ಕೋರ್ಟ್‌ರಸ್ತೆಯಲ್ಲೊಂದು ಅಪಾಯಕಾರಿ ಫುಟ್‌ಪಾತ್….!ಮೂರು ತಿಂಗಳಿನಿಂದ ಬಾಯಿತೆರೆದು ನಿಂತಿದೆ ಚರಂಡಿ

0

ಪುತ್ತೂರು:ನಗರ ಸಭೆಯ ವತಿಯಿಂದ ಕೋರ್ಟ್‌ರಸ್ತೆ ಪ್ರೇಮ ಬೇಕರಿಯ ಬಳಿಯ ಚರಂಡಿಗೆ ಕೌಕ್ಯಾಚರ್ ಅಳವಡಿಸುವ ಸಂದರ್ಭದಲ್ಲಿ ಅಗೆದು ಹಾಕಿರುವ ಫುಟ್‌ಪಾತ್ ಮೇಲಿನ ಸ್ಲಾಬ್ ಕಲ್ಲನ್ನು ಮರು ಅಳವಡಿಸದೇ ಕಳೆದ ಸುಮಾರು ಮೂರು ತಿಂಗಳುಗಳಿಂದ ತೆರೆದುಕೊಂಡಿದ್ದು ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಸಂಕಷ್ಟವನ್ನು ಉಂಟುಮಾಡುತ್ತಿದೆ.

ಕೋರ್ಟ್‌ರಸ್ತೆಯ ಪ್ರೇಮ ಬೇಕರಿ ಬಳಿಯಿಂದ ಒಳ ಹೋಗುವ ರಸ್ತೆಗೆ ಕಾಂಕ್ರಿಟೀಕರಣ ಹಾಗೂ ಚರಂಡಿಗೆ ಕೌಕ್ಯಾಚರ್ ಅಳವಡಿಸಲು ಫುಟ್‌ಪಾತ್‌ಗೆ ಈ ಹಿಂದೆ ಅಳವಡಿಸಲಾಗಿದ್ದ ಕಾಂಕ್ರೀಟ್ ಸ್ಲಾಬ್‌ನ್ನು ತೆರವುಗೊಳಿಸಲಾಗಿತ್ತು. ಒಳ ರಸ್ತೆಯ ಅಗಲದಷ್ಟು ಕೌಕ್ಯಾಚರ್ ಅಳವಡಿಸಲಾಗಿದೆ. ಫುಟ್‌ಪಾತ್‌ನಲ್ಲಿ ಉಳಿದ ಸ್ವಲ್ಪ ಭಾಗಕ್ಕೆ ಸ್ಲಾಬ್ ಕಲ್ಲನ್ನು ಅಳವಡಿಸದೇ ಹಾಗೆಯೇ ಬಾಯಿ ತೆರೆದು ನಿಂತಿದೆ.ಕಾಂಕ್ರಿಟೀಕರಣ ಹಾಗೂ ಕೌಕ್ಯಾಚರ್ ಅಳವಡಿಸಿ ಸುಮಾರು ಮೂರು ತಿಂಗಳುಗಳು ಕಳೆದರೂ ತೆರವುಗೊಳಿಸಿದ ಸ್ಲಾಬ್‌ನ್ನು ಅಳವಡಿಸಿಲ್ಲ. ತೆರವುಗೊಳಿಸಿದ್ದ ಕಲ್ಲನ್ನು ಬೇರೆಡೆಗೆ ಅಳವಡಿಸಲಾಗಿದ್ದು ಇಲ್ಲಿ ಮಾತ್ರ ಚರಂಡಿ ಬಾಯಿ ತೆರೆದು ಅಪಾಯ ಆಹ್ವಾನಿಸುವಂತಿದೆ.ಹಲವು ಮಂದಿ ಪಾದಚಾರಿಗಳು ಚರಂಡಿಗೆ ಬಿದ್ದು ಕೈ, ಕಾಲುಗಳಿಗೆ ಗಾಯಗಳುಂಟಾಗಿರುವುದಲ್ಲದೆ ವಾಹನಗಳು ಚರಂಡಿಗೆ ಬಿದ್ದ ಉದಾಹರಣೆಗಳಿವೆ.
ಸ್ಲಾಬ್ ಅಳವಡಿಸದೇ ಅಪಾಯ ಉಂಟಾಗುತ್ತಿರುವ ಬಗ್ಗೆ ಸ್ಥಳೀಯರು ನಗರ ಸಭೆಯ ಗಮನಕ್ಕೆ ತಂದಿದ್ದಾರೆ.ನಗರ ಸಭೆಯ ಸಿಬ್ಬಂದಿಗಳು ಹಲವು ಬಾರಿ ಬಂದು ಹೊಂಡದ ಭಾವಚಿತ್ರ ತೆಗೆದು ಹೋಗಿದ್ದಾರೆ. ಸ್ಥಳೀಯರೂ ನಗರ ಸಭೆಗೆ ಚರಂಡಿಯ ಭಾವಚಿತ್ರ ತೆಗೆದು ಕಳುಹಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕೂಡಲೇ ಇದನ್ನು ಸರಿಪಡಿಸಿ ಇನ್ನಷ್ಟು ಅನಾಹುತಗಳನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here