ಉಪ್ಪಿನಂಗಡಿ: ವಲಯ ಕಾಂಗ್ರೆಸ್ ಸಭೆ

0

ಶಾಲು, ಸನ್ಮಾನಕ್ಕಿಂತ ಕ್ಷೇತ್ರದ ಅಭಿವೃದ್ಧಿ ಮುಖ್ಯ: ಅಶೋಕ್ ಕುಮಾರ್ ರೈ


ಉಪ್ಪಿನಂಗಡಿ: ನನ್ನ ಶಾಸಕತ್ವದ ಅವಧಿಯಲ್ಲಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕೆಂಬ ಚಿಂತನೆಯಿಟ್ಟುಕೊಂಡಿದ್ದೇನೆ. ನಾನು ಶಾಸಕನಾಗಿ ಒಂದು ತಿಂಗಳು ಕಳೆದು ಹೋದರೂ ಅದು ನನ್ನ ಶಾಸಕತ್ವದ ಅವಧಿಯ ಐದು ವರ್ಷದಲ್ಲಿ ಒಂದು ತಿಂಗಳು ಕಳೆದು ಹೋದಂತೆ. ಆದ್ದರಿಂದ ಶಾಲು, ಸನ್ಮಾನಕ್ಕಿಂತ ಮೊದಲಾಗಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳತ್ತ ಯೋಚಿಸುವುದು ಮುಖ್ಯವಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಉಪ್ಪಿನಂಗಡಿಯ ರೋಟರಿ ಭವನದಲ್ಲಿ ನಡೆದ ಉಪ್ಪಿನಂಗಡಿಯ ವಲಯ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಹಣದ ವರ್ಗಾವಣೆಗಳಾದಾಗ ಮಾತ್ರ ನಗರವೊಂದು ಬೆಳೆಯಲು ಸಾಧ್ಯ. ಪುತ್ತೂರು ತಾಲೂಕು ವ್ಯವಹಾರಿಕವಾಗಿ ಅಡಿಕೆಯೊಂದನ್ನೇ ನಂಬಿಕೊಂಡಿದೆ. ಇದರೊಂದಿಗೆ ಉದ್ಯಮಗಳು ಪುತ್ತೂರಿನಲ್ಲಿ ಬೆಳೆಯಬೇಕಿದೆ. ಇದರಿಂದಾಗಿ ಉದ್ಯೋಗ ಸೃಷ್ಟಿಯಾಗಿ ಜನರಲ್ಲಿ ಹಣದ ಚಲಾವಣೆಯೂ ಇರುತ್ತದೆ. ಇದರಿಂದಾಗಿ ಪೇಟೆಯೂ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದು, ಕೆಎಂಎಫ್‌ನ ಹಾಲು ಪ್ಯಾಕೇಟ್ ಘಟಕಕ್ಕೆ 15 ಎಕರೆ ಸ್ಥಳಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೊಯಿಲದ ಪಶು ವೈದ್ಯಕೀಯ ಕಾಲೇಜನ್ನು ದೇಶದಲ್ಲಿ ಮಾದರಿ ಕಾಲೇಜಾಗಿ ರೂಪಿಸುವ ಕನಸಿದ್ದು, ದೇಶದಲ್ಲಿ ನಾಲ್ಕು ಅತ್ಯುನ್ನತ ದರ್ಜೆಯ ಪಶು ವೈದ್ಯಕೀಯ ಕಾಲೇಜನ್ನು ಸ್ಥಾಪಿಸುವ ಕೇಂದ್ರದ ಯೋಜನೆಯಿದ್ದು, ಅದರ ಸಮಿತಿಗೆ ಒಂದು ಕಾಲೇಜಾಗಿ ಕೊಯಿಲದ ಪಶು ವೈದ್ಯಕೀಯ ಕಾಲೇಜನ್ನು ತೆಗೆದುಕೊಳ್ಳಲು ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದೇನೆ. ಅಲ್ಲದೇ, ಸುಳ್ಯ ಹಾಗೂ ಪುತ್ತೂರು ತಾಲೂಕಿಗೆ ಸಂಬಂಧಪಟ್ಟು ಬೃಹತ್ ಕುಡಿಯುವ ನೀರಿನ ಯೋಜನೆಯನ್ನು ತರಲು, ಕುಮಾರಧಾರ ನದಿಗಡ್ಡವಾಗಿ ಬೆಳ್ಳಿಪ್ಪಾಡಿಯ ಕಟಾರದಲ್ಲಿ, ಉಪ್ಪಿನಂಗಡಿಯ ಸಂಗಮ ಕ್ಷೇತ್ರದ ಬಳಿ ಕಿಂಡಿ ಅಣೆಕಟ್ಟು, ಪುತ್ತೂರಿಗೆ 700 ಕೋಟಿಯ ಒಳಚರಂಡಿ ಯೋಜನೆ, ಮಳೆಗಾಲದಲ್ಲಿಯೂ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ನೇತ್ರಾವತಿ ನದಿಯಲ್ಲಿರುವ ಉದ್ಭವ ಲಿಂಗದ ದರ್ಶನ ಪಡೆಯುವ ಹಾಗೆ ವ್ಯವಸ್ಥೆಗೆ, ಉಪ್ಪಿನಂಗಡಿಯಲ್ಲಿ ಪ್ರವಾಸೋದ್ಯಮ ಕೇಂದ್ರವಾಗಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ನನಗೆ ಕೆಲಸ ಮುಖ್ಯವಾಗಿದ್ದು, ಶಾಸಕನಾದ ಮೇಲೆ ಒಂದು ದಿನವೂ ವ್ಯರ್ಥಾವಾಗದಂತೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬೆನ್ನು ಬಿದ್ದಿದ್ದೇನೆ. ಇದರೊಂದಿಗೆ ಬಡವರಿಗೆ ಸರಕಾರಿ ಇಲಾಖೆಗಳಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳುತ್ತಿದ್ದೇನೆ. ಅಕ್ರಮ- ಸಕ್ರಮ, 94 ಸಿಯ ಕುರಿತಾಗಿ ಸುಳ್ಯದಿಂದಲೂ ಜನರು ನನ್ನ ಬಳಿ ಬರುತ್ತಾರೆ. ನನ್ನ ಹಾಗೂ ಪಕ್ಷದ ಗೆಲುವಿಗಾಗಿ ಕಾರ್ಯಕರ್ತರು ಬಿಸಿಲನ್ನು ಲೆಕ್ಕಿಸದೇ ದುಡಿದಿದ್ದೀರಿ. ನಿಮ್ಮ ಈ ಋಣವನ್ನು ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಮೂಲಕ ತೀರಿಸುತ್ತೇನೆ ಎಂದರು.


ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲಾ ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಬಳಿಕ ಈಡೇರಿಸಿದೆ. ಇದನ್ನು ಪಕ್ಷ ಬೇಧವಿಲ್ಲದೆ ಎಲ್ಲರ ಮನೆ- ಮನೆ ಮುಟ್ಟಿಸುವ ಕೆಲಸ ಕಾಂಗ್ರೆಸ್ ಕಾರ್ಯಕರ್ತರಿಂದಾಗಬೇಕು. ಜನರಿಗೆ ಸಹಾಯ ಮಾಡುವ ಮೂಲಕ ಜನರ ಪ್ರೀತಿಗಳಿಸಿ ಪಕ್ಷವನ್ನು ಭದ್ರವಾಗಿ ಕಟ್ಟೋಣ. ನಿಮ್ಮೊಂದಿಗೆ ನಾನು ಶಕ್ತಿಯಾಗಿರುತ್ತೇನೆ ಎಂದು ಅಶೋಕ್ ಕುಮಾರ್ ರೈ ತಿಳಿಸಿದರು.


ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ಪ್ರಾಸ್ತಾವಿಕವಾಗಿ ಮಾತನಾಡಿ, ಶಾಸಕರು ಪ್ರತಿ ವಲಯಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯಕರ್ತರೊಂದಿಗೆ ಮಾತನಾಡಬೇಕು ಎಂಬ ಪರಿಕಲ್ಪನೆಯೊಂದಿಗೆ ಈ ಕಾರ್ಯಕ್ರಮ ಮಾಡಲಾಗುತ್ತಿದೆ. ಮುಂದೆ ತಾ.ಪಂ., ಜಿ.ಪಂ. ಹಾಗೂ ಲೋಕಸಭಾ ಚುನಾವಣೆಯು ಬರಲಿದ್ದು, ಇದಕ್ಕೆ ನಾವೆಲ್ಲಾ ಈಗಿನಿಂದಲೇ ಸನ್ನದ್ಧರಾಗಬೇಕಿದೆ. ಈಗ ರಾಜ್ಯದಲ್ಲಿಯೂ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದು, ಬಡವರಿಗೆ ಉತ್ತಮ ಯೋಜನೆಯನ್ನು ಜಾರಿಗೆ ತಂದಿದೆ. ಇದು ನಮಗೊಂದು ಶಕ್ತಿಯಾಗಿದೆ ಎಂದರು.


ಕಾರ್ಯಕ್ರಮದ ಕೊನೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಉಮಾನಾಥ ಶೆಟ್ಟಿ ಪೆರ್ನೆ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವಾಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ದ.ಕ. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸೋಮನಾಥ, ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಫಾರೂಕ್ ಪೆರ್ನೆ, ಸೇವಾದಳದ ಬ್ಲಾಕ್ ಅಧ್ಯಕ್ಷ ಸಿದ್ದೀಕ್ ಕೆಂಪಿ, ಉಪ್ಪಿನಂಗಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಆದಂ ಕೊಪ್ಪಳ, ಹಿರಿಯ ಕಾಂಗ್ರೆಸಿಗರಾದ ಕೃಷ್ಣರಾವ್ ಆರ್ತಿಲ, ಯು.ಕೆ. ಅಯೂಬ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರಾದ ಯು.ಟಿ. ತೌಸೀಫ್, ಸಣ್ಣಣ್ಣ, ಇಬ್ರಾಹೀಂ ಕೆ., ಮುಖಂಡರಾದ ಶಬೀರ್ ಕೆಂಪಿ ವೆಂಕಪ್ಪ ಮರುವೇಲು, ಇಬ್ರಾಹೀಂ ಆಚಿ, ಮಾಯಿಲ್ತೋಡಿ ಈಶ್ವರ ಭಟ್, ಉಮೇಶ್, ಫಾರೂಕ್ ಮತ್ತಿತರರು ಇದ್ದರು.
ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ಅಬ್ದುರ್ರಹ್ಮಾನ್ ಕೆ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here