





ಜನರ ನಂಬಿಕೆಗೆ ಚ್ಯುತಿ ಬಾರದಂತೆ ಕೆಲಸ ನಿರ್ವಹಿಸುತ್ತಿದ್ದೇವೆ: ಮಂಜಪ್ಪ ಪಿ.


ಗ್ರಾಹಕರ ಭೇಟಿ ನಮಗೆ ಮತ್ತಷ್ಟು ಭಲ ನೀಡಿದೆ: ಕೀರ್ತನ್ ಕುಮಾರ್ ಎಂ.





ಮಂಜಪ್ಪರವರು ಸಂಸ್ಥೆಯನ್ನು ಯಶಸ್ವಿಯಾಗಿ ಕಟ್ಟಿದ್ದಾರೆ: ಶಿವನಾಥ ರೈ ಮೇಗಿನ ಗುತ್ತು
ಸಹಕಾರಿ ಈ ಭಾಗದ ಜನರ ನೆಚ್ಚಿನ ಸಂಸ್ಥೆಯಾಗಿ ಬೆಳೆದುನಿಂತಿದೆ: ಜನಾರ್ದನ ಎರ್ಕಡಿತ್ತಾಯ
ಸಂಸ್ಥೆಯ ಸೇವೆಯಲ್ಲಿ ನನಗೆ ಬಹಳ ಕುಶಿಯಿದೆ: ವೀಣಾ ಎನ್.ಬಿ.
ಗ್ರಾಹಕರನ್ನು ಒಟ್ಟುಗೂಡಿಸಿ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜನೆಯಾಗಿದೆ: ಹೇಮಂತ ಬಿ.ವಿ.

ಪುತ್ತೂರು: ಸಿಬ್ಬಂದಿಗಳು ಹಾಗೂ ಗ್ರಾಹಕರು ಜೊತೆಜೊತೆಯಾಗಿ ಸಾಗಿದಾಗ ಯಶಸ್ಸು ನಿಶ್ಚಿತ. ಗ್ರಾಹಕರ ಸಮ್ಮಿಲನ ಆಗಾಗ ನಡೆದಾಗ ಸಂಸ್ಥೆ ಬೆಳವಣಿಗೆ ಸಾಧ್ಯ. ಜನರ ನಂಬಿಕೆಗೆ ಚ್ಯುತಿ ಬಾರದಂತೆ ಕೆಲಸ ನಿರ್ವಹಿಸುತ್ತಿದ್ದೇವೆ. ಪ್ರಾಮಾಣಿಕ ಪ್ರಯತ್ನ ನಮ್ಮದಾದಾಗ ಯಾವುದೇ ಕೆಲಸ ಸುಲಲಿತವಾಗಿ ನಡೆಯಲು ಸಾಧ್ಯ. ನಿಮ್ಮೆಲ್ಲರ ಸಹಕಾರದಿಂದ ಇನ್ನಷ್ಟು ಶಾಖೆಗಳನ್ನು ತೆರೆಯುವ ಯೋಜನೆಗಳಿವೆ ಮುಂದಿನ ದಿನಗಳಲ್ಲಿ ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಲಾಗುವುದು ಎಂದು ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೋ ಆಪರೇಟೀವ್ ನ ಅಧ್ಯಕ್ಷರಾದ ಮಂಜಪ್ಪ ಪಿ.ರವರು ಹೇಳಿದರು.
ಅವರು ನ.8ರಂದು ಪುತ್ತೂರಿನ ಟೌನ್ ಬ್ಯಾಂಕ್ ಹಾಲ್ ನಲ್ಲಿ ನಡೆದ ಬೆಂಗಳೂರಿನ ಹೆಸರಘಟ್ಟ ಮುಖ್ಯರಸ್ತೆಯ ಹಾವನೂರು ಬಡಾವಣೆಯ ಸೌಂದರ್ಯ ಸೌಧದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿ, ಪುತ್ತೂರಿನ ಎಸ್.ಬಿ.ಬಿ. ಸೆಂಟರ್ ನಲ್ಲಿ ಶಾಖೆಯನ್ನು ಹೊಂದಿರುವ ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿ.ನ ಗ್ರಾಹಕರ ಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಬ್ಯಾಂಕಿಂಗ್ ಸೇವೆಗೆ ಬಹುದೊಡ್ಡ ಕೊಡುಗೆ ನೀಡಿದ ಜಿಲ್ಲೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆ. ಉತ್ತಮ ಯೋಚನೆಗಳ ಮೂಲಕ ಕೆಲಸ ಮಾಡುವ ಮನಸ್ಸು ನಮ್ಮದಾಗಬೇಕು. ಎಲ್ಲರೊಳಗೆ ಸಹಕಾರ ಭಾವನೆ ಮೂಡಬೇಕು. ಬ್ಯಾಂಕ್ ಗಳ ಬಗ್ಗೆ ಎಚ್ಚರಿಕೆ ಅಗತ್ಯ. ಗ್ರಾಹಕರು ಇಟ್ಟಿರುವ ನಂಬಿಕೆಗಳನ್ನು ಉಳಿಸಿ ಯಾವುದೇ ಚ್ಯುತಿಬಾರದ ರೀತಿಯಲ್ಲಿ ಸಂಸ್ಥೆಯನ್ನು ಬೆಳೆಸುವ ಪ್ರಯತ್ನ ಮಾಡುತ್ತಿದ್ದೇವೆ. ಸ್ವಾರ್ಥ ರಹಿತ ಸೇವೆ ನಮ್ಮದಾಗಬೇಕು. ಗ್ರಾಹಕರ ಉತ್ತೇಜನವನ್ನು ಉಳಿಸುವುದು ನಮ್ಮ ಧರ್ಮ. ಬ್ಯಾಂಕ್ ನ ಅಭಿವೃದ್ಧಿಯಲ್ಲಿ ಸಹಕರಿಸಿದ ಎಲ್ಲರಿಗೂ ನಾವುಗಳು ಆಭಾರಿಯಾಗಿದ್ದೇವೆ ಎಂದರು.

