ಗ್ರಾ.ಪಂ.ಗಳಿಗೆ 2ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ನಿಗದಿ

0

ಪುತ್ತೂರು: ಸ್ಥಳೀಯ ಸರಕಾರ ಎಂದೇ ಕರೆಯಲ್ಪಡುವ ಗ್ರಾಮ ಪಂಚಾಯತ್‌ಗಳ ಹಾಲಿ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರದ ಅವಧಿ ಇದೇ ಆಗಸ್ಟ್‌ನಲ್ಲಿ ಮುಕ್ತಾಯಗೊಳ್ಳಲಿದ್ದು ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮೀಸಲಾತಿ ನಿಗದಿ ಪ್ರಕ್ರಿಯೆ ಜೂ.16ರಂದು ನಡೆಯಿತು. ಪುತ್ತೂರು ತಾಲೂಕಿನ 22 ಗ್ರಾಮ ಪಂಚಾಯತ್‌ಗಳಿಗೆ ಮೀಸಲಾತಿ ಪ್ರಕ್ರಿಯೆ ದ.ಕ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್.ಅವರ ನೇತೃತ್ವದಲ್ಲಿ ಪುತ್ತೂರು ಪುರಭವನದಲ್ಲಿ ನಡೆದಿದೆ. ಮಹಿಳೆ ಮತ್ತು ಪುರುಷ ಸದಸ್ಯರಿಗೆ ತಲಾ ಶೇ.50ರಂತೆ ಸಮಾನ ಮೀಸಲಾತಿ ನಿಗದಿಪಡಿಸಲಾಗಿದೆ. 22 ಗ್ರಾ.ಪಂ.ಗಳಲ್ಲಿ ತಲಾ 11 ಗ್ರಾಮ ಪಂಚಾಯತ್‌ಗಳಲ್ಲಿ ಪುರುಷ ಮತ್ತು ಮಹಿಳಾ ಸದಸ್ಯರಿಗೆ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಲು ಅವಕಾಶ ಕಲ್ಪಿಸಲಾಗಿದೆ.
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್.ಕೆ., ಸಹಾಯಕ ಕಮಿಷನರ್ ಗಿರೀಶ್‌ನಂದನ್, ತಹಸೀಲ್ದಾರ್ ಶಿವಶಂಕರ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅವರ ಉಪಸ್ಥಿತಿಯಲ್ಲಿ ಮೀಸಲಾತಿ ನಿಗದಿ ಪ್ರಕ್ರಿಯೆ ನಡೆಯಿತು.

ರಾಜ್ಯ ಚುನಾವಣಾ ಆಯೋಗದ ಸೂಚನೆಯಂತೆ ಮೀಸಲಾತಿ ಆಯ್ಕೆ: ಮೀಸಲಾತಿ ನಿಗದಿ ಪ್ರಕ್ರಿಯೆ ಆರಂಭದ ಮೊದಲು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್.ಅವರು ಮಾತನಾಡಿ ಮೀಸಲಾತಿಯನ್ನು ನಿಗದಿ ಮಾಡುವ ಸಂದರ್ಭದಲ್ಲಿ ರಾಜ್ಯ ಚುನಾವಣಾ ಆಯೋಗದ ಸೂಚನೆಯಂತೆ ಅನುಕ್ರಮವಾಗಿ ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ ವರ್ಗ ಎ, ಹಿಂದುಳಿದ ವರ್ಗ ಬಿ ಮತ್ತು ಸಾಮಾನ್ಯ ವರ್ಗದವರಿಗೆ ಮೀಸಲಾತಿ ನಿಗದಿ ಪಡಿಸಲಾಗುತ್ತದೆ. ಯಾವ ಗ್ರಾ.ಪಂ.ನಲ್ಲಿ ಅತೀ ಹೆಚ್ಚು ಅನುಸೂಚಿತ ಜಾತಿ ಮತ್ತು ಪಂಗಡದವರಿರುವಲ್ಲಿ ಹಾಗೂ ಮಹಿಳೆಯರು ಹೆಚ್ಚಿಗೆ ಇರುವ ಗ್ರಾ.ಪಂಗಳಲ್ಲಿನ ಸ್ಥಾನಗಳನ್ನು ಮೀಸಲಾತಿ ಮಾಡುವ ಪ್ರಕ್ರಿಯೆ. ಅದೇ ರೀತಿ ಸಾಮಾನ್ಯ ವರ್ಗದಲ್ಲೂ ಯಾವ ಗ್ರಾ.ಪಂನಲ್ಲಿ ಮಹಿಳೆಯರು ಹೆಚ್ಚಿದ್ದಾರೋ ಅಲ್ಲಿ ಮಹಿಳೆಯರಿಗೆ ಮೀಸಲಾತಿ ಇರುತ್ತದೆ ಎಂದು ಮಾಹಿತಿ ನೀಡಿದರು. ವಿವಿಧ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ಮೀಸಲಾತಿ ನಿಗದಿ ಪ್ರಕ್ರಿಯೆ ನಡೆಯಿತು. ತಾಲೂಕಿನ 22 ಗ್ರಾಮ ಪಂಚಾಯತ್‌ಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ನಿಗದಿಯಾಗಿರುವ ಮೀಸಲಾತಿ ವಿವರ ಇಂತಿದೆ.

