ಸ್ಪೀಕರ್ ಯು.ಟಿ.ಖಾದರ್, ಶಾಸಕ ಅಶೋಕ್ ಕುಮಾರ್ ರೈಯವರಿಗೆ ಪುತ್ತೂರು ಮುಸ್ಲಿಂ ಸಮುದಾಯ ಒಕ್ಕೂಟದಿಂದ ನಾಗರಿಕ ಸನ್ಮಾನ

0

ಒಕ್ಕೂಟದಿಂದ ಎಲ್ಲಾ ಸಮುದಾಯಕ್ಕೂ ಸಹಕಾರವಿರಲಿ-ಯು.ಟಿ.ಖಾದರ್
ಮುಸ್ಲಿಂ ಧರ್ಮದವರು ಯಾರನ್ನೂ ವಿರೋಧಿಸುವವರಲ್ಲ, ಪ್ರೀತಿಸುವವರು-ಅಶೋಕ್ ಕುಮಾರ್ ರೈ
5 ಗ್ಯಾರೆಂಟಿಗಳಿಗಾಗಿ ಕಾಂಗ್ರೆಸ್ ಬೆಂಬಲಿಸಿಲ್ಲ-ಅಬ್ದುಲ್ ಮುನೀರ್
ಇವತ್ತು ಮುಸ್ಲಿಂ ಸಮುದಾಯಕ್ಕೆ ಗೌರವ ಸಿಕ್ಕಿದೆ – ಹನೀ- ಹುದವಿ
ರಾಜ್ಯದಲ್ಲಿ ಶಾಂತಿ, ಐಕ್ಯತೆಯಿಂದಿರಲು ಸ್ಪೀಕರ್‌ಗೆ ಶಕ್ತಿ ಕೊಡಲಿ-ಅಹ್ಮದ್ ಪೂಕೋಯ ತಂಳ್
ಖಾಸಗಿ ಆಸ್ಪತ್ರೆಗಳಲ್ಲೂ ಬಿಪಿಎಲ್‌ನವರಿಗೆ ಉಚಿತ ಚಿಕಿತ್ಸೆ ಸಿಗಬೇಕು-ಡಾ.ಬಿ.ಕೆ.ಅಬ್ದುಲ್ ಬಶೀರ್
ಜಾತ್ಯಾತೀತ ರಾಜಕಾರಣಿ ಯು.ಟಿ ಖಾದರ್,ಭ್ರಷ್ಟಾಚಾರದ ವಿರುದ್ಧ ಹೋರಾಟದ ಏಕೈಕ ಶಾಸಕ ಅಶೋಕ್ ರೈ-ಎಂ.ಎಸ್
ಮುಸ್ಲಿಂ ಸಮುದಾಯ ಎದುರಿಸುವ ಅನೇಕ ಅಪಾಯಗಳಿಗೆ ಒಕ್ಕೂಟ ಧ್ವನಿಯಾಗಬೇಕು-ಮಹಮ್ಮದ್ ಬಡಗನ್ನೂರು

ಪುತ್ತೂರು:ರಾಜ್ಯ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಆಯ್ಕೆಯಾಗಿರುವ ಉಳ್ಳಾಲ ಶಾಸಕ ಯು.ಟಿ ಖಾದರ್ ಹಾಗೂ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರಿಗೆ ಮುಸ್ಲಿಂ ಸಮುದಾಯ ಒಕ್ಕೂಟ ಪುತ್ತೂರು ಇದರ ವತಿಯಿಂದ ನಾಗರಿಕ ಸನ್ಮಾನ ಕಾರ್ಯಕ್ರಮ ಜೂ.24ರಂದು ಪುತ್ತೂರು ಪುರಭವನದಲ್ಲಿ ನಡೆಯಿತು.ಕೇಂದ್ರ ಜುಮ್ಮಾ ಮಸೀದಿಯ ಮುದರ್ರಿಸ್ ಅಹ್ಮದ್ ಪೂಕೋಯ ತಂಳ್ ಕಾರ್ಯಕ್ರಮವನ್ನು ದುಆ: ಆಶೀರ್ವಚನದ ಮೂಲಕ ಉದ್ಘಾಟಿಸಿದರು.ರಾಜ್ಯ ಕಾಂಗ್ರೆಸ್‌ನ ಅಬ್ದುಲ್ ಮುನೀರ್ ಬೆಂಗಳೂರು ದಿಕ್ಸೂಚಿ ಭಾಷಣ ಮಾಡಿದರು.
ನಗರ ಸಭಾ ಸದಸ್ಯ ಮಹಮ್ಮದ್ ರಿಯಾಜ್ ಪರ್ಲಡ್ಕ ಅಧ್ಯಕ್ಷತೆ ವಹಿಸಿದ್ದರು.ಅತಿಥಿಗಳನ್ನು ಸಾಂಪ್ರದಾಯಿಕ ದ- ಮೂಲಕ ಸಭಾ ವೇದಿಕೆಗೆ ಸ್ವಾಗತಿಸಲಾಯಿತು.


