ಕೆ.ಆರ್.ಪುರಂ ತಹಸಿಲ್ದಾರ್ ಅಜಿತ್ ಕುಮಾರ್ ರೈ ಮನೆಗೆ ಲೋಕಾಯುಕ್ತ ದಾಳಿ; 40 ಲಕ್ಷ ರೂ.ನಗದು, ದುಬಾರಿ ಕಾರು, ನೂರಾರು ಎಕ್ರೆ ಬೇನಾಮಿ ಆಸ್ತಿ ಪತ್ತೆ

0

ಅಜಿತ್ ಕುಮಾರ್ ರೈ ಸಹೋದರ, ತಾಯಿ ಮನೆ, ಆಪ್ತರ ಮನೆ, ಕಚೇರಿಗಳ ಮೇಲೂ ಏಕಕಾಲದಲ್ಲಿ ದಾಳಿ

ಪುತ್ತೂರು: ಬೆಂಗಳೂರು ಪೂರ್ವ ತಾಲೂಕು(ಕೆ.ಆರ್.ಪುರಂ)ತಹಸಿಲ್ದಾರ್ ಅಜಿತ್ ಕುಮಾರ್ ರೈ ಸೊರಕೆ ಸೇರಿದಂತೆ ರಾಜ್ಯದಾದ್ಯಂತ 15 ಸರಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಜೂ.28ರಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿಯಾಗಿದೆ.ಭ್ರಷ್ಟಾಚಾರ ಆರೋಪಗಳು ಹಾಗೂ ಆದಾಯ ಮೀರಿ ಆಸ್ತಿ ಸಂಪಾದನೆ ಆರೋಪಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ.

