ಲಂಚ, ಭ್ರಷ್ಟಾಚಾರ ನಿಲ್ಲಿಸಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯವುಳ್ಳ ವಿಜಯಣ್ಣನಂತ ನಾಯಕರು ಚಿಕ್ಕಬಳ್ಳಾಪುರಕ್ಕೆ ಹೋಗಿ ಅಲ್ಲಿಯ ಶಾಸಕರನ್ನು ನೋಡಿಬರಬೇಕು

0

ಯಾವುದೇ ಪ್ರಬಲ ಹಿನ್ನೆಲೆ ಇಲ್ಲದಿದ್ದರೂ ಆರೋಗ್ಯ ಮಂತ್ರಿ ಸುಧಾಕರರ ಭ್ರಷ್ಟಾಚಾರದ ವಿರುದ್ಧ ಹೋರಾಡಿ ಗೆಲುವು ಸಾಧಿಸಿದ್ದು ಹೇಗೆ ಎಂದು ಶಾಸಕ ಪ್ರದೀಪ್ ಈಶ್ವರರನ್ನು ಕೇಳಿ ತಿಳಿಯಬೇಕು.

ನಾನು 1985ರಲ್ಲಿ ಬಳಕೆದಾರರ ವೇದಿಕೆಯ ವತಿಯಿಂದ ಭ್ರಷ್ಟಾಚಾರದ ವಿರುದ್ಧ ಮೆರವಣಿಗೆ ಮಾಡಿದಾಗ ಇದ್ದ ಏಳು ಜನರಲ್ಲಿ ವಿಜಯಕುಮಾರ್ ಮಡಪ್ಪಾಡಿ, ನಿತ್ಯಾನಂದ ಮುಂಡೋಡಿ ಪ್ರಮುಖರು. ಅವರು ಅಂದಿನಿಂದ ಇಂದಿನವರೆಗೂ ನಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತಾ ಬಂದಿದ್ದಾರೆ. ನಾನು ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕುಗಳಲ್ಲಿ, ಮಂಗಳೂರು, ಬೆಂಗಳೂರುಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಆಂದೋಲನ ನಡೆಸಿದ್ದು, ಮೋದೀಜಿಯವರ ವಾರಣಾಸಿಯಲ್ಲಿ, ರಾಹುಲ್ ಗಾಂಧಿಯವರ ಕ್ಷೇತ್ರ ಅಮೇಥಿಯಲ್ಲಿ, ಸಿದ್ಧರಾಮಯ್ಯರ ಕ್ಷೇತ್ರ ವರುಣಾದಲ್ಲಿ, ಬೊಮ್ಮಾಯಿಯವರ ಕ್ಷೇತ್ರ ಶಿಗ್ಗಾಂವಿಯಲ್ಲಿ ಮಾಡಿದ ಭ್ರಷ್ಟಾಚಾರದ ವಿರುದ್ಧ ಆಂದೋಲನದ ಪ್ರಚಾರ ಅದಕ್ಕೆ ಸಾಕಷ್ಟು ಬೆಂಬಲವನ್ನು ಇಲ್ಲಿ ನೀಡಿದೆ. ಜೀವಂತವಾಗಿಡಲು ಸಹಾಯ ಮಾಡಿದೆ.