ಸಹಕಾರಿಯ ನಿರ್ದೇಶಕರಾದ ಕೀರ್ತನ್ ಕುಮಾರ್ ಎಂ. ರವರು ಮಾತನಾಡಿ ಕುಶಿಯ ದಿನ ಇದಾಗಿದೆ. ಎಂಟು ವರುಷದ ಹಿಂದೆ ಆರಂಭವಾಗಿರುವ ಸಂಸ್ಥೆ ಬಹಳಷ್ಟು ಬೆಳೆದು ನಿಂತಿದೆ ಎನ್ನಲು ತುಂಬಾ ಸಂತಸವಾಗುತ್ತಿದೆ. ಗ್ರಾಹಕರ ಭೇಟಿ ನಮಗೆ ಮತ್ತಷ್ಟು ಭಲ ನೀಡಿದೆ. ನಮ್ಮ ಸಮೂಹ ಸಂಸ್ಥೆಗಳ ಸಿಬ್ಬಂದಿಗಳ ಬೆಳವಣಿಗೆಗೆ ಸಹಕಾರ ನೀಡುವ ನಿಟ್ಟಿನಲ್ಲಿ ಈ ಒಂದು ಸಹಕಾರಿಯ ಹುಟ್ಟಾಗಿದೆ. ವ್ಯವಸ್ಥಿತವಾಗಿ ಉತ್ತಮ ರೀತಿಯಲ್ಲಿ ಸೇವೆ ನೀಡುತ್ತಿದ್ದೇವೆ ಎನ್ನುವ ಸಾರ್ಥಕತೆ ನಮಗಿದೆ.
ಈ ಭಾಗದ ಹಲವಾರು ಗ್ರಾಹಕರ ಸಹಕಾರವೇ ಸಹಕಾರಿ ಬೆಳವಣಿಗೆಗೆ ಪೂರಕ. ಗ್ರಾಹಕರೊಳಗಿನ ಭಾಂದವ್ಯವೇ ಸಹಕಾರಿ ಯಶಸ್ಸಿನ ಗುಟ್ಟು. ನಮ್ಮ ಮೇಲೆ ನಂಬಿಕೆ ಇಟ್ಟು ನಮಗೆ ನಿರಂತರ ಸಹಕಾರ ನೀಡುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು.