ಕಬಕ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಮಹಿಳೆಗೆ: ಕಬಕ ಗ್ರಾ.ಪಂ.ಗೆ ಅಧ್ಯಕ್ಷ, ಉಪಾಧ್ಯಕ್ಷ ಎರಡೂ ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಅಧ್ಯಕ್ಷ ಸ್ಥಾನಕ್ಕೆ ಪ.ಜಾತಿ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬಿ ಮಹಿಳೆ ಮೀಸಲು ನಿಗದಿಯಾಗಿದೆ. ಪ್ರಸ್ತುತ ಮೊದಲ ಅವಧಿಯಲ್ಲಿ ಸಾಮಾನ್ಯ ಮೀಸಲಾತಿಯಲ್ಲಿ ವಿನಯ ಕಲ್ಲೇಗ ಅಧ್ಯಕ್ಷರಾಗಿ ಹಾಗೂ ಸಾಮಾನ್ಯ ಮೀಸಲಾತಿಯಲ್ಲಿ ರುಕ್ಮಯ್ಯ ಗೌಡ ಪೋಳ್ಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೊಡಿಪ್ಪಾಡಿ ಗ್ರಾ.ಪಂ ಸಾಮಾನ್ಯ, ಎಸ್ಸಿ: ಕೊಡಿಪ್ಪಾಡಿ ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪ.ಜಾತಿ ಮೀಸಲು ನಿಗದಿಯಾಗಿದೆ. ಇಲ್ಲಿ ಮೊದಲ ಅವಧಿಗೆ ಪ.ಜಾತಿ ಮೀಸಲಾತಿಯಲ್ಲಿ ರೇಖಾ ಅಧ್ಯಕ್ಷರಾಗಿ ಹಾಗೂ ಹಿಂದುಳಿದ ವರ್ಗ ಎ ಮಹಿಳಾ ಮೀಸಲಾತಿಯಲ್ಲಿ ಸುಮಿತ್ರ ಎಂ.ಉಪಾಧ್ಯಕ್ಷರಾಗಿ ಆಯ್ಕೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬನ್ನೂರು ಗ್ರಾ.ಪಂ: ಎಸ್‌ಟಿ ಮಹಿಳೆ, ಹಿಂ.ವರ್ಗ ಎ: ಬನ್ನೂರು ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮೀಸಲಾಗಿದೆ. ಮೊದಲ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲಾಗಿದ್ದು ಜಯ ಏ. ಅಧ್ಯಕ್ಷರಾಗಿ ಹಾಗೂ ಪ.ಜಾತಿ ಮಹಿಳೆ ಮೀಸಲಾತಿಯಲ್ಲಿ ಗೀತಾ ಕೊಡಂಗೆ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೋಡಿಂಬಾಡಿ ಗ್ರಾ.ಪಂ. ಸಾಮಾನ್ಯ ಮಹಿಳೆ, ಹಿಂ.ವರ್ಗ ಎ: ಕೋಡಿಂಬಾಡಿ ಗ್ರಾ.ಪಂ.ನ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಮೀಸಲು ನಿಗದಿಯಾಗಿದೆ. ಇಲ್ಲಿ ಮೊದಲ ಅವಽಗೆ ಹಿಂದುಳಿದ ವರ್ಗ ಎ ಮೀಸಲಾತಿಯಲ್ಲಿ ರಾಮಚಂದ್ರ ಪೂಜಾರಿ ಅಧ್ಯಕ್ಷರಾಗಿ ಹಾಗೂ ಸಾಮಾನ್ಯ ಮಹಿಳಾ ಮೀಸಲಾತಿಯಲ್ಲಿ ಉಷಾಲಕ್ಷ್ಮಣ ಪೂಜಾರಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

