ಉಪ್ಪಿನಂಗಡಿ: ಇಲ್ಲಿನ ಮಾಲೀಕುದ್ದೀನಾರ್ ಜುಮಾ ಮಸೀದಿಯ ಅಧ್ಯಕ್ಷ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಉದ್ಯಮಿ ಉಪ್ಪಿನಂಗಡಿಯ ಕೆಂಪಿಮಜಲಿನವರಾದ ಹಾಜಿ ಮುಸ್ತಾಫ ಕೆಂಪಿ (49) ಅಲ್ಪಕಾಲದ ಅನಾರೋಗ್ಯದಿಂದ ಜೂ.26ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಕೆಲ ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದ ಇವರು, ಮುಸ್ಲಿಂ ಸಮುದಾಯದ ಮುಂದಾಳುವಾಗಿದ್ದರಲ್ಲದೆ, ಸೌಹಾರ್ದಯುತ ಸಮಾಜದ ಚಿಂತನೆಯನ್ನು ಹೊಂದಿದವರಾಗಿದ್ದರು. ಕಳೆದ 15 ವರ್ಷಗಳಿಂದ ಉಪ್ಪಿನಂಗಡಿ ಮಾಲಿಕುದ್ದೀನಾರ್ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾಗಿದ್ದರು. ಅಲ್ಲದೇ, ಉಪ್ಪಿನಂಗಡಿ ಗ್ರಾ.ಪಂ. ಮಾಜಿ ಸದಸ್ಯರಾಗಿ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯರಾಗಿ, ಪುತ್ತೂರು ತಾಲೂಕು ಸಂಯುಕ್ತ ಜಮಾಅತ್ ಉಪಾಧ್ಯಕ್ಷರಾಗಿ, ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿಯ ಉಪಾಧ್ಯಕ್ಷರಾಗಿ, ಕಮ್ಮಾಡಿ ಇಸ್ಲಾಮಿಕ್ ಸೆಂಟರ್‌ನ ಉಪಾಧ್ಯಕ್ಷರಾಗಿ, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಕೇಂದ್ರ ಸಮಿತಿಯ ಸದಸ್ಯರಾಗಿ, ಉಪ್ಪಿನಂಗಡಿಯ ಇಂಡಿಯನ್ ಸ್ಕೂಲ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮುಸ್ಲಿಂ ಸಮುದಾಯದ ಮುಂದಾಳುವಾಗಿದ್ದ ಇವರು ಉಪ್ಪಿನಂಗಡಿಯಲ್ಲಿ ನಾಗರಿಕ ಹಿತರಕ್ಷಣಾ ಸಮಿತಿಯನ್ನು ಸ್ಥಾಪಿಸಿ ಸಮುದಾಯಕ್ಕೆ ಅನ್ಯಾಯವಾದಾಗ ಹೋರಾಟಗಳ ನೇತೃತ್ವ ವಹಿಸಿದ್ದರು. ಮೃತರು ಪತ್ನಿ, ಐವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಬಂಧು- ಬಳಗವನ್ನು ಅಗಲಿದ್ದಾರೆ.