ಒಕ್ಕೂಟದಿಂದ ಮುಸ್ಲಿಂ ಸಮುದಾಯ ಮಾತ್ರವಲ್ಲ ಎಲ್ಲಾ ಸಮುದಾಯಕ್ಕೂ ಸಹಕಾರವಿರಲಿ:
ನಾಗರಿಕ ಸನ್ಮಾನ ಸ್ವೀಕರಿಸಿದ ಸ್ಪೀಕರ್ ಯು.ಟಿ.ಖಾದರ್ ಅವರು ಮಾತನಾಡಿ ಅತ್ಯುತ್ತಮ ಕಾರ್ಯ ನಡೆಸಿಕೊಂಡು ಸರ್ವರ ಪ್ರೀತಿ ವಿಶ್ವಾಸವನ್ನು ಗಳಿಸುವ ಕೆಲಸವನ್ನು ಮುಸ್ಲಿಂ ಸಮುದಾಯ ಒಕ್ಕೂಟ ಮಾಡಬೇಕು.ಯುವಕರು ಸಮಾಜದಲ್ಲಿ ಸಮಸ್ಯೆಯನ್ನು ಬಗೆಹರಿಸುವ ಕೆಲಸ ಮಾಡಬೇಕು ಹೊರತು ಸಮಸ್ಯೆಯನ್ನು ಸೃಷ್ಟಿಸುವಂತಾಗಬಾರದು.ಸಮಸ್ಯೆ ಬಂದಾಗ ಅದನ್ನು ಬಗೆಹರಿಸುವ ಪ್ರಯತ್ನ ಮಾಡಿ.ನಿಮ್ಮಲ್ಲಿ ಸಕಾರಾತ್ಮಕ ಚಿಂತನೆ ಇರಲಿ, ನಕಾರಾತ್ಮಕ ಚಿಂತನೆ ಬಾರದೆ ಇರಲಿ.ನೀವೆಲ್ಲ ಒಗ್ಗಟ್ಟಾಗಿ ಮುಂದೆ ಹೋಗಿ ನಿಮ್ಮ ಜೊತೆ ಎಲ್ಲಾ ಸಮಾಜ ಬರುತ್ತದೆ ಎಂದರು.ಇವತ್ತು ನನ್ನನ್ನು ಮತ್ತು ಅಶೋಕ್ ರೈ ಅವರನ್ನು ಸನ್ಮಾನಿಸಿದ ಕೂಡಲೇ ನಿಮ್ಮ ಕೆಲಸ ಮುಗಿಯಲಿಲ್ಲ.ನಿಮ್ಮ ಕೆಲಸ ಇನ್ನು ಪ್ರಾರಂಭ.ಎಷ್ಟೇ ಟೀಕೆಗೆ ಒಳಗಾದರೂ ನಿಮ್ಮ ಸ್ಪಷ್ಟವಾದ ಮನಸ್ಸು, ಹೃದಯದ ಮೂಲಕ ಹೆಜ್ಜೆ ಮುಂದೆ ಇಡಿ.ಆಗ ಎಲ್ಲರೂ ನಿಮಗೆ ಬೆಂಬಲ ಕೊಡುತ್ತಾರೆ.ಮುಸ್ಲಿಂ ಸಮುದಾಯ ಒಕ್ಕೂಟವೆಂದು ಹೇಳಿಕೊಂಡು ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲ ಎಲ್ಲಾ ಸಮುದಾಯಕ್ಕೂ ಸಹಕಾರ ನೀಡುವ ಕೆಲಸ ಮಾಡಿ.ದುಶ್ಚಟಮುಕ್ತ, ದ್ವೇಷ ಮುಕ್ತ ಸಮಾಜವೇ ದೇಶವನ್ನು ಬಲಿಷ್ಟಗೊಳಿಸುತ್ತದೆ.ಇದಕ್ಕಾಗಿ ಪ್ರತಿಯೊಂದು ಸಂಘ ಸಂಸ್ಥೆ, ಧಾರ್ಮಿಕ ಸಂಸ್ಥೆಗಳು ಜನಪ್ರತಿನಿಽಗಳಿಗೆ ಸಹಕಾರ ಕೊಡಿ ಎಂದು ಸ್ಪೀಕರ್ ಹೇಳಿದರು.


ಟೀಕೆ ಟಿಪ್ಪಣಿಗಳನ್ನು ಸಕಾರಾತ್ಮವಾಗಿ ಸ್ವೀಕರಿಸುತ್ತೇನೆ:
ನನಗೆ ದೊರೆತ ಸಭಾಧ್ಯಕ್ಷತೆ ಸ್ಥಾನವನ್ನು ಉಳಿಸಿಕೊಂಡು ಮುಂದಿನ ದಿನ ಅದಕ್ಕೆ ಗೌರವ ಬರುವ ಕೆಲಸ ಮಾಡಿ ಜಿಲ್ಲೆಗೆ ಗೌರವ ತರುವ ಕೆಲಸ ಮಾಡುತ್ತೇನೆ ಎಂದ ಯು.ಟಿ.ಖಾದರ್ ಅವರು, ದಕ್ಷಿಣ ಕನ್ನಡ ಜಿಲ್ಲೆಯಿಂದ ಕೆ.ಎಸ್.ಹೆಗ್ಡೆ, ವೈಕುಠ ಬಾಳಿಗ ಅವರು ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದಂತೆ ನನಗೂ ಎಲ್ಲರೂ ಸಹಕಾರ ಕೊಡಬೇಕೆಂದು ಹೇಳಿದರು.ಸಂವಿಧಾನಬದ್ಧವಾಗಿ, ಪ್ರಜಾಪ್ರಭುತ್ವದಲ್ಲಿ ಸಂಸತ್ತಿನ ನಿಯಮಗಳನ್ನು ಪಾಲಿಸಿಕೊಂಡು ಎಲ್ಲರನ್ನು ವಿಶ್ವಾಸಕ್ಕೆ ಕೊಂಡೊಯ್ಯುವ ಜವಾಬ್ದಾರಿಯುತ ಸ್ಥಾನ ನನಗೆ ಸಿಕ್ಕಿದೆ.ಇವತ್ತು ನನಗೆ ಯಾವುದೇ ಪಕ್ಷವಿಲ್ಲ.ರಾಜಕೀಯ ಪಕ್ಷಕ್ಕೆ ರಾಜೀನಾಮೆ ಕೊಟ್ಟು,ಪಕ್ಷರಹಿತವಾದ ಅಭ್ಯರ್ಥಿಯಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಹೋಗುವ ಜವಾಬ್ದಾರಿ ಇದೆ.ಈಗ ನಾನು ಪ್ರತಿಪಕ್ಷದ ಮಿತ್ರ.ಸರಿಯಾಗಿ ಕೆಲಸ ಮಾಡಿದ್ದಾರಾ ಎಂಬುದನ್ನು ನೋಡುವುದು ನನ್ನ ಜವಾಬ್ದಾರಿ.ಆದರೆ ನಾನು ಪ್ರತಿಪಕ್ಷದ ಎಷ್ಟೇ ಸ್ನೇಹಿತನಾದರೂ ಪ್ರತಿಪಕ್ಷದವರು ನನ್ನನ್ನು ಸಂಶಯದಿಂದಲೇ ನೋಡುವುದು.ಹೀಗೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಕೊನೆಗೆ ಕಾಲೆಳೆಯುವುದು ಸಭಾಧ್ಯಕ್ಷರದ್ದು, ಆದರೂ ಸಂವಿಧಾನ ಬದ್ದವಾದ ಸಭಾಧ್ಯಕ್ಷ ಸ್ಥಾನದಲ್ಲಿ ಯಾವುದೇ ಪಕ್ಷ, ಧರ್ಮ ರಹಿತವಾಗಿ ಎಲ್ಲರನ್ನು ಒಗ್ಗೂಡಿಸಿ, ಜನರಿಗೆ ಅವರಿಗಿಷ್ಟವಾಗುವ ರೀತಿಯಲ್ಲಿ ಕೆಲಸ ಕಾರ್ಯ ಮಾಡಲಿದ್ದೇನೆ.ಈ ನಿಟ್ಟಿನಲ್ಲಿ ಟೀಕೆ ಟಿಪ್ಪಣಿ ಬಂದರೂ ಅದನ್ನು ಸಕಾರಾತ್ಮವಾಗಿ ಸ್ವೀಕಾರ ಮಾಡಿಕೊಂಡು ಅದೊಂದು ಪ್ರಜಾಪ್ರಭುತ್ವ ಸೌಂದರ್ಯ ಎಂದು ಮನಗಂಡು ಕೆಲಸ ಮಾಡಲಿದ್ದೇನೆ ಎಂದರು.