34 ನೆಕ್ಕಿಲಾಡಿ ಗ್ರಾ.ಪಂ. ಸಾಮಾನ್ಯ ಮಹಿಳೆ, ಸಾಮಾನ್ಯ: 34 ನೆಕ್ಕಿಲಾಡಿ ಗ್ರಾ.ಪಂನಲ್ಲಿ ಎರಡೂ ಸ್ಥಾನ ಸಾಮಾನ್ಯ ವರ್ಗದ ಪಾಲಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲು ನಿಗದಿಯಾಗಿದೆ.ಇಲ್ಲಿ ಮೊದಲ ಅವಧಿಗೆ ಹಿಂದುಳಿದ ವರ್ಗ ಎ. ಮೀಸಲಾತಿಯಲ್ಲಿ ಪ್ರಶಾಂತ್ ಎನ್ ಅಧ್ಯಕ್ಷರಾಗಿ ಹಾಗೂ ಸಾಮಾನ್ಯ ಮಹಿಳಾ ಮೀಸಲಾತಿಯಲ್ಲಿ ಸ್ವಪ್ನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಉಪ್ಪಿನಂಗಡಿ ಗ್ರಾ.ಪಂ. ಎಸ್‌ಸಿ, ಸಾಮಾನ್ಯ ಮಹಿಳೆ: ಉಪ್ಪಿನಂಗಡಿ ಗ್ರಾ.ಪಂನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಆಯ್ಕೆಯಾಗಿದೆ.ಇಲ್ಲಿ ಮೊದಲ ಅವಧಿಗೆ ಸಾಮಾನ್ಯ ಮಹಿಳಾ ಮೀಸಲಾತಿಯಲ್ಲಿ ಉಷಾ ಮುಳಿಯ ಅಧ್ಯಕ್ಷರಾಗಿ ಹಾಗೂ ಸಾಮಾನ್ಯ ಮೀಸಲಾತಿಯಲ್ಲಿ ವಿನಾಯಕ ಪೈ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಬಜತ್ತೂರು ಗ್ರಾ.ಪಂ. ಸಾಮಾನ್ಯ, ಹಿಂ.ವರ್ಗ ಎ ಮಹಿಳೆ: ಬಜತ್ತೂರು ಗ್ರಾ.ಪಂನಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಮಹಿಳೆ ಮೀಸಲು ನಿಗದಿಯಾಗಿದೆ.ಇಲ್ಲಿ ಮೊದಲ ಅವಧಿಗೆ ಹಿಂದುಳಿದ ವರ್ಗ ಎ ಮಹಿಳಾ ಮೀಸಲಾತಿಯಲ್ಲಿ ಅಧ್ಯಕ್ಷರಾಗಿ ಪ್ರೇಮ ಬಿ. ಹಾಗೂ ಹಿಂದುಳಿದ ವರ್ಗ ಬಿ. ಮಹಿಳಾ ಮೀಸಲಾತಿಯಲ್ಲಿ ಸ್ಮಿತಾ ಪಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಹಿರೇಬಂಡಾಡಿ ಗ್ರಾ.ಪಂ. ಸಾಮಾನ್ಯ, ಸಾ.ಮಹಿಳೆ: ಹಿರೇಬಂಡಾಡಿ ಗ್ರಾ.ಪಂನಲ್ಲಿ ಎರಡೂ ಸ್ಥಾನಗಳು ಸಾಮಾನ್ಯ ಮೀಸಲು ವರ್ಗಕ್ಕೆ ನಿಗದಿಯಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಇಲ್ಲಿ ಮೊದಲ ಅವಧಿಗೆ ಸಾಮಾನ್ಯ ಮಹಿಳಾ ಮೀಸಲಾತಿಯಲ್ಲಿ ಚಂದ್ರಾವತಿ ಅಧ್ಯಕ್ಷರಾಗಿ ಹಾಗೂ ಪರಿಶಿಷ್ಟ ಪಂಗಡ ಮೀಸಲಾತಿಯಲ್ಲಿ ಭವಾನಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ನರಿಮೊಗರು ಗ್ರಾ.ಪಂ. ಹಿಂ.ವರ್ಗ ಎ ಮಹಿಳೆ, ಸಾಮಾನ್ಯ: ನರಿಮೊಗರು ಗ್ರಾ.ಪಂನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲು ನಿಗದಿಯಾಗಿದೆ.ಇಲ್ಲಿ ಮೊದಲ ಅವಧಿಗೆ ಪ.ಜಾತಿ ಮಹಿಳಾ ಮೀಸಲಾತಿಯಲ್ಲಿ ವಿದ್ಯಾ ಎ ಅಧ್ಯಕ್ಷರಾಗಿ ಹಾಗೂ ಹಿಂದುಳಿದ ವರ್ಗ ಎ. ಮೀಸಲಾತಿಯಲ್ಲಿ ಸುಧಾಕರ ಕುಲಾಲ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಬಲ್ನಾಡು ಗ್ರಾ.ಪಂ. ಸಾ.ಮಹಿಳೆ, ಸಾಮಾನ್ಯ: ಬಲ್ನಾಡು ಗ್ರಾ.ಪಂನಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಅಧ್ಯಕ್ಷತೆಗೆ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ನಿಗದಿಯಾಗಿದೆ. ಮೊದಲ ಅವಧಿಗೆ ಸಾಮಾನ್ಯ ಮೀಸಲಾತಿಯಲ್ಲಿ ಇಂದಿರಾ ಎಸ್ ರೈ ಅಧ್ಯಕ್ಷರಾಗಿ ಹಾಗೂ ಸಾಮಾನ್ಯ ಮಹಿಳಾ ಮೀಸಲಾತಿಯಲ್ಲಿ ಪರಮೇಶ್ವರಿ ಭಟ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಆರ್ಯಾಪು ಗ್ರಾ.ಪಂ. ಹಿಂ.ವರ್ಗ ಎ ಮಹಿಳೆ, ಎಸ್ಟಿ: ಆರ್ಯಾಪು ಗ್ರಾ.ಪಂ.ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮೀಸಲಾಗಿದೆ. ಮೊದಲ ಅವಧಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡ ಮೀಸಲಾತಿಯಲ್ಲಿ ಸರಸ್ವತಿ ಕೆ. ಹಾಗೂ ಸಾಮಾನ್ಯ ಮಹಿಳಾ ಮೀಸಲಾತಿಯಲ್ಲಿ ಉಪಾಧ್ಯಕ್ಷರಾಗಿ ಪೂರ್ಣಿಮಾ ರೈ ಆಯ್ಕೆಯಾಗಿದ್ದರು.

