ಪುತ್ತೂರು ಬಂಟರ ಸಂಘದಿಂದ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಅಭಿನಂದನಾ ಸಮಾರಂಭ

0

‘ಬಂಟ ಸಮಾಜಕ್ಕೆ ಗೌರವ ತರುವ ಕೆಲಸವನ್ನು ಮಾಡುತ್ತೇನೆ’

ಬಂಟರ ಸಂಘದಿಂದ ಅಭಿನಂದನೆ ಸ್ವೀಕರಿಸಿ ಶಾಸಕ ಅಶೋಕ್ ರೈ ಭರವಸೆ

ಪುತ್ತೂರು:ಪುತ್ತೂರು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃಸಂಘ, ಪುತ್ತೂರು ತಾಲೂಕು ಸಮಿತಿ ಮಾರ್ಗದರ್ಶನ, ಮಹಿಳಾ,ಯುವ ಹಾಗೂ ವಿದ್ಯಾರ್ಥಿ ಬಂಟರ ಸಂಘದ ಸಹಯೋಗದೊಂದಿಗೆ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಅಭಿನಂದನಾ ಸಮಾರಂಭ ಮತ್ತು ಬಂಟ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಜೂ.18ರಂದು ಪುತ್ತೂರು ಎಮ್.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಿತು.


ಬಂಟ ಸಮಾಜದ ಅಭಿವೃದ್ಧಿಗೆ ಸರಕಾರದ ನೆಲೆಯಲ್ಲಿ ಪೂರ್ಣ ಸಹಕಾರ- ಅಶೋಕ್ ರೈ:
ಸನ್ಮಾನವನ್ನು ಸ್ವೀಕರಿಸಿದ ಶಾಸಕ ಅಶೋಕ್ ಕುಮಾರ್ ರೈಯವರು ಮಾತನಾಡಿ ಸಮಾಜದ ನಾನಾ ಸಮುದಾಯಗಳ ಅಭಿವೃದ್ದಿಗೆ ಸರಕಾರದ ಸಹಕಾರವನ್ನು ಪಡೆಯುತ್ತಿರುವುದನ್ನು ಕಳೆದ 15 ವರ್ಷಗಳಿಂದ ನಾನು ನೋಡುತ್ತಿದ್ದೇನೆ.ಅದೇ ರೀತಿ ಬಂಟ ಸಮಾಜದ ಅಭಿವೃದ್ಧಿಗೆ ಸರಕಾರದಿಂದ ದೊರೆಯುವ ಎಲ್ಲಾ ಸಹಕಾರವನ್ನು ಸರಕಾರದಿಂದ ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕವಾದ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.ತಾಲೂಕು ಬಂಟರ ಸಂಘದ ಸನ್ಮಾನವನ್ನು ಅತ್ಯಂತ ಪ್ರೀತಿಯಿಂದ ಸ್ವೀಕಾರ ಮಾಡಿದ್ದೇನೆ.ಈ ಬಾರಿಯ ಚುನಾವಣೆಯಲ್ಲಿ ಬಂಟ ಸಮಾಜದವರು ನನಗೆ ಪೂರ್ಣ ರೀತಿಯ ಸಹಕಾರವನ್ನು ನೀಡಿದ್ದಾರೆ ಎಂದು ಹೇಳಿದರು.