ಮುಸ್ಲಿಂ ಧರ್ಮದವರು ಯಾರನ್ನೂ ವಿರೋಧಿಸುವವರಲ್ಲ, ಪ್ರೀತಿಸುವವರು:
ಸನ್ಮಾನ ಸ್ವೀಕರಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ನಾನು ಸಹಾಯ ಮಾಡುತ್ತಿರುವ ಸಂದರ್ಭದಲ್ಲಿ ಎಂದೂ ಪಕ್ಷ, ಜಾತಿ, ಧರ್ಮಗಳನ್ನು ನೋಡಿಲ್ಲ. ಎಲ್ಲಾ ಬಡವರಿಗೂ ಕೈಲಾದ ಸಹಾಯ ಮಾಡಿದ್ದೇನೆ.ಮುಸ್ಲಿಂ ಧರ್ಮದವರು ಯಾರನ್ನೂ ವಿರೋಧಿಸುವವರಲ್ಲ.ಬದಲಿಗೆ ಎಲ್ಲರನ್ನೂ ಪ್ರೀತಿಸುವವರು.ಅವರಿಗೆ ಅದೇ ಪ್ರೀತಿಯನ್ನು ಹಿಂದಿರುಗಿಸುವ ಕೆಲಸವಾದಲ್ಲಿ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯ.ನಾನು ಎಲ್ಲಾ ಜಾತಿ ಧರ್ಮಗಳನ್ನು ಒಟ್ಟಾಗಿ ಕೊಂಡೊಯ್ಯುವ ಪ್ರಯತ್ನ ಮಾಡುತ್ತೇನೆ.ಅದೇ ರೀತಿ ಮುಸ್ಲಿಂ ಸಮುದಾಯ ಒಕ್ಕೂಟದಿಂದ ಎಲ್ಲಾ ಸಮುದಾಯವನ್ನು ಪ್ರೀತಿ ವಿಶ್ವಾಸದಿಂದ ನೋಡುವ ಕೆಲಸ ಆಗಬೇಕು ಎಂದರು.ಅಭಿವೃದ್ಧಿ ವಿಚಾರದಲ್ಲಿ ಯು.ಟಿ.ಖಾದರ್ ಅವರ ಆಶೀರ್ವಾದ ಬೇಕು.ಇಲ್ಲಿ ಭ್ರಷ್ಟಾಚಾರದ ವಿರುದ್ಧ ನಿಂತಿದ್ದೇವೆ.ಕೆಲಸ ಮಾಡುತ್ತೇವೆ. ಜನರು ಅದನ್ನು ಒಪ್ಪಿಕೊಂಡಿದ್ದಾರೆ.ಎಲ್ಲಾ ಜಾತಿ ಧರ್ಮದವರನ್ನು ಒಟ್ಟಿಗೆ ಕೊಂಡೊಯ್ಯುವ ಪ್ರಯತ್ನವನ್ನು ಖಂಡಿತ ಮಾಡುತ್ತೇನೆ.ಇದಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ ಎಂದು ಶಾಸಕರು ಹೇಳಿದರು.


