ನೆಲ್ಯಾಡಿ – ಕಟ್ಟೆಮಜಲು ಶಿರಾಡಿ ಧೂಮಾವತಿ ಪರಿವಾರ ದೈವಗಳ ದೈವಸ್ಥಾನಕ್ಕೆ ಅರುಣ್ ಕುಮಾರ್ ಪುತ್ತಿಲ ಭೇಟಿ

0

‘ಹಿಂದುತ್ವಕ್ಕಾಗಿ ಹಗಲಿರುಳೂ ದುಡಿಯುವ ಕಾರ್ಯಕರ್ತರು ಬೀದಿ ಹೆಣವಾಗುವಂತಹ ಸನ್ನಿವೇಶಗಳು ಶಾಶ್ವತವಾಗಿ ನಿಲ್ಲಬೇಕು’ – ಅರುಣ್ ಕುಮಾರ್ ಪುತ್ತಿಲ

ನೆಲ್ಯಾಡಿ: ಕಡಬ ತಾಲೂಕಿನ ಪ್ರಮುಖ ಪಟ್ಟಣವಾಗಿರುವ ನೆಲ್ಯಾಡಿಗೆ ಹೊಂದಿಕೊಂಡಂತಿರುವ ಕಟ್ಟೆಮಜಲಿನ ಶಿರಾಡಿ-ಧೂಮಾವತಿ ಪರಿವಾರ ದೈವಗಳ ದೈವಸ್ಥಾನಕ್ಕೆ ಭೇಟಿ ನೀಡಿ ಕಟ್ಟೆಮಜಲು ಪುತ್ತಿಲ ಪರಿವಾರದಿಂದ ಆಯೋಜನೆಗೊಂಡಿದ್ದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದೂ ಸಮಾಜ ಬಾಂಧವರನ್ನು ಉದ್ದೇಶಿಸಿ ಅರುಣ್ ಕುಮಾರ್ ಪುತ್ತಿಲ ಮಾತನಾಡಿದರು.


ಜೂ.16 ಗುರುವಾರ ಸಾಯಂಕಾಲ ದೈವಸ್ಥಾನದಲ್ಲಿ ಸಂಕ್ರಾಂತಿ ಪೂಜೆ ಪ್ರಯುಕ್ತ ಈ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಟ್ಟೆಮಜಲು ದೈವಸ್ಥಾನಕ್ಕೆ ಆಗಮಿಸಿದ ಪುತ್ತಿಲ ಪ್ರಾರಂಭದಲ್ಲಿ ದೈವಗಳ ಸಂಕ್ರಾಂತಿ ಪೂಜೆಯಲ್ಲಿ ಭಾಗಿಯಾಗಿ ಪ್ರಾರ್ಥನೆ ಸಲ್ಲಿಸಿ ಪ್ರಸಾದವನ್ನು ಸ್ವೀಕರಿಸಿದರು.

ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ, ‘ತಾಯಿ ಭಾರತಿಗೆ ಜಗತ್ತು ಗೌರವ ಕೊಡುವ ಕಾಲ ಹತ್ತಿರವಾಗಬೇಕು ಮತ್ತು ಹಿಂದು ರಾಷ್ಟ್ರದ ಪರಿಕಲ್ಪನೆ ಸಾಕಾರಗೊಳ್ಳಬೇಕು, ಸನಾತನವಾಗಿರುವ ಧರ್ಮ ಪರಂಪರೆ ಈ ದೇಶದಲ್ಲಿ ಉಳಿಯುವ ಮೂಲಕ ಹಿಂದು ಸಮಾಜ ಸದೃಢಗೊಳ್ಳಬೇಕು ಎಂಬ ಧ್ಯೇಯದಡಿಯಲ್ಲಿ ನಾವೆಲ್ಲರೂ ಹಲವಾರು ವರ್ಷಗಳಿಂದ ಸಂಘಟನೆಯ ಮೂಲಕ ಸಾಮಾಜಿಕ ಬದ್ಧತೆಯ ಜೊತೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಯೋಚನೆ ಮತ್ತು ಯೋಜನೆಗಳನ್ನು ಯಶಸ್ವಿಯಾಗಿ ಸಮಾಜದಲ್ಲಿ ಕಾರ್ಯರೂಪಕ್ಕಿಳಿಸುವ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇವೆ. ಧರ್ಮ ಉಳಿದಲ್ಲಿ ಮಾತ್ರವೇ ನಮ್ಮ ಜನ್ಮ ಸಾರ್ಥಕ್ಯವನ್ನು ಪಡೆಯುತ್ತದೆ ಮತ್ತು ನಾವು ಈ ಸಮಾಜದಲ್ಲಿ ಬದುಕಲು ಸಾಧ್ಯ ಎನ್ನುವುದನ್ನು ತಿಳಿದಿಕೊಂಡಿರುವ ಸಮಾಜ ನಮ್ಮದು. ಅಧಿಕಾರದ ಆಸೆಗೆ ಬಿದ್ದು ಬಹುಸಂಖ್ಯಾತ ಹಿಂದುಗಳ ಭಾವನೆಗಳಿಗೆ ನೋವನ್ನುಂಟುಮಾಡುವ ಘಟನೆಗಳು ನಮ್ಮ ಸುತ್ತ ನಡೆಯುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಹತ್ತು ವರ್ಷಗಳ ಹಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಈ ದೇಶದ ಉನ್ನತ ಹುದ್ದೆಯನ್ನೇರಬೇಕು ಎಂಬ ನಿಟ್ಟಿನಲ್ಲಿ ನಾವೆಲ್ಲಾ ಶ್ರಮಿಸಿದ್ದೆವು ಅದರ ಫಲವಾಗಿ ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿ ಪಟ್ಟವನ್ನೇರಿ ಹತ್ತು ವರ್ಷಗಳ ನಿರಂತರ ಆಡಳಿತದಲ್ಲಿ ದೇಶ ತನ್ನ ಗತ ವೈಭವಕ್ಕೆ ಮರಳುವ ಕ್ಷಣಕ್ಕೆ ನಾವೆಲ್ಲಾ ಸಾಕ್ಷಿಗಳಾಗಿದ್ದೇವೆ’ ಎಂದು ಹೇಳಿದರು.