ಸಮಾಜ ಸೇವೆಯೇ ಉದ್ದೇಶ, ಉದ್ಯಮ ವ್ಯವಹಾರ ಪತ್ನಿಗೆ:
ಕಳೆದ 12 ವರ್ಷಗಳಿಂದ ನಾನು ಸಮಾಜ ಸೇವೆಯಲ್ಲಿ ನಿರತನಾಗಿದ್ದೇನೆ,ಸಾವಿರಾರು ಕುಟುಂಬಗಳಿಗೆ ಅನೇಕ ರೀತಿಯ ನೆರವು ನೀಡಿದ್ದೇನೆ.ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡುವ ಅವಕಾಶದ ಭಾಗ್ಯ ಶಾಸಕನಾಗಿ ಸಿಕ್ಕಿದೆ.ಅದಕ್ಕಾಗಿ ಸಮಾಜ ಸೇವೆಗೆ ಪೂರ್ಣ ಸಮಯವನ್ನು ಮೀಸಲಿಡಬೇಕಾದ ಸಂದರ್ಭದಲ್ಲಿ ನನ್ನ ಉದ್ಯಮ,ವ್ಯವಹಾರ ಕ್ಷೇತ್ರವನ್ನು ಮುನ್ನಡೆಸಲು ಪತ್ನಿ ಸುಮಾಅಶೋಕ್ ರೈಗೆ ವಹಿಸಿಕೊಟ್ಟಿದ್ದು ಒಂದಲ್ಲ ಒಂದು ದಿನ ಬಂಟ ಸಮಾಜಕ್ಕೆ ಹೆಸರು ತಂದುಕೊಡುವ ಕೆಲಸವನ್ನು ಖಂಡಿತವಾಗಿಯೂ ಮಾಡುತ್ತೇನೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.


ಎರಡು ಜಿಲ್ಲೆಗಳ ಜವಾಬ್ದಾರಿ ನನ್ನ ಮೇಲಿದೆ:
ದ.ಕ ಮತ್ತು ಉಡುಪಿ ಜಿಲ್ಲೆಯಿಂದ ಆಡಳಿತ ಪಕ್ಷದಿಂದ ನಾನು ಮತ್ತು ಯು.ಟಿ.ಖಾದರ್ ಅವರು ಮಾತ್ರ ಶಾಸಕರಾಗಿ ಚುನಾಯಿತರಾಗಿದ್ದೇವೆ.ಇದೀಗ ಯು.ಟಿ.ಖಾದರ್‌ರವರು ಸ್ಪೀಕರ್ ಆಗಿರುವುದರಿಂದ ಅವರಿಗೆ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಲು ಅಸಾಧ್ಯವಾಗಿರುವುದರಿಂದ ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಆಡಳಿತ ಪಕ್ಷದ ಶಾಸಕನಾಗಿ ನನಗೊಬ್ಬನಿಗೇ ಹೊಣೆಗಾರಿಕೆ ಇದೆ ಎಂದು ಹೇಳಿದ ಶಾಸಕ ಅಶೋಕ್ ಕುಮಾರ್ ರೈಯವರು,ಪುತ್ತೂರಿನ ಸಮಗ್ರ ಅಭಿವೃದ್ಧಿಯೇ ನನ್ನ ಗುರಿಯಾಗಿದೆ ಎಂದು ಹೇಳಿದರು.


ಸಭಾಭವನ ಪೂರ್ಣ ತುಂಬಿದ್ದು ಖುಷಿಯಾಗಿದೆ:
ಬಂಟರ ಭವನದ ಅನೇಕ ಕಾರ‍್ಯಕ್ರಮಗಳಲ್ಲಿ ನಾನು ಭಾಗಿಯಾಗಿದ್ದೇನೆ.ಇಂದು ನನಗೆ ಬಂಟರ ಸಂಘದ ಮೂಲಕ ಬಂಟ ಸಮುದಾಯದ ಸನ್ಮಾನ ದೊರೆತ ಕ್ಷಣ ಅತ್ಯಂತ ಸೌಭಾಗ್ಯದ ದಿನವಾಗಿದೆ.ಸನ್ಮಾನ ಸಮಾರಂಭಕ್ಕೆ ಬಹಳ ದೊಡ್ಡ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸಿದ್ದು,ಅತ್ಯಂತ ಖುಷಿಯಾಗಿದೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.