ಮೆಡಿಕಲ್ ಕಾಲೇಜು ಸ್ಥಾಪನೆಗೆ ಯು.ಟಿ.ಖಾದರ್ ಆಶೀರ್ವಾದ ಬೇಕು:
ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲು ಸ್ಪೀಕರ್ ಯು.ಟಿ.ಖಾದರ್ ಅವರ ಆಶೀರ್ವಾದ ಬೇಕಾಗಿದೆ.ಮುಂದಿನ 6 ತಿಂಗಳ ಒಳಗಾಗಿ ಮೆಡಿಕಲ್ ಕಾಲೇಜು ಮಂಜೂರುಗೊಳಿಸಿದಲ್ಲಿ ಮುಂದಿನ 5 ವರ್ಷಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲು ಸಹಾಯವಾಗಲಿದೆ.ಈ ನಿಟ್ಟಿನಲ್ಲಿ ನಮಗೆ ಸಹಕರಿಸಬೇಕು ಎಂದು ವಿನಂತಿಸಿದ ಅಶೋಕ್ ಕುಮಾರ್ ರೈ ಅವರು,ಖಾದರ್ ಅವರಿಗೆ ಮುಂದಿನ ಅವಧಿಯಲ್ಲಿ ಉಪಮುಖ್ಯಮಂತ್ರಿ ಸ್ಥಾನ ಸಿಗುವಂತಾಗಲಿ ಎಂದರು.


ಪುತ್ತೂರ‍್ದಕುಲೆ ಒಂತೆ ಕೇನ್ಲೆ:
ಅಭಿವೃದ್ಧಿ ವಿಚಾರದ ಕುರಿತು ಶಾಸಕರು ಮಾತನಾಡುತ್ತಿದ್ದ ಸಂದರ್ಭ ಪುರಭವನದ ಬಾಗಿಲ ಬದಿಯಲ್ಲಿ ನಿಂತಿದ್ದ ಕೆಲವರು ಅವರಷ್ಟಕ್ಕೆ ಮಾತನಾಡುತ್ತಿದ್ದುದನ್ನು ಗಮನಿಸಿ,‘ ಪುತ್ತೂರುದಕುಲೆ ಒಂತೆ ಕೇನ್ಲೆ.ಎಂಚಿನ ಪಾತೆರುನೆ’ಎಂದು ಹೇಳಿ ಅವರ ಗಮನವನ್ನು ತನ್ನೆಡೆಗೆ ಸೆಳೆದ ಘಟನೆಯೂ ನಡೆಯಿತು.


5 ಗ್ಯಾರೆಂಟಿಗಳಿಗಾಗಿ ಕಾಂಗ್ರೆಸ್ ಬೆಂಬಲಿಸಿಲ್ಲ:
ಕೆಪಿಸಿಸಿ ವಕ್ತಾರ ಅಬ್ದುಲ್ ಮುನೀರ್ ಅವರು ದಿಕ್ಸೂಚಿ ಭಾಷಣ ಮಾಡಿದರು.ಇಸ್ಲಾಂ ಧರ್ಮ, ಮುಸ್ಲಿಂ ಸಮುದಾಯವನ್ನು ತೋಜೋವಧೆ ಮಾಡುವಂತಹ ಕೆಲಸ ನಡೆಯುತ್ತಿದ್ದ ಸಂದರ್ಭ ಅದಕ್ಕೆ ಉತ್ತರ ಕೊಡುವವರು ಇರಲಿಲ್ಲ.ಸಮಾಜಕ್ಕೆ ಅಗೌರವ ಸಲ್ಲಿಸುವವರಿಂದ ಅನೇಕ ನೋವನ್ನು ಅನುಭವಿಸಿದ್ದೆವು.ಇದನ್ನು ನಿಲ್ಲಿಸಬೇಕೆಂದು ಕೋಮುವಾದಿ ಸರಕಾರವನ್ನು ಕಿತ್ತೊಗೆಯಲು ಈ ಸಮುದಾಯದ ಕೊಡುಗೆ ಬಹಳಷ್ಟಿದೆ.ಅದು ಬಿಟ್ಟು ಕೇವಲ 5 ಗ್ಯಾರೆಂಟಿಗಳಿಗಾಗಿ ಕಾಂಗ್ರೆಸ್ ಅನ್ನು ಬೆಂಬಲಿಸಿಲ್ಲ ಎಂದರು.ಯು.ಟಿ. ಖಾದರ್ ಕೇವಲ ಉಳ್ಳಾಲಕ್ಕೆ ಅಥವಾ ಜಿಲ್ಲೆಗೆ ಸೀಮಿತರಲ್ಲ.ರಾಜ್ಯದಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ.ಎಲ್ಲಾ ಸಮುದಾಯವನ್ನು ಒಪ್ಪಿಕೊಂಡವರು ಸಮುದಾಯದ ನಾಯಕರಾಗುತ್ತಾರೆ ಎಂಬುದಕ್ಕೆ ಯು.ಟಿ. ಖಾದರ್ ಸಾಕ್ಷಿಯಾಗಿದ್ದಾರೆ. ಅವರಿಗೆ 224 ಶಾಸಕರು ಮತ್ತು ಮಂತ್ರಿಗಳಿಂದ ಕೆಲಸ ಮಾಡಿಸುವ ಶಕ್ತಿ ಇದೆ.ಯು.ಟಿ.ಖಾದರ್ ಅವರನ್ನು ದ್ವೇಷದ ಭಾವನೆಯಲ್ಲಿ ನೋಡುತ್ತಿದ್ದವರೂ, ಗೌರವಾನ್ವಿತ ಸಭಾಧ್ಯಕ್ಷರೇ ಎಂದು ಕರೆಸಿಕೊಳ್ಳುವಷ್ಟರ ಎತ್ತರಕ್ಕೆ ಖಾದರ್ ಬೆಳೆದಿದ್ದಾರೆ ಇದು ದೇವರು ಕೈ ಬಿಡುವುದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದ ಅಬ್ದುಲ್ ಮುನೀರ್ ಅವರು ಮುಸ್ಲಿಂ ಸಮುದಾಯವನ್ನು ಓಲೈಸಬೇಡಿ.ನಮ್ಮನ್ನು ಪರಿಗಣಿಸಿ.ಅದಕ್ಕಾಗಿ ಜಿ.ಪಂ, ತಾ.ಪಂ, ನಗರಸಭೆಯಲ್ಲಿ ಸಮುದಾಯವನ್ನು ಪರಿಗಣಿಸಿ ಎಂದರು.


