ಮಠಂತಬೆಟ್ಟು ದೇವಳದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ – 450ಕ್ಕೂ ಅಧಿಕ ಮಂದಿ ಭಾಗಿ

0

ಪುತ್ತೂರು: ಯೋಗ ಜಾತಿ, ಮತ, ದೇಶ, ಕಾಲಗಳ ವ್ಯಾಪ್ತಿಯನ್ನು ಮೀರಿ, ಸರ್ವರಿಗೂ ಸಲ್ಲುವಂತಹ ಜೀವನ ಕಲೆ, ಆಧ್ಯಾತ್ಮಿಕ ಸಾರವಾಗಿದೆ. ಇಂತಹ ಅಮೂಲ್ಯ ವಿದ್ಯೆಯು ವಿಶ್ವವ್ಯಾಪ್ತಿಯಾಗಿ ಜನ ಜೀವನದಲ್ಲಿ ಜೀವನ ಕಲೆಯಾಗಿ ಬೆರೆತು ದೇಹ ಹಾಗೂ ಮನಸ್ಸನ್ನು ಜೋಡಿಸಿ ಸಾಧಕನ ಸಾಧನ ಪಥವಾಗಬೇಕು, ವಿಶ್ವದ ಕಟ್ಟ ಕಡೆಯ ವ್ಯಕ್ತಿಗೂ ಯೋಗ ಸ್ಪರ್ಶವಾಗಬೇಕು ಎಂಬ ಉದ್ದೇಶದಿಂದ ಪ್ರತಿ ವರ್ಷ ಜೂ.21 ಎಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಈ ನಿಟ್ಟಿನಲ್ಲಿ ಸಂಸ್ಕಾರ, ಸಂಘಟನೆ, ಸೇವೆ ಎಂಬ ಧ್ಯೇಯೋದ್ದೇಶವನ್ನು ಹೊಂದಿರುವ ಎಸ್‌ಪಿವೈಎಸ್‌ಎಸ್ ಕರ್ನಾಟಕ ನೇತ್ರಾವತಿ ವಲಯ ಪುತ್ತೂರು ತಾಲೂಕು ದ.ಕ ಜಿಲ್ಲೆ, ಶ್ರೀ ಪತಂಜಲಿ ಯೋಗ ಶಿಕ್ಷಣ ಫೌಂಡೇಶನ್ ಮಂಗಳೂರು, ಶ್ರೀ ಮಹಿಷಮರ್ಧಿನಿ ದೇವಸ್ಥಾನ ಮಠಂತಬೆಟ್ಟು ಹಾಗೂ ಆಯುಷ್ ಇಲಾಖೆ ದ.ಕ ಜಿಲ್ಲೆ ಇವರ ಸಹಯೋಗದಿಂದಿಗೆ ಯೋಗ ಸರ್ವ ವ್ಯಾಪ್ತಿ, ಸರ್ವ ಸ್ಪರ್ಶ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.


ಮುಂಜಾನೆ 5 ಗಂಟೆಯಿಂದ ಬೆಳಿಗ್ಗೆ 7 ಗಂಟೆಯ ತನಕ ನಡೆದ ಕಾರ್ಯಕ್ರಮದಲ್ಲಿ ಮೊದಲನೆಯ ಅವಧಿಯನ್ನು ಶಿಕ್ಷಕರುಗಳಾದ ಪಾಂಗಳಾಯಿ ಶಾಖೆಯ ಶ್ರೀಲತ, ಸುಜಾತ ಹಾಗೂ ಸತೀಶ್ ನಡೆಸಿಕೊಟ್ಟರು. ಈ ನಡುವೆ ನಡೆದ ಸಭಾ ಕಾರ್ಯಕ್ರಮವನ್ನು ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಪ್ರಧಾನ ಅರ್ಚಕ ರಾಮಕೃಷ್ಣ ಭಟ್‌ರವರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಮಿತಿಯ ಸಂಚಾಲಕ ಪುಷ್ಪರಾಜ್, ಉಪ್ಪಿನಂಗಡಿ ಸಹ ಶಿಕ್ಷಣ ಪ್ರಮುಖ್ ಪ್ರದೀಪ್, ಮಾತೃಛಾಯೆ ಶಾಖೆಯ ಶಿಕ್ಷಕಿ ಸುಲತ, ಕಳೆದ 10 ವರ್ಷದಿಂದ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಮಾರ್ಗದರ್ಶಕರಾದ ಆನಂದ್ ಕದ್ರಿ ನಗರ, ಶ್ರೀ ಮಹಾಲಿಂಗೇಶ್ವರ ಶಾಖೆಯ ಶಿಕ್ಷಕ ವಸಂತ ಸುವರ್ಣ, ಪುತ್ತೂರು ತಾಲೂಕು ಸಂಚಾಲಕ ಯೋಗೀಶ್, ನೇತ್ರಾವತಿ ವಲಯ ಸಂಯೋಜಕ ಅಶೋಕ್‌ರವರು ಉಪಸ್ಥಿತರಿದ್ದರು.


