ನಿಡ್ಪಳ್ಳಿ: 2022-23 ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆಯ ಇತಿಹಾಸದಲ್ಲಿ ಶೇ.100 ಫಲಿತಾಂಶ ಪಡೆದು ದಾಖಲೆ ಮಾಡಿದ ಕಾರಣ ಜೂ.17 ರಂದು ವಿದ್ಯಾರ್ಥಿಗಳನ್ನು ಎಸ್.ಡಿ.ಎಂ.ಸಿ ವತಿಯಿಂದ ಅಭಿನಂದಿಸಲಾಯಿತು.
ಒಂದು ಕುಟುಂಬದಂತೆ ಕೆಲಸ ಮಾಡಿದ್ದಾರೆ:
ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ ಮಾತನಾಡಿ ಯಾವುದೇ ಉತ್ತಮ ಮೂಲ ಸೌಕರ್ಯ ಇಲ್ಲದ ಒಂದು ಗ್ರಾಮದ ಸರಕಾರಿ ಶಾಲೆ ಇಂತಹ ಸಾಧನೆ ಮಾಡಲು ಎಲ್ಲರ ಪರಿಶ್ರಮ ಬೇಕು. ಅದಕ್ಕೆ ಉತ್ತಮ ನಾಯಕತ್ವ ಇದ್ದರೆ ಮಾತ್ರ ಸಾಧ್ಯ. ಇಲ್ಲಿ ಶಿಕ್ಷಕರ ತಂಡ, ಶಾಲಾಭಿವೃದ್ದಿ ಸಮಿತಿ, ಪೋಷಕರು ಒಂದು ಕುಟುಂಬದಂತೆ ಕೆಲಸ ಮಾಡಿದ್ದು ಇಂತಹ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿದ ಅವರು, ವಿದ್ಯಾರ್ಥಿಗಳು ಐ.ಎಸ್, ಐ.ಪಿ.ಎಸ್, ಕೆ.ಎಸ್ ಪರೀಕ್ಷೆ ಬರೆದು ಉನ್ನತ ಮಟ್ಟದ ಅಧಿಕಾರಿಗಳಾಗಿ ಶಾಲೆಗೆ ಕೀರ್ತಿ ತಂದು ಈ ಶಾಲೆಗೆ ಹೆಮ್ಮೆ ತರಲಿ. ಈ ಶಾಲೆಯನ್ನುಯಾವತ್ತೂ ಮರೆಯ ಬಾರದು. ಮುಂದೆ ಪ್ರತಿ ವರ್ಷ ಶಾಲೆಗೆ ಇದೇ ಫಲಿತಾಂಶ ದಾಖಲಿಸುವಂತಾಗಲಿ ಎಂದು ಅವರು ಕಿವಿ ಮಾತು ಹೇಳಿದರು.
ಅತಿಥಿಗಳಾಗಿ ಭಾಗವಹಿಸಿದ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪವಿತ್ರ ಡಿ, ನಿಡ್ಪಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವೆಂಕಟ್ರಮಣ ಬೋರ್ಕರ್, ಎಸ್.ಡಿ.ಎಂ.ಸಿ ಸದಸ್ಯ ಶಿಕ್ಷಣ ತಜ್ಞ ಸತ್ಯನಾರಾಯಣ ರೈ ನುಳಿಯಾಲು ಶಾಲೆಯ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಈ ದಾಖಲೆ ಇಲ್ಲಿಗೆ ನಿಲ್ಲದೆ ಪ್ರತಿ ವರ್ಷ ಮುಂದುವರೆಯಲಿ ಎಂದು ಶುಭ ಹಾರೈಸಿದರು. ಶಿಕ್ಷಕರ ಪರವಾಗಿ ವಿಜ್ಞಾನ ಶಿಕ್ಷಕಿ ಸೌಮ್ಯಲಕ್ಷ್ಮೀ ಅನಿಸಿಕೆ ವ್ಯಕ್ತಪಡಿಸಿ ವಿದ್ಯಾರ್ಥಿಗಳ ಶಿಸ್ತು ಮತ್ತು ಅವರ ಕಲಿಕೆಯಲ್ಲಿ ಇದ್ದ ಬದ್ದತೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ಗೌರವಾರ್ಪಣೆ
ಕ್ಲಾಸಿಗೆ ಪ್ರಥಮ ಸ್ಥಾನ ಪಡೆದ ಶ್ರೇಯಾ.ಸಿ.ಎಚ್ ಮತ್ತು ಡಿಸ್ಟಿಂಕ್ಷನ್ ಪಡೆದ ಅನುಶ್ರೀ.ಕೆ, ಮಿಸ್ವಾನ ಮತ್ತು ತ್ರೀಕ್ಷಾ ಇವರನ್ನು ಸನ್ಮಾನ ಪತ್ರ ಮತ್ತು ಬಹುಮಾನ ನೀಡಿ ಗೌರವಿಸಲಾಯಿತು. ಹಿಂದಿ ವಿಷಯದಲ್ಲಿ ಹೆಚ್ಚು ಅಂಕ ಪಡೆದ ಶ್ರೇಯಾ ಸಿ.ಎಚ್, ಅನುಶ್ರೀ.ಕೆ ಮತ್ತು ಮಿಸ್ವಾನ ಇವರಿಗೆ ಹಿಂದಿ ಶಿಕ್ಷಕಿ ವಿನುತಾರವರು ತನ್ನ ವೈಯಕ್ತಿಕ ನೆಲೆಯಲ್ಲಿ ನೀಡಿದ ಪ್ರೊತ್ಸಾಹ ಧನ ಸಹಾಯವನ್ನು ವಿತರಿಸಲಾಯಿತು.
