ಹೃದಯದ ಬಗ್ಗೆ ಕಾಳಜಿ ಇರಲಿ : ಡಾ| ದೀಪಕ್ ರೈ
ಪುತ್ತೂರು: ಇತ್ತೀಚಿನ ದಿನಗಳಲ್ಲಿ ಅತೀ ಸಣ್ಣ ವಯಸ್ಸಿನವರಲ್ಲೂ ಹೃದಯಾಘಾತ ಸಂಭವಿಸುತ್ತಿರುವುದು ಅತ್ಯಂತ ಭಯಾನಕ ಸಂಗತಿಯಾಗಿದೆ. ಹೃದಯಾಘಾತಕ್ಕೆ ಬಹಳಷ್ಟು ಕಾರಣಗಳಿದ್ದರೂ ನಮ್ಮನ್ನು ಕಾಡುವ ಅತೀಯಾದ ಒತ್ತಡ ಹೃದಯದ ವಿವಿಧ ಖಾಯಿಲೆಗಳಿಗೆ ಕಾರಣವಾಗಿದೆ. ರಕ್ತದೊತ್ತಡ, ಡಯಾಬಿಟೀಸ್ ಇರುವವರು ಹಾಗೇ ಪ್ರತಿಯೊಬ್ಬರು ತಮ್ಮ ಹೃದಯದ ಬಗ್ಗೆ ಕಾಳಜಿ ವಹಿಸುವುದು ಅತೀ ಅವಶ್ಯ ಎಂದು ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ| ದೀಪಕ್ ರೈ ಪಾಣಾಜೆ ಹೇಳಿದರು.
ಅವರು ಜಿಲ್ಲಾ ಪಂಚಾಯತ್ ಮಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ಪುತ್ತೂರು, ಕಾರ್ಡಿಯಾಲಜಿ ಡೋರ್‌ಸ್ಟೆಪ್ ಫೌಂಡೇಶನ್(ಕ್ಯಾಡ್) ಸಂಸ್ಥೆ, ಗ್ರಾಮ ಪಂಚಾಯತ್ ಕೊಳ್ತಿಗೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಕೊಳ್ತಿಗೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹೃದಯ ತಜ್ಞ ಡಾ| ಪದ್ಮನಾಭ ಕಾಮತ್ ಹಾಗೂ ತಂಡದವರಿಂದ ಹೃದಯ ವೈಶಾಲ್ಯ ಯೋಜನೆ, ಹೃದಯ ತಜ್ಞ ಮನೆ ಬಾಗಿಲಿಗೆ ಹೃದಯ ಸಂಬಂಧಿತ ಖಾಯಿಲೆಗಳ ಉಚಿತ ತಪಾಸಣಾ ಶಿಬಿರವನ್ನು ಜೂ.14 ರಂದು ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉದ್ಘಾಟಿಸಿ ಮಾತನಾಡಿದರು.
ಹೃದಯ ವೈಶಾಲ್ಯ ಯೋಜನೆ ಒಂದು ಒಳ್ಳೆಯ ಕಾರ್ಯಕ್ರಮವಾಗಿದ್ದು ಹೃದಯ ತಜ್ಞ ನಮ್ಮ ಮನೆ ಬಾಗಿಲಿಗೆ ಬಂದು ನಮ್ಮ ಹೃದಯದ ಬಗ್ಗೆ ಕಾಳಜಿ ವಹಿಸುವಂತೆ ಹೇಳುತ್ತಿರುವ ಈ ಯೋಜನೆಯ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದ ಅವರು, ನಮ್ಮದು ಒತ್ತಡ ಮುಕ್ತ ಜೀವನ ಆಗಬೇಕು, ಯಾವುದೇ ಕಾರಣಕ್ಕೂ ಅತಿಯಾದ ಒತ್ತಡಕ್ಕೆ ಒಳಗಾಗಬಾರದು. ಬಿಪಿ, ಶುಗರ್ ಇರುವವರು ತಮ್ಮ ಹೃದಯದ ಬಗ್ಗೆ ಇಸಿಜಿ ಮಾಡಿಕೊಳ್ಳುವ ಮೂಲಕ ಹೃದಯ ಸಂಬಂಧಿ ಖಾಯಿಲೆಗಳನ್ನು ಪತ್ತೆ ಮಾಡಿಕೊಂಡು ಸೂಕ್ತ ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆಯನ್ನು ವಹಿಸಬೇಕು ಎಂದು ಡಾ| ದೀಪಕ್ ರೈಯವರು ಹೇಳಿ ಶುಭ ಹಾರೈಸಿದರು.