ಪ್ರಾಮಾಣಿಕ ನಾಯಕರು ಲಂಚ, ಭ್ರಷ್ಟಾಚಾರದ ವಿರುದ್ಧ ಹೋರಾಡಿದರೆ ಯಶಸ್ಸು ಖಂಡಿತ:
ನಮ್ಮ ಆಂದೋಲನದ ಪರಿಣಾ ಮವಾಗಿ ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ಮತ್ತು ಜಿಲ್ಲೆಯ ಇತರ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ನಿಂತವರು ಲಂಚ, ಭ್ರಷ್ಟಾಚಾರದ ವಿರುದ್ಧ ಘೋಷಣೆ ಕೂಗಿದ್ದಾರೆ, ಪ್ರತಿಜ್ಞೆ ಮಾಡಿದ್ದಾರೆ. ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಆ ಬಗ್ಗೆ ಭರವಸೆ ನೀಡುತ್ತಿದ್ದಾರೆ. ಪುತ್ತೂರಿನ ಅಶೋಕ್ ಕುಮಾರ್ ರೈಯವರಂತೂ ಅದನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಸಾರ್ವಜನಿಕರು ಸಂಪೂರ್ಣ ಬೆಂಬಲ ನೀಡುವ ಮೂಲಕ ಅದನ್ನು ಯಶಸ್ವಿಗೊಳಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾಗಿದೆ. 1985ರಿಂದಲೇ ಸುದ್ದಿ ಆಂದೋಲನಕ್ಕೆ ಬೆಂಬಲ ನೀಡುತ್ತಾ ಬಂದಿರುವ, ಯಾವುದೇ ಪಕ್ಷದ ಮುಖವಾಣಿಯಾಗಿರದೆ ನೇರ, ನಿಷ್ಠುರ ವ್ಯಕ್ತಿತ್ವದ ಎಂ.ಡಿ. ವಿಜಯ ಕುಮಾರರಂತವರು, ರಾಜಕೀಯದಲ್ಲಿದ್ದರೂ ಪ್ರಾಮಾಣಿಕರಾಗಿರುವ ನಿತ್ಯಾನಂದ ಮುಂಡೋಡಿಯಂತವರು ಭ್ರಷ್ಟಾಚಾರದ ವಿರುದ್ಧದ ಹೋರಾಟ ಯಶಸ್ವಿಯಾಗುವುದೇ ಇಲ್ಲ ಎಂಬ ಸಾರ್ವತ್ರಿಕ ಅಭಿಪ್ರಾಯವನ್ನು ಕಡೆಗಣಿಸಿ ಈ ಆಂದೋಲನದ ನೇತೃತ್ವ ವಹಿಸಿಕೊಂಡರೆ ಅದು ಯಶಸ್ವಿಯಾಗುವುದು ಖಂಡಿತ ಎಂದು ಹಲವಾರು ಬಾರಿ ಅವರಿಗೆ ಹೇಳಿದ್ದೇನೆ. ಅಂತಹ ಪ್ರಾಮಾಣಿಕ ನಾಯಕರುಗಳಿಗೆ ಲಂಚ, ಭ್ರಷ್ಟಾಚಾರ ನಿರ್ಮೂಲನದ ಬಗ್ಗೆ ಭರವಸೆ ಉಂಟಾಗಲು ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಅವರ ಕ್ಷೇತ್ರದಲ್ಲಿ ನೋಡಿ ಬರಲು ಕರೆ ನೀಡುತ್ತಿದ್ದೇನೆ.