ಮುಂಡೂರು ಗ್ರಾ.ಪಂ. ಹಿಂ.ವರ್ಗ ಎ, ಎಸ್ಟಿ ಮಹಿಳೆ: ಮುಂಡೂರು ಗ್ರಾ.ಪಂ.ಗೆ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡ ಮಹಿಳೆ ಮೀಸಲು ನಿಗದಿಯಾಗಿದೆ. ಮೊದಲ ಅವಧಿಗೆ ಹಿಂದುಳಿದ ವರ್ಗ ಬಿ ಮಹಿಳಾ ಮೀಸಲಾತಿಯಲ್ಲಿ ಪುಷ್ಪಾ ಎನ್ ಅಧ್ಯಕ್ಷರಾಗಿ, ಪ.ಜಾತಿ ಮಹಿಳಾ ಮೀಸಲಾತಿಯಲ್ಲಿ ಪ್ರೇಮಾ ಎಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಕೊಳ್ತಿಗೆ ಗ್ರಾ.ಪಂ. ಎಸ್ಸಿ ಮಹಿಳೆ, ಹಿಂ.ವರ್ಗ ಎ: ಕೊಳ್ತಿಗೆ ಗ್ರಾ.ಪಂನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಮೀಸಲು ನಿಗದಿಯಾಗಿದೆ.ಮೊದಲ ಅವಧಿಯಲ್ಲಿ ಇಲ್ಲಿ ಸಾಮಾನ್ಯ ಮೀಸಲಾತಿಯಲ್ಲಿ ಶ್ಯಾಮಸುಂದರ ರೈ ಅಧ್ಯಕ್ಷರಾಗಿ, ಪ.ಪಂಗಡ ಮಹಿಳಾ ಮೀಸಲಾತಿಯಲ್ಲಿ ನಾಗವೇಣಿ ಕೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಕೆದಂಬಾಡಿ ಗ್ರಾ.ಪಂ. ಎಸ್‌ಟಿ, ಸಾ.ಮಹಿಳೆ: ಕೆದಂಬಾಡಿ ಗ್ರಾ.ಪಂ.ನ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲು ನಿಗದಿಯಾಗಿದೆ.ಮೊದಲ ಅವಧಿಗೆ ಸಾಮಾನ್ಯ ಮೀಸಲಾತಿಯಲ್ಲಿ ಕೆ.ಬಿ.ರತನ್ ರೈ ಅಧ್ಯಕ್ಷರಾಗಿ ಹಾಗೂ ಸಾಮಾನ್ಯ ಮೀಸಲಾತಿಯಲ್ಲಿ ಭಾಸ್ಕರ ರೈ ಮಿತ್ರಂಪಾಡಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಕೆಯ್ಯೂರು ಗ್ರಾ.ಪಂ. ಸಾಮಾನ್ಯ, ಹಿಂ.ವರ್ಗ ಎ ಮಹಿಳೆ: ಕೆಯ್ಯೂರು ಗ್ರಾ.ಪಂ.ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಮಹಿಳೆ ಮೀಸಲು ನಿಗದಿಯಾಗಿದೆ.ಇಲ್ಲಿ ಮೊದಲ ಅವಧಿಗೆ ಹಿಂದುಳಿದ ವರ್ಗ ಎ ಮಹಿಳಾ ಮೀಸಲಾತಿಯಲ್ಲಿ ಜಯಂತಿ ಭಂಡಾರಿ ಅಧ್ಯಕ್ಷರಾಗಿ ಹಾಗೂ ಪ.ಜಾತಿ ಮೀಸಲಾತಿಯಲ್ಲಿ ಗಿರಿಜಾ ಕೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಒಳಮೊಗ್ರು ಗ್ರಾ.ಪಂ. ಸಾ.ಮಹಿಳೆ, ಸಾಮಾನ್ಯ: ಒಳಮೊಗ್ರು ಗ್ರಾ.ಪಂ.ನಲ್ಲಿ ಸಾಮಾನ್ಯ ವರ್ಗದವರಿಗೆ ಅಧ್ಯಕ್ಷ, ಉಪಾಧ್ಯಕ್ಷತೆ ಮೀಸಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲು ನಿಗದಿಯಾಗಿದೆ. ಇಲ್ಲಿ ಮೊದಲ ಅವಧಿಗೆ ಹಿಂದುಳಿದ ವರ್ಗ ಎ. ಮೀಸಲಾತಿಯಲ್ಲಿ ತ್ರಿವೇಣಿ ಪಲ್ಲತ್ತಾರು ಅಧ್ಯಕ್ಷರಾಗಿ ಹಾಗೂ ಸಾಮಾನ್ಯ ಮಹಿಳಾ ಮೀಸಲಾತಿಯಲ್ಲಿ ಸುಂದರಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಬೆಟ್ಟಂಪಾಡಿ ಗ್ರಾ.ಪಂ. ಹಿಂ.ವರ್ಗ ಬಿ ಮಹಿಳೆ, ಸಾಮಾನ್ಯ: ಬೆಟ್ಟಂಪಾಡಿ ಗ್ರಾ.ಪಂನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬಿ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲು ನಿಗದಿಯಾಗಿದೆ.ಇಲ್ಲಿ ಮೊದಲ ಅವಧಿಗೆ ಸಾಮಾನ್ಯ ಮಹಿಳೆ ಮೀಸಲಾತಿಯಲ್ಲಿ ಅಧ್ಯಕ್ಷರಾಗಿ ಪವಿತ್ರ, ಸಾಮಾನ್ಯ ಮೀಸಲಾತಿಯಲ್ಲಿ ವಿನೋದ್ ಕುಮಾರ್ ರೈ ಗುತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಪಾಣಾಜೆ ಗ್ರಾ.ಪಂ. ಸಾಮಾನ್ಯ, ಸಾ.ಮಹಿಳೆ: ಪಾಣಾಜೆ ಗ್ರಾ.ಪಂ.ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲು ನಿಗದಿಯಾಗಿದೆ.ಇಲ್ಲಿ ಮೊದಲ ಅವಧಿಗೂ ಸಾಮಾನ್ಯ ವರ್ಗಕ್ಕೆ ಮೀಸಲಾತಿ ನಿಗದಿಯಾಗಿದ್ದು ಸಾಮಾನ್ಯ ಮಹಿಳಾ ಮೀಸಲಾತಿಯಲ್ಲಿ ಭಾರತಿ ಭಟ್ ಅಧ್ಯಕ್ಷರಾಗಿ ಹಾಗೂ ಸಾಮಾನ್ಯ ಮೀಸಲಾತಿಯಲ್ಲಿ ಅಬೂಬಕ್ಕರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ನಿಡ್ಪಳ್ಳಿ ಗ್ರಾ.ಪಂ. ಹಿಂ.ವರ್ಗ ಎ, ಎಸ್ಸಿ ಮಹಿಳೆ: ನಿಡ್ಪಳ್ಳಿ ಗ್ರಾ.ಪಂ.ನ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಮೀಸಲಾತಿ ನಿಗದಿಯಾಗಿದೆ. ಇಲ್ಲಿ ಮೊದಲ ಅವಧಿಗೆ ಪ.ಪಂಗಡ ಮಹಿಳಾ ಮೀಸಲಾತಿಯಲ್ಲಿ ಗೀತಾ ಡಿ.ಅಧ್ಯಕ್ಷರಾಗಿ, ಹಿಂದುಳಿದ ವರ್ಗ ಎ ಮೀಸಲಾತಿಯಲ್ಲಿ ವೆಂಕಟ್ರಮಣ ಬೋರ್ಕರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಅರಿಯಡ್ಕ ಗ್ರಾ.ಪಂ. ಸಾಮಾನ್ಯ, ಎಸ್ಸಿ ಮಹಿಳೆ: ಅರಿಯಡ್ಕ ಗ್ರಾ.ಪಂ.ನಲ್ಲಿ ಎರಡನೇ ಅವಽಗೆ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಮೀಸಲಾತಿ ನಿಗದಿಯಾಗಿದೆ. ಇಲ್ಲಿ ಮೊದಲ ಅವಧಿಯಲ್ಲಿ ಪ.ಜಾತಿ ಮಹಿಳಾ ಮೀಸಲಾತಿಯಲ್ಲಿ ಸೌಮ್ಯ ಬಾಲಸುಬ್ರಹ್ಮಣ್ಯ ಅಧ್ಯಕ್ಷರಾಗಿ ಹಾಗೂ ಹಿಂದುಳಿದ ವರ್ಗ ಎ ಮೀಸಲಾತಿಯಲ್ಲಿ ಸಂತೋಷ್ ಮಣಿಯಾಣಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಡಗನ್ನೂರು ಗ್ರಾ.ಪಂ. ಹಿಂ.ವರ್ಗ ಎ, ಸಾ.ಮಹಿಳೆ: ಬಡಗನ್ನೂರು ಗ್ರಾ.ಪಂ.ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲಾಗಿದೆ.ಇಲ್ಲಿ ಮೊದಲ ಅವಧಿಗೆ ಸಾಮಾನ್ಯ ಮಹಿಳಾ ಮೀಸಲಾತಿಯಲ್ಲಿ ಕೆ.ಶ್ರೀಮತಿ ಅಧ್ಯಕ್ಷರಾಗಿ ಹಾಗೂ ಸಾಮಾನ್ಯ ಮೀಸಲಾತಿಯಲ್ಲಿ ಎ.ಸಿ.ಸಂತೋಷ್ ಆಳ್ವ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ನೆಟ್ಟಣಿಗೆಮುಡ್ನೂರು ಗ್ರಾ.ಪಂ. ಸಾ.ಮಹಿಳೆ, ಸಾಮಾನ್ಯ: ನೆಟ್ಟಣಿಗೆಮುಡ್ನೂರು ಗ್ರಾ.ಪಂ.ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲು ನಿಗದಿಯಾಗಿದೆ.ಇಲ್ಲಿ ಮೊದಲ ಅವಧಿಗೆ ಸಾಮಾನ್ಯ ಮೀಸಲಾತಿಯಲ್ಲಿ ರಮೇಶ್ ರೈ ಎ.ಅಧ್ಯಕ್ಷರಾಗಿ, ಹಿಂದುಳಿದ ವರ್ಗ ಎ ಮಹಿಳಾ ಮೀಸಲಾತಿಯಲ್ಲಿ -ಝಿಯಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಸಾಫ್ಟ್‌ವೇರ್‌ನಲ್ಲಿ ಆಯ್ಕೆ ಪ್ರಕ್ರಿಯೆ :