ಸತ್ಯವನ್ನು ತಿಳಿಸುವ ಕೆಲಸ ಆಗಬೇಕು:
ದೇಶದ ಪ್ರಧಾನಿಯವರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದವರ ಪುಸ್ತಕ ಬಿಡುಗಡೆ ಮಾಡಿದರು.ಅದರಲ್ಲಿ ಶೇ.೩೦ರಷ್ಟು ಮಂದಿ ಮುಸ್ಲಿಂ ಸಮುದಾಯದವರೂ ಹೋರಾಟ ಮಾಡಿದವರಾಗಿದ್ದರು.ದೇಶಕ್ಕಾಗಿ ಪ್ರಥಮ ಕಾಳಾಪನಿ ಶಿಕ್ಷೆ ಪಡೆದವರು ಮುಸ್ಲಿಂ ಸಮುದಾಯದ ವ್ಯಕ್ತಿ.ಪ್ರಚೋದನಕಾರಿ ಭಾಷಣ ಮಾಡುವವರು ಎಲ್ಲಾ ಕಡೆ ಹುಟ್ಟುತ್ತಾರೆ.ಗೋಡ್ಸೆಯಂತವರು ಕೂಡಾ ಹುಟ್ಟುತ್ತಾರೆ.ಆದರೆ ಗಾಂಧಿಜಿಯಂತವರು ಹುಟ್ಟಬೇಕು.ಸತ್ಯವನ್ನು ತಿಳಿಸುವ ಕೆಲಸ ಆಗಬೇಕೆಂದ ಅಬ್ದುಲ್ ಮುನೀರ್ ಅವರು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ವಿರುದ್ಧ ಸಾವಿರ ಟ್ರೋಲ್ ಮಾಡಿರಬಹುದು.ಆದರೆ ಪುತ್ತೂರಿನ ಮುಸ್ಲಿಮರು ಗಟ್ಟಿಯಾಗಿ ನಿಮ್ಮೊಂದಿಗಿದ್ದಾರೆ ಎಂದರು.


ಇವತ್ತು ಮುಸ್ಲಿಂ ಸಮುದಾಯಕ್ಕೆ ಗೌರವ ಸಿಕ್ಕಿದೆ:
ಕಾವು ಮಾಡನ್ನೂರು ನೂರುಲ್ ಹುದಾ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಎಡ್ವೊಕೇಟ್ ಹನೀ- ಹುದವಿ ಅವರು ಮಾತನಾಡಿ ಒಂದು ಕಾಲಘಟ್ಟದಲ್ಲಿ ಮುಸ್ಲಿಂ ಸಮುದಾಯ ದೌರ್ಜನ್ಯಕ್ಕೆ ಒಳಗಾಗಿತ್ತು.-ಸಿಸ್ಟ್ ಸರಕಾರದ ಏಕಪಕ್ಷೀಯ ನೀತಿಯಿಂದ ನಮ್ಮ ಸಮುದಾಯಕ್ಕೆ ತೊಂದರೆ ಆಗುತ್ತಿತ್ತು.ಇವತ್ತು ಕರ್ನಾಟಕದಲ್ಲಿ ಜಾತ್ಯಾತೀತ ಸರಕಾರ ಬಂದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಗೌರವ ಲಭಿಸಿದೆ.ಇದಕ್ಕೆ ಪೂರಕವಾಗಿ ನಮ್ಮವರೇ ಅಗಿರುವ ಯು.ಟಿ.ಖಾದರ್ ಅವರು ಸ್ಪೀಕರ್ ಆಗಿರುವುದು ಸಂತೋಷದ ವಿಚಾರ.ಅದೇ ರೀತಿ ಶಾಸಕ ಅಶೋಕ್ ಕುಮಾರ್ ರೈ ಅವರಿಗೂ ಎಲ್ಲರ ಸಹಕಾರ ಇರಬೇಕೆಂದರು.


ರಾಜ್ಯದಲ್ಲಿ ಶಾಂತಿ, ಐಕ್ಯತೆಯಿಂದಿರಲು ಸ್ಪೀಕರ್‌ಗೆ ಶಕ್ತಿ ಕೊಡಲಿ:
ಕೇಂದ್ರ ಜುಮ್ಮಾ ಮಸೀದಿಯ ಮುದರ್ರಿಸ್ ಅಹ್ಮದ್ ಪೂಕೋಯ ತಂಳ್ ಅವರು ದುವಾಶೀರ್ವಚನ ಮಾಡಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮ್ಮ ಸಮುದಾಯದವರು ಒಬ್ಬರೂ ಕೂಡಾ ಸ್ಪೀಕರ್ ಆಗಿರಲಿಲ್ಲ.ಇವತ್ತು ಅದನ್ನೂ ಕೂಡಾ ಮೇಲಿನ ಶಕ್ತಿ ಈಡೇರಿಸಿದೆ. ಅದೇ ರೀತಿ ರಾಜ್ಯದಲ್ಲಿ ಶಾಂತಿ, ಐಕ್ಯತೆಯಿಂದಿರಲು ಸ್ಪೀಕರ್‌ಗೆ ಶಕ್ತಿ ಸಿಗುವಂತಾಗಲಿ ಎಂದು ಹೇಳಿ,ನಮ್ಮ ಸಮುದಾಯಕ್ಕೆ ಅವಕಾಶ ಮಾಡಿಕೊಟ್ಟ ಸರಕಾರವನ್ನು ಅಭಿನಂದಿಸುವುದಾಗಿ ಹೇಳಿದರು.


