ನೆಲ್ಯಾಡಿ: ನೆಲ್ಯಾಡಿಯಿಂದ ಉಪ್ಪಿನಂಗಡಿಗೆ ಸಂಜೆ ವೇಳೆಗೆ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ಸು ಸೌಲಭ್ಯ ಕಲ್ಪಿಸಿ ಎಂದು ಶಾಲಾ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
ಉಪ್ಪಿನಂಗಡಿ, ವಳಾಲು, ಬೆದ್ರೋಡಿ, ನೀರಕಟ್ಟೆ, ಕಾಂಚನ ಕ್ರಾಸ್, ಸಣ್ಣಂಪಾಡಿ, ಗೋಳಿತ್ತೊಟ್ಟು, ಆರ್ಲ ಕೊಣಾಲು ಮುಂತಾದ ಕಡೆಗಳಿಂದ ನೆಲ್ಯಾಡಿಯ ಸಂತಜಾರ್ಜ್ ವಿದ್ಯಾಸಂಸ್ಥೆ, ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆ, ಐಟಿಐ, ನೆಲ್ಯಾಡಿ ವಿಶ್ವವಿದ್ಯಾಲಯಕ್ಕೆ ನೂರಾರು ವಿದ್ಯಾರ್ಥಿಗಳು ಬರುತ್ತಾರೆ. ಈ ವಿದ್ಯಾರ್ಥಿಗಳಿಗೆ ಉಪ್ಪಿನಂಗಡಿಯಿಂದ ನೆಲ್ಯಾಡಿಗೆ ಬೆಳಿಗ್ಗೆ ಬಸ್ಸಿನ ವ್ಯವಸ್ಥೆ ಇದ್ದು ಸಂಜೆಯ ಸಮಯದಲ್ಲಿ ಸರಿಯಾದ ಸಮಯಕ್ಕೆ ಬಸ್ಸಿನ ಸೌಲಭ್ಯವಿಲ್ಲ. ವಿದ್ಯಾರ್ಥಿಗಳು ಬಸ್ಸು ಪಾಸ್ ಮಾಡಿದರೂ ಸಂಜೆಯ ವೇಳೆ ಬಸ್ಸಿನ ವ್ಯವಸ್ಥೆ ಇಲ್ಲದೇ ಇರುವುದು ಸಮಸ್ಯೆಯಾಗಿದೆ. ವಿದ್ಯಾರ್ಥಿಗಳು ಜೀಪು ಇಲ್ಲವೇ ಇತರೇ ವಾಹನಗಳಲ್ಲಿ ಮನೆಗೆ ಹೋಗಬೇಕಾಗಿದೆ.
3.45ರ ವೇಳೆಗೆ ನೆಲ್ಯಾಡಿಯಿಂದ ಉಪ್ಪಿನಂಗಡಿಗೆ ಎರಡು ಸರಕಾರಿ ಬಸ್ಸುಗಳಿವೆ. ಆದರೆ ಇದು ವಿದ್ಯಾರ್ಥಿಗಳಿಗೆ ಪ್ರಯೋಜನವಿಲ್ಲದಂತೆ ಆಗಿದೆ. ಆದ್ದರಿಂದ ಸಂಜೆ 4.15ರಿಂದ 4.30ರ ಒಳಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸರಕಾರಿ ಬಸ್ಸಿನ ವ್ಯವಸ್ಥೆ ಮಾಡುವಂತೆ ವಿದ್ಯಾರ್ಥಿಗಳು, ಅವರ ಪೋಷಕರು ಮನವಿ ಮಾಡಿದ್ದಾರೆ.