ಇರ್ದೆ-ಬೆಟ್ಟಂಪಾಡಿ ಗ್ರಾಮೀಣ ವಲಯ ಕಾಂಗ್ರೆಸ್‌ನಿಂದ ಗ್ಯಾರಂಟಿ ಯೋಜನೆಗಳ ಉಚಿತ ನೋಂದಣಿ ಶಿಬಿರ,ಕಾಂಗ್ರೆಸ್ ಗ್ಯಾರಂಟಿ ಸಪ್ತಾಹ, ಶಾಸಕ ಅಶೋಕ್ ರೈಯವರಿಗೆ ಸನ್ಮಾನ, ಕಾರ್ಯಕರ್ತರಿಗೆ ಅಭಿನಂದನೆ

0

ಯೋಜನೆಗಳನ್ನು ಪ್ರತಿ ಮನೆಗೆ ತಲುಪಿಸುವ ವಲಯ ಕಾಂಗ್ರೆಸ್ ಕಾರ್ಯಕ್ರಮ ಎಲ್ಲರಿಗೂ ನಿದರ್ಶನ-ಅಶೋಕ್ ಕುಮಾರ್ ರೈ

ಪುತ್ತೂರು:ಸರಕಾರದ ಯೋಜನೆಗಳನ್ನು ಕಾರ್ಯಕರ್ತರೇ ಜನರಿಗೆ ತಲುಪಿಸುವ ಕಾರ್ಯ ಬೆಟ್ಟಂಪಾಡಿ ವಲಯ ಕಾಂಗ್ರೆಸ್‌ನ ಮುಖಾಂತರ ನಡೆಯುತ್ತಿದೆ. ಇದು ಎಲ್ಲರಿಗೂ ನಿದರ್ಶನವಾಗಿದ್ದು ಮುಂದೆ 224 ಬೂತ್ ಗಳಲ್ಲಿಯೂ ನಡೆಯಲಿದೆ. ಕಾಂಗ್ರೆಸ್, ಬಿಜೆಪಿ, ಬ್ಯಾಟ್ ಎಂಬುದನ್ನು ಬಿಟ್ಟು ಯೋಜಗಳನ್ನು ಮನೆ ಮನೆ ತಲುಪಿಸುವ ಮೂಲಕ ಪಕ್ಷದ ಸಾಧನೆಯನ್ನು ತಿಳಿಸಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಇರ್ದೆ-ಬೆಟ್ಟಂಪಾಡಿ ಗ್ರಾಮೀಣ ವಲಯ ಕಾಂಗ್ರೆಸ್ ವತಿಯಿಂದ ಜೂ.24ರಂದು ಬೆಟ್ಟಂಪಾಡಿ ಗ್ರಾ.ಪಂ ಸಮುದಾಯ ಭವನದಲ್ಲಿ ನಡೆದ ಸರಕಾರದ ರಾಜ್ಯ ಗ್ಯಾರಂಟಿ ಯೋಜನೆಗಳಿಗೆ ಉಚಿತ ನೋಂದಣಿ ಶಿಬಿರ ‘ಕಾಂಗ್ರೆಸ್ ಗ್ಯಾರಂಟಿ ಸಪ್ತಾಹ’, ಶಾಸಕ ಅಶೋಕ್ ಕುಮಾರ್ ರೈಯವರಿಗೆ ಸನ್ಮಾನ ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಆಧ್ಯತೆ, ಮೆಡಿಕಲ್ ಕಾಲೇಜಿಗೆ ಪ್ರಯತ್ನಿಸಲಾಗುವುದು. ನಾನು ಹಣ ಮಾಡುವ ಅಸೆಯಿಂದ ರಾಜಕೀಯಕ್ಕೆ ಬಂದಿಲ್ಲ. ಒಂದೇ ರೂಪಾಯಿ ಗೆ ಕೈ ಚಾಚಿಲ್ಲ. ಕೆಡಿಪಿ ಸಭೆಯಲ್ಲಿ ಕ್ಷೇತ್ರದ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಪುತ್ತೂರು ಸೇರಿದಂತೆ ಸುಳ್ಯ ಹಾಗೂ ಬಂಟ್ವಾಳ ತಾಲೂಕಿನ ಕೆಲ ಭಾಗಗಳಿಗೆ 24 ಗಂಟೆಯೂ ಕುಡಿಯುವ ನೀರು ಪೂರೈಸುವ ರೂ.970ಕೋಟಿಯ ಯೋಜನೆ ಎರಡು ವರ್ಷದಲ್ಲಿ ನಡೆಸಲಾಗುವುದು. ಮುಂದಿನ ಐದು ವರ್ಷ ತಾಳ್ಮೆಯಿಂದಿರಬೇಕು. ಅನಿವಾರ್ಯ ಸಂದರ್ಭದಲ್ಲಿ ಕರೆ ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ವ್ಯವಸ್ಥಿತ ರೀತಿಯಲ್ಲಿ ಪ್ರಾರಂಭಿಸಿ ವಿವಿಧ ಇಲಾಖೆಗೆ ಸಂಬಂಧಿಸಿದ ಸೇವೆ ಒದಗಿಸಿ ಸರಕಾರದ ಯೋಜನೆ ಮನೆ ತಲುಪಿಸಲು ಕಚೇರಿಯ ಮೂಲಕ ತಲುಪಿಸಲಾಗುವುದು ಎಂದರು.


