ಮಂಗಳೂರು:ಕುಷ್ಠರೋಗ ದೇವರ ಶಾಪವಲ್ಲ ಹಾಗೂ ಅನುವಂಶಿಕವಾಗಿ ಬರುವ ರೋಗವೂ ಅಲ್ಲ, ಅದರ ವಿರುದ್ಧದ ಹೋರಾಟದಲ್ಲಿ ವೈದ್ಯಕೀಯವಾಗಿ ಗಮನಾರ್ಹ ಯಶಸ್ಸು ಸಾಧಿಸಿದ್ದರೂ ಸಹ ಸಾಮಾಜಿಕವಾಗಿ ಸಾಧಿಸಬೇಕಾದದ್ದು ಬಹಳಷ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್ ಕುಮಾರ್ ಅಭಿಪ್ರಾಯಪಟ್ಟರು.
ಜೂ.16ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ, 2023-24ನೇ ಸಾಲಿನ ಎಲ್‌ಸಿಡಿಸಿ ಕುಷ್ಠರೋಗ ವಿಶೇಷ ಸಮೀಕ್ಷೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕುಷ್ಠರೋಗದ ಬಗ್ಗೆ ಇರುವ ಸಾಮಾಜಿಕ ಸಮಸ್ಯೆಯನ್ನು ಬಗೆಹರಿಸದ ಹೊರತು ಕುಷ್ಠರೋಗ ಮುಕ್ತ ಭಾರತದ ದೃಷ್ಟಿಕೋನವನ್ನು ಸಾಧಿಸುವುದು ಕಷ್ಟಸಾಧ್ಯ, ಕಳೆದ ಮೂರು ದಶಕಗಳಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿದ್ದರೂ ಸಹ ಭಾರತ ವಿಶ್ವದ ಶೇ.59ರಷ್ಟು ಕುಷ್ಟರೋಗಿಗಳ ನೆಲೆಯಾಗಿದೆ ಎಂದ ಅವರು, ಜಿಲ್ಲೆಯಾದ್ಯಂತ ಜೂನ್ 19ರಿಂದ ಜುಲೈ 6ರವರೆಗೆ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಪ್ರಕರಣ ಪತ್ತೆ ಹಚ್ಚುವ ಸಲುವಾಗಿ ಆರೋಗ್ಯ ಇಲಾಖೆಯ ತಂಡಗಳು ಮನೆ-ಮನೆಗೆ ಭೇಟಿ ನೀಡಿ ರೋಗದ ಲಕ್ಷಣಗಳನ್ನು ಗುರುತಿಸಿ ಸ್ಪರ್ಶಜ್ಞಾನ, ನೋವು, ನವೆ ಇಲ್ಲದ ತಾಮ್ರ ಅಥವಾ ತಿಳಿ ಬಿಳುಪಾದ ಮಚ್ಚೆಗಳು ಕಂಡುಬಂದ ಪ್ರಕರಣಗಳನ್ನು ಗುರುತಿಸಿ, ಅವರಿಗೆ ಹೆಚ್ಚಿನ ಚಿಕಿತ್ಸೆಯ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ.ಸುದರ್ಶನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಎಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ಎಲ್ಲಾ ತಾಲೂಕು ಆರೋಗ್ಯಾಧಿಕಾರಿಗಳು ಭಾಗವಹಿಸಿದ್ದರು.