ಸನ್ಮಾನದಿಂದ ನನ್ನ ಜವಾಬ್ದಾರಿ ಹೆಚ್ಚಿದೆ:
ಬಂಟ ಸಮಾಜ ತಲೆತಗ್ಗಿಸುವ ಕೆಲಸವನ್ನು ಯಾವತ್ತೂ ಮಾಡದೆ ಬಂಟ ಸಮಾಜ ಗೌರವದಿಂದ ಸಮಾಜದಲ್ಲಿ ತಲೆ ಎತ್ತಿ ನಡೆಯುವ ರೀತಿಯಲ್ಲಿ ಖಂಡಿತಾ ಕೆಲಸ ಮಾಡುತ್ತೇನೆ ಎಂದು ಹೇಳಿದ ಅಶೋಕ್ ರೈಯವರು, ನಾನು ಶಾಸಕನಾಗಲು ಸಮಾಜದ ಎಲ್ಲಾ ಬಂಧುಗಳು ಸಹಕಾರ ನೀಡಿದ್ದಾರೆ.ಈ ಬಾರಿಯ ಚುನಾಚಣೆಯಲ್ಲಿ ನನಗೆ ಬಂಟ ಸಮಾಜದ ಪೂರ್ತಿ ಸಹಕಾರ ದೊರೆತಿದೆ.ಬಂಟ ಸಮಾಜದ ಪ್ರೀತಿಯನ್ನು ಹಿಂದಿಗೂ ಬಿಟ್ಟಿಲ್ಲ,ಮುಂದೆಯೂ ಬಿಡುವುದಿಲ್ಲ ಎಂದು ಹೇಳಿದರಲ್ಲದೆ, ಅಚ್ಚುಕಟ್ಟಾಗಿ ಸನ್ಮಾನವನ್ನು ನಡೆಸಿದ ಪುತ್ತೂರು ಬಂಟರ ಸಂಘದ ಕಾರ‍್ಯವನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.


ಅದ್ದೂರಿ ಸನ್ಮಾನ:
ಬಂಟರ ಸಂಘದಿಂದ ಅಶೋಕ್ ಕುಮಾರ್ ರೈಯವರಿಗೆ ಏರ್ಪಡಿಸಲಾದ ಸನ್ಮಾನ ಸಮಾರಂಭ ಅದ್ದೂರಿಯಾಗಿ ನಡೆಯಿತು.ಅಶೋಕ್ ಕುಮಾರ್ ರೈಯವರ ಪತ್ನಿ ಸುಮಾ ಅಶೋಕ್ ರೈ ಮತ್ತು ಮಕ್ಕಳಾದ ರಿಧಿ ರೈ, ಪ್ರದಿಲ್ ಹಾಗೂ ಶ್ರೀಧಿ ರೈ ಉಪಸ್ಥಿತರಿದ್ದರು.


ಅಶೋಕ್ ರೈ ಸಮರ್ಥ ಶಾಸಕ- ಕಾವು ಹೇಮನಾಥ ಶೆಟ್ಟಿ:
ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಅಭಿನಂದನಾ ಭಾಷಣ ಮಾಡುತ್ತಾ, ಅಶೋಕ್ ಕುಮಾರ್ ರೈಯವರು ಪುತ್ತೂರಿಗೆ ಸಮರ್ಥ ಶಾಸಕರು ಎಂಬುದನ್ನು ಕೇವಲ 1 ತಿಂಗಳಲ್ಲಿ ಸಾಬೀತುಪಡಿಸಿದ್ದಾರೆ.ಪುತ್ತೂರಿಗೆ ಮೆಡಿಕಲ್ ಕಾಲೇಜ್ ಸ್ಥಾಪನೆಯ ಬಗ್ಗೆ ಸಂಬಂಧಪಟ್ಟವರಿಗೆ ಪ್ರಸ್ತಾವನೆಯನ್ನು ಕಳಿಸಿ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಜೊತೆ ಮಾತನಾಡಿರುವುದು, ಜೊತೆಗೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಮಾಣಿ-ಪುತ್ತೂರು ರಸ್ತೆಯನ್ನು ಚತುಷ್ಪಥಗೊಳಿಸುವ ಕೆಲಸಕ್ಕೆ ಕೈಹಾಕಿರುವುದು ಅವರ ದೂರದೃಷ್ಠಿ ಯೋಜನೆ ಆಗಿದೆ.ಅಶೋಕ್ ರೈಯವರು 22 ಸಾವಿರ ಮಂದಿ ಅಶಕ್ತ ಬಡವರಿಗೆ ನಾನಾ ರೀತಿಯ ಸೇವೆಯನ್ನು ಮಾಡಿದ್ದಾರೆ, ಜೊತೆಗೆ ದೇವಳಗಳ ಜೀರ್ಣೋದ್ಧಾರ ಕಾರ‍್ಯದಲ್ಲಿ ತೊಡಗಿ, ಧಾರ್ಮಿಕ ಸೇವೆಯನ್ನು ಮಾಡಿದ್ದಾರೆ ಎಂದು ಹೇಳಿದರು. ಉದ್ಯಮಿಯಾಗಿ, ಸಮಾಜದಲ್ಲಿ ದಾನಿಯಾಗಿ, ಇದೀಗ ಶಾಸಕರಾಗಿ ಆಯ್ಕೆಯಾಗಿರುವ ಅಶೋಕ್ ರೈಯವರನ್ನು ಇಡೀ ಬಂಟ ಸಮಾಜದ ಪರವಾಗಿ ಬಂಟರ ಸಂಘ ಗೌರವಿಸಿದೆ ಎಂದು ಹೇಳಿದರು