ಕೆಎಂಸಿಯ ಹೃದಯ ತಜ್ಞರಾದ ಡಾ| ಆದಿತ್ಯರವರು ಮಾತನಾಡಿ, ಹೃದಯವನ್ನು ಜೋಪಾನವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇಸಿಜಿ ಮಾಡಿಕೊಳ್ಳುವ ಮೂಲಕ ಹೃದಯ ಸಂಬಂಧಿ ಖಾಯಿಲೆಗಳನ್ನು ಪತ್ತೆ ಹಚ್ಚಿ ಅದಕ್ಕೆ ಸೂಕ್ತ ಚಿಕಿತ್ಸೆಗಳನ್ನು ಪಡೆದುಕೊಳ್ಳಬೇಕು ಎಂದರು.
ಪುತ್ತೂರು ಸರಕಾರಿ ಆಸ್ಪತ್ರೆಯ ಡಾ| ಯದುರಾಜ್‌ರವರು ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಹೃದಯ ಸಂಬಂಧಿ ಖಾಯಿಲೆಗಳ ಬಗ್ಗೆ ಅರಿವು ಮೂಡಿಸುವ ಜೊತೆಯ ತಮ್ಮ ಹೃದಯದ ಬಗ್ಗೆ ಕಾಳಜಿ ಮೂಡಿಸುವ ಒಂದು ಒಳ್ಳೆಯ ಕಾರ್ಯಕ್ರಮ ಇದಾಗಿದೆ. ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಯಕ್ರಮದ ಮೂಲಕ ಹೃದಯ ಸಂಬಂಧಿ ಖಾಯಿಲೆಗಳನ್ನು ಪತ್ತೆ ಹಚ್ಚಿ ಅದಕ್ಕೆ ಪ್ರಾಥಮಿಕ ಚಿಕಿತ್ಸೆ ನೀಡುವುದು ಅಗತ್ಯ ಇದ್ದರೆ ಹೆಚ್ಚಿನ ಚಿಕಿತ್ಸೆಗೆ ಉನ್ನತ ಆಸ್ಪತ್ರೆಗೆ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಕೊಳ್ತಿಗೆ ಗ್ರಾಪಂ ಉಪಾಧ್ಯಕ್ಷೆ ನಾಗವೇಣಿ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಗ್ರಾಪಂ ಸದಸ್ಯೆ ಯಶೋಧಾ, ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ಅಮಿತ್ ಉಪಸ್ಥಿತರಿದ್ದರು. ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಅಮಿತ್ ಕುಮಾರ್ ಟಿ ಸ್ವಾಗತಿಸಿದರು. ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಅಕ್ಷತಾ ಪ್ರಾರ್ಥಿಸಿದರು. ಸುಶ್ರೂಶಣ ಅಧಿಕಾರಿ ಗೀತಾ, ಸಮುದಾಯ ಆರೋಗ್ಯ ಅಧಿಕಾರಿಗಳಾದ ರಶ್ಮಿ ಮತ್ತು ಲೀಲಾವತಿ, ಆಶಾ ಕಾರ್ಯಕರ್ತೆಯರಾದ ಸಾವಿತ್ರಿ ಮತ್ತು ಶ್ರೀಮತಿರವರುಗಳು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿ ಚೈತ್ರಾ ವಂದಿಸಿದರು. ಕೊಳ್ತಿಗೆ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಜೆಸ್ಸಿಂತಾ ಕೆ.ವಿ ಕಾರ್ಯಕ್ರಮ ನಿರೂಪಿಸಿದರು. ತಿಂಗಳಾಡಿ ಸಿಎಚ್‌ಒ, ಕೊಳ್ತಿಗೆ ಸಿಎಚ್‌ಒ, ಆಶಾ ಕಾರ್ಯಕರ್ತೆಯರು, ಸಿಬ್ಬಂದಿ ವರ್ಗದವರು ಸಹಕರಿಸಿದ್ದರು.
ಗೋಲ್ಡನ್ ಟೈಮ್…!
