ಪುತ್ತೂರು :ಬಹಳ ಅತ್ಯುತ್ತಮ ಕೆಲಸ. ಇಂತಹ ಕಾರ್ಯಕ್ರಮದಲ್ಲಿ ಪ್ರಥಮ ಬಾರಿಗೆ ನಾನು ಭಾಗಿಯಾಗಿದ್ದೇನೆ. ಶಿಬಿರದ ಮೂಲಕ ರಕ್ತದಾನದ ಬಗ್ಗೆ ಜಾಗೃತಿ ಹಾಗೂ ಅವುಗಳ ಪ್ರಯೋಜನ ,ಮಹತ್ವ ಜನತೆ ತಿಳಿಯಲು ಸಹಕಾರಿ. 17 ರಿಂದ 60 ವಯಸ್ಸಿನ ಪ್ರತಿಯೊಬ್ಬ ಆರೋಗ್ಯವಂಥ ವ್ಯಕ್ತಿಗಳೂ ಅಂದರೆ , ಪುರುಷರು ಮೂರು ತಿಂಗಳಿಗೊಮ್ಮೆ ಮಹಿಳೆ 4 ತಿಂಗಳಿಗೊಮ್ಮೆ ರಕ್ತದಾನ ಮಾಡಲು ಶಕ್ತರು. ರಕ್ತದಾನದಿಂದ ಹೊಸ ರಕ್ತ ಗಳ ಉತ್ಪತ್ತಿ , ಕೊಬ್ಬುಗಳ ಇಳಿಕೆ , ಆರೋಗ್ಯದ ವೃದ್ಧಿ ಜೊತೆಗೆ ಕಾಯಿಲೆ ಪ್ರಮಾಣ ಅತೀ ವಿರಳವೆಂದು ,
ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಯದುರಾಜು ಡಿ ಕೆ ಅಭಿಪ್ರಾಯಪಟ್ಟರು.
ಜೂ. 17 ರಂದು ಮುಖ್ಯ ಅಂಚೆ ಕಛೇರಿ ಇದರ ಸಭಾಂಗಣದಲ್ಲಿ ನಡೆದ ಅಂಚೆ ಇಲಾಖೆ ಪುತ್ತೂರು ವಿಭಾಗದ 44 ನೆಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ , ವಿಶ್ವ ರಕ್ತದಾನ ದಿನ ಪ್ರಯುಕ್ತ , ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇದರ ಸಹಯೋಗದೊಡನೆ ಬೃಹತ್ ರಕ್ತದಾನ ಶಿಬಿರ ಹಾಗೂ ವಿಶೇಷ ಆಧಾರ್ ನೋಂದಣಿ , ತಿದ್ದುಪಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಧಾನ ಅಂಚೆ ಪಾಲಕ ತೀರ್ಥಪ್ರಸಾದ್ ಮಾತನಾಡಿ , ಕಚೇರಿಯಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಿರುವುದು ಬಲು ಸಂತಸದ ವಿಚಾರ. ಪ್ರತಿ ಮನುಷ್ಯನಿಗೂ ರಕ್ತದ ಅವಶ್ಯಕತೆ ಬಹಳ ಇರುತ್ತದೆ. ಇತಂಹ ಮಹಾನ್ ಕಾರ್ಯದಿಂದಲೇ ಮಾನವೀಯ ಮೌಲ್ಯಗಳೂ ವೃದ್ಧಿಸುತ್ತಿವೆ. ರೆಡ್ ಕ್ರಾಸ್ ಸೊಸೈಟಿ ಮಾನವತೆ ಒಳಿತಿಗೆ ಹಲವು ಮಹಾನ್ ಕಾರ್ಯವನ್ನೂ ಮಾಡುತ್ತಿದ್ದು , ಇದೀಗ ಇಲಾಖೆ ಜತೆಯಾಗಿ ಕಾರ್ಯಕ್ರಮಕ್ಕೆ ಕೈ ಜೋಡಿಸಿರುವುದು ಸಾರ್ಥಕ. ಎಲ್ಲಾ ಜನತೆ ಶಿಬಿರದ ಪ್ರಯೋಜನ ಪಡೆವಂತೆ ವಿನಂತಿಸಿ ,ಹರಸಿದರು.
ಸಹಾಯಕ ಅಂಚೆ ಅಧೀಕ್ಷಕ ಚಂದ್ರ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಅಂಚೆ ಅಧೀಕ್ಷಕ ಗಣಪತಿ ಮರಡಿ , ರೆಡ್ ಕ್ರಾಸ್ ಸೊಸೈಟಿಯ ಪ್ರವೀಣ್ , ಬೆಳ್ತಂಗಡಿ ಉಪ ವಿಭಾಗ ಅಂಚೆ ನಿರೀಕ್ಷಕ ಸುಜಯ್ , ಸುಳ್ಯ ಉಪವಿಭಾಗದ ಅಂಚೆ ನಿರೀಕ್ಷಕ ಪ್ರದೀಪ್ ಭಂಡಾರಿ ಸಹಿತ ಪುತ್ತೂರು ಅಂಚೆ ಇಲಾಖೆಯ ಸಿಬ್ಬಂದಿಗಳು , ನಿವೃತ್ತ ಸಿಬ್ಬಂದಿಗಳು ಹಾಗೂ ಗ್ರಾಹಕರು ವರ್ಗದವರು ಉಪಸ್ಥಿತರಿದ್ದರು.
ಶಿವಕುಮಾರಿ ಪ್ರಾರ್ಥನೆ ನೆರವೇರಿಸಿ ,ಗಣಪತಿ ಮರಡಿ ಸ್ವಾಗತಿಸಿ , ರೋಹನ್ ಲೂಯಿಸ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ರಕ್ತದಾನ ಶಿಬಿರ ನೆರವೇರಿತು.