ಪುತ್ತೂರು:ದ.ಕ. ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಹಾಗೂ ಹವಮಾನಾಧಾರಿತ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಮುಂದುವರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ವತಿಯಿಂದ ಜೂ.26ರಂದು ಸಹಾಯಕ ಆಯುಕ್ತರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ದ.ಕ ಜಿಲ್ಲೆಯಲ್ಲಿ ಈ ವರ್ಷ ಬಿಸಿಲಿನ ಪ್ರಖರತೆ 40 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ.ಇದರಿಂದಾಗಿ ತೆಂಗು, ಬಾಳೆ, ಕಾಳುಮೆಣಸು, ತರಕಾರಿ, ಅಡಿಕೆ ಕೃಷಿಗಳು ನಾಶವಾಗಿವೆ.ಜೊತೆಗೆ ಈ ವರ್ಷ ಮಳೆಯೂ ಸಕಾಲಕ್ಕೆ ಬಾರದೇ ಇದ್ದು ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದೆ.ಶೇ.60ರಷ್ಟು ಮಳೆಯ ಪ್ರಮಾಣವೂ ಕಡಿಮೆಯಾಗಿದೆ ಎಂದು ಹವಮಾನ ಇಲಾಖೆ ವರದಿ ಮಾಡಿದೆ.ಹೀಗಾಗಿ ದ.ಕ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.ಕಾಳು ಮೆಣಸು ಹಾಗೂ ಅಡಿಕೆಗೆ ಹವಾಮಾನ ಆಧಾರಿತ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಗೆ ಪ್ರತಿ ವರ್ಷ ಜೂ.20ರ ಒಳಗಾಗಿ ರೈತರಿಗೆ ಹೆಕ್ಟೆರಿಗೆ ರೂ.6400 ಪಾವತಿಸಲು ಸೂಚನೆ ಬರುತ್ತಿತ್ತು.ಈ ಬಾರಿ ಜೂ.25 ಕಳೆದರೂ ಇದಕ್ಕೆ ಸಂಬಂಧಪಟ್ಟ ಇಲಾಖೆ ಈ ತನಕ ಯಾವುದೇ ಸೂಚನೆಯನ್ನು ನೀಡಿಲ್ಲ.ಹೀಗಾಗಿ ಸಂಬಂಧಪಟ್ಟ ಇಲಾಖೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ಪದಾಧಿಕಾರಿಗಳಾದ ಶಿವಚಂದ್ರ ಈಶ್ವರಮಂಗಲ, ಕೊರಗಪ್ಪ ನಾಯ್ಕ ಆರ್ಯಾಪು, ಲೋಕಯ್ಯ ನಾಯ್ಕ ದೇವಸ್ಯ, ಪರಮೇಶ್ವರ ನಾಯಕ್ ಪದವು ಹಾಗೂ ಮಧುಸೂದನ ಗೌಡ ಕೋಡಂದೂರು ಮನವಿ ಸಲ್ಲಿಕೆ ಸಂದರ್ಭ ಉಪಸ್ಥಿತರಿದ್ದರು.