ಖಾಸಗಿ ಆಸ್ಪತ್ರೆಗಳಲ್ಲೂ ಬಿಪಿಎಲ್‌ದಾರರಿಗೆ ಉಚಿತ ಚಿಕಿತ್ಸೆ ಸಿಗಬೇಕು: ಜನಪ್ರಿಯ ಸೆಂಟ್ರಲ್ ಸ್ಕೂಲ್‌ನ ಸಂಚಾಲಕರಾಗಿರುವ ಹಾಸನದ ಎಲುಬು,ಕೀಲು ತಜ್ಞ ಡಾ.ಬಿ.ಕೆ.ಅಬ್ದುಲ್ ಬಶೀರ್ ಅಹ್ಮದ್ ಅವರು ಮಾತನಾಡಿ ಹಿಂದೊಮ್ಮೆ ಯು.ಟಿ.ಖಾದರ್ ಅವರು ಆರೋಗ್ಯ ಸಚಿವರಾಗಿದ್ದ ಸಂದರ್ಭ ಯಶಸ್ವಿನಿ ಯೋಜನೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿತ್ತು.ಸರಕಾರ ಬದಲಾದಾಗ ಯೋಜನೆಯಲ್ಲೂ ದೋಷ ಕಂಡಿತ್ತು. ಇದೀಗ ಮತ್ತೆ ಸರಕಾರ ಬದಲಾಗಿದೆ. ಯು.ಟಿ.ಖಾದರ್ ಅವರು ಆರೋಗ್ಯ ಸಚಿವರಾಗದಿದ್ದರೂ ಅತ್ಯಂತ ಉನ್ನತ ಅಧಿಕಾರದ ಸ್ಪೀಕರ್ ಹುದ್ದೆಯಲ್ಲಿದ್ದಾರೆ.ಇಂತಹ ಸಂದರ್ಭದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೊಮ್ಮೆ ಯಶಸ್ವಿಗೊಳಿಸಬೇಕು ಮತ್ತು ಬಿಪಿಎಲ್ ಕಾರ್ಡ್‌ದಾರರಿಗೆ ಕೇವಲ ಸರಕಾರಿ ಆಸ್ಪತ್ರೆ ಮಾತ್ರವಲ್ಲ ಖಾಸಗಿ ಆಸ್ಪತ್ರೆಯಲ್ಲೂ ರಿಯಾಯಿತಿ ದರದ ಚಿಕಿತ್ಸಾ ಸೌಲಭ್ಯ ಸಿಗಬೇಕೆಂದು ಮನವಿ ಮಾಡಿದರು.


ಜಾತ್ಯಾತೀತ ರಾಜಕಾರಣಿ ಖಾದರ್,ಭ್ರಷ್ಟಾಚಾರದ ವಿರುದ್ಧ ಹೋರಾಟದ ಏಕೈಕ ಶಾಸಕ ಅಶೋಕ್ ರೈ:
ಜಿ.ಪಂ ಮಾಜಿ ಉಪಾಧ್ಯಕ್ಷ ಯಂ.ಎಸ್ ಮೊಹಮ್ಮದ್ ಅವರು ಮಾತನಾಡಿ ಯು.ಟಿ ಖಾದರ್ ಅವರು ಜ್ಯಾತ್ಯಾತೀತ ರಾಜಕಾರಣಿಯಾಗಿ ಉತ್ತಮ ಯಶಸ್ಸು ಕಂಡಿದ್ದಾರೆ.ಬಾಲ್ಯದಿಂದಲೇ ಅವರ ರಾಜಕೀಯ ಗುಣವನ್ನು ಕಂಡಿದ್ದೇನೆ.ಅದೇ ರೀತಿ ಎಲ್ಲಾ ಜಾತಿ ಧರ್ಮವನ್ನು ವಿಶೇಷವಾಗಿ ಪ್ರೀತಿಸುವ ಅಶೋಕ್ ಕುಮಾರ್ ರೈ ಅವರು ಅಭಿವೃದ್ಧಿಯ ಜೊತೆಗೆ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ಏಕೈಕ ಶಾಸಕನಾಗಿ ಪ್ರಥಮ ಸ್ಥಾನದಲ್ಲಿದ್ದಾರೆ ಎಂದರು.


ಮುಸ್ಲಿಂ ಸಮುದಾಯ ಎದುರಿಸುವ ಅನೇಕ ಅಪಾಯಗಳಿಗೆ ಒಕ್ಕೂಟ ಧ್ವನಿಯಾಗಬೇಕು: ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಮುದಾಯ ಎದುರಿಸುತ್ತಿರುವ ಏಳುಬೀಳುಗಳಿಗೆ ಸೂಕ್ತ ಪರಿಹಾರ ದೊರೆಯುವ ನೆಲೆಯಲ್ಲಿ 15 ದಿನಗಳ ಹಿಂದೆ ಸಭೆ ನಡೆಸಿ ಈ ಕಾರ್ಯಕ್ರಮ ಆಯೋಜಿಸಲಾಯಿತು.ಈ ಸಂಘಟನೆ ಮುಸ್ಲಿಂ ಸಮುದಾಯ ಮತ್ತು ಅಲ್ಪಸಂಖ್ಯಾತ ಸಮುದಾಯ ಎದುರಿಸುತ್ತಿರುವ ಎಲ್ಲಾ ಅಪಾಯಗಳಿಗೆ ಧ್ವನಿಯಾಗಬೇಕು.ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತರನ್ನು ಜೊತೆಯಾಗಿ ಕೊಂಡೊಯ್ಯಬೇಕು.ಈ ಸಂಘಟನೆ ನಿಂತ ನೀರಾಗದೆ ಹರಿಯುವ ನೀರಾಗುತ್ತದೆ.ಇವತ್ತು ಯು.ಟಿ ಖಾದರ್ ಅವರು ಮುಸ್ಲಿಂ ಪರ ಅಲ್ಲ. ವಿರೋಧವೂ ಅಲ್ಲ.ಅವರು ಜಾತ್ಯಾತೀತ ನೆಲೆಗಟ್ಟಿನಲ್ಲಿ ಕೆಲಸ ಮಾಡಲಿ ಎಂಬುದೇ ನಮ್ಮ ಅಪೇಕ್ಷೆ ಎಂದರು.