‘ಮತಾಂತರ, ಗೋಹತ್ಯೆ, ಸಾಧು-ಸಂತರಿಗೆ ನಿತ್ಯ ಕಿರುಕುಳ ನೀಡುವ ರಾಜಕೀಯ ಶಕ್ತಿಗಳನ್ನು ನಿರ್ನಾಮಗೊಳಿಸಬೇಕಾದ ಸವಾಲು ನಮ್ಮ ಸಮಾಜದ ಮುಂದಿದೆ. ಮುಂದಿನ ನೂರಾರು ವರ್ಷಗಳ ಕಾಲ ಹಿಂದು ಸಮಾಜ ತಲೆ ಎತ್ತಿ ನಡೆಯುವಂತಹ ವಾತಾವರಣ ನಿರ್ಮಾಣವಾಗಲು ನಾವು ಇಂದೇ ಯೋಚಿಸಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ ಮತ್ತು ಹಿಂದು ಸಮಾಜಕ್ಕಾಗಿ ಮತ್ತು ಹಿಂದುತ್ವಕ್ಕಾಗಿ ಹಗಲಿರುಳೂ ದುಡಿಯುವ ಕಾರ್ಯಕರ್ತರು ಬೀದಿ ಹೆಣವಾಗುವಂತಹ ಸನ್ನಿವೇಶಗಳು ಶಾಶ್ವತವಾಗಿ ನಿಲ್ಲುವಂತಾಗಬೇಕು ಈ ನಿಟ್ಟಿನಲ್ಲಿ ನಮ್ಮ ಕಾರ್ಯದ ಮೂಲಕ ಸದೃಢ ಹಿಂದು ಸಮಾಜಕ್ಕಾಗಿ ಶಕ್ತಿಯನ್ನು ತುಂಬುವ ಕೆಲಸವನ್ನು ಮಾಡುವ ಸಂಕಲ್ಪವನ್ನು ನಾವೆಲ್ಲಾ ಮಾಡಬೇಕಾಗಿದೆ’ ಎಂದರು.

ಹಿರಿಯ ಮುಖಂಡ ಎನ್.ವಿ ವ್ಯಾಸ ಮತ್ತು ಸ್ಥಳೀಯ ನಾಯಕ ಹರಿಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಟ್ಟೆಮಜಲು ಪುತ್ತಿಲ ಪರಿವಾರ ವತಿಯಿಂದ ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ಶಾಲು ಹೊದೆಸಿ, ಫಲ-ಪುಷ್ಟ ನೀಡಿ ಅಭಿನಂದಿಸಲಾಯ್ತು.


ಈ ಭಾಗದ ಖ್ಯಾತ ನಿರೂಪಣೆಕಾರ ಸುರೇಶ್ ಪಡಿಕಂಡ ಅವರ ನಿರೂಪಣೆಯಲ್ಲಿ ಮೂಡಿಬಂದ ಈ ಕಾರ್ಯಕ್ರಮದಲ್ಲಿ ದೈವಸ್ಥಾನದ ಅಧ್ಯಕ್ಷರಾಗಿರುವ ಹಿರಿಯ ನಾಯಕ ಸದಾನಂದ ಗೌಡ ಕುಂಡಡ್ಕ ಅವರು ಪ್ರಸ್ತಾವಿಕವಾಗಿ ಮಾತನಾಡಿ ಸರ್ವರನ್ನೂ ಸ್ವಾಗತಿಸಿದರು. ಮೊಬೈಲ್ ಮ್ಯಾಟ್ರಿಕ್ಸ್‌ನ ವಿಶ್ವನಾಥ್ ಧನ್ಯವಾದ ಸಮರ್ಪಿಸಿದರು. ಅರ್ಚಕ ಶ್ರೀಧರ್ ನೂಜಿನ್ನಾಯ ಸ್ವಸ್ತಿವಾಚನಗೈದರು.ಕೃಷ್ಣಪ್ಪ ಕೆ, ರೋಹಿತಾಶ್ವ ಕಟ್ಟೆಮಜಲು, ದಯಾನಂದ ಹಳೆಮುಂಡ್ಲ, ಶಶಿಧರ ಶೆಟ್ಟಿ, ಶೇಖರ ಹಳೆಮುಂಡ್ಲ, ಜಿನ್ನಪ್ಪ ಗೌಡ, ವೀಣಾ ಗೋಪಾಲ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

LEAVE A REPLY

Please enter your comment!
Please enter your name here