ಎಡನೀರು ಶ್ರೀಗಳ ಚಾತುರ್ಮಾಸ ವ್ರತಾಚರಣೆಗೆ ಶ್ರೀ ಮಠದ ಅಭಿಮಾನಿಗಳ ಸಭೆ-ಪುತ್ತೂರಿನಿಂದ ಬೃಹತ್ ಹೊರೆಕಾಣಿಕೆ ಸಮರ್ಪಣೆಗೆ ನಿರ್ಣಯ

0

ಮಠದ ಅಭಿಮಾನಿಗಳೆಲ್ಲರೂ ಮಠದ ಆತಿಥ್ಯಕ್ಕೆ ಬಾಜನರಾಗುವಂತೆ ಎಡನೀರು ಶ್ರೀಗಳಿಂದ ವಿನಂತಿ

ಪುತ್ತೂರು: ಎಡನೀರು ಮಠದಲ್ಲಿ ಜು.3 ರಿಂದ ಮೂರು ತಿಂಗಳು ನಡೆಯುವ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಚಾತುರ್ಮಾಸ ವ್ರತಾಚರಣೆಗೆ ಪುತ್ತೂರಿನಿಂದ ಬೃಹತ್ ಸಂಖ್ಯೆಯಲ್ಲಿ ಸೇರುವ ಮತ್ತು ಹೊರೆಕಾಣಿಕೆ ಸಮರ್ಪಣೆ ಕುರಿತು ಪುತ್ತೂರು ವಲಯ ಸಮಿತಿಯಿಂದ ನಿರ್ಣಯ ಮಾಡಲಾಯಿತು.
ಪುತ್ತೂರು ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಜೂ.25ರಂದು ಎಡನೀರು ಶ್ರೀಗಳ ಚಾತುರ್ಮಾಸ ವ್ರತಾಚರಣೆಯ ಪುತ್ತೂರು ವಲಯ ಸಮಿತಿ ಅಧ್ಯಕ್ಷ ಡಾ. ಭಾಸ್ಕರ್ ಎಸ್ ಅಧ್ಯಕ್ಷತೆಯಲ್ಲಿ ನಡೆದ ಶ್ರೀ ಮಠದ ಅಭಿಮಾನಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಜು.3 ರಿಂದ ಸೆ.25ರ ವರೆಗೆ ಚಾತುರ್ಮಾಸ ನಡೆಯಲಿದೆ. ಜು.10ರ ಬಳಿಕ ಪುತ್ತೂರಿನಿಂದ ಬೃಹತ್ ಹೊರೆಕಾಣಿಕೆ ಸಮರ್ಪಣೆಯ ಕುರಿತು ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು. ಇದರ ಜೊತೆಗೆ ಪುತ್ತೂರಿನ ಅಭಿಮಾನಿಗಳಿಂದ ವಿವಿಧ ಸಹಕಾರ ನೀಡುವ ಕುರಿತು ಸಭೆಯಲ್ಲಿ ಸಲಹೆ ಸೂಚನೆ ವ್ಯಕ್ತವಾಯಿತು.
ಎಡನೀರು ಶ್ರೀಗಳ ಆಶೀರ್ವಚನ:
ಎಡನೀರು ಶ್ರೀಗಳು ಆಶೀರ್ವಚನ ನೀಡಿ ಮಾತನಾಡಿ, ನಾಲ್ಕು ಪಕ್ಷಗಳ ರೂಪದಲ್ಲಿ ರೂಪಾಂತರಗೊಂಡು ಚಾತುರ್ಮಾಸ್ಯ ಆಚರಿಸಲ್ಪಡುತ್ತಿದೆ. ಈ ವರ್ಷ ಅಧಿಕ ಶ್ರಾವಣದ ಕಾಲದಿಂದಾಗಿ ಮೂರು ತಿಂಗಳ ಕಾಲ ಚಾತುರ್ಮಾಸ ನಡೆಯಲಿದೆ. ಈ ನಿಟ್ಟಿನಲ್ಲಿ ಪುತ್ತೂರಿನ ಎಲ್ಲಾ ಶ್ರೀಮಠದ ಅಭಿಮಾನಿಗಳು ಭಾಗವಹಿಸಿ ಮಠದ ಆತಿಥ್ಯಕ್ಕೆ ಭಾಜನರಾಗಬೇಕೆಂದು ವಿನಂತಿಸಿದರು.