ಮಿಸಲಾತಿ ಪ್ರಕ್ರಿಯೆ ರಾಜ್ಯ ಚುನಾವಣಾ ಆಯೋಗ ಸಿದ್ಧಪಡಿಸಿರುವ ಸಾಫ್ಟ್‌ವೇರ್‌ನಲ್ಲಿ ನಡೆದಿದೆ. 1993ನೇ ಇಸವಿಯಿಂದ 2023ರ ತನಕದ ಮೀಸಲಾತಿಯನ್ನು ರೊಟೇಷನ್ ಮಾದರಿಯಲ್ಲಿ ಸಾಫ್ಟ್‌ವೇರ್‌ನಲ್ಲಿ ಜೋಡಣೆ ಮಾಡಲಾಗಿದ್ದು, ಅದೇ ತಂತ್ರಜ್ಞಾನವನ್ನು ಬಳಸಿಕೊಂಡು ಸ್ವಯಂ ಚಾಲಿತವಾಗಿ ಮೀಸಲಾತಿಗೆ ಅರ್ಹವಾಗುವ ಪಂಚಾಯತ್‌ಗಳ ಆಯ್ಕೆ ನಡೆಯುತ್ತದೆ. ಬಳಿಕ ಲಾಟರಿ ಮೂಲಕ ಇದರಲ್ಲಿ ಆಯ್ಕೆ ಮಾಡಿ ಮೀಸಲಾತಿ ನಿಗದಿಯಾಗುತ್ತದ. ಈ ಪ್ರಕ್ರಿಯೆ ಯಾವ ರೀತಿ ಆಗುತ್ತದೆ ಎಂಬುದನ್ನು ಪುರಭವನದ ವೇದಿಕೆಯ ಅಕ್ಕಪಕ್ಕದಲ್ಲಿ ಅಳವಡಿಸಲಾದ ಎಲ್.ಸಿ.ಡಿ ಪ್ರೊಜೆಕ್ಟರ್ ಮೇಲೆ ನೀಡಲಾಗುತ್ತಿತ್ತು.

