ಪುತ್ತೂರು: ತಾಲೂಕಿನ ಶೈಕ್ಷಣಿಕ ಕ್ಷೇತ್ರದ ಇತಿಹಾಸದಲ್ಲಿ ಶತಮಾನದತ್ತ ದಾಪುಗಾಲಿಡುತ್ತಿರುವ, ದರ್ಬೆ ಲಿಟ್ಲ್ ಫ್ಲವರ್ ಶಾಲೆಯ ರಕ್ಷಕ ಶಿಕ್ಷಕ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಭಗಿನಿ ಪ್ರಶಾಂತಿ ಬಿ.ಎಸ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ನಮ್ಮ ಮಕ್ಕಳು ಅವರ ವೈಯಕ್ತಿಕ ಕೆಲಸಗಳನ್ನು ಅವರು ಮಾಡುವುದಿಲ್ಲ. ನಾವೇ ಮಾಡಬೇಕು ಎಂದು ಹೆಮ್ಮೆ ಪಟ್ಟುಕೊಳ್ಳುವ ಪೋಷಕರಾಗದೆ, ಬಾಲ್ಯದಿಂದಲೇ ಬದುಕುವ ಕಲೆಯನ್ನು ಮಕ್ಕಳಿಗೆ ಕರಗತಗೊಳಿಸಿ, ಅನುಭವದ ಶಿಕ್ಷಣವನ್ನು ಮಕ್ಕಳಿಗೆ ಕೊಡುವ ಜವಾಬ್ದಾರಿ ಪೋಷಕರದ್ದಾದರೆ, ಮಕ್ಕಳಿಗೆ ಬೋಧಿಸುವ ಪಾಠವನ್ನು ಸ್ವತಃ ಅನುಭವಿಸಿ, ಪೂರ್ವಸಿದ್ಧತೆಯೊಂದಿಗೆ ಜೀವಂತಿಕೆಯಿಂದ ಭೋಧಿಸಿ ವಿದ್ಯಾರ್ಥಿಸ್ನೇಹಿ ಕಲಿಕೆಯನ್ನು ಕೊಡುವ ಹೊಣೆ ಶಿಕ್ಷಕರದದ್ದಾಗಿದೆ ಎಂದರು.
ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಘುನಾಥ ರೈ ಮಾತನಾಡಿ ಕಳೆದ 2 ವರ್ಷದ ಹಿಂದೆ ಹೊಸ ಜವಾಬ್ದಾರಿ ಹೊತ್ತುಕೊಂಡಾಗ ಕೊಂಚ ಭಯ ಇದ್ದದ್ದು ಸಹಜ, ಆದರ ಬಳಿಕ ರಕ್ಷಕ ಶಿಕ್ಷಕ ಸಂಘದ ಸದಸ್ಯರ ಹಾಗೂ ಶಾಲೆಯ ಸಹಕಾರ ದೊರೆತ ಪರಿಣಾಮ, ಶಾಶ್ವತವಾಗಿ ನೆನಪಿಟ್ಟುಕೊಳ್ಳುವ ಕಾರ್ಯವನ್ನು ಕೈಕೊಳ್ಳುವುದಕ್ಕೆ ಸಾಧ್ಯವಾಯಿತು. ಕಳೆದ 2 ವರ್ಷ ಸಹಕರಿಸಿದ ಸರ್ವರಿಗೆ ಧನ್ಯವಾದಗಳು ಹಾಗೂ ಮುಂದಿನ ಸಮಿತಿ ಇನ್ನೂ ಒಂದು ಹೆಜ್ಜೆ ಎತ್ತರಕ್ಕೆ ಏರುವ ಕಾರ್ಯವನ್ನು ಮಾಡುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಶುಭ ಹಾರೈಸಿದರು. ಶಾಲಾ ಸುರಕ್ಷಾ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್ ಮಾತನಾಡಿ, ನಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರ ಪಾತ್ರ ಹಿರಿದು. ಮಕ್ಕಳು ಸರಿಯಾದ ಸಮಯಕ್ಕೆ ಶಾಲೆಗೆ ಬರುವಂತೆ ನೋಡುವುದು. ಆದ ಪಾಠಗಳ ಮೇಲ್ವಿಚಾರಣೆ, ಶಿಕ್ಷಕಿಯರ ಜೊತೆ ಕಲಿಕಾ ಪ್ರಗತಿಯ ಬಗ್ಗೆ ಸಮಾಲೋಚನೆ, ಹೀಗೆ ಜಾಗೃತ ಪೋಷಕರಾಗಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನಾಂದಿ ಹಾಡಿ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಭಗಿನಿ ಪ್ರಶಾಂತಿ ಬಿ.