ಜನಪರ ಹೋರಾಟದ ರಿಸ್ಕ್ ನಾಯಕತ್ವದ ಅವಕಾಶ ನೀಡುತ್ತದೆ:
ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಮಂತ್ರಿಯಾಗಿ ಅತ್ಯಂತ ಪ್ರಬಲ ನಾಯಕರಾಗಿದ್ದ, ಆರ್ಥಿಕವಾಗಿಯೂ ಸಬಲರಾಗಿದ್ದ ಡಾ. ಸುಧಾಕರರನ್ನು ಅವರ ಲಂಚ, ಭ್ರಷ್ಟಾಚಾರದ ವಿಷಯವನ್ನೇ ಚುನಾವಣೆಯ ಹೋರಾಟದ ಪ್ರಮುಖ ಅಸ್ತ್ರವನ್ನಾಗಿ ಮಾಡಿ ಪ್ರದೀಪ್ ಈಶ್ವರ್‌ರು ಅವರನ್ನು ಸೋಲಿಸಿ ಗೆದ್ದಿದ್ದಾರೆ. ಯಾವುದೇ ಗಾಡ್‌ಫಾದರ್ ಇಲ್ಲದಿದ್ದರೂ, ಯಾವುದೇ ಪ್ರಬಲ ಹಿನ್ನೆಲೆ ಇಲ್ಲದಿದ್ದರೂ, ರಾಜಕೀಯವಾಗಿ, ಆರ್ಥಿಕವಾಗಿ ಸುಧಾಕರರಿಗೆ ಸಾಟಿಯಲ್ಲದಿದ್ದರೂ ಪ್ರದೀಪ್ ಈಶ್ವರ್ ಗೆಲುವು ಸಾಧಿಸಿದ್ದು ಆಶ್ಚರ್ಯದಿಂದ ಜನರ ಹುಬ್ಬೇರಿಸುವಂತೆ ಮಾಡಿದೆ. ಪ್ರದೀಪ್ ಈಶ್ವರ್ ‘ಕಳೆದ ಏಳೆಂಟು ವರ್ಷಗಳಿಂದ ಸುಧಾಕರ್‌ರ ಭ್ರಷ್ಟಾಚಾರದ ವಿರುದ್ದ ಹೋರಾಟ ನಡೆಸುತ್ತಾ ಬಂದಿದ್ದೇನೆ. ಹಲವಾರು ಕೇಸ್‌ಗಳಿಗೆ ಒಳಗಾಗಿ, ಬಂಧನಕ್ಕೆ ಒಳಗಾಗುವ ಸಂದಂರ್ಭ ಬಂದಿತ್ತು. ಅದನ್ನು ಎದುರಿಸಲಿಕ್ಕಾಗಿ ಸುಧಾಕರ್‌ರಂತಹ ಭ್ರಷ್ಟರನ್ನು ಸೋಲಿಸಲೇ ಬೇಕೆಂದು ಸ್ಪರ್ಧಿಸಿ ಸಾಧಿಸಿದ್ದೇನೆ’ಎಂದು ಹೇಳಿಕೊಂಡಿದ್ದಾರೆ. ಇಂತಹ ಸಾಧನೆ ಮಾಡುವ ಸಾಮರ್ಥ್ಯ, ಹಲವಾರು ಜನರಿಗೆ ಇರುತ್ತದೆ. ಆದರೆ ಬೇರೆ ಬೇರೆ ಕಾರಣಗಳಿಂದಾಗಿ, ಮುಖ್ಯವಾಗಿ ಪಕ್ಷದ ಹಿಡಿತದಲ್ಲಿ ಅವರಿರುವುದರಿಂದ ಆ ರಿಸ್ಕ್‌ಗೆ ಕೈ ಹಾಕದೆ ಇದ್ದು ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ ಎಂದು ನನಗೆ ಅನಿಸಿದೆ.


