ಸಂಘಟನೆಯ ಶಕ್ತಿಯಿಂದ ಅಭೂತಪೂರ್ವ ಗೆಲುವು- ಭಾಗೀರಥಿ ಮುರುಳ್ಯ
ಕಾಣಿಯೂರು: ಸಾಮಾನ್ಯ ಕಾರ್ಯಕರ್ತೆಯನ್ನು ಕೂಡ ಶಾಸಕಿ ಅಭ್ಯರ್ಥಿಯಾಗಿ ಮಾಡುವುದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಸುಳ್ಯ ಕ್ಷೇತ್ರದಲ್ಲಿ ಸಂಘಟನೆಯ ಶಕ್ತಿಯಿಂದ ಅಭೂತಪೂರ್ವ ಗೆಲುವು ಸಾಧ್ಯವಾಗಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಅವರು ಬಿಜೆಪಿ ಸವಣೂರು ಮಹಾಶಕ್ತಿ ಕೇಂದ್ರ, ಕಾಣಿಯೂರು ಶಕ್ತಿ ಕೇಂದ್ರದ ವತಿಯಿಂದ ಕಾರ್ಯಕರ್ತರಿಗೆ ಮತ್ತು ಸುಳ್ಯ ವಿಧಾನ ಸಭಾ ಕ್ಷೇತ್ರದ ನೂತನ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದ ಸಭಾಂಗಣದಲ್ಲಿ ಜೂ 11ರಂದು ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಬಿಜೆಪಿ ಅಧಿಕಾರಕ್ಕಾಗಿ ಬೆಳೆದ ಪಕ್ಷವಲ್ಲ. ಹೋರಾಟದಿಂದ ಬೆಳೆದ ಪಕ್ಷ. ಕ್ಷೇತ್ರಕ್ಕೆ ಬಂದ ಅನುದಾನವನ್ನು ಕಾರ್ಯಕರ್ತರ, ಪ್ರಮುಖರ ಸಲಹೆ ಪಡೆದುಕೊಂಡು ವಿನಿಯೋಗಿಸಲಾಗುವುದು ಎಂದವರು, ನಮ್ಮ ಸಂಸ್ಕಾರ, ಸಂಸ್ಕೃತಿ, ದೈವ ದೇವರುಗಳು ಉಳಿಯಬೇಕಾದರೆ ಬಿಜೆಪಿಯನ್ನು ಬೆಂಬಲಿಸಲೇಬೇಕು ಎಂದರು.
ಚಾರ್ವಾಕ ಸ್ವಾವಲಂಬಿ ಬೂತ್ ಆಗಿ ಗುರುತಿಸಿರುವುದು ಶ್ಲಾಘನೀಯ – ಹರೀಶ್ ಕಂಜಿಪಿಲಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ, ಚುನಾವಣಾ ನಿರ್ವಹಣೆಗಾಗಿ ನೀಡಿದ ಮೊತ್ತವನ್ನು ಬಡವರ್ಗದ ವ್ಯಕ್ತಿಯ ಮನೆ ನಿರ್ಮಾಣಕ್ಕೆ ನೀಡುವ ಮೂಲಕ ಚಾರ್ವಾಕ ಬೂತ್ ಸಮಿತಿ ಮಾದರಿ ಕಾರ್ಯ ಮಾಡಿದೆ. ಚಾರ್ವಾಕ ಸ್ವಾವಲಂಬಿ ಬೂತ್ ಆಗಿ ಗುರುತಿಸಿರುವುದು ಶ್ಲಾಘನೀಯ ಎಂದರು.
ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಎ. ವಿ ತೀರ್ಥರಾಮ ಮಾತನಾಡಿ, ಪ್ರತೀ ಚುನಾವಣೆಯಲ್ಲೂ ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ನಿರಂತರವಾಗಿ ಗೆಲುವು ಪಡೆಯುತ್ತಿದೆ. ಕಾಣಿಯೂರಿನ ಭಾಗದಲ್ಲಿ ಕಾಂಗ್ರೆಸ್ ಬಲಿಷ್ಟವಾಗಿದ್ದಾಗ ಹೋರಾಟದ ಕಾಲಘಟ್ಟದಲ್ಲಿ ದಿ.ನರೇಂದ್ರ ಅಭಿಕಾರ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ ಪಕ್ಷವನ್ನು ಬಲಿಷ್ಟಗೊಳಿಸುವ ಕಾರ್ಯ ಮಾಡಿದರು. ದಬ್ಬಾಳಿಕೆ ನಡೆಯುತ್ತಿದ್ದ ಕಾಲದಲ್ಲೂ ಕಾರ್ಯಕರ್ತರು ಅವುಗಳನ್ನು ಮೆಟ್ಟಿನಿಂತು ಪಕ್ಷ ಸಂಘಟಿಸಿದ್ದಾರೆ. ಈ ಬಾರಿ ಸುಳ್ಯದಲ್ಲಿ ಅತೀ ಹೆಚ್ಚು ಅಂತರದಲ್ಲಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಟ್ಟಿದ್ದಾರೆ. ಈ ಬಾರಿ ಕಾಣಿಯೂರು ಗ್ರಾ.ಪಂ.ವ್ಯಾಪ್ತಿಯಲ್ಲೂ ಹೆಚ್ಚು ಅಂತರದ ಮತಗಳು ದೊರಕಿದೆ. ಸರಕಾರ ಇಲ್ಲದ ಸಂದರ್ಭದಲ್ಲೂ ಕಾರ್ಯಕರ್ತರ ಸಮಸ್ಯೆಗೆ ಸ್ಪಂದಿಸುವ ಕೆಲಸವನ್ನು ನಾಯಕರು ಮಾಡಬೇಕು. ಕಾಂಗ್ರೆಸ್ ಬಿಟ್ಟಿ ಗ್ಯಾರಂಟಿ ನೀಡುತ್ತಿದೆ. ಆದರೆ ಇತರರಿಗೆ ವಿದ್ಯುತ್ ಬಿಲ್ ಏರಿಕೆ, ಬಸ್ ಪ್ರಯಾಣ ಏರಿಕೆ ಮಾಡಿದೆ ಎಂದರು. ಕಾಣಿಯೂರು ಗ್ರಾ.