ಬೆಟ್ಟಂಪಾಡಿ ಕಾಲೇಜಿನಲ್ಲಿ ರಕ್ತದಾನ ಶಿಬಿರ -ರಕ್ತದಾನದ ಬಗ್ಗೆ ಜಾಗೃತಿ ಪಡೆದು ರಕ್ತದಾನ ಮಾಡಿ-ಡಾ. ರಾಮಚಂದ್ರ ಭಟ್ ಕೆ

0

ಬೆಟ್ಟಂಪಾಡಿ: ರಕ್ತದಾನವೇ ಶ್ರೇಷ್ಠ ದಾನ, ಜೀವನ್ಮರಣದ ಹೋರಾಟದಲ್ಲಿರುವವರಿಗೆ ರಕ್ತದಾನ ಮಾಡುವ ಮೂಲಕ ಬದುಕು ನೀಡುವುದು ನಿಜಕ್ಕೂ ಶ್ಲಾಘನೀಯ. ರಕ್ತದಾನ ಮಾಡುವುದರಿಂದ ಪ್ರತಿ ವರ್ಷ ಪ್ರಪಂಚದಾದ್ಯಂತ ಲಕ್ಷಾಂತರ ಜೀವಗಳನ್ನು ಉಳಿಸಬಹುದು. ಸಾಮಾನ್ಯ ಮತ್ತು ಆರೋಗ್ಯವಂತ ವ್ಯಕ್ತಿಯು 18-60 ವರ್ಷ ವಯಸ್ಸಿನ ನಡುವೆ ರಕ್ತದಾನ ಮಾಡಬಹುದು. ರಕ್ತದಾನ ಮಾಡುವ ಆರೋಗ್ಯವಂತ ಜನರ ಶೇಕಡಾವಾರು ಕಡಿಮೆ ಇದೆ. ಆದ್ದರಿಂದ ರಕ್ತದಾನದ ಬಗ್ಗೆ ಜಾಗೃತಿ ಪಡೆದು ರಕ್ತದಾನದ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಎಂದು ರೋಟರಿ ಕ್ಯಾಂಪ್ಕೋ ರಕ್ತ ಕೇಂದ್ರ, ಪುತ್ತೂರು ಇಲ್ಲಿನ ವೈದ್ಯಕೀಯ ಅಧಿಕಾರಿಯಾದ ಡಾ.ರಾಮಚಂದ್ರ ಭಟ್ ಕೆ ಇವರು ಹೇಳಿದರು. ಇವರು ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಟ್ಟಂಪಾಡಿ ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ, ಯೂತ್ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ವತಿಯಿಂದ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ವರದರಾಜ ಚಂದ್ರಗಿರಿ ಇವರ ಮಾರ್ಗದರ್ಶನದಂತೆ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ಮುಖ್ಯಸ್ಥರಾದ ಡಾ.ಪೊಡಿಯ ಇವರು ಅಧ್ಯಕ್ಷತೆ ವಹಿಸಿದ್ದರು. ಇವರು ಮಾತನಾಡುತ್ತಾ ರಕ್ತದಾನವು ಮಾನವಕುಲಕ್ಕೆ ಅತ್ಯಂತ ಮಹತ್ವದ ಸಮಾಜ ಸೇವೆಯಾಗಿದೆ. ಮನುಷ್ಯರಾದ ನಾವು ಇತರರ ಜೀವ ಉಳಿಸಲು ರಕ್ತದಾನ ಮಾಡಬೇಕು. ರಕ್ತದಾನದ ಮೂಲಕ ನಾವು ಅನೇಕ ನಿರ್ಗತಿಕರಿಗೆ ಸಹಾಯ ಮಾಡಬಹುದು ಮತ್ತು ಅವರ ಅಮೂಲ್ಯ ಜೀವವನ್ನು ಉಳಿಸಬಹುದು ಎಂದರು.


ಕಾಲೇಜು ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕರಾದ ಡಾ.ಕಾಂತೇಶ್ ಎಸ್, ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ದೇವರಾಜ ಆರ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಹರಿಪ್ರಸಾದ್ ಎಸ್, ರೋಟರಿ ಕ್ಯಾಂಪ್ಕೋ ರಕ್ತ ಕೇಂದ್ರ, ಪುತ್ತೂರು ಇಲ್ಲಿನ ಸಿಬ್ಬಂದಿ ವರ್ಗದವರು ಮತ್ತು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಕಾಲೇಜಿನ ಬೋಧಕ ವರ್ಗದವರು ಹಾಗೂ ಅನೇಕ ವಿದ್ಯಾರ್ಥಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು. ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ಡಾ. ದೇವರಾಜ ಆರ್ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮ ಪಾಲಕರಾದ ಮಾರಣ್ಣ ವಂದಿಸಿದರು. ದ್ವಿತೀಯ ಬಿ.ಎಸ್.ಸಿ ವಿದ್ಯಾರ್ಥಿನಿ ಕು. ಹರ್ಷಿತ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here