ಸನ್ಮಾನ:
ಸ್ಪೀಕರ್ ಯು.ಟಿ.ಖಾದರ್ ಹಾಗೂ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಮುಸ್ಲಿಂ ಸಮುದಾಯ ಒಕ್ಕೂಟದಿಂದ ಆರಂಭದಲ್ಲಿ ಸನ್ಮಾನ ನಡೆಯಿತು.ನಗರಸಭಾ ಸದಸ್ಯ,ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಿಯಾಝ್ ಪರ್ಲಡ್ಕ ಅವರು ಸನ್ಮಾನ ಪತ್ರ ವಾಚಿಸಿದರು.ಬಳಿಕ ಪುತ್ತೂರಿನ ಮಸೀದಿ ಸಮಿತಿಗಳು, ಎಲ್ಲಾ ಸಂಘ ಸಂಸ್ಥೆಗಳಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.


ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಅಲಿ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಆಧ್ಯಕ್ಷ ಅಬ್ದುಲ್ ಶಕೂರ್ ಹಾಜಿ,ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಎಲ್.ಟಿ ಅಬ್ದುಲ್ ರಝಾಕ್, ಅರಿಯಡ್ಕ ಅಬ್ದುಲ್ ರಹಿಮಾನ್ ಹಾಜಿ, ಶಕೂರ್ ಹಾಜಿ ಕಲ್ಲೇಗ, ಕಾಶೀಂ ನಾಸೀರ್ ಮಿತ್ತೂರು, ನೂರುಲ್ ಹುದಾ ಇದರ ಅಬ್ದುಲ್ ಅಝೀಜ್ ಬುಶ್ರಾ,ಜುನೈದ್ ಪಿ.ಕೆ., ಕೆ.ಪಿ.ಅಹಮ್ಮದ್ ಹಾಜಿ ಆಕರ್ಷಣ್, ನಗರಸಭಾ ಸದಸ್ಯ ಯೂಸೂ-, ಅಬ್ದುಲ್ ರಹಿಮಾನ್ ಹಾಜಿ ಹಾಗೂ ಎಲ್ಲಾ ಜಮಾಅತ್‌ನ ಅಧ್ಯಕ್ಷರು ಅತಿಥಿಗಳಾಗಿ ಆಗಮಿಸಿದ್ದರು.ಒಕ್ಕೂಟದ ಕಾರ್ಯಕ್ರಮ ನಿರ್ದೇಶಕ ಸಿನಾನ್ ಪರ್ಲಡ್ಕ, ಶರೀ- ಬಲ್ನಾಡು, ಸಿದ್ದೀಕ್ ಸುಲ್ತಾನ್, ರಶೀದ್ ಪರ್ಲಡ್ಕ, ಸಾಹುಲ್ ಹಮೀದ್ ಕಂಬಳಬೆಟ್ಟು, ಅನ್ವರ್ ಕಬಕ, ಶರೀ- ಬಲ್ನಾಡು, ಆಶೀ- ಸಂಪ್ಯ ಸಹಿತ ಕಾರ್ಯಕ್ರಮದ ಸಂಘಟಕರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಬಾತೀಶ್ ಅಳಕೆಮಜಲು ಸ್ವಾಗತಿಸಿದರು. ನೌ-ಲ್ ಕುಡ್ತಮುಗೇರ್ ಕಾರ್ಯಕ್ರಮ ನಿರೂಪಿಸಿದರು.ಮಹಮ್ಮದ್ ಹಾಫಿಳ್ ಕಿರಾತ್ ಪಠಿಸಿದರು.

ನೀವು ಪರ್ಮನೆಂಟ್ ಶಾಸಕರಾಗಿರಿ ಅಶೋಕ್ ಕುಮಾರ್ ರೈ ಅವರು ಈ ಭಾಗದ ಶಾಸಕರಾಗಿದ್ದಾರೆ.ಅವರು ಸಂವಿಧಾನಬದ್ದವಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅತ್ಯುತ್ತಮ ಸಮಾಜ ನಿರ್ಮಾಣ ಮಾಡಲು ಅವರಿಗೆ ನಿಮ್ಮೆಲ್ಲರ ಸಹಕಾರ ಬೇಕು.ಅವರು ಇಡುವ ಪ್ರತಿಯೊಂದು ಹೆಜ್ಜೆಯಲ್ಲೂ ನೀವು ಹೀಗೆ ಮಾತನಾಡಿ, ಹಾಗೆ ಮಾತನಾಡಬಾರದಿತ್ತು,ನೀವು ಅಲ್ಲಿಗೆ ಹೋಗಬೇಕಿತ್ತು.ಇಲ್ಲಿಗೆ ಹೋಗಬಾರದಿತ್ತು ಎಂದೆಲ್ಲ ಅವರನ್ನು ಕಟ್ಟಿ ಹಾಕುವ ಪ್ರಯತ್ನ ಮಾಡಬೇಡಿ.ಅವರನ್ನು ಸ್ವತಂತ್ರರಾಗಲು ಬಿಡಿ.ಅವರು ನಿಮಗೆಲ್ಲ ಬೇಸರ ಆಗದ ರೀತಿಯಲ್ಲಿ ಉತ್ತಮ ಕೆಲಸ ಮಾಡಲಿದ್ದಾರೆ.ಹಾಗೇ ಅವರಿಂದ ಪುತ್ತೂರು ಪೇಟೆಯಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ನರು ಮತ್ತು ಸಣ್ಣ ಸಣ್ಣ ಮಕ್ಕಳು, ಜೊತೆಯಾಗಿ ಕೈ ಕೈ ಹಿಡಿದು ಒಟ್ಟಿಗೆ ಹೋಗುವಂತೆ ಆಗಲಿ.ಎಲ್ಲಾ ಧರ್ಮ, ಸಂಘ ಸಂಸ್ಥೆಗಳನ್ನು ಜೊತೆಯಾಗಿ ಕೂಡಿಸುವುದು ಜನಪ್ರತಿನಿಧಿಯ ಜವಾಬ್ದಾರಿ. ಈ ನಾಯಕತ್ವವನ್ನು ಅಶೋಕ್ ಕುಮಾರ್ ರೈ ವಹಿಸಿಕೊಂಡು, ಪ್ರಥಮ ಬಾರಿಗೆ ಶಾಸಕರಾದ ಅವರು ಮುಂದೆ ಪರ್ಮನೆಂಟ್ ಶಾಸಕರಾಗಿರಿ ಎಂದು ಯು.ಟಿ.ಖಾದರ್ ಹೇಳಿದರಲ್ಲದೆ ಪುತ್ತೂರಿಗೆ ರಿಂಗ್ ರೋಡ್, ಮೆಡಿಕಲ್ ಕಾಲೇಜು ಕುರಿತ ಶಾಸಕರ ಬೇಡಿಕೆಗೆ ಪೂರ್ಣ ಸಹಕಾರ ನೀಡಲಿದ್ದೇನೆ ಎಂದರು.

