ಖಾಸಗಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡದಿದ್ದರೆ ಬಿಜೆಪಿ ಹೋರಾಟ-ನಳಿನ್‌ ಕುಮಾರ್‌ ಕಟೀಲ್‌

0

ಪುತ್ತೂರು: ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್‌ ಸರ್ಕಾರ ಷರತ್ತುಗಳನ್ನು ವಿಧಿಸುವ ಮೂಲಕ ಜನತೆಗೆ ಚುನಾವಣೆ ವೇಳೆ ನೀಡಿದ ಭರವಸೆಯಂತೆ ನಡೆದುಕೊಂಡಿಲ್ಲ. ಉಚಿತ ವಿದ್ಯುತ್‌ ಯೋಜನೆಯೂ ಸುಳ್ಳಾಗಿದ್ದು, ಜನತೆ ಯಾರೂ ಕರೆಂಟ್‌ ಬಿಲ್‌ ಪಾವತಿಸಬಾರದು, ಒಂದು ವೇಳೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದರೆ ನಾವಿದ್ದೇವೆ, ಜನರೊಂದಿಗೆ ಸೇರಿ ಬಿಜೆಪಿ ಹೋರಾಟ ನಡೆಸಲಿದೆ ಎಂದು ದ.ಕ.ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ಜೂ.10 ರಂದು ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಚಿತ ಪ್ರಯಾಣ, ಉಚಿತ ವಿದ್ಯುತ್‌, ಉಚಿತ ಗೃಹಲಕ್ಷ್ಮಿ ಸೇರಿದಂತೆ ಎಲ್ಲಾ ಗ್ಯಾರಂಟಿಗಳಿಗೆ ಷರತ್ತು ವಿಧಿಸಿಲಾಗುತ್ತಿದೆ. ಈಗ ವಿದ್ಯುತ್‌ ಬಿಲ್‌ ದುಪ್ಪಟ್ಟಾಗಿದ್ದು ಜನತೆ ಆಕ್ರೋಶಗೊಂಡಿದ್ದಾರೆ. ಜನತೆಯ ಜತೆ ನಾವಿದ್ದೇವೆ. ಚುನಾವಣೆ ವೇಳೆ ಯಾವುದೇ ಮಾರ್ಗಸೂಚಿಯನ್ನು ನೀಡದೆ ಈಗ ಜನರನ್ನು ವಂಚಿಸುವುದು ಸರಿಯಲ್ಲ ಎಂದರು.

ದ.ಕ. ಸೇರಿದಂತೆ ಕರಾವಳಿಯಲ್ಲಿ ಖಾಸಗಿ ಬಸ್‌ಗಳಲ್ಲಿ ಮಹಿಳೆಯರು ಸಂಚರಿಸುತ್ತಿದ್ದಾರೆ. ಸರ್ಕಾರ ಉಚಿತ ಪ್ರಯಾಣ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸಬೇಕು. ಅದು ಬಿಟ್ಟು ಜನತೆಗೆ ಯಾಕೆ ಅನ್ಯಾಯ ಮಾಡುತ್ತೀರಿ? ಖಾಸಗಿ ಬಸ್‌ನವರು ಏನು ತೊಂದರೆ ಮಾಡಿದ್ದಾರೆ? ಖಾಸಗಿ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡದಿದ್ದರೆ ಬಿಜೆಪಿ ಹೋರಾಟ ನಡೆಸಲಿದೆ ಎಂದರು. ಕಾಂಗ್ರೆಸ್‌ ಸರ್ಕಾರಕ್ಕೆ ಗ್ಯಾರಂಟಿ ಇಲ್ಲ, ಹಾಗಿರುವಾಗ ಅದರ ಯೋಜನೆಗಳಿಗೂ ಯಾವುದೇ ಗ್ಯಾರಂಟಿ ಇಲ್ಲ. ಕಾಂಗ್ರೆಸ್‌ನಲ್ಲಿ ಗುಂಪುಗಳಾಗಿದ್ದು, ಯಾವ ಗುಂಪು ಯಾವಾಗ ಹೊಡೆದಾಡುತ್ತದೋ ಎಂದು ಹೇಳುವಂತಾಗಿದೆ ಎಂದು ಕಟೀಲ್‌ ಹೇಳಿದ್ದಾರೆ.

LEAVE A REPLY

Please enter your comment!
Please enter your name here