ಹಾರ್ಟ್ ಅಟ್ಯಾಕ್ ಅನ್ನುವುದು ಇತ್ತೀಚಿನ ದಿನಗಳಲ್ಲಿ ಜನರನ್ನು ಬಹಳಷ್ಟು ಕಾಡುತ್ತಿದೆ. ಚಿಕ್ಕ ವಯಸ್ಸಿನವರಲ್ಲೂ ಹೃದಯಾಘಾತಗಳು ಕಾಣಿಸಿಕೊಳ್ಳುತ್ತಿದೆ. ಹಾರ್ಟ್ ಆಟ್ಯಾಕ್ ಸಂಭವಿಸಿದ ತಕ್ಷಣದಿಂದ ವ್ಯಕ್ತಿಯನ್ನು ಬದುಕಿಸುವ ಒಂದು ಸಮಯ ಇರುತ್ತದೆ ಇದಕ್ಕೆ ಗೋಲ್ಡನ್ ಟೈಮ್ ಎನ್ನುತ್ತೇವೆ. ಈ ಗೋಲ್ಡನ್ ಟೈಮ್‌ನಲ್ಲಿ ವ್ಯಕ್ತಿಗೆ ಸಿಗಬೇಕಾದ ಚಿಕಿತ್ಸೆ ದೊರೆತರೆ ಪ್ರಾಣಾಪಾಯದಿಂದ ಬದುಕಿಸಬಹುದಾಗಿದೆ ಎಂದು ಡಾ| ಯದುರಾಜ್ ಹೇಳಿದರು. ಹಾರ್ಟ್ ಅಟ್ಯಾಕ್ ಸಂಭವಿಸಿ ಗೋಲ್ಡನ್ ಟೈಮ್‌ನೊಳಗೆ ಸಿಗಬೇಕಾದ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾದ ಈಶ್ವರಮಂಗಲದ ವೆಂಕಟೇಶ್ವರ ಶರ್ಮರವರು ಮಾತನಾಡಿ, ಕ್ಯಾಡ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು. ಕಳೆದ 4 ವರ್ಷಗಳ ಹಿಂದೆ ನನಗೆ ಸಿಮಿಯರ್ ಹಾರ್ಟ್ ಅಟ್ಯಾಕ್ ಸಂಭವಿಸಿದರೂ ಡಾ| ಪದ್ಮನಾಭ ಕಾಮತ್ ಮತ್ತು ತಂಡದವರ ಸೂಕ್ತ ಚಿಕಿತ್ಸೆಯಿಂದ ನಾನು ಆರೋಗ್ಯವಾಗಿದ್ದೇನೆ. ಕ್ಯಾಡ್ ಸಂಸ್ಥೆ ನನಗೆ ಮರುಜೀವನ ನೀಡಿದ ಸಂಸ್ಥೆಯಾಗಿದೆ ಎಂದು ಹೇಳಿ ಪ್ರತಿಯೊಬ್ಬರು ಹೃದಯದ ಬಗ್ಗೆ ಕಾಳಜಿ ವಹಿಸುವುದು ಅತೀ ಅಗತ್ಯ ಎಂದು ಹೇಳಿದರು.
ಇಸಿಜಿ ಹಸ್ತಾಂತರ
ಕ್ಯಾಡ್ ಸಂಸ್ಥೆಯಿಂದ ಹೃದಯ ಸಂಬಂಧಿ ಖಾಯಿಲೆಗಳ ಪತ್ತೆ ಹಚ್ಚುವ ಸಾಧನ ಇಸಿಜಿಯನ್ನು ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಸ್ತಾಂತರ ಮಾಡಲಾಯಿತು. ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವಿದ್ಯಾರವರಿಗೆ ಇಸಿಜಿ ಯಂತ್ರವನ್ನು ಹಸ್ತಾಂತರಿಸಲಾಯಿತು.
80 ಜನರು ಶಿಬಿರದಲ್ಲಿ ಭಾಗಿ
ಸುಮಾರು 80 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು. ಇದರಲ್ಲಿ 52 ಮಂದಿಗೆ ಇಸಿಜಿ ಪರೀಕ್ಷೆ ಮಾಡಲಾಯಿತು. ಇಸಿಜಿ ಪರೀಕ್ಷೆ ಮಾಡಿದವರಲ್ಲಿ 16 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಕೆಎಂಸಿಗೆ ವೈದ್ಯಾಧಿಕಾರಿಯವರು ಬರಲು ತಿಳಿಸಿದರು. ಇದಲ್ಲದೆ ಬಿಪಿ, ಶುಗರ್, ಹಿಮೋಗ್ಲೋಬಿನ್ ಇತ್ಯಾದಿ ಪರೀಕ್ಷೆಗಳನ್ನು ಮಾಡಲಾಯಿತು. ಕ್ಯಾಡ್ ಸಂಸ್ಥೆಯ ವೈದ್ಯಾಧಿಕಾರಿಗಳ ತಂಡ ಸಹಕರಿಸಿತು.