು ಕಂಡರೆ ಬಸ್ಸು ನಿಲ್ಲಿಸುವುದಿಲ್ಲ. ಬಸ್ಸು ಖಾಲಿ ಇದ್ದರೂ ನಿಲ್ಲಿಸದೆ ತೆರಳುತ್ತಾರೆ ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತದೆ ಎಂದು ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಸಭೆಯಲ್ಲಿ ತಿಳಿಸಿದರು. ಇದಕ್ಕೆ ಉತ್ತರಿಸಿದ ಶಾಸಕರು ಖಾಲಿ ಬಸ್ಸು ಇದ್ದರೂ ನಿಲ್ಲಿಸದೇ ಇರುವ ಮತ್ತು ವಿದ್ಯಾರ್ಥಿಗಳನ್ನು ಕಂಡರೆ ನಿಲ್ಲಿಸದ ಬಸ್ಸುಗಳ ವಿಡಿಯೋ ಮಾಡಿ ನನಗೆ ಕಳಿಸಿ ನಾನು ಖುದ್ದಾಗಿ ಪರಿಶೀಲಿಸಿ ಕ್ರಮಕ್ಕೆ ಆಗ್ರಹಿಸುತ್ತೇನೆ ಎಂದು ಸಭೆಗೆ ತಿಳಿಸಿದರು. ನಿಲ್ಲಿಸದ ಬಸ್ ಚಾಲಕರಿಗೆ ಈಗಾಗಲೇ ಮೆಮೋ ಕಳುಹಿಸಲಾಗಿದೆ ಮುಂದಿನ ದಿನಗಳಲ್ಲಿ ಪುನರಾವರ್ತನೆಯಾದರೆ ಕ್ರಮಕೈಗೊಳ್ಳಲಿದ್ದೇವೆ ಎಂದು ಡಿಪೋ ಮೆನೆಜರ್ ಇಸ್ಮಾಯಿಲ್ ತಿಳಿಸಿದರು.
ಐದು ಬಸ್ ನಗರದೆಲ್ಲೆಡೆ ಸಂಚಾರ:
ಐದು ಬಸ್ಸುಗಳು ಆ ದಿನ ನಗರದೆಲ್ಲೆಡೆ ಸಂಚಾರವನ್ನು ನಡೆಸಲಿವೆ. ಮಹಿಳಾ ಕಾರ್ಯಕರ್ತರು ಬಸ್ಸಲ್ಲಿ ಉಚಿತವಾಗಿ ಪ್ರಯಾಣ ಮಾಡಲಿದ್ದು ಈ ಪೈಕಿ ಒಂದು ಬಸ್ಸನ್ನು ಅಲಂಕಾರ ಮಾಡಲಾಗುತ್ತದೆ. ಐದು ಬಸ್ಸುಗಳನ್ನು ಯೋಜನೆಯ ಪ್ರಚಾರಕ್ಕಾಗಿ ಬಳಸಲಾಗುತ್ತದೆ. ಪುತ್ತೂರು ನಗರ, ನೆಹರೂನಗರ, ಬನ್ನೂರು, ಪರ್ಲಡ್ಕ, ದರ್ಬೆ, ಬೈಪಾಸ್, ಸಾಲ್ಮರ, ಕೆಮ್ಮಾಯಿ ಹೀಗೇ ನಗರದಾದ್ಯಂತ ಸಂಚಾರ ನಡೆಸಲಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಬಗ್ಗೆ ಮನವರಿಕೆ ಮಾಡುವ ಕಾರ್ಯಕ್ರಮ ದಿನ ನಡೆಯಲಿದೆ ಎಂದು ಶಾಸಕರು ಹೇಳಿದರು.