ಕಾರ್ಯಕ್ರಮದ ಎರಡನೇ ಅವಧಿಯಲ್ಲಿ ಆಯುಷ್ ಅಭ್ಯಾಸವನ್ನು ನಡೆಸಿಕೊಡಲಾಯಿತು. ಆಫೀಸರ‍್ಸ್ ಕ್ಲಬ್ ಶಾಖೆಯ ಮುಖ್ಯ ಶಿಕ್ಷಕ ಕೃಷ್ಣಾನಂದ, ಮಹಾಲಿಂಗೇಶ್ವರ ಶಾಖೆಯ ಶಿಕ್ಷಕ ರಾಜೇಶ್, ದೀಕ್ಷಾ ನಡೆಸಿಕೊಟ್ಟರು. ಲಯನ್ಸ್ ಕ್ಲಬ್ ಶಾಖೆಯ ದಿವ್ಯಶ್ರೀಯವರು ಪ್ರಾರ್ಥಿಸಿದರು. ಶ್ರೀ ಮಹಾಲಿಂಗೇಶ್ವರ ಶಾಖೆಯ ದೇವಣ್ಣರವರು ಅಮೃತ ವಚನ ವಾಚಿಸಿದರು. ಶ್ರೀ ಮಹಾಲಿಂಗೇಶ್ವರ ಶಾಖೆಯ ಸರೋಜ ಪಂಚಾಂಗ ಪಠಣ ಪಠಿಸಿದರು. ಲಯನ್ಸ್ ಕ್ಲಬ್ ಶಾಖೆಯ ಮಮತಾ ವಂದಿಸಿದರು. ಮಂಜುಳಾದೇವಿ ಕಾರ್ಯಕ್ರಮ ನಿರೂಪಿಸಿದರು.



450ಕ್ಕೂ ಅಧಿಕ ಮಂದಿ ಭಾಗಿ
ಮುಂಜಾವು 5 ಗಂಟೆಯಿಂದ 7 ಗಂಟೆಯ ತನಕ ನಡೆದ ಈ ಯೋಗ ದಿನಾಚರಣೆಯಲ್ಲಿ ಎಸ್‌ಪಿವೈಎಸ್‌ಎಸ್‌ನ ಬಿಸಿರೋಡ್, ಕಲ್ಲಡ್ಕ, ಉಪ್ಪಿನಂಗಡಿ, ಆಲಂಕಾರ್,ಸುಬ್ರಹ್ಮಣ್ಯ, ಪಂಜ ಮತ್ತು ಪುತ್ತೂರು ತಾಲೂಕಿನ ಎಲ್ಲಾ ಯೋಗಬಂಧುಗಳು, ಇತರೇ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 450ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.



ಯೂನಿಫಾರಂ ಧಾರಿಗಳಿಂದ ಯೋಗ
ಎಸ್‌ಪಿವೈಎಸ್‌ಎಸ್‌ನ ಯೋಗಬಂಧುಗಳಿಗೆ ಅವರದೇ ಆದ ಯೂನಿಫಾರಂ ಇದೆ. ಹಳದಿ ಬಣ್ಣ ವಸ್ತ್ರ ಧರಿಸಿದ 450ಕ್ಕೂ ಅಧಿಕ ಮಂದಿ ಕಾರ್ಯಕ್ರಮದ ಎರಡು ಅವಧಿಗಳಲ್ಲಿ ವಿವಿಧ ಯೋಗಾಸನಗಳನ್ನು ಮಾಡಿದರು. ಅತ್ಯಂತ ಶಿಸ್ತಿನಿಂದ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಒಂದು ಮಾದರಿ ಕಾರ್ಯಕ್ರಮವಾಯಿತು.



ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ
ಎಸ್‌ಪಿವೈಎಸ್‌ಎಸ್ ಕರ್ನಾಟಕ ಇಂದು ಯೋಗ ವಿದ್ಯೆಯ ಮುಖಾಂತರ ಸಮಾಜವನ್ನು ಪುಷ್ಠೀಕರಣ ಮಾಡುತ್ತಿರುವ ಸಂಘಟನೆಯಾಗಿದೆ. ಸಂಘಟನೆಯು 1980ರಲ್ಲಿ ತುಮಕೂರಿನಲ್ಲಿ ಆರಂಭವಾಯಿತು. ಸಮಿತಿಯ ಮೂಲ ಶಿಲ್ಪಿ ಅ.ರ.ರಾಮಸ್ವಾಮಿ ಅಣ್ಣನವರ ನೇತೃತ್ವದಲ್ಲಿ ಒಂದು ಪುಟ್ಟ ಯೋಗ ತರಗತಿ ಸ್ವರೂಪದಲ್ಲಿ ಜನ್ಮ ತಳೆದು ಇಂದು 1500 ಶಾಖೆಗಳ ಮುಖಾಂತರ ಸುಮಾರು 8 ಸಾವಿರಕ್ಕೂ ಹೆಚ್ಚು ಯೋಗ ಶಿಕ್ಷಕರು ಮತ್ತು ಲಕ್ಷಾಂತರ ಯೋಗ ಬಂಧುಗಳ ಪರಿವಾರದ ಹೆಮ್ಮರವಾಗಿ ಬೆಳೆದಿದೆ. ಸಂಸ್ಕಾರ, ಸೇವೆ ಮತ್ತು ಸಂಘಟನೆ ಧ್ಯೇಯೋದ್ದೇಶದೊಂದಿಗೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯು ಕಳೆದ 43 ವರ್ಷಗಳಿಂದ ಸಮಿತಿಯ ಪ್ರಧಾನ ಸಂಚಾಲಕರಾದ ಅ.ರಾ.ರಾಮಸ್ವಾಮಿ ಅಣ್ಣನವರ ಮಾರ್ಗದರ್ಶನದಲ್ಲಿ ನುರಿತ ಯೋಗಶಿಕ್ಷಕರಿಂದ ಸಂಪೂರ್ಣ ಉಚಿತವಾಗಿ ಕರ್ನಾಟಕ ಕೇಂದ್ರವಾಗಿರಿಸಿಕೊಂಡು ವಿವಿಧ ರಾಜ್ಯ, ಹೊರರಾಷ್ಟ್ರಗಳಲ್ಲಿ ನಿತ್ಯ ಸಾವಿರಾರು ಶಾಖೆಗಳ ಮೂಲಕ ಲಕ್ಷಾಂತರ ಜನರಿಗೆ ಯೋಗದ ಮೂಲಕ ಸಂಸ್ಕಾರಯುತ ಜೀವನ ಶೈಲಿಯನ್ನು ನೀಡುತ್ತಿದೆ. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯು ಮಂಗಳೂರಿನಲ್ಲಿ 200ಕ್ಕೂ ಹೆಚ್ಚು ಶಾಖೆ ಹಾಗೂ ಪುತ್ತೂರಿನಲ್ಲಿ 13 ಶಾಖೆಗಳನ್ನು ಹೊಂದಿದ್ದು, ಸಾವಿರಾರು ಜನರಿಗೆ ಯೋಗ ಶಿಕ್ಷಣದ ಜೊತೆಗೆ ಆರೋಗ್ಯ,ಧನಾತ್ಮಕ ಚಿಂತನೆ,ಕ್ರಿಯಾಶೀಲ ವ್ಯಕ್ತಿತ್ವ, ಆದರ್ಶ ಕುಟುಂಬದ ತರಬೇತಿ ನೀಡಿ ಸಮಾಜದಲ್ಲಿ ಉತ್ತಮವಾದ ಪರಿವರ್ತನೆಗೆ ಕಾರಣವಾಗಿದೆ.

LEAVE A REPLY

Please enter your comment!
Please enter your name here