ಕಾಂಗ್ರೆಸ್ ಮುಖಂಡ ಸುಧೀರ್ ದೇವಾಡಿಗ ಅವರ ಉಚ್ಛಾಟನೆ ಆದೇಶವನ್ನು ಹಿಂಪಡೆಯಲು ಬಲ್ಯ ಬೂತ್ ಪದಾಧಿಕಾರಿಗಳಿಂದ ಮನವಿ

0

ಕಡಬ: ಇತ್ತೀಚೆಗೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಕೆಲಸ ಮಾಡಿ ಪಕ್ಷ ವಿರೋಧಿ ಚಟುವಟಿಕೆ ಮಾಡಲಾಗಿದೆ ಎನ್ನುವ ಆರೋಪದಲ್ಲಿ 17 ಜನ ಕಾಂಗ್ರೆಸ್ ಮುಖಂಡರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎನ್ನುವ ಮಾಹಿತಿಯಿದ್ದು ಈ ಪೈಕಿ ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ಸದಸ್ಯ ಸುಧೀರ್ ದೇವಾಡಿಗ ಅವರ ಹೆಸರೂ ಉಲ್ಲೇಖವಾಗಿದೆ. ಇವರನ್ನು ಉಚ್ಛಾಟನೆ ಮಾಡುವುದಿದ್ದರೆ ನಮ್ಮನ್ನೂ ಪಕ್ಷದಿಂದ ಹೊರ ಹಾಕಿ ಎಂದು ಕಾಂಗ್ರೆಸ್ ಬಲ್ಯ ಬೂತ್ ಸಮಿತಿಯ ಮಾಜಿ ಅಧ್ಯಕ್ಷ ಆನಂದ ಅವರು ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಧೀರ್ ಅವರ ರಾಜಕೀಯ ಬೆಳವಣಿಗೆಯನ್ನು ಸಹಿಸದ ಕೆಲವು ಕಾಂಗ್ರೆಸ್ ಮುಖಂಡರ ಷಡ್ಯಂತರದಿಂದ ಸುಧೀರ್ ದೇವಾಡಿಗರನ್ನು ಉಚ್ಚಾಟಿಸಲು ಶಿಫಾರಸ್ಸು ಮಾಡಲಾಗಿದೆ. ಇದು ತೀರಾ ಅನ್ಯಾಯ ಎಂದರು. ಸುಧೀರ್ ದೇವಾಡಿಗ ಕಳೆದ ಹದಿನೈದು ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯರಾಗಿ ಹಾಗೂ ಪ್ರಾಮಾಣಿಕವಾಗಿ ದುಡಿಯುತ್ತಾ ಬಂದು ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದ್ದಾರೆ. ಒಂದು ಕಾಲದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಲ್ಲದ ನಮ್ಮ ಬೂತ್‌ನಲ್ಲಿ ಪಕ್ಷ ಸಂಘಟನೆ ಮಾಡಿರುವ ಸುಧೀರ್ ದೇವಾಡಿಗ ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ವಾರ್ಡ್‌ನ ನಾಲ್ಕು ಸದಸ್ಯರನ್ನು ಪಕ್ಷದಿಂದ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮಾತ್ರವಲ್ಲ ಸುಳ್ಯ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಕಡಬ ಯುವ ಕಾಂಗ್ರೆಸ್ ಉಸ್ತುವಾರಿಯಾಗಿ, ಮೆಸ್ಕಾಂ ಆಲಂಕಾರು ವಲಯ ಸಲಹಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇಂತಹ ಜನನಾಯಕನನ್ನು ಉಚ್ಛಾಟನೆ ಮಾಡಿರುವುದು ಖಂಡನೀಯ ಎಂದರು.

ಕಳೆದ ವಿಧಾನ ಸಭಾ ಚುನಾವಣಾ ಸಂದರ್ಭದಲ್ಲಿ ಸುಧೀರ್ ದೇವಾಡಿಗ ಅವರು ಪಕ್ಷದ ವರಷ್ಠರ ಆದೇಶವನ್ನು ಪಾಲಿಸಿಕೊಂಡು ಅಧಿಕೃತ ಅಭ್ಯರ್ಥಿಯ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ನಮ್ಮ ಬೂತ್‌ನ ಕೆಲವು ಮತದಾರರು ಮತದಾನಕ್ಕೆ ಬರುವುದಿಲ್ಲ ಎಂದು ಮನೆಯಲ್ಲೇ ಕುಳಿತಿದ್ದಾಗ ಅವರನ್ನು ಮನವೊಲಿಸಿ ಮತದಾನ ಮಾಡಿಸಿದ್ದಾರೆ ಈ ಬಗ್ಗೆ ವಿಡಿಯೋ ದಾಖಲೆ ಕೂಡಾ ಇದೆ. ಈ ಎಲ್ಲಾ ವಿಚಾರ ಗೊತ್ತಿದ್ದರೂ ಕೆಲವು ನಾಯಕರ ಷಡ್ಯಂತರಕ್ಕೆ ಉಚ್ಛಾಟನೆಯ ಶಿಕ್ಷೆ ನೀಡಲಾಗಿದೆ. ಕೆ.ಪಿ.ಸಿ.ಸಿ ವತಿಯಿಂದ ತೆಗೆದುಕೊಂಡ ನಿರ್ಧಾರವನ್ನು ಮರುಪರಿಶೀಲನೆ ಮಾಡಬೇಕು, ಬೂತ್ ಮಟ್ಟದಿಂದ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಆನಂದ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ನ ಬಲ್ಯ ಬೂತ್ ಅಧ್ಯಕ್ಷ ತನಿಯ ಸಂಪಡ್ಕ, ಸದಸ್ಯ ಕರೀಂ ಕೆ, ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ಸಸ್ಯರಾದ ಮೋಹಿನಿ ಹಾಗೂ ಸುನಂದ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here