ಇಲ್ಲಿ ಮಹಿಳಾ ಮೀಸಲು.

ಕಬಕ,ಬನ್ನೂರು,ಕೋಡಿಂಬಾಡಿ, 34 ನೆಕ್ಕಿಲಾಡಿ, ನರಿಮೊಗ್ರು,ಬಲ್ನಾಡು, ಆರ್ಯಾಪು, ಕೊಳ್ತಿಗೆ,ಒಳಮೊಗ್ರು,ಬೆಟ್ಟಂಪಾಡಿ, ನೆಟ್ಟಣಿಗೆಮುಡ್ನೂರು ಗ್ರಾಮ ಪಂಚಾಯತ್‌ಗಳಿಗೆ ಅಧ್ಯಕ್ಷ ಸ್ಥಾನ ಮಹಿಳಾ ಮೀಸಲಾಗಿದೆ. ಕಬಕ,ಉಪ್ಪಿನಂಗಡಿ, ಬಜತ್ತೂರು, ಹಿರೇಬಂಡಾಡಿ, ಮುಂಡೂರು,ಕೆದಂಬಾಡಿ, ಕೆಯ್ಯೂರು, ಪಾಣಾಜೆ, ನಿಡ್ಪಳ್ಳಿ, ಅರಿಯಡ್ಕ, ಬಡಗನ್ನೂರು ಗ್ರಾಮ ಪಂಚಾಯತ್‌ಗಳಿಗೆ ಉಪಾಧ್ಯಕ್ಷ ಸ್ಥಾನ ಮಹಿಳಾ ಮೀಸಲಾಗಿದೆ. ಈ ಪೈಕಿ ಕಬಕ ಗ್ರಾಮ ಪಂಚಾಯತ್‌ನಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಎರಡೂ ಸ್ಥಾನಗಳನ್ನು ಮಹಿಳಾ ಸದಸ್ಯರಿಗೆ ಮೀಸಲಿರಿಸಲಾಗಿದೆ.

ಹೀಗೆ ನಡೆಯಿತು ಮೀಸಲಾತಿ ನಿಗದಿ ಪ್ರಕ್ರಿಯೆ

ಆರಂಭದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ ಪ್ರಕ್ರಿಯೆ ನಡೆದು ಬಳಿಕ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ ಪ್ರಕ್ರಿಯೆ ನಡೆಯಿತು. ಆರಂಭದಲ್ಲಿ ಪರಿಶಿಷ್ಟ ಜಾತಿ ಮೀಸಲು ನಿಗದಿ ಪ್ರಕ್ರಿಯೆ ನಡೆಯಿತು. ಎಸ್.ಸಿ ಸ್ಥಾನಕ್ಕೆ ಉಪ್ಪಿನಂಗಡಿ ಮತ್ತು ಕಬಕ ಗ್ರಾಮ ಪಂಚಾಯತ್‌ಗಳು ನೇರವಾಗಿ ಆಯ್ಕೆಯಾದವು. ಆದರೆ ಕೊಳ್ತಿಗೆ ಮತ್ತು ಮುಂಡೂರು ಗ್ರಾ.ಪಂ.ಗಳನ್ನು ಲಾಟರಿ ಮೂಲಕ ಆಯ್ಕೆ ಮಾಡುವಂತೆ ಸಾಫ್ಟ್‌ವೇರ್‌ನಲ್ಲಿ ಡಿಸ್ಪ್ಲೇ ಆಗಿತ್ತು. ಅದರಂತೆ ಎಸ್ಸಿ ಮೀಸಲಾತಿಗಾಗಿ ಚೀಟಿ ಎತ್ತುವ ಲಾಟರಿ ಪ್ರಕ್ರಿಯೆ ನಡೆಯಿತು. ಲಾಟರಿಯಲ್ಲಿ ಕೊಳ್ತಿಗೆ ಆಯ್ಕೆಯಾಗಿತ್ತು. ಎಸ್.ಸಿ. ಮೀಸಲಾತಿಗೆ ಆಯ್ಕೆಗೊಂಡ ಮೂರು ಗ್ರಾ.ಪಂ.ಗಳ ಪೈಕಿ 2 ಗ್ರಾ.ಪಂ.ಗಳಿಗೆ ಮಹಿಳಾ ಮೀಸಲಾತಿ ನಿಗದಿಗೆ ಸಾಫ್ಟ್‌ವೇರ್ ಸೂಚಿಸಿತ್ತು. ಆಗ ಕೊಳ್ತಿಗೆ ಮತ್ತು ಕಬಕ ಎಸ್.ಸಿ. ಮಹಿಳೆ ಮೀಸಲಾತಿಗೆ ಆಯ್ಕೆಯಾಯಿತು.