ಸಂತೋಷ ತಂದಿದೆ- ಅಜಿತ್ ರೈ:
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿಯವರು ದೀಪ ಬೆಳಗಿಸಿ ಕಾರ‍್ಯಕ್ರಮ ಉದ್ಘಾಟಿಸಿ, ಶಾಸಕ ಅಶೋಕ್ ಕುಮಾರ್ ರೈಯವರನ್ನು ಸನ್ಮಾನಿಸಿದರು.ಬಳಿಕ ಅವರು ಮಾತನಾಡಿ, ಧಾರ್ಮಿಕ ನೆಲೆಯಲ್ಲಿ ಹತ್ತಾರು ಜವಾಬ್ದಾರಿಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿರುವ ಅಶೋಕ್ ರೈ ಶಾಸಕರಾಗಿರುವುದು ದೈವ ದೇವರುಗಳ ಅನುಗ್ರಹದ -ಲವಾಗಿದೆ.ನಮ್ಮ ಸಮಾಜದ ಅಶೋಕ್ ರೈಯವರು ಶಾಸಕರಾಗಿರುವ ಈ ಸಂದರ್ಭ ನಮ್ಮ ಸಮಾಜ ಪಕ್ಷಭೇದ ಮರೆತು ಅದ್ದೂರಿಯ ಸನ್ಮಾನ ಹಮ್ಮಿಕೊಂಡಿರುವುದು ತುಂಬಾ ಸಂತೋಷ ತಂದಿದೆ ಎಂದರು.