ಇರ್ದೆ, ಬೆಟ್ಟಂಪಾಡಿ, ಪಾಣಾಜೆ, ನಿಡ್ಪಳ್ಳಿ ನನಗೆ ತವರೂರು. ನನ್ನ ಊರಿಗಿಂತ ಹೆಚ್ಚು ಪ್ರೀತಿಸುತ್ತೇನೆ. ಅದನ್ನು ಉಳಿಸುವ ಕಾರ್ಯವಾಗಿದೆ. ಈ ಭಾರಿಯ ಚುನಾವಣಾ ಸಮಯದಲ್ಲಿ ಉತ್ತಮ ಬೆಂಬಲ ದೊರೆತಿದೆ.ಬೆಟ್ಟಂಪಾಡಿ, ನಿಡ್ಪಳ್ಳಿ ಹಾಗೂ ಪಾಣಾಜೆ ಭಾಗದಲ್ಲಿ ನಾನು ಕೆಲಸ ಮಾಡಿದ್ದು ಅವರು ನನಗೆ ಆಶೀರ್ವಾದ ಮಾಡುವ ಮೂಲಕ ಋಣ ತೀರಿಸಿದ್ದಾರೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.


ಅರ್ಹರಿಗೆ ಸೌಲಭ್ಯ ದೊರಕಿಸುವ ಕಾರ್ಯ-ಶಕುಂತಳಾ ಶೆಟ್ಟಿ:
ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಮಾತನಾಡಿ, ಬಡವರಿಗಾಗಿ ಜಾರಿಗೆ ತಂದಿರುವ ಯೋಜನೆಗಳನ್ನು ಅರ್ಹರನ್ನು ಹುಡುಕಿ ಅವರಿಗೆ ದೊರೆಯುವಂತೆ ಮಾಡಬೇಕು. ಜನರಿಗೆ ಎಲ್ಲರಿಗೂ ಯೋಜನೆಯ ಬಗ್ಗೆ ಮಾಹಿತಿಯಿರುವುದಿಲ್ಲ.ಕಾರ್ಯಕರ್ತರನ್ನು ಸೌಲಭ್ಯಗಳು ದೊರೆಯುವಂತೆ ಮಾಡಬೇಕು ಎಂದರು. ನಿಮಗೆ ದೊರೆತ ಸ್ಥಾನವನ್ನು ಭದ್ರವಾಗಿಟ್ಟುಕೊಳ್ಳುವಂತೆ ಅಶೋಕ್ ರೈಯವರಿಗೆ ಕಿವಿಮಾತು ಹೇಳಿದ ಅವರು ಅಭಿವೃದ್ಧಿಯ ಬಗ್ಗೆ ಪಟ್ಟಿ ನೀಡಿ ಅದನ್ನು ಅಶೋಕ್ ರೈಯವರು ಪೂರೈಸಿದಾಗ ನೀವು ಅವರೊಂದಿಗೆ ಸಹನೆಯೊಂದಿಗೆ ಸಹಕರಿಸಬೇಕು ಎಂದರು.


