ಪುತ್ತೂರು: ಕನ್ನಡದ ಜೊತೆಗೆ ನಿಮ್ಮ ಮಕ್ಕಳಿಗೆ ಇಂಗ್ಲೀಷ್ ಭಾಷೆಯನ್ನು ಕಲಿಸಿಬೇಕು, ಮುಂದಿನ ದಿನಗಳಲ್ಲಿ ಇಂಗ್ಲೀಷ್ ಭಾಷೆ ಗೊತ್ತಿದ್ದರೇನೇ ಕೆಲಸ ಸಿಗಬಹುದು ಅಥವಾ ಏನಾದರೂ ಸಾಧನೆ ಮಾಡಲು ಸಾಧ್ಯ, ಎಷ್ಟೇ ಕಷ್ಟಪಟ್ಟಾದರೂ ಮಕ್ಕಳು ಕನ್ನಡದ ಹಾಗೇ ಇಂಗ್ಲೀಷನ್ನು ಕಲಿಯಬೇಕು ಎಂದು ಶಾಸಕ ಅಶೋಕ್ ರೈ ಹೇಳಿದರು.
ವಿಟ್ಲದ ವಿಠಲ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಸಿ ವಿ ರಾಮನ್ ಪ್ರಯೋಗ ಶಾಲೆ ಮತ್ತು ಕಂಪ್ಯೂಟರ್ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಡವರ ಮಕ್ಕಳು, ಶ್ರೀಮಂತರ ಮಕ್ಕಳು ಎಲ್ಲರೂ ಮಕ್ಕಳೇ ಆಗಿದ್ದಾರೆ. ಮಕ್ಕಳಲ್ಲಿ ವಿವಿಧ ರೀತಿಯ ಪ್ರತಿಭೆಗಳು ಇರುತ್ತದೆ. ಶ್ರೀಮಂತರ ಮಕ್ಕಳು ಅಥವಾ ಉನ್ನತ ವಿದ್ಯಾ ಸಂಸ್ಥೆಯಲ್ಲಿ ಕಲಿಯುವ ಮಕ್ಕಳು ಮಾತ್ರ ಇಂಗ್ಲೀಷ್ ಮಾತನಾಡುತ್ತಾರೆ ಎಂಬ ವಿಚಾರ ತಪ್ಪು. ಸರಕಾರಿ ಶಾಲೆಯಲ್ಲಿ ಕಲಿತವರೂ ಉನ್ನತ ಸಾಧನೆ ಮಾಡಿದ್ದಾರೆ, ಈಗಲೂ ಸಾಧನೆ ಮಾಡುತ್ತಿದ್ದಾರೆ ಎಂದು ಹೇಳಿದ ಶಾಸಕರು ನಮ್ಮ ಮಕ್ಕಳೂ ಉನ್ನತ ವಿದ್ಯಾಭ್ಯಾಸ ಕಲಿತು ಉತ್ತಮ ವ್ಯಕ್ತಿಗಳಾಗಬೇಕು. ನಾವು ಉತ್ತಮ ವ್ಯಕ್ತಿಗಳಾಗಲು ಅಥವಾ ಸಮಾಜದಲ್ಲಿ ದೊಡ್ಡ ಸಾಧನೆ ಮಾಡಿದ ವ್ಯಕ್ತಿಗಳಾಗಬೇಕು ಎಂದು ಪ್ರತೀಯೊಬ್ಬ ವಿದ್ಯಾರ್ಥಿಯೂ ಕನಸು ಕಾಣುವಂತಾಗಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸುಮಾರು 20 ನಿಮಿಷಗಳ ಕಾಲ ಶಾಸಕರು ವಿದ್ಯಾರ್ಥಿಗಳನ್ನುದ್ದೇಸಿಸಿ ಇಂಗ್ಲೀಷ್‌ನಲ್ಲೇ ಭಾಷಣ ಮಾಡಿದರು.