ಎಸ್ ಮಾತನಾಡಿ ನಮ್ಮ ಶಾಲೆಯ ಮಕ್ಕಳು ನಮ್ಮ ಸ್ವಂತ ಮಕ್ಕಳು ಇದ್ದ ಹಾಗೆ, ಹಾಗಾಗಿ ಶಾಲೆಯ ಪ್ರತಿ ಮಗುವಿನ ಕಲಿಕೆಯ ಕಡೆಗೆ ವೈಯಕ್ತಿಕ ಗಮನವನ್ನು ನೀಡಿ ಕಲಿಕೆಯನ್ನು ವಿದ್ಯಾಭ್ಯಾಸ ನೀಡಲಾಗುತ್ತದೆ. ಪೋಷಕರ ಎಲ್ಲಾ ಸಲಹೆಗಳನ್ನು ಸ್ವೀಕರಿಸಿ ಸ್ಪಂದಿಸುವ ಕಾರ್ಯವನ್ನು ಮಾಡ್ತಿದ್ದೆವೆ ಎಂದರು. ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ.ಎಸ್ ರವರು ನೂತನ ಶೈಕ್ಷಣಿಕ ವರ್ಷದ ರೂಪುರೇಷೆ ಶೈಕ್ಷಣಿಕ ಮಾಹಿತಿ ನೀಡಿದರು. ಕಳೆದೆರಡು ಶೈಕ್ಷಣಿಕ ವರ್ಷದಲ್ಲಿ ನವನವೀನ ಯೋಜನೆಗಳನ್ನು ರೂಪಿಸಿ ಶಾಲಾ ಅಭಿವೃದ್ಧಿಯಲ್ಲಿ ಪೂರ್ಣ ಸಹಕಾರ ನೀಡಿದ ಕ್ರಿಯಾಶೀಲ ಉಪಾಧ್ಯಕ್ಷ ರಘುನಾಥ ರೈಯವರನ್ನು ಸನ್ಮಾನಿಸಲಾಯಿತು.
ನೂತನ ಸಮಿತಿ ರಚನೆ

ಸಭೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಕಾರ್ಯಕಾರಿ ಸಮಿತಿಯ ನೂತನ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ನೂತನ ಉಪಾಧ್ಯಕ್ಷರಾಗಿ ರಾಮಚಂದ್ರ ಭಟ್ ಹಾಗೂ ಸುರಕ್ಷಾ ಸಮಿತಿ ಅಧ್ಯಕ್ಷರಾಗಿ ಸತೀಶ್ ಆರ್. ಅವರನ್ನು ಆಯ್ಕೆ ಮಾಡಲಾಯಿತು. ಅಧಿಕಾರ ಹಸ್ತಾಂತರ ಪ್ರಕ್ರಿಯೆಯು ಸಂಘದ ಅಧ್ಯಕ್ಷ ಭಗಿನಿ ಪ್ರಶಾಂತಿ ಬಿ.ಎಸ್ ನೇತೃತ್ವದಲ್ಲಿ ನಡೆಯಿತು. ಶಿಕ್ಷಕಿಯರಾದ ರೇಷ್ಮಾ ಸುನಿಲ್ ಮಸ್ಕರೇನ್ಹಸ್, ಲವೀನಾ ಪಸನ್ನ, ಎಲಿಜ್ ಅಂದ್ರಾದೆ ಹಾಗೂ ವೀಣಾ ಡಿ.ಸೋಜ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿಗಳಾದ ಭಾರವಿ ಭಟ್, ಚಂದನ್ ಕೃಷ್ಣ, ಆರಾಧನಾ ಬಿ., ದೃಶಾ ಪಿ., ಹಾಗೂ ತನ್ವಿ ಪಿ. ಪ್ರಾರ್ಥಿಸಿದರು. ಹಿರಿಯ ಶಿಕ್ಷಕಿ ವಿಲ್ಮಾ ಫೆರ್ನಾಂಡೀಸ್ ವರದಿ ವಾಚಿಸಿದರು. ಶಿಕ್ಷಕಿ ಜೋಸ್ಲಿನ್ ಪಾಯಸ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.
ಫೊ: 8496074163