ನವೀನ್ ರೈ ನೇತೃತ್ವದಲ್ಲಿ ತಾಲೂಕಿನಲ್ಲಿಯೇ ಪ್ರಥಮ ಕಾರ್ಯಕ್ರಮ-ಮಹಮ್ಮದ್ ಬಡಗನ್ನೂರು:
ಗ್ಯಾರಂಟಿ ಯೋಜನೆಗಳ ಮಾಹಿತಿ ನೀಡಿದ ಸಂಪನ್ಮೂಲ ವ್ಯಕ್ತಿ ಮಹಮ್ಮದ್ ಬಡಗನ್ನೂರು ಮಾತನಾಡಿ, ಕಾಂಗ್ರೆಸ್ ನ ಆರನೇ ಗ್ಯಾರಂಟಿಯಾಗಿ ಪುತ್ತೂರಿಗೆ ಶಾಸಕರಾಗಿ ಅಶೋಕ್ ರೈಯವರು ದೊರೆತಿದ್ದಾರೆ. ಬೆಟ್ಟಂಪಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ನವೀನ್ ರೈಯವರು ಉಚಿತ ನೋಂದಾವಣೆಯ ಮೂಲಕ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆ ತಲುಪಿಸುವುದು ತಾಲೂಕಿನಲ್ಲಿಯೇ ಪ್ರಥಮ ಕಾರ್ಯಕ್ರಮವಾಗಿದೆ. ಮುಖ್ಯ ಮಂತ್ರಿಯಾಗಿ ಸಿದ್ದರಾಮಯ್ಯನವರು ನುಡಿದಂತೆ ನಡೆಯುತ್ತಿದ್ದು ಬೆಟ್ಟಂಪಾಡಿಯಲ್ಲಿ ನವೀನ್ ರೈಯವರು ಜನರಿಗೆ ತಲುಪಿಸುವ ಮೂಲಕ ನುಡಿದಂತೆ ನಡೆಯುತ್ತಿದ್ದಾರೆ ಎಂದರು.