ರಾಜಕೀಯದಿಂದ ಸಮುದಾಯ ದೂರವಾಯಿತು
ಹಿಂದೆ ಹಿಂದು ಮುಸ್ಲಿಂ ಬಾಂಧವ್ಯ ಹೇಗಿತ್ತೆಂದರೆ ನಮ್ಮ ಮನೆಯ ಪಕ್ಕದಲ್ಲಿ ಖಾದರ್ ಅವರ ಮನೆಯಿತ್ತು.ಅಲ್ಲಿಂದ ಟೀ ಪುಡಿ, ನಮ್ಮಲ್ಲಿಂದ ಈರುಳ್ಳಿ, ಹಾಲು ಹೀಗೆ ಕೊಡುವುದು ತರುವುದು, ಹೋಗುವುದು, ಬರುವುದು ಇತ್ತು.ಆದರೆ ಈ ಪ್ರೀತಿ ಇವತ್ತು ಯಾಕೆ ದೂರ ಆಗುತ್ತಿದೆ ಎಂದರೆ ಅದು ರಾಜಕೀಯಕ್ಕಾಗಿ.ಬೇರೇನೂ ಇಲ್ಲಿ ಇಲ್ಲ.ಪ್ರೀತಿ ಹಾಗೇನೆ ಇದೆ. ರಾಜಕೀಯಕ್ಕಾಗಿ ಯುವಕರ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಕೆಲಸ ಆಗಿದೆ.ಇವತ್ತು ಯುವಕರ ಮನಸ್ಸು ತಿದ್ದುವ ಕೆಲಸ ಆಗಬೇಕಾಗಿದೆ.ಎಲ್ಲ ಧರ್ಮದ ಗುರುಗಳು ಸೇರಿಕೊಂಡು ಇದಕ್ಕೊಂದು ಅಭಿಪ್ರಾಯ ಮಾಡಿಕೊಂಡು ಯುವಕರ ಮನಸ್ಸಿನಲ್ಲಿ ಪ್ರೀತಿಯನ್ನು ಉಂಟು ಮಾಡುವ ಕೆಲಸ ಆಗಬೇಕು ಎಂದು ಅಶೋಕ್ ಕುಮಾರ್ ರೈ ಹೇಳಿದರು.

ನನಗೆ ಬೆಂಗಳೂರನ್ನು ಸರಿಯಾಗಿ ತೋರಿಸಿದ್ದೇ ಯು.ಟಿ.ಖಾದರ್
ಯು.ಟಿ.ಖಾದರ್ ಅವರನ್ನು ನಾನು ಸುಮಾರು 20 ವರ್ಷದಿಂದ ಬಲ್ಲೆ.ನನ್ನನ್ನು ಬೆಂಗಳೂರಿಗೆ ಆಗಲೇ ಕರೆದುಕೊಂಡು ಹೋಗುತ್ತಿದ್ದರು.ಅವರೊಂದಿಗೆ ಬೆಂಗಳೂರಿಗೆ ಹೋದಾಗ ಎಲ್ಲಾ ಕಡೆ ತಿರುಗಾಡಿ ಬರುತ್ತಿದ್ದೆವು. ನನಗೆ ಸರಿಯಾಗಿ ಬೆಂಗಳೂರು ತೋರಿಸಿದ್ದೇ ಯು.ಟಿ.ಖಾದರ್ ಅವರು.ಈ ಹಿಂದೆ ಅವರು ಎರಡು ಮೂರು ಬಾರಿ ಮಂತ್ರಿಗಳಾಗಿದ್ದಾಗ ನಾನು ಬೇರೆ ಪಕ್ಷದಲ್ಲಿದ್ದೆ. ಆದರೂ ನಮ್ಮ ಬಾಂಧವ್ಯ ಅದೇ ರೀತಿ ಇತ್ತು.ಹೀಗೆ ಎಲ್ಲರನ್ನು ಜೊತೆಯಾಗಿ ಸೇರಿಸಿಕೊಂಡು ಮುಂದೆ ಸಾಗುವ ಮೂಲಕ ಯು.ಟಿ.ಖಾದರ್ ಅವರು ದಕ್ಷಿಣ ಕನ್ನಡ ಜಿಲ್ಲೆಗೆ ಒಬ್ಬ ಉತ್ತಮ ನಿದರ್ಶನ ಎಂದು ಅಶೋಕ್ ಕುಮಾರ್ ರೈ ಹೇಳಿದರು.

LEAVE A REPLY

Please enter your comment!
Please enter your name here