





ಮಕ್ಕಳು ಶಾಲೆಗೆ ನಗುನಗುತ್ತಾ ಬರುವಂತಾಗಬೇಕು : ಸುಬ್ರಹ್ಮಣ್ಯ ನಟ್ಟೋಜ
ಪುತ್ತೂರು: ಪ್ರತಿಯೊಂದು ಮಗುವಿನಲ್ಲಿಯೂ ವಿಶೇಷವಾದ ಚೇತನ ಇರುತ್ತದೆ. ವಿಕಲಚೇತನ ಮಕ್ಕಳಲ್ಲಿಯೂ ಕುಶಲತೆ ಇರುತ್ತದೆ. ಹೀಗೆ ಕೌಶಲ್ಯದ ಜತೆಜತೆಗೆ ವಿದ್ಯಾರ್ಥಿಗಳಲ್ಲಿ ಒಂದೊಂದು ನ್ಯೂನತೆಯೂ ಇರುತ್ತದೆ. ಅದರ ಪರಿಹಾರಕ್ಕಾಗಿ ಹೆತ್ತವರು ಹಾಗೂ ಶಿಕ್ಷಕರು ಒಟ್ಟಾಗಿ ಕುಳಿತು ಚರ್ಚಿಸುವ ಅಗತ್ಯವಿದೆ. ಮಗುವಿನ ಬೆಳವಣಿಗೆಗೆ ಪೋಷಕರು ಮತ್ತು ಶಿಕ್ಷಕರ ನಡುವಿನ ಸಂಬಂಧ ಅತ್ಯಂತ ಮುಖ್ಯವಾಗಿರುತ್ತದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಪೋಷಕರ ಸಭೆಯಲ್ಲಿ ಶನಿವಾರ ಮಾತನಾಡಿದರು





ಪ್ರತಿಯೊಂದು ಮಗುವು ಕೂಡ ಶಾಲೆಗೆ ನಗುನಗುತ್ತಾ ಬರಬೇಕು. ಅಂತಹ ವಾತಾವರಣ ಸೃಷ್ಟಿಯಾಗಬೇಕು. ಇಲ್ಲದಿದ್ದರೆ ಮಕ್ಕಳ ಬೆಳವಣಿಗೆಗೆ ತೊಡಕಾಗಬಹುದು. ಮಕ್ಕಳು ರಾಷ್ಟ್ರದ ಆಸ್ತಿಗಳಾಗಬೇಕು. ಅಂತಹ ಉತ್ಕೃಷ್ಟ ಕನಸಿನ ಬೀಜ ಶಾಲೆಯಲ್ಲಿ ಮೊಳಕೆ ಒಡೆಯಬೇಕು ಎಂದರಲ್ಲದೆ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಕುರಿತಾದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ತನ್ಮೂಲಕ ಐಟಿ ಕ್ಷೇತ್ರದಲ್ಲಿ ನಮ್ಮ ಮಕ್ಕಳು ನವನವೀನ ಸಾಧನೆಗೈಯುವುದಕ್ಕೆ ವೇದಿಕೆ ಸಿದ್ಧಪಡಿಸಲಾಗುತ್ತಿದೆ ಹೇಳಿದರು.
ಶಾಲಾ ಪ್ರಾಂಶುಪಾಲೆ ಮಾಲತಿ ಡಿ. ಭಟ್ ಶಾಲಾ ಪಠ್ಯಗಳ ಬಗೆಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಶಾಲಾ ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ಶಿಕ್ಷಕಿ ರಜನಿ ಸ್ವಾಗತಿಸಿ, ಕುಸುಮ ವಂದಿಸಿದರು ಕಾರ್ಯಕ್ರಮವನ್ನು ಶಿಕ್ಷಕಿ ಗೌರಿ ನಿರ್ವಹಿಸಿದರು.