ಚಾತುರ್ಮಾಸದ ವ್ಯವಸ್ಥೆ ಅದರದ್ದೇ ರೀತಿಯಲ್ಲಿ ನಡೆಯುತ್ತದೆ. ಇದನ್ನು ತಿಳಿದುಕೊಂಡು ಎಲ್ಲರು ಭಾಗವಹಿಸಿ. ಯಾಕೆಂದರೆ ಪುತ್ತೂರಿಗೂ ಶ್ರೀಮಠಕ್ಕೂ ಬಹಳ ಹತ್ತಿರದ ಸಂಬಂಧವಿದೆ. ಹಿರಿಯ ಸ್ವಾಮೀಜಿಯವರ ಸಮಯದಲ್ಲಿ ಕೆಮ್ಮಾಯಿ ದೇವಸ್ಥಾನದಲ್ಲಿ ಚಾತುರ್ಮಾಸ ವಿಜೃಂಭಣೆಯಿಂದ ನಡೆದಿದೆ. ಅದೇ ರೀತಿ ಈ ಬಾರಿ ಶ್ರೀಮಠದಲ್ಲೂ ಧಾರ್ಮಿಕ ಪರಂಪರೆಯನ್ನು ಉಳಿಸಿಕೊಂಡು ಚಾತುರ್ಮಾಸ ವ್ರತಾಚರಣೆ ನಡೆಯಲಿದೆ ಎಂದರು.
ಪುತ್ತೂರಿನಿಂದ ಹೊರೆಕಾಣಿಕೆ ಸಮರ್ಪಣೆ ಮಾಡೋಣ:
ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ಕಾರ್ಯದರ್ಶಿ ಯು ಪೂವಪ್ಪ ಮಾತನಾಡಿ ಎಡನೀರು ಮಠಕ್ಕು ಕಲ್ಲಾರೆ ಶ್ರೀ ಮಠಕ್ಕೂ ಬಹಳ ವರ್ಷದ ಹಿಂದಿನಿಂದಲೂ ಉತ್ತಮ ಸಂಬಂಧವಿದೆ. ಹಿರಿಯ ಸ್ವಾಮೀಜಿಯವರ ಮೇಲೆ ಅಪಾರ ಗೌರವ ಇದೆ. ಹಲವು ಯಕ್ಷಗಾನ ಸಪ್ತಾಹ ಇಲ್ಲಿ ನಡೆಸಿದ್ದೇವೆ. ಇಂತಹ ಸಂದರ್ಭದಲ್ಲಿ ಶ್ರೀಗಳ ಚಾತುರ್ಮಾಸಕ್ಕೆ ಪುತ್ತೂರಿನಿಂದ ಹೊರೆಕಾಣಿಕೆ ಸಮರ್ಪಣೆ ಮಾಡೋಣ ಎಂದರು.
ಚಾತುರ್ಮಾಸಕ್ಕೆ ತೊಡಗಿಸಿಕೊಳ್ಳವುದು ಅಗತ್ಯ:
ಕೈಯ್ಯೂರು ನಾರಾಯಣ ಭಟ್ ಮಾತನಾಡಿ ಎಡನೀರು ಮಠದ ಚಾತುರ್ಮಾಸ ಕಾರ್ಯಕ್ರಮಕ್ಕೆ ಬರುವುದಲ್ಲ. ತೊಡಗಿಸಿಕೊಳ್ಳಬೇಕು. ಪ್ರತಿನಿತ್ಯ ಭಾಗವಹಿಸುವ ಪ್ರಯತ್ನ ಮಾಡಿ ಎಂದರು. ಎಡನೀರು ಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿವೃತ್ತ ಪ್ರೊ. ವೇದವ್ಯಾಸ ಭಟ್ ಪ್ರಾರ್ಥಿಸಿದರು. ಚಾತುರ್ಮಾಸ ವ್ರತಾಚರಣೆಯ ಪುತ್ತೂರು ಸಮಿತಿ ಅಧ್ಯಕ್ಷ ಡಾ. ಭಾಸ್ಕರ್ ಎಸ್ ಸ್ವಾಗತಿಸಿ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ವಂದಿಸಿ, ಭಾಸ್ಕರ್ ಬಾರ್ಯ ಕಾರ್ಯಕ್ರಮ ನಿರೂಪಿಸಿದರು. ಎ ವಿ ನಾರಾಯಣ, ರಾಜೇಶ್ ಬನ್ನೂರು, ಪ್ರೇಮಲತಾ ರಾವ್, ಪ್ರಭಾಕರ ಮುಗೇರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಅಭಿಮಾನಿ ಸಭೆಯ ಬಳಿಕ ನಡೆದ ಪೂರ್ವ ಸಿದ್ದತಾ ಸಭೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಮಧ್ಯಾಹ್ನ ಶ್ರೀಗಳ ಪಟ್ಟದ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಪ್ರಸಾದ ವಿತರಣೆ ನಡೆಯಿತು.

LEAVE A REPLY

Please enter your comment!
Please enter your name here