ಬರಹ; ಗಂಗಾಧರ ಸಿ.ಎಚ್.ನಿಡ್ಪಳ್ಳಿ
ನಿಡ್ಪಳ್ಳಿ; ಹವಾಮಾನ ವೈಪರೀತ್ಯಗಳಿಂದ ಬೆಳೆಹಾನಿಗೊಳಗಾಗಿ ನಷ್ಟ ಅನುಭವಿಸುತ್ತಿದ್ದ ರೈತರಿಗೆ ಸ್ವಲ್ಪ ಮಟ್ಟಿಗೆ ಕೈ ಹಿಡಿದಿದ್ದ ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆಗೆ ಈ ವರ್ಷ ಬ್ರೇಕ್ ಬೀಳಲಿದೆಯೇ ಎಂಬ ಆತಂಕ ರೈತರಿಗೆ ಉಂಟಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರೀತ್ಯಗಳಿಂದ ಅಡಿಕೆ, ತೆಂಗು, ಕಾಳುಮೆಣಸು ಬೆಳೆಗಳ ಮೇಲೆ ಅಡ್ಡ ಪರಿಣಾಮಗಳಿಂದ ರೈತರು ಸಂಕಷ್ಟ ಅನುಭವಿಸುವುದನ್ನು ತಪ್ಪಿಸಿ ಜೀವನಕ್ಕೆ ಒಂದಷ್ಟು ವರದಾನವಾಗಿತ್ತು. ಹವಾಮಾನಾಧಾರಿತ ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆಯ ವಿಮಾ ಪ್ರೀಮಿಯಂ ತುಂಬಲು ಪ್ರತಿ ವರ್ಷ ಜೂನ್ ತಿಂಗಳು ಕೊನೆ ಅವಧಿಯಾಗಿರುತ್ತದೆ. ಆದರೆ 2023-24 ನೇ ಸಾಲಿನ ಪ್ರೀಮಿಯಂ ಸ್ವೀಕರಿಸಲು ಇದುವರೆಗೆ ಸಹಕಾರ ಸಂಘಗಳಿಗೆ ಇನ್ನೂ ಸುತ್ತೋಲೆ ಬಂದಿರುವುದಿಲ್ಲ ಎಂದು ತಿಳಿದು ಬಂದಿದೆ.
ಹಿಂದಿನ ಸಾಲಿನವರೆಗೆ ಮೇ ತಿಂಗಳ ಅಂತ್ಯಕ್ಕೆ ಸಹಕಾರ ಸಂಘಗಳಿಗೆ ಸುತ್ತೋಲೆ ಬಂದು ಪ್ರೀಮಿಯಂ ಪಾವತಿಸಲು ಅನುಕೂಲ ಮಾಡಿ ಕೊಡಲಾಗಿತ್ತು. ಆದರೆ ಈ ಸಾಲಿನಲ್ಲಿ ಸಹಕಾರ ಸಂಘಗಳಿಗೆ ಇನ್ನೂ ಸುತ್ತೋಲೆ ಬಾರದೆ ಇದ್ದು ರೈತರು ಸಹಕಾರ ಸಂಘಕ್ಕೆ ತೆರಳಿ ವಿಚಾರಿಸುತ್ತಿದ್ದಾರೆ.
ಜೂನ್ ತಿಂಗಳಲ್ಲಿ ಸಹಕಾರ ಸಂಘದ ಸಿಬ್ಬಂದಿಗಳಿಗೆ ಕೃಷಿ ಸಾಲದ ವ್ಯವಹಾರದ ಕಾರ್ಯ ಒತ್ತಡವಿರುತ್ತದೆ. ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ, ಸರ್ವರ್ ಸಮಸ್ಯೆ, ನೆಟ್‌ವರ್ಕ್ ಸಮಸ್ಯೆ ಸರ್ವೆ ಸಾಮಾನ್ಯವಾಗಿದ್ದು ಅದನ್ನು ಎದುರಿಸಿ ಕಾರ್ಯ ನಿರ್ವಹಿಸಬೇಕು. ಹೀಗಿರುವಾಗ ಫಸಲ್ ಭೀಮಾ ಯೋಜನೆಯ ಪ್ರೀಮಿಯಂ ಸ್ವೀಕರಿಸಲು ಜೂನ್ ತಿಂಗಳ ಮೊದಲು ಸಹಕಾರ ಸಂಘಗಳಿಗೆ ಸುತ್ತೋಲೆ ತಲುಪಿದರೆ ರೈತರಿಗೂ, ಸಹಕಾರ ಸಂಘದ ಸಿಬ್ಬಂದಿಗಳಿಗೂ ಅನುಕೂಲವಾಗುತ್ತದೆ. ಆದರೆ ಪ್ರಸಕ್ತ ಜೂನ್ ತಿಂಗಳು ಮುಗಿಯುತ್ತಾ ಬಂದರೂ ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವುದು ರೈತರಿಗೆ ಆತಂಕ ಹುಟ್ಟಿಸಿದೆ. ಈ ಸಲ ಮುಂಗಾರು ಮಳೆಯೂ ಕೈ ಕೊಟ್ಟಿದ್ದು ರೈತರು ಇನ್ನಷ್ಟು ಕಷ್ಟ ಪಡ ಬೇಕಾಗುವುದೇ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ.