ಪಂ. ಅಧ್ಯಕ್ಷೆ ಲಲಿತಾ ದರ್ಖಾಸು, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ಪುತ್ತೂರು ಪಿ. ಎಲ್.ಡಿ ಬ್ಯಾಂಕ್‌ನ ನಿರ್ದೇಶಕ ದೇವಯ್ಯ ಗೌಡ ಖಂಡಿಗ, ಕಾಣಿಯೂರು ಶಕ್ತಿ ಕೇಂದ್ರದ ಸಹ ಪ್ರಮುಖ್ ಸುರೇಶ್ ಓಡಬಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಂದರ ಬೆದ್ರಾಜೆ, ಬಾಲಕೃಷ್ಣ ಗೌಡ ಇಡ್ಯಡ್ಕ, ವಿಶ್ವನಾಥ ದೇವಿನಗರ, ವೀರಪ್ಪ ಗೌಡ ಉದ್ಲಡ್ಡ, ರಾಮಣ್ಣ ಗೌಡ ಮೂಡೈಮಜಲು, ಯಶವಂತ ಕೇಪುಳಗುಡ್ಡೆ, ಆನಂದ ಗೌಡ ಕೂರೇಲು, ದಯಾನಂದ ಕೂರೇಲು ಅತಿಥಿಗಳನ್ನು ಗೌರವಿಸಿದರು. ಗ್ರಾ. ಪಂ.ಸದಸ್ಯರಾದ ಕೀರ್ತಿ ಕುಮಾರಿ ಅಂಬುಲ ಮತ್ತು ತೇಜ ಕುಮಾರಿ ಉದ್ಲಡ್ಡ ಪ್ರಾರ್ಥಿಸಿದರು. ಸವಣೂರು ಬಿಜೆಪಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ, ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಉದನಡ್ಕ ಸ್ವಾಗತಿಸಿ, ಕಾಣಿಯೂರು ಶಕ್ತಿ ಕೇಂದ್ರದ ಅಧ್ಯಕ್ಷ, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ ವಂದಿಸಿದರು. ಬಿಜೆಪಿ ಸುಳ್ಯ ಮಂಡಲ ಸಮಿತಿ ಸದಸ್ಯ ಶಿವರಾಮ ರೈ ಪಿಜಕ್ಕಳ ಕಾರ್ಯಕ್ರಮ ನಿರೂಪಿಸಿದರು.
ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ: ಕಳೆದ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಕಾಣಿಯೂರು ಗ್ರಾಮದ ಗುಂಡಿಗದ್ದೆ ಪದ್ಮನಾಭ ಗೌಡ ಮತ್ತು ಹೇಮಾವತಿರವರ ಪುತ್ರ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಉತ್ತಮ್ ಮತ್ತು 616 ಅಂಕ ಪಡೆದ ದೋಳ್ಪಾಡಿ ಗ್ರಾಮದ ಪಿಜಕ್ಕಳ ರಘುರಾಮ ರೈ ಮತ್ತು ರತಿ ರೈ ಅವರ ಪುತ್ರಿ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಸ್ವಸ್ತಿಕ ರೈ ಅವರನ್ನು ಅಭಿನಂದಿಸಲಾಯಿತು. ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಅಭಿನಂದಿಸಲಾಯಿತು.
ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಕಾಣಲು ಬಿಜೆಪಿಯನ್ನು ಬೆಂಬಲಿಸಬೇಕು-ಎ. ವಿ ತೀರ್ಥರಾಮ
ಈ ಬಾರಿ ಪುತ್ತೂರಿನಲ್ಲಿ ಬಿಜೆಪಿ ಹಾಗೂ ಹಿಂದುತ್ವದ ಗೊಂದಲದಲ್ಲಿ ಸ್ಪರ್ಧೆಯಿಂದ ಬಿಜೆಪಿಗೆ ಹಿನ್ನಡೆಯಾಗಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲೂ ಇಂತಹ ಸ್ಥಿತಿ ಬಂದರೆ ಎಲ್ಲಾ ಕಾರ್ಯಕರ್ತರೂ ಬಿಜೆಪಿಯನ್ನು ಬೆಂಬಲಿಸಬೇಕು. ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಕಾಣಲು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಎ.ವಿ ತೀರ್ಥರಾಮ ಅವರು ಹೇಳಿದರು.
ಚುನಾವಣೆ ನಿರ್ವಹಣೆಯ ಮೊತ್ತ ನೆರವಿನ ರೂಪದಲ್ಲಿ ಹಸ್ತಾಂತರ
ಚುನಾವಣೆಯಲ್ಲಿ ಚಾರ್ವಾಕ 61ನೇ ಬೂತ್ ಸ್ವಾವಲಂಬಿ ಬೂತ್ ಆಗಿ ಕೆಲಸ ಮಾಡುತ್ತಿದ್ದು, ಪಕ್ಷದಿಂದ ಬಂದ ಚುನಾವಣೆ ನಿರ್ವಹಣೆಯ ಮೊತ್ತವನ್ನು ಪುಟ್ಟಣ್ಣ ಬಾಂತೋಡು ಅವರಿಗೆ ನೆರವಿನ ರೂಪದಲ್ಲಿ ನೀಡಲಾಯಿತು.