ನೆಲ್ಯಾಡಿ: ವಿಧಾನಸಭೆ ಚುನಾವಣೆ ವೇಳೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದೇನೆ ಎಂದು ಆರೋಪಿಸಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿರುವ ಬಗ್ಗೆ ನನಗೆ ಈ ತನಕ ಯಾವುದೇ ಆದೇಶ ಬಂದಿಲ್ಲ. ಆದರೂ ವಾಟ್ಸಫ್‌ನಲ್ಲಿ ಈ ವಿಚಾರ ಹರಿದಾಡುತ್ತಿದೆ ಎಂದು ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್ ರವರು ಸ್ಪಷ್ಪಪಡಿಸಿದ್ದಾರೆ.
ಕೆಪಿಸಿಸಿಯ ಶಿಸ್ತು ಪಾಲನಾ ಸಮಿತಿಯ ದ.ಕ.ಜಿಲ್ಲಾ ಸಮಿತಿಯಲ್ಲಿ ನಾನೂ ಸಹ ಸದಸ್ಯೆಯಾಗಿದ್ದೇನೆ. ಯಾವುದೇ ಸೂಚನೆ ಹಾಗೂ ವಿಚಾರಣೆ ಮಾಡದೇ ಉಚ್ಚಾಟನೆ ಮಾಡುವಂತಹ ಪದ್ಧತಿ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಬಗ್ಗೆ ಅಪಾರ ಗೌರವವಿದ್ದು, ಅವರು ಇಂತಹ ಬೆಳವಣಿಗೆಗಳನ್ನು ಒಪ್ಪಲು ಸಾಧ್ಯವೇ ಇಲ್ಲ. ಇದೊಂದು ನಮ್ಮ ವಿರೋಧಿಗಳು ಮಾಡಿರುವ ಷಡ್ಯಂತ್ರವಾಗಿದೆ ಎಂದು ಉಷಾ ಅಂಚನ್ ಹೇಳಿದ್ದಾರೆ.
ಸುಳ್ಯ ವಿಧಾನಸಭಾ ಕ್ಷೇತ್ರದಿಂದ ನಂದಕುಮಾರ್ ರವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಕೆಪಿಸಿಸಿ ಅಧ್ಯಕ್ಷರ ಬಳಿಗೆ ತೆರಳಿದ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದ ನಿಯೋಗದ ಜೊತೆಗೆ ನಾನೂ ತೆರಳಿದ್ದೆ. ಗೊಂದಲಗಳೆಲ್ಲ ನಿವಾರಣೆಯಾಗಿ ಜಿ.ಕೃಷ್ಣಪ್ಪ ಅವರಿಗೆ ಪಕ್ಷದಿಂದ ಬಿ ಫಾರಂ ನೀಡಿದ ಬಳಿಕ ಬಿ.ರಮಾನಾಥ ರೈಯವರು ಸಂಧಾನ ನಡೆಸಿ ಒಟ್ಟಾಗಿ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಸೂಚನೆ ನೀಡಿದ್ದರು. ಅದರಂತೆ ನಾನು ಜಿ.ಕೃಷ್ಣಪ್ಪ ಅವರ ಕುಟುಂಬ ಸದಸ್ಯರೊಂದಿಗೆ ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ನಿಷ್ಠೆಯಿಂದ ಪಕ್ಷದ ಅಭ್ಯರ್ಥಿ ಪರ ನನ್ನ ತಾ.ಪಂ.ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ್ದೇನೆ. ಇದಕ್ಕೆ ಕಾರ್ಯಕರ್ತರೇ ಸಾಕ್ಷಿಯಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದೇನೆ ಎಂಬುದು ಸತ್ಯಕ್ಕೆ ದೂರವಾದ ವಿಚಾರವಾಗಿದೆ. ಇವೆಲ್ಲವೂ ನನ್ನ ವಿರುದ್ಧ ಮಾಡಿರುವ ಷಡ್ಯಂತ್ರವಾಗಿದೆ ಎಂದು ಉಷಾ ಅಂಚನ್ ಅವರು ಸ್ಪಷ್ಪಪಡಿಸಿದ್ದಾರೆ.