ಅಭಿನಂದನೆಗಿಂತ ಅಭಿವೃದ್ಧಿಯತ್ತ ಚಿತ್ತ ನೆಟ್ಟ ಶಾಸಕ ಅಶೋಕ್‌ ಕುಮಾರ್‌ ರೈ

0

ಉಪ್ಪಿನಂಗಡಿ: ನೂತನ ಶಾಸಕರಿಗೆ ಉಪ್ಪಿನಂಗಡಿ ಯಲ್ಲಿ ಅಭಿನಂದನಾ ಸಮಾರಂಭ ಜೂ.10 ರಂದು ಏರ್ಪಡಿಸಲಾಗಿತ್ತು. ನಿಗದಿತ ಸಮಯಕ್ಕೆ ಕಾರ್ಯಕ್ರಮದ ವೇದಿಕೆಗೆ ಬರಲು ತಡವಾದರೂ, ಅದನ್ನು ಲೆಕ್ಕಿಸದೆ ಉಪ್ಪಿನಂಗಡಿ ನಟ್ಟಿಬೈಲ್ ಪರಿಸರದಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರ ಸೂಚನೆಯಂತೆ ಕೃತಕ ನೆರೆ ಬರದಂತೆ ಸಮರೋಪಾದಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಚರಂಡಿ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಇದರ ವೀಕ್ಷಣೆ ನಡೆಸಿ, ಸಲಹೆ ಸೂಚನೆಗಳನ್ನು ನೀಡಿದರು.

ಬಿ.ಸಿ.ರೋಡ್- ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದಾಗಿ ಕಳೆದ 3-4 ವರ್ಷಗಳಿಂದ ಚರಂಡಿ ವ್ಯವಸ್ಥೆಯ ಲ್ಲಿ ಅವ್ಯವಸ್ಥೆ ಉಂಟಾಗಿದ್ದು,‌ ಇದು ಉಪ್ಪಿ‌ನಂಗಡಿ ನಟ್ಟಿಬೈಲ್ ಪರಿಸರದ ಲ್ಲಿ ಕೃತಕ‌ ನೆರೆಗೆ ಕಾರಣವಾಗುತ್ತಿತ್ತು. ಇದರಿಂದಾಗಿ ಪರಿಸರದ ಹಲವಾರು ಕೃಷಿ ತೋಟಗಳಿಗೆ ನೀರು ನುಗ್ಗಿ ತೋಟಗಳು ನಾಶವಾಗಿತ್ತು. ಕಳೆದ ವಾರ ಉಪ್ಪಿನಂಗಡಿಯ ನೇತ್ರಾವತಿ ಸಭಾಂಗಣದಲ್ಲಿ ನಡೆದ ನೆರೆ ಮುಂಜಾಗ್ರತಾ ಸಭೆಯಲ್ಲಿ ಈ ಬಗ್ಗೆ ಸಾರ್ವಜನಿಕ ದೂರುಗಳು ಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ಅಶೋಕ್ ಕುಮಾರ್ ರೈಯವರು, ರಾ.ಹೆ. ಪ್ರಾಧಿಕಾರದ ಇಂಜಿನಿಯರ್ ಗೆ ಮಳೆಗಾಲ ಆರಂಭವಾಗುವುದರೊಳಗೆ ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಖಡಕ್ ಸೂಚನೆ ನೀಡಿದ್ದರು. ಆ ಬಳಿಕವೇ ಹೆದ್ದಾರಿ ಇಲಾಖೆಯು ಸಮರೋಪಾದಿಯಲ್ಲಿ ಚರಂಡಿ ನಿರ್ಮಾಣ ಕಾರ್ಯ ಮಾಡುತ್ತಿದ್ದು, ಜೂ.10ರಂದು ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿ‌‌ ಇಂಜಿನಿಯರ್ ಗೆ ಸಲಹೆ ಸೂಚನೆ ನೀಡಿದರು.

ಈ‌ ಸಂದರ್ಭ ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರಾದ ಅಬ್ದುಲ್ ರಹಿಮಾನ್ ಕೆ., ತೌಸೀಫ್ ಯು.ಟಿ., ಉದ್ಯಮಿ‌ ರಾಜೇಶ್ ರೈ, ಪ್ರಮುಖರಾದ ಶಬೀರ್ ಕೆಂಪಿ ಮತ್ತಿತರರು ಉಪಸ್ಥಿತರಿದ್ದರು.ಶಾಸಕರ ಈ‌ ಕಾರ್ಯ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ.

LEAVE A REPLY

Please enter your comment!
Please enter your name here