ಸಂಬಂಧಿಸಿದವರು ಈ ಯೋಜನೆಯ ಪ್ರೀಮಿಯಂ ಸ್ವೀಕರಿಸಲು ಸಹಕಾರ ಸಂಘಗಳಿಗೆ ಸುತ್ತೋಲೆ ಕಳುಹಿಸಿ ಯೋಜನೆ ಮುಂದುವರಿಸಲು ಸೂಕ್ತ ಕ್ರಮ ವಹಿಸ ಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.
ಇದುವರೆಗೆ ಯಾವುದೇ ಸುತ್ತೋಲೆ ಬಂದಿಲ್ಲ-
ಪ್ರತಿ ವರ್ಷ ಈ ಸಮಯದಲ್ಲಿ ಪ್ರೀಮಿಯಂ ವಿಮಾ ಕಂತು ಪಾವತಿ ಕಾರ್ಯ ನಡೆಯುತ್ತಿತ್ತು. ಆದರೆ ಇದುವರೆಗೆ ಸಹಕಾರ ಸಂಘಕ್ಕೆ ಸರಕಾರದಿಂದ ಅಥವಾ ಕೃಷಿ, ತೋಟಗಾರಿಕೆ ಇಲಾಖೆಯಿಂದ ನಮಗೆ ಸುತ್ತೋಲೆ ಬಂದಿಲ್ಲ. ಪ್ರತಿವರ್ಷ ಕಟ್ಟುತ್ತಿದ್ದ ಮೊತ್ತವನ್ನು ರೈತರ ಖಾತೆಯಲ್ಲಿ ಜಮೆ ಮಾಡಲು ಹೇಳಲಾಗಿದೆ. ಸುತ್ತೋಲೆ ಬಂದರೆ ತಕ್ಷಣ ಕಂತನ್ನು ಕಟ್ಟಲು ಅನುಕೂಲವಾಗುತ್ತದೆ. ಇದೊಂದು ರೈತರ ಬಾಳಿಗೆ ವರದಾನವಾಗಿದ್ದು ಇದನ್ನು ನಿಲ್ಲಿಸದೆ ಈ ಯೋಜನೆ ಮುಂದುವರಿಸಬೇಕು.
ಪದ್ಮನಾಭ ಬೋರ್ಕರ್. ಬಿ
ಅಧ್ಯಕ್ಷರು ಪಾಣಾಜೆ ಕೃಷಿ ಪತ್ತಿನ ಸಹಕಾರ ಸಂಘ.
ಈ ಯೋಜನೆಯನ್ನು ಮುಂದುವರಿಸಬೇಕು-
ರೈತರ ಸಂಕಷ್ಟ ಅರಿತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಜ್ಯ ಸರಕಾರದ ಪಾಲುದಾರಿಕೆಯಲ್ಲಿ ಆರಂಭಿಸಿದ ಹವಾಮಾನಾಧಾರಿತ ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆ ರೈತರ ಪಾಲಿಗೆ ಒಂದು ಉತ್ತಮ ಯೋಜನೆ. ಕಳೆದ ಅವಧಿಯ ಹಣ ಕೂಡ ರೈತರಿಗೆ ಸಿಕ್ಕಿಲ್ಲ. ಈ ಸಲ ಪ್ರೀಮಿಯಂ ಕಟ್ಟಲು ಸುತ್ತೋಲೆ ಕೂಡ ಸಹಕಾರ ಸಂಘಗಳಿಗೆ ಬಂದಿಲ್ಲ ಎಂದು ಹೇಳುತ್ತಾರೆ.ಈ ಸಲ ಮಳೆ ಇಲ್ಲದೆ ಅಡಿಕೆ ಮರ ನಾಶ ಆಗಿದೆ ಮಾತ್ರವಲ್ಲ ಹಸಿ ಅಡಿಕೆ ಬೀಳುತ್ತಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ಆದುದರಿಂದ ತಕ್ಷಣ ರಾಜ್ಯ ಸರಕಾರ ಇದನ್ನು ಮುಂದುವರಿಸಲು ಆದೇಶ ನೀಡಬೇಕು.ಇಲ್ಲದಿದ್ದರೆ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ದೂರು ನೀಡ ಬೇಕಾಗಿದೆ.
ಚಂದ್ರಶೇಖರ ಪ್ರಭು ಗೋಳಿತ್ತಡಿ ನಿಡ್ಪಳ್ಳಿ, ಪ್ರಗತಿಪರ ಕೃಷಿಕರು.