ಎಸ್.ಟಿ. ಮೀಸಲು 2 ಸ್ಥಾನಗಳಿಗೆ 6 ಪಂಚಾಯತ್‌ಗಳಿತ್ತು. ಅದರಂತೆ ಕೆಯ್ಯೂರು, ಕೆದಂಬಾಡಿ, ಬಜತ್ತೂರು, ಕೋಡಿಂಬಾಡಿ, ಬನ್ನೂರು, ಕೊಡಿಪ್ಪಾಡಿ ಪಂಚಾಯತ್‌ಗಳಲ್ಲಿ 2 ಪಂಚಾಯತ್‌ಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಬೇಕಾಗಿದ್ದು ಬನ್ನೂರು ಮತ್ತು ಕೆದಂಬಾಡಿ ಆಯ್ಕೆಯಾಗಿತ್ತು.ಇವೆರಡರಲ್ಲಿ ಒಂದು ಸ್ಥಾನಕ್ಕೆ ಮಹಿಳಾ ಮೀಸಲಾತಿಗಾಗಿ ಲಾಟರಿ ಎತ್ತಲಾಯಿತು.ಇದರಲ್ಲಿ ಬನ್ನೂರು ಅಧ್ಯಕ್ಷತೆ ಎಸ್.ಟಿ ಮಹಿಳೆಗೆ ಮೀಸಲಾಯಿತು.

ಹಿಂದುಳಿದ ವರ್ಗ ಎ ವಿಭಾಗದ ಮೀಸಲಾತಿಗೆ ನರಿಮೊಗರು, ಆರ್ಯಾಪು, ಮುಂಡೂರು, ಬಡಗನ್ನೂರು, ನಿಡ್ಪಳ್ಳಿ ಗ್ರಾ.ಪಂ.ಗಳು ಬಂದು ಇದರಲ್ಲಿ ಎರಡು ಸ್ಥಾನಗಳಲ್ಲಿ ಮಹಿಳೆಗೆ ಮೀಸಲಿಡಬೇಕಾಗಿತ್ತು.ಲಾಟರಿ ಮೂಲಕ ನರಿಮೊಗರು ಮತ್ತು ಆರ್ಯಾಪು ಗ್ರಾ.ಪಂ.ಅಧ್ಯಕ್ಷತೆಗೆ ಹಿಂದುಳಿದ ವರ್ಗ ಎ ಮಹಿಳೆ ಮೀಸಲು ನಿಗದಿಯಾಯಿತು. ಇದರಲ್ಲೂ ನರಿಮೊಗರು ಮತ್ತು ಆರ್ಯಾಪು ಅಧ್ಯಕ್ಷ ಸ್ಥಾನಕ್ಕೆ ನೇರವಾಗಿ ಆಯ್ಕೆಯಾಗಿತ್ತು.

ಹಿಂದುಳಿದ ವರ್ಗ ಬಿಯಲ್ಲಿ ಮಹಿಳೆಗೆ ಒಂದು ಸ್ಥಾನಕ್ಕೆ ಕೆಯ್ಯೂರು, ಬಜತ್ತೂರು, ಬೆಟ್ಟಂಪಾಡಿ ಅರ್ಹತೆಯನ್ನು ಹೊಂದಿತ್ತು.ಈ ಮೂರಲ್ಲಿ ಒಂದನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಯಿತು. ಇದರಲ್ಲಿ ಬೆಟ್ಟಂಪಾಡಿ ಆಯ್ಕೆಗೊಂಡಿತ್ತು. ಉಳಿದ 11 ಪಂಚಾಯತ್‌ಗಳು ಸಾಮಾನ್ಯಕ್ಕೆ ಆಯ್ಕೆಗೊಂಡವು. ಅರಿಯಡ್ಕ, ನೆಟ್ಟಣಿಗೆಮುಡ್ನೂರು, ಕೆಯ್ಯೂರು, ಹಿರೇಬಂಡಾಡಿ, ಬಜತ್ತೂರು, ಒಳಮೊಗ್ರು, ಬಲ್ನಾಡು, 34 ನೆಕ್ಕಿಲಾಡಿ, ಪಾಣಾಜೆ, ಕೊಡಿಪ್ಪಾಡಿ ಸಾಮಾನ್ಯ ವರ್ಗ ಮೀಸಲಾತಿಗೆ ಆಯ್ಕೆಗೊಂಡು, ಇದರಲ್ಲಿ 5 ಮಹಿಳೆಗೆ ಮೀಸಲು ಪ್ರಕ್ರಿಯೆ ನಡೆಯಿತು.ಬಲ್ನಾಡು, 34 ನೆಕ್ಕಿಲಾಡಿ, ಕೋಡಿಂಬಾಡಿ, ನೆಟ್ಟಣಿಗೆಮುಡ್ನೂರು ಒಳಮೊಗ್ರು ಮಹಿಳಾ ಮೀಸಲಾತಿಗೆ ಆಯ್ಕೆಯಾದವು. ಅಧ್ಯಕ್ಷ ಸ್ಥಾನದ ಮೀಸಲಾತಿ ಬಳಿಕ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕ್ರಿಯೆ ಇದೇ ಮಾದರಿಯಲ್ಲಿ ನಡೆಯಿತು.