ಅಶೋಕ್ ರೈ ಸಂಘಟನಾ ಚತುರ-ಶಶಿಕುಮಾರ್ ರೈ ಬಾಲ್ಯೊಟ್ಟು:
ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿ ಮಾತನಾಡಿ ಅಶೋಕ್ ರೈಯವರದು ಸರಳ ಸಜ್ಜನಿಕೆ ವ್ಯಕ್ತಿತ್ವ, ಉತ್ಸಾಹದ ಚತುರ ಸಂಘಟನಾ ನಾಯಕರಾಗಿದ್ದು, ಇವರು ಅನೇಕ ದೇವಸ್ಥಾನಗಳ ಜೀರ್ಣೋದ್ದಾರದಲ್ಲಿ ಹಗಲು ರಾತ್ರಿ ಎನ್ನದೇ ದುಡಿದಿದ್ದಾರೆ.ಅದರಲ್ಲೂ ಬೆಟ್ಟಂಪಾಡಿ ದೇವಾಲಯದ ಜೀರ್ಣೋದ್ಧಾರ ಕಾರ‍್ಯದಲ್ಲಿ ಅದ್ಭುತವಾದ ಕಾರ‍್ಯವನ್ನು ಮಾಡಿ ತೋರಿಸಿದ್ದಾರೆ.ಅಶೋಕ್ ರೈಯವರ ಸಮಾಜ ಸೇವೆಯನ್ನು ಇಡೀ ಪುತ್ತೂರಿನ ಜನತೆ ಮೆಚ್ಚಿದ್ದಾರೆ.ಅವರ ನಿರಂತರವಾದ ಸಮಾಜ ಸೇವೆಗೆ ಅವರಿಗೆ ಪುತ್ತೂರಿನ ಶಾಸಕರಾಗುವ ಸೌಭಾಗ್ಯ ದೊರೆತಿದೆ ಎಂದರು.ನಮ್ಮ ಸಮಾಜದವರು ಎಂಬ ನೆಲೆಯಲ್ಲಿ ನಾವಿಂದು ಶಾಸಕ ಅಶೋಕ್ ಕುಮಾರ್ ರೈಯವರಿಗೆ ಅದ್ದೂರಿಯ ಸನ್ಮಾನ ಸಮಾರಂಭ ನಡೆಸಿದ್ದೇವೆ.ಬಂಟರ ಸಂಘದ ಅನೇಕ ಕಾರ‍್ಯಗಳಿಗೆ ಅಶೋಕ್ ರೈಯವರಿಂದ ನಿರಂತರ ಪ್ರೋತ್ಸಾಹ ದೊರೆತಿದೆ.ಮುಂದೆಯೂ ಶಾಸಕರ ಸಹಕಾರ, ಪ್ರೋತ್ಸಾಹದಿಂದ ಸಂಘ ಮತ್ತಷ್ಟು ಸಮಾಜಮುಖಿ ಕಾರ‍್ಯವನ್ನು ಮಾಡುತ್ತದೆ ಎಂದು ಹೇಳಿದ ಬಾಲ್ಯೊಟ್ಟು ಎಲ್ಲರ ಸಹಕಾರ ಕೋರಿದರು.


ಸಂಭ್ರಮ ಪಡುವ ಸಮಯ-ಸವಣೂರು ಸೀತಾರಾಮ ರೈ:
ಬಂಟರ ಸಂಘದ ಮಾಜಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈಯವರು ಮಾತನಾಡಿ ಅಶೋಕ್ ರೈಯವರು ಶಾಸಕರಾಗಿರುವುದು ಬಂಟ ಸಮಾಜಕ್ಕೆ ಹೆಮ್ಮೆ ತಂದಿದೆ.ಸಮಾಜದ ವ್ಯಕ್ತಿಯೊಬ್ಬರು ಉನ್ನತ ಸ್ಥಾನ ಪಡೆದಿರುವುದು ಸಮಾಜ ಸಂಭ್ರಮ ಪಡುವ ಸಮಯವಾಗಿದೆ.ಅಶೋಕ್ ಕುಮಾರ್ ರೈಯವರಿಂದ ಮತ್ತಷ್ಟು ಸೇವಾಕಾರ‍್ಯಗಳು ಮತ್ತು ಪುತ್ತೂರಿನ ಸಮಗ್ರ ಅಭಿವೃದ್ಧಿ ನಡೆಯಲಿ ಎಂದು ಆಶಿಸಿದರು.


ಸಹಕಾರ ದೊರೆಯಲಿ -ಬೂಡಿಯಾರ್ ರಾಧಾಕೃಷ್ಣ ರೈ:
ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು ಮಾತನಾಡಿ ಬಂಟರ ಸಂಘದ ವತಿಯಿಂದ ಪುತ್ತೂರಿನಲ್ಲಿ ಶಶಿಕುಮಾರ್ ರೈ ಬಾಲ್ಯೊಟ್ಟುರವರ ನೇತೃತ್ವದಲ್ಲಿ ನೂತನ ಬಂಟರ ಭವನ ನಿರ್ಮಾಣ ಯೋಜನೆಗೆ ಶಾಶಕ ಅಶೋಕ್ ರೈಯವರು ಪೂರ್ಣ ಸಹಕಾರವನ್ನು ನೀಡುವಂತೆ ವಿನಂತಿಸಿ, ಅಶೋಕ್ ಕುಮಾರ್ ರೈಯವರಿಂದ ಬಂಟ ಸಮಾಜದ ಬಡವರಿಗೆ ವಿವಿಧ ರೀತಿಯ ಸಹಕಾರ ದೊರೆಯಲಿ ಎಂದು ಆಶಿಸಿದರು.