ಧಾರ್ಮಿಕ ಪರಿಷತ್ ನ ಜಿಲ್ಲಾ ಸದಸ್ಯ ಶಿವನಾಥ ರೈ ಮೇಗಿನಗುತ್ತುರವರು ಮಾತನಾಡಿ ಸೌಂದರ್ಯ ಮಂಜಪ್ಪರವರು ಸಂಸ್ಥೆಯನ್ನು ಯಶಸ್ವಿಯಾಗಿ ಕಟ್ಟಿದ್ದಾರೆ. ಪುತ್ತೂರಿನಂತಹ ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದ ಅವರು ಯಶಸ್ವಿ ಉದ್ಯಮಿಯಾಗಿ ಬಹುದೊಡ್ಡ ಸಂಸ್ಥೆಗಳನ್ನು ಹುಟ್ಟುಹಾಕಿ ಬಹಳಷ್ಟು ಜನರಿಗೆ ಕೆಲಸ ನೀಡುತ್ತಿರುವುದು ನಮ್ಮ ಊರಿಗೂ ಹೆಮ್ಮೆ ತಂದಿದೆ. ಇವರ ಸಂಸ್ಥೆಯಿಂದಾಗಿ ನಮ್ಮ ಊರಿನ ಜನರಿಗೆ ಅದರ ಪ್ರಯೋಜನ ಸಿಗಲಿ ಎಂದರು.
ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜನಾರ್ದನ ಎರ್ಕಡಿತ್ತಾಯರವರು ಮಾತನಾಡಿ ನಮ್ಮ ಊರಿನ ವ್ಯಕ್ತಿಯೋರ್ವರು ಯಶಸ್ವಿ ಉದ್ಯಮಿಯಾಗಿರುವುದು ಸಂತಸ ತಂದಿದೆ. ಸಹಕಾರಿ ಈ ಭಾಗದ ಜನರ ನೆಚ್ಚಿನ ಸಂಸ್ಥೆಯಾಗಿ ಬೆಳೆದುನಿಂತಿದೆ. ನಮ್ಮವರ ಸಂಸ್ಥೆಗೆ ನಾವೆಲ್ಲರೂ ಸಹಕಾರ ನೀಡಬೇಕಾಗಿದೆ ಎಂದರು.
ಸಲಹಾ ಸಮಿತಿ ಸದಸ್ಯರಾದ ವೀಣಾ ಎನ್.ಬಿರವರು ಮಾತನಾಡಿ ದಿನದಿಂದ ದಿನಕ್ಕೆ ಸಂಸ್ಥೆ ಉನ್ನತಿಯಲ್ಲಿ ಸಾಗುತ್ತಿರುವುದು ಸಂತಸದ ವಿಚಾರ. ಸಹಕಾರಿಯ ಬಂಧುಗಳ ಸಹಕಾರ ಹಾಗೂ ಸಿಬ್ಬಂದಿಗಳ ನಗುಮೊಗದ ಸೇವೆ ಸಂಸ್ಥೆ ಯಶಸ್ಸಿನ ಗುಟ್ಟಾಗಿದೆ. ಆರಂಭದ ದಿನಗಳಿಂದಲೂ ಈ ಸಂಸ್ಥೆಯಲ್ಲಿ ವ್ಯವಹರಿಸುತ್ತಾ ಬಂದಿರುವವಳು ನಾನು. ಸಂಸ್ಥೆಯ ಸೇವೆಯಲ್ಲಿ ನನಗೆ ಬಹಳ ಕುಶಿಯಿದೆ. ನಾವೆಲ್ಲರೂ ಒಟ್ಟಾಗಿ ಸಂಸ್ಥೆಯನ್ನು ಬೆಳೆಸೋಣ ಎಂದರು.
ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಂತ ಬಿ.ವಿ.ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸದಸ್ಯ ಗ್ರಾಹಕರನ್ನು ಒಟ್ಟುಗೂಡಿಸಿ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಈ ಒಂದು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಬೆಂಗಳೂರಿನ ಹಾವನೂರು ಬಡಾವಣೆಯ ಸೌಂದರ್ಯ ಸೌಧದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ಪುತ್ತೂರು, ನೆಲಮಂಗಳ, ಚಿಕ್ಕಬಾಣಾವರದಲ್ಲಿ ತಲಾ ಒಂದೊಂದು ಶಾಖೆಗಳಿವೆ. ಎಲ್ಲವೂ ಉತ್ತಮ ರೀತಿಯಲ್ಲಿ ವ್ಯವಹಾರ ನಡೆಸುತ್ತಾ ಲಾಭದಲ್ಲಿ ನಡೆಯುತ್ತಿದೆ. ಪುತ್ತೂರು ಶಾಖೆಯು ಕಳೆದ 8 ವರುಷದಲ್ಲಿ ಉತ್ತಮ ಸಾಧನೆ ಮಾಡುತ್ತಾ ಬಂದಿದೆ. ಸಂಸ್ಥೆಯ ಬೆಳವಣಿಗೆಗೆ ನಿಮ್ಮೆಲರ ಸಲಹೆ ಸಹಕಾರವೇ ಕಾರಣವಾಗಿದೆ. ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಯಾಚಿಸುತ್ತಿದ್ದೇವೆ ಎಂದರು.