ಆರ‍್ಯಾಪು ಗ್ರಾ.ಪಂಗೆ ಸಾಮಾನ್ಯ ಯಾಕೆ ಬರುತ್ತಿಲ್ಲ: ಆರ್ಯಾಪು ಗ್ರಾ.ಪಂನಲ್ಲಿ ಸತತವಾಗಿ ಎಸ್.ಸಿ ಬರುತ್ತಿದೆ.ಅಲ್ಲಿ ನನ್ನ ಪ್ರಕಾರ ನೇರವಾಗಿ ಸಾಮಾನ್ಯ ಬರಬೇಕಾಗಿತ್ತು ಎಂದು ಸದಸ್ಯ ಬೂಡಿಯಾರ್ ಪುರುಷೋತ್ತಮ ರೈ ಪ್ರಸ್ತಾಪಿಸಿದರು. ಉತ್ತರಿಸಿದ ಜಿಲ್ಲಾಧಿಕಾರಿಯವರು ಯಾವುದೇ ಸರಕಾರದ ಆದೇಶ ಕರ್ನಾಟಕ ಚುನಾವಣಾ ಆಯೋಗದ ಆದೇಶದಂತೆ ಪ್ರಥಮವಾಗಿ ಅನುಸೂಚಿತ ಜಾತಿ, ಪಂಗಡ, ಹಿಂದುಗಳಿದ ವರ್ಗ ಎ, ಬಿ ಆದ ಬಳಿಕ ಕೊನೆಯದಾಗಿ ಸಾಮಾನ್ಯ ಬರುತ್ತದೆ. ಇದು ನಮ್ಮ ಮೀಸಲಾತಿ ಆಲ್ಲ. ರಾಜ್ಯ ಚುನಾವಣಾ ಆಯೋಗ ಮಾಡಿರುವುದು. ಇಲ್ಲಿನ ತನಕ ಅನುಸೂಚಿತ ಪಂಗಡ ಇತ್ತು. ಈಗ ಹಿಂದುಳಿದ ವರ್ಗ ಆ ಮತ್ತು ಎಸ್‌ಟಿಗೆ ಬಂದಿದೆ. ಮುಂದಿನ ದಿನ ಸಾಮಾನ್ಯ ಬರಬಹುದು ಎಂದರು. ಆಕ್ಷೇಪಿಸಿದ ಪುರುಷೋತ್ತಮ ರೈ ಅವರು, ನಮಗೆ ಇದರ ಮೇಲೆ ಅಪೀಲು ಮಾಡಬಹುದಲ್ಲ ಎಂದರು. ಅವಕಾಶ ಇದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಕೋಡಿಂಬಾಡಿಯಲ್ಲಿ ಈ ಬಾರಿಯೂ ಮಹಿಳೆ ಬಂದಿದೆ: ಕೋಡಿಂಬಾಡಿಯಲ್ಲಿ ಹಿಂದಿನ ಸಲ ಉಪಾಧ್ಯಕ್ಷತೆ ಮಹಿಳೆ ಮೀಸಲಾಗಿದ್ದು ಈ ಬಾರಿ ಅಧ್ಯಕ್ಷತೆಗೆ ಮಹಿಳೆ ಮೀಸಲಾತಿ ಬಂದಿದೆ ಎಂದು ಜಯಪ್ರಕಾಶ್ ಬದಿನಾರು ಪ್ರಸ್ತಾಪಿಸಿದರು. ಉತ್ತರಿಸಿದ ಜಿಲ್ಲಾಧಿಕಾರಿಯವರು ಕಳೆದ ಬಾರಿ ಅಧ್ಯಕ್ಷತೆ ಹಿಂದುಳಿದ ವರ್ಗ ಎ ಆಗಿತ್ತು. ಇವತ್ತು ಸಾಮಾನ್ಯ ಬಂದಿದೆ. ಇದು ಸಿಸ್ಟಮ್‌ನಲ್ಲಿ ಬಂದಿರುವುದು. ಅಲ್ಲಿ ಕ್ರಮವಾಗಿ, ಇಲ್ಲಿ ಮಹಿಳೆ ಬಂದಾಗ ಅನುಸೂಚಿತ ಜಾತಿ ಬಂದಾಗ ಮತ್ತೆ ಅಲ್ಲಿ ಅನುಸೂಚಿತ ಪಂಗಡ ಮಹಿಳೆ ಬರಬಾರದು ಎಂದು ಇಲ್ಲ. ಅನುಸೂಚಿತ ಪಂಗಡ ಒಂದು ವೇಳೆ ಮಹಿಳೆ ಇದ್ದರೆ ಹಿಂದುಳಿದ ವರ್ಗ ಮಹಿಳೆ ಎ ಬರಬಹುದು. ಹಿಂದುಳಿದ ವರ್ಗ ಎ ಬಳಿಕ ಹಿಂದುಳಿದ ವರ್ಗ ಎ ಬರಬಾರದು ಎಂದು ಇಲ್ಲ. ಈ ಹಿಂದೆ ಹಿಂದುಳಿದ ವರ್ಗ ಎ ಇತ್ತು. ಈಗ ಹಿಂದುಳಿದ ವರ್ಗ ಸಾಮಾನ್ಯ ಬಂದಿದೆ.1993ರಿಂದ ಇಲ್ಲಿನ ತನಕ ಯಾವ ಯಾವ ವರ್ಗದ ಮೀಸಲಾತಿ ಇರುತ್ತದೆ ಎಂದು ಅದನ್ನು ಅಪ್‌ಲೋಡ್ ಮಾಡಿ ರಾಜ್ಯ ಚುನಾವಣಾ ಆಯೋಗಕ್ಕೆ ಕಳುಹಿಸುತ್ತೇವೆ. ಅವರು ಸಹ ನಾವು ಅಪ್‌ಲೋಡ್ ಮಾಡಿರುವುದನ್ನು ಸರಿ ಇದೆಯೋ ಇಲ್ಲವೋ ಎಂದು ಅಲ್ಲಿರುವ ದಾಖಲೆಗಳನ್ನು ನೋಡುತ್ತಾರೆ. ಅದು ಅದ ಮೇಲೆ ಸಿಸ್ಟಮ್ ಮೂಲಕ ಆಗುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

LEAVE A REPLY

Please enter your comment!
Please enter your name here