ಶಶಿಕುಮಾರ್ ರೈ ನೇತೃತ್ವದಲ್ಲಿ ಉತ್ತಮ ಕಾರ‍್ಯ- ಚನಿಲ:
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿಯವರು ನೃತ್ಯ ವೈಭವ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶಶಿಕುಮಾರ್ ರೈ ಬಾಲ್ಯೊಟ್ಟುರವರು ನೇತೃತ್ವದಲ್ಲಿ ಬಂಟರ ಸಂಘವು ಉತ್ತಮ ಕಾರ‍್ಯವನ್ನು ಮಾಡುತ್ತಿದೆ.ಬಂಟರ ಸಂಘಕ್ಕೆ ನೂತನ ಜಾಗ ಖರೀದಿ ಪ್ರಕ್ರಿಯೆ ಪೂರ್ಣವಾಗಿ, ನೂತನ ಬಂಟರ ಭವನ ನಿರ್ಮಾಣ ಶ್ರೀಘ್ರವಾಗಿ ನಡೆಯಲಿ ಎಂದರು.


ಮಾತೃ ಸಂಘದ ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತುರವರು ಪ್ರತಿಭಾ ಪುರಸ್ಕಾರವನ್ನು ನಡೆಸಿಕೊಟ್ಟರು.ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ನುಳಿಯಾಲು ಜಗನ್ನಾಥ ರೈ ಮಾದೋಡಿ, ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ, ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪವನ್ ಶೆಟ್ಟಿ ಉಪಸ್ಥಿತರಿದ್ದರು.ಸಭಾ ಕಾರ‍್ಯಕ್ರಮದಲ್ಲಿ ಸಮಾಜ ಬಾಂಧವರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರುಗಳಿಂದ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಹಾರಾರ್ಪಣೆ ನಡೆಯಿತು.


ಐಡಿ ಕಾರ್ಡ್ ವಿತರಣೆ:
ವಿ.ಬಿ.ಎಂ.ಎಸ್., ಮಹಿಳಾ ಸೌಹಾರ್ದ ಸಹಕಾರಿ ಸಂಘದ ಸದಸ್ಯರಿಗೆ ಪಾಲು ಬಂಡವಾಳ ಮತ್ತು ಐಡಿ ಕಾರ್ಡ್ ವಿತರಣೆಯನ್ನು ಶಾಸಕರು ನೇರವೇರಿಸಿದರು.
ಪ್ರತಿಭಾ ಪುರಸ್ಕಾರ: ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅಧಿಕ ಅಂಕಗಳನ್ನು ಗಳಿಸಿ ಸಾಧನೆ ಮಾಡಿರುವ ಬಂಟ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.
ತುಳುನಾಡ್ ಪರ್ಬದ ಲೋಗೋ ಅನಾವರಣ: ಜುಲೈ 23ರಂದು ಯುವ ಬಂಟರ ಸಂಘದ ವತಿಯಿಂದ ನಡೆಯುವ ‘ತುಳುನಾಡ್ ಪರ್ಬ’ದ ಲೋಗೋವನ್ನು ಶಾಶಕ ಅಶೋಕ್ ರೈಯವರು ಅನಾವರಣಗೊಳಿಸಿದರು.ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.


