ಪುತ್ತೂರು: ಭೂಮಿಯ ಮೇಲೆ ಇರುವ ಪ್ರತಿಯೊಂದು ಜೀವ ವೈವಿಧ್ಯಗಳ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳುವುದು ಅಗತ್ಯ.ನಾವು ಪ್ರಕೃತಿಯನ್ನು ಸಂರಕ್ಷಿಸಿದಾಗ ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ.ಎಂದು ನರೇಂದ್ರ ಪ.ಪೂ. ಕಾಲೇಜಿನ ಗ್ರಾಮವಿಕಾಸ ಸಮಿತಿ ಕುರಿಯ ಗ್ರಾಮ ಇದರ ಉಪಾಧ್ಯಕ್ಷ ರೇಖನಾಥ ರೈ ಹೇಳಿದರು.
ನರೇಂದ್ರ ಪ.ಪೂ.ಕಾಲೇಜಿನಲ್ಲಿ ಹಮ್ಮಿಕೊಂಡಿರುವ ಕುರಿಯ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಔಷಧೀಯ ಸಸ್ಯ ಸಂಕುಲದ ಸಂರಕ್ಷಣೆಯ ಉದ್ದೇಶದಿಂದ ಆಯೋಜಿಸಿದ ವಿವೇಕ ಸಂಜೀವಿನಿ ಕಾರ್‍ಯಕ್ರಮವು ಕುರಿಯ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ರೇಖನಾಥ ರೈ ಮಾತನಾಡಿದರು.
ಕುರಿಯ ಗ್ರಾಮದ ಅಭಿವೃದ್ಧಿಯಲ್ಲಿ ಸದಾ ಸಹಕರಿಸುತ್ತಿರುವ ನರೇಂದ್ರ ಪ.ಪೂ.ಕಾಲೇಜಿನ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಲವು ಜಾತಿಯ ಔಷಧೀಯ ಗಿಡಗಳನ್ನು ಅಂಗನವಾಡಿ ಕೇಂದ್ರದ ಆವರಣದಲ್ಲಿ ನೆಡುವ ಮೂಲಕ ಆ ಸಸ್ಯಗಳ ಸಂರಕ್ಷಣೆ,ಸಂವರ್ಧನೆ ಮತ್ತು ಬಳಕೆಯ ಬಗ್ಗೆ ಜನಜಾಗೃತಿಯ ಆಂದೋಲನದಲ್ಲಿ ಭಾಗವಹಿಸಿದರು.
ವಿವೇಕ ಸಂಜೀವಿನಿ ಎಂಬ ವಿಶಿಷ್ಟ ಕಲ್ಪನೆಯಲ್ಲಿ ಸಾಕಾರಗೊಂಡ ಈ ಕಾರ್‍ಯಕ್ರಮ ಕಾಲೇಜಿನ ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿಯನ್ನಲ್ಲದೆ ಸಮಾಜ ದರ್ಶನದ ಅನುಭವವನ್ನೂ ನೀಡಿತು.
ಈ ಕಾರ್‍ಯಕ್ರಮದಲ್ಲಿ ನರೇಂದ್ರ ಪ.ಪೂ. ಕಾಲೇಜಿನ ಗ್ರಾಮವಿಕಾಸ ಸಮಿತಿ ಕುರಿಯ ಗ್ರಾಮ ಇದರ ಸದಸ್ಯ ಗಣೇಶ್ ರೈ ಬೂಡಿಯಾರ್,ಕುರಿಯ ಗ್ರಾಮ ಪಂಚಾಯತ್ ಸದಸ್ಯೆ ಕಲಾವತಿ,ಮಾಜಿ ಸದಸ್ಯೆ ಸುಧಾಮಣಿ ಬಿ.ರೈ. ಬೂಡಿಯಾರ್,ಕುರಿಯದ ಅಂಗನವಾಡಿ ಕೇಂದ್ರದ ಅಧ್ಯಕ್ಷೆ ಮೋಕ್ಷಿತಾ, ಅಂಗನವಾಡಿ ಕೇಂದ್ರದ ಶಿಕ್ಷಕಿ ಕಮಲ,ನರೇಂದ್ರ ಪ.ಪೂ. ಕಾಲೇಜಿನ ಗ್ರಾಮ ವಿಕಾಸ ಸಮಿತಿಯ ಸಂಯೋಜಕ ಉಪನ್ಯಾಸಕ ಕಾರ್ತಿಕ್ ಕುಮಾರ್, ಗ್ರಂಥಪಾಲಕ ಮಂಜು ಗಣೇಶ್ ಉಪಸ್ಥಿತರಿದ್ದರು.