ಭರತ್ ಮುಂಡೋಡಿ, ಸದಾಶಿವ ಎಂ.ಬಿ. ಶಾಸಕರಾಗಲು ಜನಪರ ಹೋರಾಟ ನಡೆಸಬೇಕಿತ್ತು:
ಉದಾಹರಣೆಗೆ ಸುಳ್ಯದಲ್ಲಿ 1985ರ ಸಮಯದಲ್ಲಿ ಭರತ್ ಮುಂಡೋಡಿ, ಎಂ.ಬಿ ಸದಾಶಿವ, ಡಿ.ವಿ. ಸದಾನಂದ ಪ್ರಮುಖ ಯುವ ನಾಯಕರಾಗಿದ್ದರು. ಡಿ.ವಿ. ಸದಾನಂದರು ತಮ್ಮ ಹೋರಾಟಗಳಿಂದಲೇ ನಾಯಕರಾಗಿ, ಶಾಸಕರಾಗಿ, ಸಂಸದರಾಗಿ, ರಾಜ್ಯಾಧ್ಯಕ್ಷರಾಗಿ, ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರೂ ಆಗಿ ಕೆಲಸ ಮಾಡಿದ್ದಾರೆ. ಅವರು ಅವಕಾಶಗಳನ್ನು, ಸಂದರ್ಭಗಳನ್ನು ಸಮರ್ಥವಾಗಿ ಉಪಯೋಗಿಸಿಕೊಂಡಿದ್ದಾರೆ. ಎಂ.ಬಿ. ಸದಾಶಿವರು ದಳದ ಜಿಲ್ಲಾಧ್ಯಕ್ಷರಾಗಿ, ರಾಜ್ಯ ಕಾರ್ಯದರ್ಶಿಯಾಗಿ, ಲಯನ್ ಗವರ್ನರ್‌ರಾಗಿ ಕೆಲಸ ಮಾಡಿ ಸಂಪೂರ್ಣವಲ್ಲದಿದ್ದರೂ ತಕ್ಕ ಮಟ್ಟಿಗೆ ಅವಕಾಶಗಳನ್ನು ಬಳಸಿಕೊಂಡಿದ್ದಾರೆ. ಆ ಸಂದರ್ಭದಲ್ಲಿ 1987ರಲ್ಲಿ ಜಿಲ್ಲಾ ಪರಿಷತ್ ಸದಸ್ಯರಾಗಿ ಅತೀ ಬೇಗ ಮುಂಚೂಣಿಗೆ ಬಂದು ಸಾಮರ್ಥ್ಯವನ್ನು ಪ್ರದರ್ಶಿಸಿದವರು ಭರತ್ ಮುಂಡೋಡಿಯವರು. ಒಕ್ಕಲು ಮಸೂದೆಯ ಸಂದರ್ಭದಲ್ಲಿ ಒಕ್ಕಲಿನ ಕಡೆ ಹೋರಾಟ, ಸುಬ್ರಹ್ಮಣ್ಯದಂತಹ ದೇವಸ್ಥಾನಗಳಿಗೆ ದಲಿತರ ಪ್ರವೇಶ ಇಲ್ಲದಿದ್ದಾಗ ಆ ಪ್ರವೇಶಕ್ಕಾಗಿ ಹೋರಾಟ ಮೊದಲಾದ ಸಾರ್ವಜನಿಕ ಹೋರಾಟಗಳಲ್ಲಿ ಹೆಸರನ್ನು ಗಳಿಸಿದ್ದಾರೆ. ಪಕ್ಷದಲ್ಲೂ ಸಾಕಷ್ಟು ಸ್ಥಾನಮಾನಗಳನ್ನು ಗಳಿಸಿದ್ದಾರೆ. ಆದರೆ ಸದಾಶಿವ ಎಂ.ಬಿ. ಮತ್ತು ಭರತ್ ಮುಂಡೋಡಿಯವರು ಕನಿಷ್ಟ ಶಾಸಕ ಸ್ಥಾನವನ್ನಾದರೂ ಪಡೆದು ಜನಸೇವೆಯ ಅವಕಾಶ ಪಡೆಯಬೇಕಿತ್ತು, ಅದಕ್ಕಾಗಿ ಜನಪರ ಹೋರಾಟದ ರಿಸ್ಕನ್ನು ಆಯಾ ಸಂದರ್ಭಗಳಲ್ಲಿ ತೆಗೆದುಕೊಳ್ಳಬೇಕಾಗಿತ್ತು ಎಂದು ನನಗನಿಸುತ್ತಿದೆ. ಉದಾ: ಸುಳ್ಯದ ಮೀಸಲಾತಿ ಬದಲಾವಣೆ, ವ್ಯಾಪಕ ಬ್ರಷ್ಟಾಚಾರ, ಅಭಿವೃದ್ಧಿಯ ಹಿನ್ನಡೆ, ವಿದ್ಯುತ್ ಸಮಸ್ಯೆ, ಸರಕಾರಿ ಶಾಲೆಗಳ ಅವ್ಯವಸ್ಥೆ, ನೀರಿನ ಸಮಸ್ಯೆ, ಅಡಿಕೆ ಹಳದಿ ಕಾಯಿಲೆ ಇತ್ಯಾದಿ.ಭರತ್ ಮುಂಡೋಡಿ ಅತ್ಯಂತ ಪ್ರಾಮಾಣಿಕರಾಗಿದ್ದು, ಭ್ರಷ್ಟಾಚಾರ ವಿರೋಧಿ ಆಗಿದ್ದುದರಿಂದ ಉತ್ತಮ ಆಡಳಿತಗಾರನಾಗಿದ್ದುದರಿಂದ ಅವರನ್ನು ಭ್ರಷ್ಟಾಚಾರದ ವಿರುದ್ಧದ ಹೋರಾಟದ ನೇತೃತ್ವವನ್ನು ಪಕ್ಷಾತೀತವಾಗಿ ವಹಿಸಿಕೊಳ್ಳಲು ಕೇಳಿಕೊಂಡಿದ್ದೆ. ಅವರು ಅದನ್ನು ವಹಿಸಿಕೊಂಡಿದ್ದಿದ್ದರೆ ಸುಳ್ಯ, ಪುತ್ತೂರು ಮಾತ್ರವಲ್ಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಅದರ ಪರಿಣಾಮ ಬೀರಬಹುದಿತ್ತು. ಜನರ ಆಯ್ಕೆಯಾಗಿ ಪುತ್ತೂರಿನ ಶಾಸಕ ಸ್ಥಾನಕ್ಕೆ ಅಭ್ಯರ್ಥಿ ಅವರೇ ಆಗಬಹುದಿತ್ತು, ಪಕ್ಷೇತರರಾಗಿಯೂ ಗೆಲ್ಲುವ ಸಾಮರ್ಥ್ಯವನ್ನು ಹೊಂದುತ್ತಿದ್ದರೋ ಏನೋ ಎಂಬ ಅಭಿಪ್ರಾಯ ನನ್ನದು.


