ಪುತ್ತೂರು: ‘ನಮ್ಮ ನಿತ್ಯ ಬದುಕಿನಲ್ಲಿ ಯೋಗವು ಮಿಳಿತವಾಗಿದೆ. ದೇಹ ಮತ್ತು ಮನಸ್ಸನ್ನು ಆರೋಗ್ಯಕರವಾಗಿರಿಸುವುದಕ್ಕೆ ಯೋಗ ಧ್ಯಾನವು ಸಹಕಾರಿ. ಮಕ್ಕಳು ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡರೆ ಚೈತನ್ಯ ಶಾಲೆಗಳಾಗಿ ಬೆಳೆಯುತ್ತಾರೆ. ಸಾತ್ತ್ವಿಕರಾಗುತ್ತಾರೆ. ಎಂದು ಆರ್ಟ್ ಆಫ್ ಲಿವಿಂಗ್ ನ ಯೋಗ ಶಿಕ್ಷಕಿ ಶರಾವತಿ ರವಿನಾರಾಯಣ್ ಹೇಳಿದರು.
ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಜೂನ್ 21 ರಂದು ನಡೆದ ವಿಶ್ವಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಸಭಾಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ವಿದ್ಯಾರ್ಥಿಗಳು ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಆರೋಗ್ಯವಂತರಾಗಿರಲು ಯೋಗ – ಧ್ಯಾನಗಳ ಅಭ್ಯಾಸವು ಸಹಾಯಕವಾಗಿದೆ. ಎಲ್ಲಾ ವಿದ್ಯಾರ್ಥಿಗಳೂ ನಿರಂತರ ಯೋಗಾಭ್ಯಾಸವನ್ನು ಮಾಡಬೇಕು ಎಂದರು.
ದೈಹಿಕ ಶಿಕ್ಷಕಿ ಲೀಲಾವತಿ ಶುಭಾಶಂಸನೆಗೈದರು. ಶಾಲಾ ಕ್ರೀಡಾ ನಾಯಕ ಸೃಜನ್ ಎಸ್.ಜಿ (10ನೇ) ದಿನದ ಮಹತ್ವವನ್ನು ತಿಳಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಆರ್ಟ್ ಆಫ್ ಲಿವಿಂಗ್ ನ ಯೋಗ ತರಬೇತುದಾರರಾದ ರಜತ ಹೆಗ್ಡೆ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸವನ್ನು ಮಾಡಿಸಿದರು. ಶಾಲೆಯ ದೈಹಿಕ ಶಿಕ್ಷಕರೂ, ಶಕ್ತಿ ಸ್ಪೋರ್ಟ್ಸ್ ಕ್ಲಬ್ ನ ನಿರ್ದೇಶಕರೂ ಆದ ಪುಷ್ಪರಾಜ್ ಕಾರ್ಯಕ್ರಮವನ್ನು ನಿರೂಪಿಸಿದರು. ದೈಹಿಕ ಶಿಕ್ಷಕಿ ಜೀವಿತಾ ಎನ್.ಕೆ ಸಹಕರಿಸಿದರು.