ಎಡಮಂಗಲ: ’ಕಸ್ವಿ ಹಸಿರು ದಿಬ್ಬಣ’ವತಿಯಿಂದ ಉಚಿತ ಗಿಡ ವಿತರಣೆ

0

ಕಡಬ: ರಾಮಕುಂಜ ಗ್ರಾಮದ ಕೇಶವ ಕಾರಿಜಾಲ್ ಅವರ ಪುತ್ರಿ ಬೇಬಿ ಕಸ್ವಿಯ 2ನೇ ವರುಷದ ಹುಟ್ಟುಹಬ್ಬದ ಪ್ರಯುಕ್ತ “ಕಸ್ವಿ ಹಸಿರು ದಿಬ್ಬಣ” ಇದರ ವತಿಯಿಂದ “ಹುಟ್ಟುಹಬ್ಬ ಹೊಸ ಪೀಳಿಗೆಯ ಉಸಿರಾಗಲಿ” ಎಂಬ ಧ್ಯೇಯದೊಂದಿಗೆ ಎಡಮಂಗಲ ಪರಿಸರದ ಜೂನ್-ಜೂಲೈ ತಿಂಗಳಲ್ಲಿ ಹುಟ್ಟುಹಬ್ಬ ಆಚರಿಸುತ್ತಿರುವ 34 ಜನರನ್ನು ಒಟ್ಟುಗೂಡಿಸಿ ಅವರಿಗೆ ಉಚಿತವಾಗಿ ಗಿಡಗಳನ್ನು ಕೊಟ್ಟು ಎಡಮಂಗಲ ರೈಲ್ವೆ ಗೇಟ್ ಬಳಿ ರಸ್ತೆಗಳ ಇಕ್ಕೆಲಗಳಲ್ಲಿ ನೆಡಿಸಲಾಯಿತು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಮುಖ್ಯಗುರು ಬಾಲಕೃಷ್ಣ ಕೆ ಹೇಮಳ ಅವರು, ತಾಪಮಾನ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಒಜೋನ್ ಪದರ ಹಾನಿಯಿಂದಾಗಿ ರೋಗಗಳು ಬರುತ್ತಿವೆ. ಅರಣ್ಯ ಆಮ್ಲಜನಕದ ಭಂಡಾರ, ವೃಕ್ಷವನ್ನು ರಕ್ಷಿಸಿದರೆ ವೃಕ್ಷ ನಮ್ಮನ್ನು ರಕ್ಷಿಸುತ್ತದೆ. ದುಂದು ವೆಚ್ಚ ಮಾಡಿ ಆಚರಿಸುವ ಹುಟ್ಟುಹಬ್ಬಗಳ ನಡುವೆ ಇದೊಂದು ವಿನೂತನ ಮಾದರಿ ಕಾರ್ಯಕ್ರಮ ಎಂದರು. ಉಪವಲಯ ಅರಣ್ಯಾಧಿಕಾರಿ ಯಶೋಧರ್ ಕೆ.ಅವರು ಮಾತನಾಡಿ, ಅಭಿವೃದ್ಧಿಗಾಗಿ ಅರಣ್ಯ ನಾಶ ಆಗ್ತಾ ಇದೆ. ವಾಣಿಜ್ಯ ಬೆಳೆಗಾಗಿ ಮರಗಳನ್ನು ಕಡಿಯಲಾಗುತ್ತಿರುವ ಈ ಕಾಲಘಟ್ಟದಲ್ಲಿ ಹುಟ್ಟುಹಬ್ಬಕ್ಕೆ ಉಚಿತವಾಗಿ ಗಿಡ ಕೊಡುವುದರ ಮೂಲಕ ಗಿಡ ಬೆಳೆಸುವಲ್ಲಿ ಪ್ರೆರೇಪಿಸುವ “ಕಸ್ವಿ ಹಸಿರು ದಿಬ್ಬಣ”ದ ಪ್ರಯತ್ನ ಶ್ಲಾಘನೀಯ. ಕೇಕ್ ಹೇಗೆ ಹುಟ್ಟುಹಬ್ಬಕ್ಕೆ ಅನಿವಾರ್ಯ ಆಗಿದೆಯೋ ಹಾಗೆ ಮುಂದಿನ ದಿನಗಳಲ್ಲಿ ಗಿಡಬೆಳೆಸುವುದು ಆಗಲಿ ಎಂಬುದು ನಮ್ಮ ಹಾರೈಕೆ ಎಂದರು.
ಕಾರ್ಯಕ್ರಮದ ರೂವಾರಿ ಕೇಶವ ರಾಮಕುಂಜ ಅವರು ಮಾತನಾಡಿ, ರೈಲ್ವೆ ಕ್ರಾಸಿಂಗ್ ಸಮಯ ತುಂಬಾ ಹೊತ್ತು ಗೇಟ್ ಬಳಿ ಬೈಕ್ ಸವಾರರು ಬಿಸಿಲಲ್ಲಿ ಕಾಯಬೇಕಾಗುತ್ತದೆ ಇದನ್ನು ಮನಗಂಡು ಗಿಡ ನೆಟ್ಟಿರುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಪಶ್ಚಿಮ ಘಟ್ಟಗಳ ವನ್ಯಜೀವಿ ಸಂರಕ್ಷಣಾ ಟ್ರಸ್ಟ್ ಇದರ ಜಾಗೃತ ದಳದ ಅಧಿಕಾರಿ ಗಂಗಾಧರ್ ಕಡಬ, ರೈಲ್ವೆ ಸಿಬ್ಬಂದಿ ಮನೋಹರ್ ಮತ್ತು ಸಂದೀಪ್, ಯೋಗೀಶ್ ಪಿಜಾವ್, ಗೋಪಾಲಕೃಷ್ಣ ಹೇಮಲ, ದೀಪಕ್ ದೋಣಿ ಮನೆ, ಜಗದೀಶ್ ಕೊಡಂಗೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here