ನೃತ್ಯ ವೈವಿಧ್ಯ:
ಮಹಿಳಾ ಬಂಟರ ಸಂಘದ ಪ್ರಧಾನ ಕಾರ‍್ಯದಶೀ ಹರಿಣಾಕ್ಷಿ ಜೆ.ಶೆಟ್ಟಿಯವರ ಸಂಯೋಜನೆಯಲ್ಲಿ ಸುಮಾರು 1 ತಾಸು ವೈವಿಧ್ಯಮಯ ನೃತ್ಯ ಪ್ರದರ್ಶನ ನಡೆಯಿತು. ಮಧ್ಯಾಹ್ನ ಬಂಟ ಸಂಪ್ರದಾಯದ ಭೋಜನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಏರ್ಪಡಿಸಲಾಗಿತ್ತು.


ತಾಲೂಕು ಬಂಟರ ಸಂಘದ ಪ್ರಧಾನ ಕಾರ‍್ಯದರ್ಶಿ ರಮೇಶ್ ರೈ ಡಿಂಬ್ರಿರವರು ಸನ್ಮಾನ ಪತ್ರ ವಾಚಿಸಿದರು.ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ ವಂದಿಸಿದರು.ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕ ಕುಂಬ್ರ ದುರ್ಗಾಪ್ರಸಾದ್ ರೈ, ಪುತ್ತೂರು ಕಂಬಳ ಸಮಿತಿಯ ಉಪಾಧ್ಯಕ್ಷ ನಿರಂಜನ್ ರೈ ಮಠಂತಬೆಟ್ಟು ಕಾರ‍್ಯಕ್ರಮ ನಿರೂಪಿಸಿದರು.ಬಂಟರ ಸಂಘದ ಪ್ರಮುಖರಾದ ಚಿಲ್ಮೆತ್ತಾರು ಜಗಜೀವನ್‌ದಾಸ್ ರೈ, ಸುಬ್ಬಣ್ಣ ರೈ ಖಂಡಿಗ, ರೋಶನ್ ರೈ ಬನ್ನೂರು, ಕಡಮಜಲು ಸುಭಾಸ್ ರೈ, ಅಗರಿ ನವೀನ್ ಭಂಡಾರಿ, ಎ.ಕೆ.ಜಯರಾಮ ರೈ, ಎನ್.ಚಂದ್ರಹಾಸ ಶೆಟ್ಟಿ, ಕರುಣಾಕರ ರೈ ದೇರ್ಲ, ದೇರ್ಲ ಅಮ್ಮಣ್ಣ ರೈ ಪಾಪೆಮಜಲು, ಅನಿತಾ ಹೇಮನಾಥ ಶೆಟ್ಟಿ, ಶಿವರಾಮ್ ಆಳ್ವ ಬಳ್ಳಮಜಲು, ಪ್ರಕಾಶ್ ರೈ ಸಾರಕರೆ, ರವಿಪ್ರಸಾದ್ ಶೆಟ್ಟಿ ಬನ್ನೂರು,ಬೂಡಿಯಾರ್ ಪುರುಷೋತ್ತಮ್ ರೈರವರುಗಳು ಅತಿಥಿಗಳನ್ನು ಗೌರವಿಸಿದರು.

