ಬಲವಂತವಾಗಿ ಯುವತಿ ಪಕ್ಕ ಕುಳ್ಳಿರಿಸಿ ಫೋಟೋ ತೆಗೆದು ಹಣಕ್ಕೆ ಬೇಡಿಕೆ-ಕಡಬ ನಿವಾಸಿ ಹೆಚ್.ಕೆ.ಇಲ್ಯಾಸ್‌ರಿಂದ ಕಾರು ಚಾಲಕನ ವಿರುದ್ಧ ಪೊಲೀಸರಿಗೆ ದೂರು

0

ಪುತ್ತೂರು: ಬಲವಂತವಾಗಿ ಯುವತಿ ಪಕ್ಕ ಕುಳ್ಳಿರಿಸಿ ಫೋಟೋ ತೆಗೆಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲದೇ ಹಣ ಕೊಡಲು ನಿರಾಕರಿಸಿದ ವೇಳೆ ಕಾರಿನ ಕೀ ಬಲವಂತವಾಗಿ ಎಳೆದುಕೊಂಡು ಹೋಗಿ ಕಾರನ್ನು ಕೊಂಡೊಯ್ದು 5 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟು ಬೆದರಿಕೆಯೊಡ್ಡಲಾಗುತ್ತಿದೆ ಎಂದು ಕಡಬ ಹೊಸಮಠ ನಿವಾಸಿ ಹೆಚ್.ಕೆ.ಇಲ್ಯಾಸ್ ಎಂಬವರು ಜೂ.23ರಂದು ನೀಡಿದ ದೂರಿನಂತೆ ಅವರ ಕಾರು ಚಾಲಕ ಫೈಸಲ್ ಎಂಬಾತನ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.


ಮೂಲತ: ಕಡಬ ತಾಲೂಕಿನ ಬಲ್ಯ ಗ್ರಾಮದ ಹೊಸಮಠ ನಿವಾಸಿಯಾಗಿರುವ ಹೆಚ್.ಕೆ.ಇಲ್ಯಾಸ್‌ರವರು ಪ್ರಸ್ತುತ ಮಂಗಳೂರಿನ ಬಲ್ಮಠದಲ್ಲಿ ವಾಸ್ತವ್ಯವಿದ್ದಾರೆ. ಅವರಿಗೆ ಹೊಸಮಠದಲ್ಲಿ ಕೃಷಿ ತೋಟವಿದ್ದು ಕೃಷಿ ಕೆಲಸ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಕಡಬಕ್ಕೆ ತಮ್ಮದೇ ಕಾರಿನಲ್ಲಿ(ಕೆಎ 19 ಎಂಡಿ 3599) ಬಂದು ಹೋಗುತ್ತಿದ್ದರು. ಈ ಕಾರಿಗೆ ಫೈಸಲ್ ಎಂಬಾತನನ್ನು ಕಾರು ಚಾಲಕನಾಗಿ ಇಟ್ಟುಕೊಂಡಿದ್ದರು. ಕಾರು ಚಾಲಕ ಫೈಸಲ್ ಜೂ.14ರಂದು ಬೆಳಿಗ್ಗೆ ಮಂಗಳೂರಿನಿಂದ ಕಾರಿನಲ್ಲಿ ಬಲ್ಯ ಹೊಸಮಠಕ್ಕೆ ಬಂದಿದ್ದು, ಮಧ್ಯಾಹ್ನದ ವೇಳೆಗೆ ಇಲ್ಯಾಸ್‌ರವರು ಬಟ್ಟೆಯನ್ನು ತೆಗೆದು ತೋಟಕ್ಕೆ ಹೋಗಲು ರೆಡಿ ಆಗುತ್ತಿದ್ದಾಗ ಅವರ ಮನೆಗೆ ಸ್ಕೂಟರ್‌ನಲ್ಲಿ ಮುಸ್ಲಿಂ ಯುವತಿ ಮತ್ತು ಯುವಕ ಬಂದಿದ್ದರು. ಈ ಸಮಯ ಕಾರು ಚಾಲಕ ಫೈಸಲ್ ಮತ್ತು ಯುವಕ ಮನೆಗೆ ಬಂದಿದ್ದ ಮುಸ್ಲಿಂ ಯುವತಿಯೊಂದಿಗೆ ಇಲ್ಯಾಸ್‌ರನ್ನು ಬಲವಂತವಾಗಿ ಕುಳ್ಳಿರಿಸಿದ್ದು ಆಕೆ ಬುರ್ಖಾ ತೆಗೆದು ಟೀ ಶರ್ಟ್ ಹಾಕಿ ಇಲಿಯಾಸ್‌ರವರ ಪಕ್ಕ ಕುಳಿತುಕೊಂಡಾಗ ಆರೋಪಿತರಾದ ಫೈಸಲ್ ಮತ್ತು ಯುವಕ ಪೋಟೋ ತೆಗೆದಿದ್ದಾರೆ. ನಂತರ ಇಲ್ಯಾಸ್‌ರವರಲ್ಲಿ 5 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟು ಹಣ ಕೊಡದಿದ್ದರೆ ಪೋಟೋವನ್ನು ವೈರಲ್ ಮಾಡುವುದಾಗಿ ಬೆದರಿಸಿದ್ದಾರೆ. ಇಲ್ಯಾಸ್‌ರವರು ಹಣವನ್ನು ಕೊಡುವುದಿಲ್ಲ ಎಂದು ಹೇಳಿದಾಗ ಫೈಸಲ್ ಹಾಗೂ ಯುವಕ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ. ಹಣ ಕೊಡದೇ ಇದ್ದ ಹಿನ್ನೆಲೆಯಲ್ಲಿ ಕಾರು ಚಾಲಕ ಫೈಸಲ್ ಇಲ್ಯಾಸ್‌ರನ್ನು ಎಳೆದಾಡಿ ಅವರಿಂದ ಬಲವಂತವಾಗಿ ಕಾರಿನ ಕೀಯನ್ನು ಎಳೆದುಕೊಂಡು ಕಾರನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೇ ಅದೇ ದಿನ ರಾತ್ರಿ ಫೋನ್ ಕರೆ ಮಾಡಿ 5 ಲಕ್ಷ ಹಣ ಕೊಡದಿದ್ದರೆ ನಿಮ್ಮ ಕಾರನ್ನು ಅಪಘಾತಪಡಿಸುತ್ತೇನೆ ಅಥವಾ ಮಾರಾಟ ಮಾಡುತ್ತೇನೆ ಎಂದು ಬೆದರಿಕೆ ಹಾಕಿರುತ್ತಾನೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಹೆಚ್.ಕೆ. ಇಲ್ಯಾಸ್‌ರವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಕಲಂ: 384.506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here