ಬೆಟ್ಟಂಪಾಡಿಯಲ್ಲಿ ಕಾಂಗ್ರೆಸ್ ಶಕ್ತಿಯುತವಾಗಿ ಬೆಳೆದಿದೆ-ಹೇಮನಾಥ ಶೆಟ್ಟಿ;
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಅಶೋಕ್ ಕುಮಾರ್ ರೈಯವರು ಭ್ರಷ್ಟಾಚಾರ ರಹಿತವಾಗಿ ಆಡಳಿತ ನಡೆಸಿ,ಜನರಿಗೆ ಸೇವೆ ನೀಡುವುದಾಗಿ ಚುನಾವಣಾ ಸಂದರ್ಭದಲ್ಲಿ ಹೇಳಿದಂತೆ ನಡೆದುಕೊಳ್ಳುತ್ತಿದ್ದಾರೆ. ಭ್ರಷ್ಟಾಚಾರ ಮಾಡುವ ಅಧಿಕಾರಿಗಳಿಗೆ ಪುತ್ತೂರಿನಲ್ಲಿ ಅವಕಾಶವಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದು ಭ್ರಷ್ಟಾಚಾರ ರಹಿತ ಅಧಿಕಾರಿಗಳೇ ಪುತ್ತೂರಿಗೆ ಬರುತ್ತಿದ್ದಾರೆ. ಕಂದಾಯ ಇಲಾಖೆಯಲ್ಲಿ ಶೀಘ್ರವಾಗಿ ಜನರಿಗೆ ಸೇವೆಗಳು ದೊರೆಯುವಂತಾಗಿದೆ. ಇಲಾಖೆಗಳಲ್ಲಿ ಹಣ ನೀಡದೆ ಕೆಲಸ ಕಾರ್ಯಗಳು ಆಗುತ್ತಿದ್ದು ಜನರು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ ಅವರು ಗ್ರಾ.ಪಂ ಚುನಾವಣೆ ಬಳಿಕ ಬೆಟ್ಟಂಪಾಡಿಯಲ್ಲಿ ನವೀನ್ ರೈ ನೇತೃತ್ವದಲ್ಲಿ ಕಾಂಗ್ರೆಸ್ ದೊಡ್ಡ ಶಕ್ತಿಯಾಗಿ ಬೆಳೆದು ಕಾರ್ಯಕರ್ತರಲ್ಲಿ ಹೊಸ ಹುರುಪು ಬರುತ್ತಿದೆ. ಸಂಘಟಿತವಾಗಿ ಪಕ್ಷ ಶಕ್ತಿಯುತವಾಗಿ ಬೆಳೆಯುತ್ತಿದೆ ಎಂದರು.


ಕಾಂಗ್ರೆಸ್ ಮಯ ಮಾಡಬೇಕು-ಆಲಿಕುಂಞಿ ಕೊರಿಂಗಿಲ:
ಪಿಡಬ್ಲ್ಯೂಡಿ ಗುತ್ತಿಗೆದಾರ ಆಲಿಕುಂಞಿ ಕೊರಿಂಗಿಲ ಮಾತನಾಡಿ, ಶಾಸಕ ಅಶೋಕ್ ರೈಯವರು 24*7 ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಚೆಲ್ಯಡ್ಕ ಮುಳುಗು ಸೇತುವೆಯನ್ನು ಸರ್ವ ಋತು ಸೇತುವೆಯಾಗಿ ನಿರ್ಮಿಸಬೇಕು. ಮುಂಬರುವ ತಾ.ಪಂ ಜಿ.ಪಂ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಮಯ ಮಾಡಬೇಕು ಎಂದರು.


ಅನುಷ್ಟಾನಕ್ಕೆ ಎಲ್ಲರ ಸಹಕಾರ ಅಗತ್ಯ-ಎಂ.ಬಿ ವಿಶ್ವನಾಥ ರೈ
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಮಾತನಾಡಿ, ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಫಲಾನುಭವಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಬೇಕು. ಶಾಸಕರ ಅಶೋಕ್ ರೈಯವರಿಂದ ಕ್ಷೇತ್ರದಲ್ಲಿ ನಿರಿಕ್ಷೆಯಂತೆ ಕೆಲಸವಾಗುತ್ತಿದೆ. ಅವರು ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಮೂಲಕ ಪುತ್ತೂರಿನ ಜನತೆಗೆ ಮತ್ತೊಂದು ಗ್ಯಾರಂಟಿ ನೀಡುತ್ತಿದ್ದಾರೆ. ಎಲ್ಲಾ ಕಾರ್ಯಕ್ರಮ ಅನುಷ್ಠಾನಕ್ಕೆ ನಿಮ್ಮ ಸಹಕಾರ ಅಗತ್ಯ ಎಂದರು.