ಅಶೋಕ್ ಕುಮಾರ್ ರೈಯವರು ಭ್ರಷ್ಟಾಚಾರದ ವಿರುದ್ಧ ಹೋರಾಟದ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ:
ಪುತ್ತೂರಿನಲ್ಲಿ ಅಶೋಕ್ ಕುಮಾರ್ ರೈಯವರು ಅಂತಹ ರಿಸ್ಕನ್ನು ತೆಗೆದುಕೊಂಡಿದ್ದಾರೆ. ಹಲವಾರು ಸಾರ್ವಜನಿಕ ಕೆಲಸಗಳನ್ನು ಮಾಡಿ ಅದರ ಆಧಾರದಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಯಾಗಿ ಶಾಸಕನಾಗಲು ಪ್ರಯತ್ನಿಸಿದ್ದಾರೆ. ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ಅದಕ್ಕೆ ಅಡಿಪಾಯವನ್ನು ಹಾಕಿದ್ದರು. ಮಾತ್ರವಲ್ಲ ಭ್ರಷ್ಟಾಚಾರದ ವಿರುದ್ದ ಜನರು ರೋಸಿ ಹೋಗಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಂಡು ಸುದ್ದಿ ಜನಾಂದೋಲನದ ಲಂಚ, ಭ್ರಷ್ಟಾಚಾರದ ವಿರುದ್ಧದ ಆಂದೋಲನಕ್ಕೆ ಸಂಪೂರ್ಣ ಬೆಂಬಲ ನೀಡಿದ್ದರು. ತನ್ನ ಅಂದಿನ ಸಭೆಯಲ್ಲಿ ತಾನು ಅಧಿಕಾರಕ್ಕೆ ಬಂದರೆ ಪುತ್ತೂರಿನಲ್ಲಿ ಲಂಚ, ಭ್ರಷ್ಟಾಚಾರ ನಿಲ್ಲಿಸಿಯೇ ನಿಲ್ಲಿಸುತ್ತೇನೆ ಎಂಬ ಪ್ರತಿಜ್ಞೆಯನ್ನು ಮಾಡಿದ್ದರು. ಚುನಾವಣೆ ಸಂದರ್ಭದಲ್ಲೂ ಅದನ್ನೇ ತನ್ನ ಪ್ರಮುಖ ಚುನಾವಣಾ ಅಸ್ತ್ರವನ್ನಾಗಿ ಉಪಯೋಗಿಸಿದ್ದರು. ಈಗ ಗೆಲುವು ಸಾಧಿಸಿದ ಮೇಲೆ ಅದನ್ನು ಮುಂದುವರಿಸಿಕೊಂಡೇ ಬಂದಿದ್ದಾರೆ. ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರರಂತು ಅಲ್ಲಿಯ ಭ್ರಷ್ಟಾಚಾರಿಗಳಿಗೆ ಸಿಂಹ ಸ್ವಪ್ನವಾಗಿದ್ದಾರೆ. ಲಂಚ, ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಅವರಿಂದ ಕಲಿಯಬಹುದಾಗಿದೆ.
ಯಾವುದೇ ಪಕ್ಷ ಆಡಳಿತಕ್ಕೆ ಬರಲಿ, ತಮ್ಮ ಕ್ಷೇತ್ರದ ಜನರ ಹಿತಾಸಕ್ತಿಗಾಗಿ ಜಾತಿ, ಧರ್ಮ, ಪಕ್ಷವನ್ನೂ ನೋಡದೆ ಕೆಲಸ ಮಾಡುವ ನಾಯಕರು ನಿಜವಾದ ನಾಯಕರುಗಳಾಗುತ್ತಾರೆ. ಅವರು ಯಾವುದೇ ಪಕ್ಷದ ಹಂಗಿನಲ್ಲಿರುವುದಿಲ್ಲ, ಜನರ ಕೃಪೆ ಸದಾ ಅವರ ಮೇಲಿದ್ದು ಪ್ರಜಾಭುತ್ವದ ವ್ಯವಸ್ಥೆಯನ್ನು ಕಾಪಾಡುವವರೂ ಆಗುತ್ತಾರೆ ಎಂಬುದನ್ನು ಉಲ್ಲೇಖಿಸಲಿಕ್ಕಾಗಿ ಮಾತ್ರ ಈ ಮೇಲಿನ ಉದಾಹರಣೆಗಳನ್ನು ನೀಡಿದ್ದೆನೆ. ಈ ವಿಚಾರವು ಎಲ್ಲಾ ಪಕ್ಷಗಳ, ಎಲ್ಲಾ ಸಮುದಾಯಗಳ ನಾಯಕರುಗಳಿಗೆ, ಸಮಾಜ ಸೇವಕರಿಗೆ ಅನ್ವಯವಾಗುತ್ತದೆ ಎಂದು ಹೇಳಲು ಬಯಸುತ್ತೇನೆ.

  • ಡಾ.ಯು.ಪಿ ಶಿವಾನಂದ

LEAVE A REPLY

Please enter your comment!
Please enter your name here