





ಪುತ್ತೂರು:ಕಾರಿನ ವ್ಯವಹಾರಕ್ಕೆ ಸಂಬಂಧಿಸಿ ರೂ.1 ಲಕ್ಷ ಕೊಡುವಂತೆ ಒತ್ತಾಯಿಸಿ ನಾಲ್ಕು ತಿಂಗಳ ಹಿಂದೆ ಬನ್ನೂರು ಆರ್‌ಟಿಒ ಹಿಂಬದಿಯ ಶಾಲಾ ಬಳಿ ನಡೆದ ಹಲ್ಲೆ ಮತ್ತು ಕೊಲೆ ಬೆದರಿಕೆ ಆರೋಪದ ಘಟನೆಗೆ ಸಂಬಂಧಿಸಿ ನ್ಯಾಯಾಲಯದ ಆದೇಶದಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಇದೀಗ ಪ್ರಕರಣ ದಾಖಲಾಗಿದೆ.
ಬನ್ನೂರು ಮಸೀದಿ ಬಳಿಯ ನಿವಾಸಿ ಅಬ್ದುಲ್ ಗಫೂರ್ ಎಂಬವರ ಪುತ್ರ ಮಹಮ್ಮದ್ ಎ ಯಾನೆ ಅಜೀಮ್(39ವ) ಹಲ್ಲೆಗೊಳಗಾದವರು. ಪಡುಬಿದ್ರೆ ಕೀನ್ಯ ನಿವಾಸಿ ಇಲ್ಯಾಸ್ ಯಾನೆ ಇಲ್ಯಾಸ್ ಪಾರೆ, ಮುಲ್ಕಿಯ ತಳಿಪ್ಪಾಡಿ ಅಜೈ ಶೆಟ್ಟಿ, ಸವಣೂರು ಪಾಪೆತ್ತಡ್ಕದ ಸುಲೈಮಾನ್ ಯಾನೆ ಕೊಂಬಳ್ಳಿ ಸುಲೈಮಾನ್, ಕೆಯ್ಯೂರು ಮಾಡಾವು ನಿವಾಸಿ ಸಿನಾನ್ ಯಾನೆ ಮಹಮ್ಮದ್ ಸಿನಾನ್, ಹಾಸನದ ಆಲೂರು ನಿವಾಸಿ ಅವಿನಾಶ್, ಹಾಸನದ ಆಲೂರು ನಿವಾಸಿ ಶಶಾಂಕ್ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿದ್ದ ಆರೋಪ ಎದುರಿಸುತ್ತಿರುವವರು.


ಘಟನೆ ವಿವರ: ಫೆ.13ರಂದು ಕೀನ್ಯದ ಇಲ್ಯಾಸ್ ಅವರು ಮಹಮ್ಮದ್ ಎ ಅವರಿಗೆ ಕರೆ ಮಾಡಿ ಬನ್ನೂರು ಆರ್‌ಟಿಒ ಹಿಂಬದಿಯ ಶಾಲಾ ಬಳಿ ಬರಲು ತಿಳಿಸಿದ್ದರು. ಮಹಮ್ಮದ್ ಎ ಅವರು ಅಲ್ಲಿಗೆ ಹೋದಾಗ ಆರೋಪಿಗಳು ಅವರ ಮೇಲೆ ಹಲ್ಲೆ ನಡೆಸಿದ್ದರು.ಸ್ವಿಫ್ಟ್ ಕಾರನ್ನು ಎಲ್ಲಿ ಅಡವಿಟ್ಟಿದ್ದೀಯಾ ಎಂದು ಇಲ್ಯಾಸ್ ಅವರು ಪ್ರಶ್ನಿಸಿದ್ದಲ್ಲದೆ ಕೂಡಲೇ ರೂ.1 ಲಕ್ಷ ರೂಪಾಯಿ ಕೊಡು ಎಂದು ಹೇಳಿ ತನಗೆ ಧಮ್ಕಿ ಹಾಕಿ ಹಲ್ಲೆ ನಡೆಸಿದ್ದಾರೆ. ನನ್ನ ಕಿಸೆಯಿಂದ ಮೊಬೈಲ್ ಮತ್ತು 50,೦೦೦ ನಗದನ್ನು ದೋಚಿದ್ದು, ಬಳಿಕ ರೂ.1 ಲಕ್ಷವನ್ನು 2 ದಿನದೊಳಗೆ ಕೊಡಬೇಕು ಇಲ್ಲವಾದಲ್ಲಿ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋಗಿದ್ದರು.ಫೆ.14ರಂದು ಹೆಣ್ಣಿನ ಜೊತೆಯಲ್ಲಿರುವ ಚಿತ್ರವನ್ನು ಮಜಲ್ ಫ್ಯಾಮಿಲಿ ಗ್ರೂಪಿನಲ್ಲಿ ವೈರಲ್ ಮಾಡಿದ ಅಜೇಯ್ ಶೆಟ್ಟಿಯವರು ನನ್ನ ಪತ್ನಿಗೆ ಕರೆ ಮಾಡಿ, ನಿನ್ನ ಗಂಡ ರೂ.5 ಲಕ್ಷ ಕೊಡದಿದ್ದಲ್ಲಿ ನಿನ್ನ ಗಂಡ ಮತ್ತು ಮಹಿಳೆ ಜೊತೆಯಾಗಿರುವ ಅಶ್ಲೀಲ ಚಿತ್ರವನ್ನು ಪ್ರಚಾರ ಮಾಡುವುದಾಗಿ ಬೆದರಿಸಿದ್ದರು ಎಂದು ಆರೋಪಿಸಿ ಮಹಮ್ಮದ್ ಎ ಅವರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು. ನ್ಯಾಯಾಲಯದ ಆದೇಶದಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಇದೀಗ ಪ್ರಕರಣ ದಾಖಲಾಗಿದೆ.












