ಮಾದಕ ದ್ರವ್ಯ ಬಳಕೆ, ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ, ಜಾಥಾ

0

ಮಾದಕ ದ್ರವ್ಯ ಬಳಕೆ ದೇಶದ ಆರ್ಥಿಕತೆ, ಪ್ರಗತಿಗೆ ಮಾರಕ-ಆಂಟನಿ ಪ್ರಕಾಶ್ ಮೊಂತೆರೋ


ಪುತ್ತೂರು: ಸಂತ ಫಿಲೋಮಿನಾ ಕಾಲೇಜು, ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜು ಹಾಗೂ ಫಿಲೋಮಿನಾ ಕಾಲೇಜು ಪ್ರೌಢಶಾಲೆಯ ಎನ್ ಸಿ ಸಿ ಘಟಕಗಳು ಹಾಗೂ ಆಂಟಿ ಡ್ರಗ್ ವಿಜಿಲೆನ್ಸ್ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಅಂತರ್ರಾಷ್ಟ್ರೀಯ ಮಾದಕ ದ್ರವ್ಯ ಬಳಕೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಮಾದಕ ವ್ಯಸನಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಜಾಥಾವನ್ನು ಆಯೋಜಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ವಂ|ಡಾ| ಆಂಟೊನಿ ಪ್ರಕಾಶ್ ಮೊಂತೆರೊ ರವರು ಯುವ ಶಕ್ತಿಯು ರಾಷ್ಟ್ರದ ಪ್ರಬಲ ಶಕ್ತಿಯಾಗಿದೆ. ಆದರೆ ಇಂದಿನ ಯುವಕರು ಮಾದಕ ದ್ರವ್ಯ ಸೇವನೆಯ ವ್ಯಸನಕ್ಕೆ ತುತ್ತಾಗಿ ಹಲವಾರು ರೋಗಗಳಿಗೆ ಆಹ್ವಾನ ನೀಡುತ್ತಿದ್ದಾರೆ. ಇದು ದೇಶದ ಆರ್ಥಿಕತೆ ಹಾಗೂ ಪ್ರಗತಿಗೆ ಮಾರಕವಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುತ್ತೂರು ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀಕಾಂತ್ ರಾಥೋಡ್ಮಾದಕ ದ್ರವ್ಯವನ್ನು ತಯಾರಿಸುವುದು, ಸರಬರಾಜು ಮಾಡುವುದು ಹಾಗೂ ಸೇವಿಸುವುದು ಇವೆಲ್ಲವೂ ಶಿಕ್ಷಾರ್ಹ ಅಪರಾಧಗಳಾಗಿವೆ. ಇಂತಹ ಪಿಡುಗು ಇಂದಿನ ಯುವ ಜನತೆಯನ್ನು ದಾರಿ ತಪ್ಪಿಸುತ್ತಿದೆ. ಪೊಲೀಸ್ ಇಲಾಖೆಯಲ್ಲಿರುವ ಕಾರಣ ಈ ವ್ಯಸನಕ್ಕೆ ತುತ್ತಾದವರನ್ನು ಹತ್ತಿರದಿಂದ ನೋಡಿದ್ದೇನೆ. ಈ ಪಿಡುಗು ಅತ್ಯಂತ ಹಾನಿಕಾರಕವಾದುದು. ಇದರ ವಿರುದ್ಧ ಹೋರಾಡುವ ಹಾಗೂ ಈ ಪಿಡುಗಿನ ಬಗ್ಗೆ ಜನತೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಂತ ಫಿಲೋಮಿನಾ ವಿದ್ಯಾರ್ಥಿಗಳ ಈ ಪ್ರಯತ್ನ ಪ್ರಶಂಸನೀಯ. ವಿದ್ಯಾರ್ಥಿಗಳಿಗೆ ಸಾಮಾಜಿಕ ಕಳಕಳಿ ಅತಿ ಅಗತ್ಯ. ಮಾದಕ ದ್ರವ್ಯಗಳ ಕಳ್ಳ ಸಾಗಣೆಯನ್ನು ಹಾಗೂ ಅವುಗಳ ಬಳಕೆಯನ್ನು ತಡೆಗಟ್ಟಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಯುವಜನರ ಸಹಾಯ ಅಗತ್ಯ” ಎಂದು ಹೇಳಿದರು.


ಈ ಸಂದರ್ಭದಲ್ಲಿ `ಮಾದಕ ದ್ರವ್ಯಗಳ ಬಳಕೆ ಹಾಗೂ ಸಾಗಾಣಿಕೆಗೆ ಪ್ರೋತ್ಸಾಹ ನೀಡುವುದಿಲ್ಲ ‘ ಎಂದು ಎನ್ ಸಿ ಸಿ ಕೆಡೆಟ್ ಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಂ| ಅಶೋಕ್ ರಾಯನ್ ಕ್ರಾಸ್ತ, ಸಂತ ಫಿಲೋಮಿನಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಂ| ಮ್ಯಾಕ್ಸಿಮ್ ಡಿಸೋಜ, ಹವಾಲ್ದಾರ್ ತಂಗವೇಲು, ಹವಾಲ್ದಾರ್ ಸುರೇಶ್ ಕುಮಾರ್ ಉಪಸ್ಥಿತರಿದ್ದರು.

ಕಾಲೇಜಿನ ಎನ್ ಸಿ ಸಿ ಅಧಿಕಾರಿಯಾದ ಲೆಫ್ಟಿನೆಂಟ್ ಜೋನ್ಸನ್ ಡೇವಿಡ್ ಸಿಕ್ವೆರಾ, ನೌಕಾದಳದ ಅಧಿಕಾರಿಯಾದ ತೇಜಸ್ವಿ ಭಟ್, ಸಂತ ಫಿಲೋಮಿನಾ ಪ್ರೌಢಶಾಲೆಯ ಎನ್ ಸಿ ಸಿ ಅಧಿಕಾರಿಗಳಾದ ನರೇಶ್ ಲೋಬೋ, ಕ್ಲೆಮೆಂಟ್ ಪಿಂಟೋ, ಹಾಗೂ ರೋಶನ್ ಸಿಕ್ವೆರಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕಾಲೇಜಿನ ಆಂಟಿ ಡ್ರಗ್ ವಿಜಿಲೆನ್ಸ್ ಸಮಿತಿಯ ಸಂಯೋಜಕರಾದ ಪೌಲ್ ಹೆರಾಲ್ಡ್ ಮಸ್ಕರೇಸ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನಿಂದ ಪ್ರಾರಂಭಗೊಂಡ ಜಾಥಾವು ಕಾವೇರಿ ಕಟ್ಟೆ ಮಾರ್ಗವಾಗಿ ಸಂಚರಿಸಿ ದರ್ಬೆ ವೃತ್ತದ ಮೂಲಕ ಹಾದು ಕಾಲೇಜಿನ ಮುಖ್ಯ ದ್ವಾರದ ಎದುರು ಮುಕ್ತಾಯಗೊಂಡಿತು.

LEAVE A REPLY

Please enter your comment!
Please enter your name here