ಪುತ್ತೂರು ಶಾಖಾ ವ್ಯವಸ್ಥಾಪಕರಾದ ಶ್ಯಾಮಲಾರವರು ಶಾಖೆಯ ಅಭಿವೃದ್ಧಿ, ಕಾರ್ಯವೈಖರಿಯ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಸಲಹಾ ಸಮಿತಿ ಸದಸ್ಯರಾದ ವೀಣಾ ಎನ್.ಬಿ, ಪುಷ್ಪಾ ಕೆದಿಲಾಯ, ನಿತ್ಯ ನಿಧಿ ಸಂಗ್ರಹಕರಾದ ರೂಪ ಮೋನಪ್ಪ ಗೌಡ, ಹಿಂದಿನ ಚಿನ್ನಾಭರಣ ಮೌಲ್ಯಮಾಪಕರಾದ ತ್ಯಾಗರಾಜ್ ಕೆ., ಪ್ರಸ್ತುತ ಚಿನ್ನಾಭರಣ ಮೌಲ್ಯಮಾಪಕರಾಗಿರುವ ದಿನೇಶ್ ಆಚಾರ್ಯ, ಕಾನೂನು ಸಲಹೆಗಾರರಾದ ಕವನ್ ನಾಯ್ಕ್ ಡಿ., ಜಾಗದ ಮೌಲ್ಯ ಮಾಪಕರಾದ ರಂಜನ್ ಹಾಗೂ ಎಸ್.ಎಸ್.ಎಲ್.ಸಿ.ಯಲ್ಲಿ ಅತೀ ಹೆಚ್ಚು ಅಂಕ ಪಡೆದು ಮಹಾಸಭೆಯಲ್ಲಿ ಪ್ರತಿಭಾ ಪುರಸ್ಕಾರ ಪಡೆದುಕೊಂಡಿರುವ ಪುತ್ತೂರು ಶಾಖಾ ಸದಸ್ಯರಾದ ದೇವದಾಸ ಆಚಾರ್ಯರವರ ಪುತ್ರಿ ವಿದ್ಯಾಶ್ರೀರವರನ್ನು ಗೌರವಿಸಲಾಯಿತು.
ಇದೇ ವೇಳೆ 2024-25ನೇ ಸಾಲಿನಲ್ಲಿ ದೈವಾದೀನರಾದ ಪುತ್ತೂರು ಶಾಖಾ ಸದಸ್ಯರಿಗೆ ಹಾಗೂ ಹುತಾತ್ಮರಾದ ನಮ್ಮ ಸೈನಿಕರಿಗೆ ಮೌನಪ್ರಾರ್ಥನೆ ಸಲ್ಲಿಸಲಾಯಿತು.
ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಬ್ರಹ್ಮಣ್ಯ ಗೌಡ ಹನಿಯೂರು, ಸಲಹಾ ಸಮಿತಿ ಸದಸ್ಯರಾದ ಪುಷ್ಪಾ ಕೆದಿಲಾಯ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಖಾ ಸದಸ್ಯರಾದ ಕಮಲಾಕ್ಷಿ ಹಾಗೂ ಉಷಾಕುಮಾರಿ ಪ್ರಾರ್ಥನೆ ಹಾಡಿದರು. ಶಾಖಾ ಸಹಾಯಕ ವ್ಯವಸ್ಥಾಪಕರಾದ ಸುಧೀರ್ ಬಿ. ಸ್ವಾಗತಿಸಿದರು, ಸಿಬ್ಬಂದಿ ಪವನ್ ಕುಮಾರ್ ವಂದಿಸಿದರು. ಸಿಬ್ಬಂದಿಗಳಾದ ಪ್ರಿಯದರ್ಶಿನಿ ನಿಶಾಕಿರಣ್ ಹಾಗೂ ಜಿನಿತ್ ಕೆ.ಕೆ. ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ಶ್ರೇಯಸ್ವಿ ಎಸ್.ಆರ್. ಸಹಕರಿಸಿದರು.







