ಉಪ್ಪಿನಂಗಡಿ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಉಪ್ಪಿನಂಗಡಿಯ ಕುಮಾರಧಾರ ಸೇತುವೆಯು ನಿರ್ವಹಣೆ ಕೊರತೆಯಿಂದ ಬಳಲುತ್ತಿದ್ದು, ಮಳೆಗಾಲದಲ್ಲಿ ಇದರಲ್ಲಿ ನೀರು ನಿಂತು ಪಾದಚಾರಿಗಳಿಗೆ, ದ್ವಿಚಕ್ರ ಸವಾರರು ಹೋಗುವಾಗ ಕೆಸರ ನೀರಿನ ಪ್ರೋಕ್ಷನಕ್ಕೆ ಸಿಲುಕುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸುಪರ್ದಿಗೆ ಬರುವ ಈ ಸೇತುವೆಯ ಬದಿಯಲ್ಲಿ ಸೇತುವೆಯ ಮೇಲಿನ ನೀರು ಹರಿಯಲು ಮಾಡಿದ ಎಲ್ಲಾ ರಂಧ್ರಗಳು ಮಣ್ಣು, ಕಸಕಡ್ಡಿಗಳಿಂದ ಮುಚ್ಚಿ ಹೋಗಿವೆ. ಇದರಿಂದಾಗಿ ಜೋರು ಮಳೆ ಬಂದಾಗ ಇದರಲ್ಲಿ ನೀರು ನಿಲ್ಲುತ್ತಿದ್ದು, ವಾಹನಗಳು ಸೇತುವೆಯ ಮೇಲೆ ಸಂಚರಿಸುವಾಗ ಈ ಕೆಸರು ನೀರು ಪಾದಚಾರಿಗಳ, ದ್ವಿಚಕ್ರ ವಾಹನ ಸವಾರರ ಮೇಲೆ ಸಿಂಪರಣೆಯಾಗುತ್ತದೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಲಂದರ್ ಶಾಫಿ, ಸೇತುವೆಯ ಎರಡೂ ಬದಿಯಲ್ಲಿ ಮಣ್ಣು ತುಂಬಿದ್ದರಿಂದ ಸರಾಗವಾಗಿ ನೀರು ಹರಿಯದೇ ಸೇತುವೆಯ ಮೇಲೆಯೇ ನಿಲ್ಲುತ್ತಿದೆ. ಈ ಸೇತುವೆಯಲ್ಲಿ ವಿದ್ಯಾರ್ಥಿಗಳು, ಪಾದಚಾರಿಗಳು ದ್ವಿಚಕ್ರ ಸವಾರರು, ಅಟೋ ರಿಕ್ಷಾಗಳು ಸಂಚರಿಸುತ್ತಿರುತ್ತಾರೆ. ರಾಷ್ಟ್ರೀಯ ಹೆದ್ದಾರಿ ಇದಾಗಿರುವುದರಿಂದ ಅದೆಷ್ಟೋ ಘನ ವಾಹನಗಳು ಇಲ್ಲಿ ಸಂಚರಿಸುತ್ತಿವೆ. ಆಗ ಪಾದಚಾರಿಗಳು, ದ್ವಿಚಕ್ರ ಸವಾರರು, ಅಟೋ ರಿಕ್ಷಾ ಪ್ರಯಾಣಿಕರ ಮೇಲೆ ಕೆಸರು ನೀರಿನ ಸಿಂಪರಣೆಯಾಗುತ್ತದೆ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶೀಘ್ರವೇ ಇದರ ಸೇತುವೆ ಬದಿಯಲ್ಲಿರುವ ಮಣ್ಣುಗಳನ್ನು ತೆಗೆದು ನಿರ್ವಹಣೆಯನ್ನು ನಡೆಸಬೇಕು ಎಂದು ಆಗ್ರಹಿಸಿದ್ದಾರೆ.