ಶಿಕ್ಷಕರಿಗೆ ಗೌರವಾರ್ಪಣೆ
ಈ ಫಲಿತಾಂಶ ದಾಖಲಿಸಲು ವಿಶೇಷ ತರಗತಿಗಳನ್ನು ನಡೆಸಿ ಮಕ್ಕಳಿಗೆ ಧೈರ್ಯ ತುಂಬಿದ ಶಿಕ್ಷಕರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಎಸ್.ಡಿ.ಎಂ.ಸಿ ವತಿಯಿಂದ ಗೌರವಿಸಲಾಯಿತು. ಅಲ್ಲದೆ ಅಕ್ಷರ ದಾಸೋಹ ಸಿಬ್ಬಂದಿಗಳಾದ ಐರಿನ್ ಡಿ’ ಸೋಜಾ ಹಾಗೂ ಲಲಿತ ಇವರನ್ನು ಗೌರವಿಸಲಾಯಿತು.
ಕಾರ್ಯಾಧ್ಯಕ್ಷರಿಗೆ ಸನ್ಮಾನ
ಕಳೆದ ಐದು ವರ್ಷ ಅವಧಿಯಲ್ಲಿ ಶಾಲೆಯ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿದ ಮತ್ತು ಈ ಫಲಿತಾಂಶ ಬರಲು ಪ್ರೋತ್ಸಾಹ ನೀಡಿದ ಶಾಲಾಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಸುಂದರ ನಾಯಕ್ ಬಾಳೆಗುಳಿ ಇವರನ್ನು ಶಾಲಾ ಶಿಕ್ಷಕರ ಪರಿವಾಗಿ ಸನ್ಮಾನಿಸಿದರು.
ಶಾಲಾಭಿವೃದ್ದಿ ಸಮಿತಿ ಸದಸ್ಯ ಗಂಗಾಧರ ಸಿ.ಎಚ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿ, ಮುಖ್ಯ ಗುರು ವಿಜಯ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು . ಗಣಿತ ಶಿಕ್ಷಕಿ ಮರೀನಾ ಶಾಂತಿ ವೇಗಸ್ ವಂದಿಸಿದರು. ಸಂಗೀತ ಶಿಕ್ಷಕಿ ಶುಭ ರಾವ್ ಕಾರ್ಯಕ್ರಮ ನಿರೂಪಿಸಿದರು.ದೈಹಿಕ ಶಿಕ್ಷಣ ಶಿಕ್ಷಕಿ ಚಂದ್ರಕಲಾ, ಇಂಗ್ಲೀಷ್ ಶಿಕ್ಷಕಿ ಉಮಾ ಸಹಕರಿಸಿದರು.ಪೋಷಕರು ಮತ್ತು ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡರು.
ನನ್ನ ಕನಸು ನನಸಾಗಿದೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಸುಂದರ ನಾಯಕ್ ಬಾಳೆಗುಳಿ ಮಾತನಾಡಿ ತನ್ನ ಅಧಿಕಾರದ ಅವಧಿಯಲ್ಲಿ ಶಾಲೆಗೆ ಸಿ.ಸಿ ಕ್ಯಾಮರಾ ಅಳವಡಿಕೆ, ಕಂಪ್ಯೂಟರ್, ರಸ್ತೆ ಡಾಮರೀಕರಣ, ಶಾಲಾ ಕಾಂಪೌಂಡ್ ರಚನೆ, ಅರ್ಧದಲ್ಲಿ ನಿಂತ ಕೊಠಡಿಯ ಪೂರ್ಣ ಕಾಮಗಾರಿ ಮತ್ತು ಇತರ ಅಭಿವೃದ್ಧಿ ಕೆಲಸ ಮಾಡಿದ ಸಂತೃಪ್ತಿ ಇದೆ.ಇದಕ್ಕೆ ಸಹಕಾರ ನೀಡಿದ ಎಲ್ಲರನ್ನೂ ಈ ಸಂದರ್ಭದಲ್ಲಿ ನೆನಪಿಸಿದ ಅವರು ತನ್ನ ಅವಧಿ ಮುಗಿಯುವ ಮೊದಲು ಶೇ.100 ಫಲಿತಾಂಶ ಬರ ಬೇಕೆಂದು ಕಂಡ ಕನಸು ನನಸಾಗಿದೆ ಎಂದು ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು.