ಚಿಕಿತ್ಸಕ ಗುಣದ ಕವಿ ಕನಕ : ಪ್ರೊ. ತಾಳ್ತಜೆ
ರಾಮಕುಂಜ: ತಮಿಳುನಾಡಿನಿಂದ ಮೊದಲ್ಗೊಂಡು ಕನ್ನಡನಾಡಿನ ಮೂಲಕ ಉತ್ತರ ಭಾರತ ಕಡೆಗೆ ವ್ಯಾಪಿಸಿದ ಭಕ್ತಿಲತೆ ಭಾರತದ ಬದುಕನ್ನು ಪೋಷಿಸಿದೆ. ಈ ಭಕ್ತಿ ಪರಂಪರೆಯ ವಿಶಿಷ್ಟ ಕವಿ ಕನಕ. ತನ್ನ ಆಧ್ಯಾತ್ಮಿಕ ಮತ್ತು ಸಾಮಾಜಿಕ ರಚನೆಗಳಲ್ಲಿ ಕನಕದಾಸರು ಚಿಕಿತ್ಸಕ ಗುಣದ ಕವಿಯಾಗಿ ಮೂಡಿಬಂದಿದ್ದಾರೆ ಎಂದು ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತಕುಮಾರ್ ಅವರು ಅಭಿಪ್ರಾಯಪಟ್ಟರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠ ಮತ್ತು ಕನಕದಾಸ ಸಂಶೋಧನಾ ಕೇಂದ್ರ ಮತ್ತು ಶ್ರೀ ರಾಮಕುಂಜೇಶ್ವರ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಒಂದು ದಿನದ ‘ಕನಕ ಕೀರ್ತನ ಗಾಯನ ಕಮ್ಮಟ’ವನ್ನು ಉದ್ಘಾಟಿಸಿ ಮಾತನಾಡಿದರು.
ವಿಜಯನಗರ ಸಾಮ್ರಾಜ್ಯದ ಶುದ್ಧಾಂಗ ಸೈನಿಕನಾಗಿದ್ದ ಕನಕ ತಿರುಪತಿ ತಿಮ್ಮಪ್ಪ, ವಿಶಿಷ್ಟಾದ್ವೈತ ಮತ್ತು ದ್ವೈತ ಸಿದ್ಧಾಂತದ ಮೂಲಕ ಕಂಡು ಕೊಂಡ ದಿವ್ಯಾನುಭವ ಅವರ ಕೀರ್ತನೆಗಳಲ್ಲಿ ಅಭಿವ್ಯಕ್ತಗೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ರಾಮಕುಂಜೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಗಳಾದ ರಾಧಾಕೃಷ್ಣ ಕೆ ಯಸ್ ಕುವೆಚ್ಚಾರು ಅಧ್ಯಕ್ಷತೆ ವಹಿಸಿದ್ದರು.
ಕನಕದಾಸ ಸಂಶೋಧನಾ ಕೇಂದ್ರದ ಸಂಯೋಜಕರಾದ ಡಾ. ಧನಂಜಯ ಕುಂಬ್ಳೆ ಮಾತನಾಡಿದರ.ಕಾಲೇಜಿನ ಪ್ರಾಂಶುಪಾಲ ಗಣರಾಜ ಕುಂಬ್ಳೆ ಸ್ವಾಗತಿಸಿ,. ರಾಮಕುಂಜ ಲಲಿಕಲಾ ಸಂಘದ ಸಂಯೋಜಕಿ ಜಯಶ್ರೀ ಭಟ್ ವಂದಿಸಿದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸುಂದರ ಶೆಟ್ಟಿ ಉಪಸ್ಥಿತರಿದ್ದರು.
ಪ್ರಸಿದ್ಧ ಗಾಯಕ ಯಜ್ಞೇಶ್ ಆಚಾರ್ಯ ಸುಬ್ರಹ್ಮಣ್ಯ ಕನಕ ಕೀರ್ತನ ಗಾಯನ ಕಮ್ಮಟವನ್ನು ನಡೆಸಿಕೊಟ್ಟರು. ಶ್ರೀವಾಣಿ ಕಾಕುಂಜೆ ಸಹ ಗಾಯಕರಾಗಿ, ಸುಹಾಸ್ ಹೆಬ್ಬಾರ್ ಮತ್ತು ರವಿರಾಜ್ ತಬಲ ಮತ್ತು ಹಾರ್ಮೋನಿಯಂನಲ್ಲಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ಕಡಬ ತಾಲೂಕಿನ ವಿವಿಧ ಕಾಲೇಜಿನ ಸುಮಾರು 50 ವಿದ್ಯಾರ್ಥಿಗಳು ಭಾಗವಹಿಸಿದರು.