ಭ್ರಷ್ಟಾಚಾರದ ವಿರುದ್ಧ ಕೆಲಸ ಮಾಡುತ್ತೇನೆ ಬಡವರಿಗೆ ಅನ್ಯಾಯವಾಗಲು ಬಿಡೋದಿಲ್ಲ
ಬಂಟರ ಸಂಘ ತನಗೆ ಮಾಡಿರುವ ಅಭಿನಂದನೆಗೆ ಯಾವ ರೀತಿ ಕೃತಜ್ಞತೆ ಹೇಳಿದರೂ ಸಾಲದು. ಪ್ರಸ್ತುತ ಸಮಾಜದಲ್ಲಿ ಕಾಡುತ್ತಿರುವ ಭ್ರಷ್ಟಾಚಾರದ ವಿರುದ್ಧ ನಾನು ಕೆಲಸ ಮಾಡುತ್ತೇನೆ ಬಡವರಿಗೆ ಎಂದಿಗೂ ಅನ್ಯಾಯವಾಗಲು ಬಿಡೋದಿಲ್ಲ,ಯಾವುದೇ ಜಾತಿ, ಸಮುದಾಯ ಇರಲಿ, ಅವರಿಗೆ ಸಿಗಬೇಕಾದ ಸವಲತ್ತನ್ನು ಕೊಟ್ಟೇ ಕೊಡಿಸುತ್ತೇನೆ.ನನ್ನ ಭೇಟಿಗಾಗಿ ನೀವು ಯಾರ ಹಿಂದೆಯೂ ಹೋಗಬೇಕಾಗಿಲ್ಲ.ನೇರವಾಗಿ ನನ್ನನ್ನು ಭೇಟಿಯಾಗಿ, ಪ್ರತಿಯೊಂದು ಇಲಾಖೆಯ ಕೆಲಸ ಮಾಡಲು, ಅದಕ್ಕೆ ಬೇಕಾದ ವ್ಯವಸ್ಥೆಯನ್ನು ನಾನು ಮಾಡುತ್ತೇನೆ.ಇನ್ನು 15 ದಿನಗಳೊಳಗೆ ಸುಸಜ್ಜಿತವಾದ ನನ್ನ ಕಚೇರಿ ಆರಂಭವಾಗುತ್ತದೆ-
ಅಶೋಕ್ ಕುಮಾರ್ ರೈ, ಶಾಸಕರು, ಪುತ್ತೂರು

ಅಶೋಕ್ ರೈ ಸನ್ಮಾನ ಸಮಾರಂಭ, ಅಮೋಘ ಕಾರ‍್ಯಕ್ರಮ
ಈ ಹಿಂದೆ ಪುತ್ತೂರಿನ ಶಾಸಕರಾಗಿದ್ದ ಶಕುಂತಳಾ ಟಿ.ಶೆಟ್ಟಿ ಹಾಗೂ ಮಲ್ಲಿಕಾ ಪ್ರಸಾದ್‌ರವರನ್ನು ಬಂಟರ ಸಂಘದಿಂದ ಸನ್ಮಾನಿಸಿ, ಗೌರವಿಸಲಾಗಿತ್ತು.ಇದೀಗ ಬಂಟ ಸಮಾಜದ ಅಶೋಕ್ ಕುಮಾರ್ ರೈಯವರು ಪುತ್ತೂರಿನ ಶಾಸಕರಾಗಿದ್ದು, ಇವರನ್ನು ಬಂಟರ ಸಂಘದಿಂದ ಪಕ್ಷ ಭೇದ ಮರೆತು, ಬಂಟ ಸಮಾಜದ ಎಲ್ಲರೂ ಒಗ್ಗೂಡಿ ಅರ್ಥಪೂರ್ಣ ಕಾರ‍್ಯಕ್ರಮದ ಮೂಲಕ ಸನ್ಮಾನಿಸುವ ಕಾರ‍್ಯಕ್ರಮ ಯಶಸ್ವಿಯಾಗಿ ನಡೆಯಿತು.ಸುಮಾರು 1500ಕ್ಕೂ ಹೆಚ್ಚು ಮಂದಿ ಸಮಾಜ ಬಾಂಧವರ ಉಪಸ್ಥಿತಿ ಕಾರ‍್ಯಕ್ರಮಕ್ಕೆ ಶೋಭೆ ತಂದಿದೆ.ಈ ರೀತಿಯ ಕಾರ್ಯಕ್ರಮಗಳಿಗೆ ಮುಂದೆಯೂ ಸಮಾಜ ಬಾಂಧವರ ಸಹಕಾರ ಅಗತ್ಯ
-ಶಶಿಕುಮಾರ್ ರೈ ಬಾಲ್ಯೊಟ್ಟು, ಅಧ್ಯಕ್ಷರು ಬಂಟರ ಸಂಘ ಪುತ್ತೂರು ತಾಲೂಕು


LEAVE A REPLY

Please enter your comment!
Please enter your name here