ವಲಯ ಕಾಂಗ್ರೆಸ್ ಅಧ್ಯಕ್ಷ ನವೀನ್ ರೈ ಚೆಲ್ಯಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಬೆಟ್ಟಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಥಾತಕೋತ್ತರ ತರಗತಿ ಆರಂಭ, ರೆಂಜದಲ್ಲಿ ರಿಕ್ಷ ನಿಲ್ದಾಣ, ಶಾಶ್ವತ ಕುಡಿಯುವ ನೀರು ಮತ್ತು ಕೃಷಿಗಾಗಿ ಬೆಂದ್ರ್ ತೀರ್ಥ ಬಳಿ ಕಿಂಡಿ ಆಣೆಕಟ್ಟು, ಪೈಂತಿಮೊಗೇರು ಎಂಬಲ್ಲಿ ಕಿಂಡಿ ಆಣೆಕಟ್ಟು ಹಾಗೂ ಸೇತುವೆ, ಗೊಳಿಪದವು ಅಂಬೇಡ್ಕರ್ ಭವನದ ಕಾಮಗಾರಿ ಶೀಘ್ರ ಪೂರ್ಣ, ಪರಿಶಿಷ್ಟ ಪಂಗಡದವರೇ ಅಧಿಕವಿರುವ ದೂಮಡ್ಕದಲ್ಲಿ ವಾಲ್ಮೀಕಿ ಭವನ, ಇರ್ದೆ, ದೂಮಡ್ಕ, ಅಡ್ಕಸ್ಥಳ ರಸ್ತೆ, ಹಾಗೂ ವಡ್ಯ ತೋರಣಕಟ್ಟೆ ಸಂಪರ್ಕ ರಸ್ತೆ ಮೇಲ್ದರ್ಜೆಗೆ, ಇರ್ದೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಸಜ್ಜಿತ ಕಟ್ಟಡ ಸೇರಿದಂತೆ ಗ್ರಾಮದ ಅಭಿವೃದ್ಧಿಗೆ ಪೂರಕವಾದ ಕಾಮಗಾರಿಗಳನ್ನು ನಡೆಸಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು.


ಬ್ಲಾಕ್ ಕಾಂಗ್ರೆಸ್ ಎಸ್ಪಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ಜಿಲ್ಲಾ ಕಾಂಗ್ರೆಸ್‌ನ ಮಾಜಿ ಸದಸ್ಯ ಇತ್ತಪ್ಪ ಪೇರಲ್ಲಡ್ಕ ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಮೌರೀಸ್ ಮಸ್ಕರೇನಸ್, ಶಶಿಕಿರಣ್ ನೂಜಿಬೈಲು, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವಿ.ಎಚ್.ಎ ಶಕೂರ್ ಹಾಜಿ, ಪಕ್ಷದ ಹಿರಿಯರಾದ ಕೆ.ಪಿಭಟ್ ಕೋನಡ್ಕ, ಅಬೂಬಕ್ಕರ್ ಕೊರಿಂಗಿಲ, ಬಿ.ಆರ್ ದೇವಪ್ಪ ಗೌಡ ರಂಗಯ್ಯಕಟ್ಟೆ, ಬೆಟ್ಟಂಪಾಡಿ ಗ್ರಾ.ಪಂ ಸದಸ್ಯರಾದ ಸುಮಲತಾ, ಲಲಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ವೀಕ್ಷಾ,ಲತೀಕ್ಷಾ ಪ್ರಾರ್ಥಿಸಿದರು. ವಲಯ ಕಾಂಗ್ರೆಸ್ ಅಧ್ಯಕ್ಷ ನವೀನ್ ರೈ ಚೆಲ್ಯಡ್ಕ ಸ್ವಾಗತಿಸಿದರು. ಸದಾಶಿವ ರೈ ಗುಮ್ಮಟೆಗದ್ದೆ ಕಾರ್ಯಕ್ರಮ ನಿರೂಪಿಸಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಆಳ್ವ ಉಪ್ಪಳಿಗೆ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ನೂರಾರು ಮಂದಿ ಗ್ರಾಮಸ್ಥರು ತಮ್ಮ ಅಹವಾಲುಗಳನ್ನು ಶಾಸಕರಿಗೆ ಸಲ್ಲಿಸಿದರು.

LEAVE A REPLY

Please enter your comment!
Please enter your name here