ಕೆ.ಆರ್.ಪುರಂ ತಹಶೀಲ್ದಾರ್(ಗ್ರೇಡ್-2)ಆಗಿರುವ ಕೆಯ್ಯೂರು ಗ್ರಾಮದ ಸಾಗು ನಿವಾಸಿ ಅಜಿತ್ ಕುಮಾರ್ ರೈ ಸೊರಕೆ ಅವರ ಬೆಂಗಳೂರು ಮನೆ, ಅವರ ಸಹೋದರ ಆಶಿತ್ ರೈ ಮನೆ, ಕೆಯ್ಯೂರು ಗ್ರಾಮದ ಸಾಗುವಿನಲ್ಲಿರುವ ತಾಯಿ ಮನೆ ಮತ್ತು ಅಜಿತ್ ರೈ ಅವರ ನಿಕಟವರ್ತಿಗಳಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ದಾಳಿ ಮಾಡಿದ್ದಾರೆ.ಲೋಕಾಯುಕ್ತ ಎಸ್.ಪಿ.ಅಶೋಕ್,ಡಿವೈಎಸ್ಪಿ ಪ್ರಮೋದ್ ನೇತೃತ್ವದಲ್ಲಿ ದಾಳಿ ನಡೆದಿತ್ತು. ರೂ.೪೦ ಲಕ್ಷ ನಗದು, ನೂರಾರು ಎಕರೆ ಜಮೀನಿನ ದಾಖಲೆ ಹಾಗೂ ಹಲವು ದುಬಾರಿ ಬೆಲೆಯ ಕಾರುಗಳು ಇರುವುದು ಪತ್ತೆಯಾಗಿದೆ.ಒಟ್ಟು 11 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದ್ದು ಹಲವು ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಪತ್ತೆಯಾಗಿರುವ ಆಸ್ತಿಗಳ ಒಟ್ಟು ಮೌಲ್ಯ ರೂ.1.9 ಕೋಟಿ ಎಂದು ಅಂದಾಜು ಮಾಡಲಾಗಿದೆ.ಈ ಜಮೀನುಗಳು ಹಲವರ ಹೆಸರಿನಲ್ಲಿದ್ದು, ದುಬಾರಿ ಬೆಲೆಯ ಕಾರುಗಳೂ ಬೇರೆಯವರ ಹೆಸರಲ್ಲಿದ್ದು ಬೇನಾಮಿ ಆಸ್ತಿಗಳೆಂದು ಶಂಕಿಸಲಾಗಿದೆ.ಈ ಕುರಿತು ಬೆಂಗಳೂರು ಕೆಎಲ್‌ಎ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಕರ್ನಾಟಕ ಲೋಕಾಯುಕ್ತ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ತಂದೆಯ ನಿಧನದ ಬಳಿಕ ಅನುಕಂಪದಲ್ಲಿ ಉದ್ಯೋಗ:
ಅಜಿತ್ ಕುಮರ್ ರೈಯವರು ತಾಲೂಕಿನ ಕೆಯ್ಯೂರು ಗ್ರಾಮದ ಸಾಗುವಿನವರು.ಅವರ ತಂದೆ ಆನಂದ್ ರೈ ಸೊರಕೆ ಅವರು ಸರ್ಕಾರಿ ಸರ್ವೇಯರ್ ಆಗಿ ಕೆಲಸ ಮಾಡುತ್ತಿದ್ದರು.ಅವರು ತನ್ನ 51ನೇ ವಯಸ್ಸಿನಲ್ಲಿ ನಿಧನರಾಗಿದ್ದರು.ಅವರ ಮರಣ ನಂತರ ಅನುಕಂಪದ ಆಧಾರದಲ್ಲಿ ಅಜಿತ್ ರೈ ಅವರಿಗೆ ಸರ್ಕಾರಿ ಕೆಲಸ ಸಿಕ್ಕಿತ್ತು.ಸಣ್ಣ ವಯಸ್ಸಿನಲ್ಲೇ ಬೆಂಗಳೂರುನಲ್ಲಿ ಕಂದಾಯ ಇಲಾಖೆಯಲ್ಲಿ ಹೆಡ್ ಕ್ಲರ್ಕ್ ಆಗಿ ಬಳಿಕ ನಿರೀಕ್ಷಕರಾಗಿ ಅಲ್ಲಿಂದ ಭಡ್ತಿ ಹೊಂದಿ ಉಪ ತಹಶೀಲ್ದಾರ್ ಬಳಿಕ ಕೆ.ಎ.ಎಸ್ ಪರೀಕ್ಷೆ ಬರೆದು ತಹಶಿಲ್ದಾರ್ ಹುದ್ದೆಗೆ ನೇಮಕವಾಗಿದ್ದರು.ಇವರ ಸಹೋದರ ಅಶಿತ್ ರೈ ಕೂಡ ಬೆಂಗಳೂರಿನಲ್ಲೇ ಉದ್ಯೋಗದಲ್ಲಿದ್ದು ಸಂಸಾರ ಸಮೇತ ಅಲ್ಲೇ ವಾಸವಾಗಿದ್ದಾರೆ.ಕೆಯ್ಯೂರು ಸಾಗುವಿನಲ್ಲಿ ಮನೆ, ಕೃಷಿಭೂಮಿಯಿದ್ದು ಇಲ್ಲಿರುವ ಮನೆಯಲ್ಲಿ ತಾಯಿ ಜಲಜಾಕ್ಷಿ ಎ.ರೈಯವರು ಮಾತ್ರ ಇದ್ದಾರೆ.

ಕೆಲಸದಿಂದ ಅಮಾನತುಗೊಂಡಿದ್ದರು:
ಬೆಂಗಳೂರು ಪೂರ್ವ ತಾಲೂಕಿನ (ಕೆ.ಆರ್.ಪುರ) ತಹಸಿಲ್ದಾರ್ ಆಗಿದ್ದ ಅಜಿತ್ ಕುಮಾರ್ ರೈಯವರು, ಬಿಬಿಎಂಪಿ ಕೈಗೊಂಡಿದ್ದ ಒತ್ತುವರಿ ತೆರವು ಕಾರ್ಯಾಚರಣೆಗೆ ಸಹಕರಿಸದ ಅರೋಪದಡಿ ಸರ್ಕಾರ 2022, ನವೆಂಬರ್‌ನಲ್ಲಿ ಅವರನ್ನು ಸೇವೆಯಿಂದ ಅಮಾನತು ಮಾಡಿತ್ತು.ಬಿಬಿಎಂಪಿ ವತಿಯಿಂದ ಮಹದೇವಪುರದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮಾಡುತ್ತಿದ್ದರೂ ಇದಕ್ಕೆ ಕಾನೂನಾತ್ಮಕವಾಗಿ ತೊಡಕು ಉಂಟಾಗುತ್ತಿತ್ತು.ಈ ಪ್ರಕರಣದಲ್ಲಿ ತಹಶೀಲ್ದಾರ್ ಅಜಿತ್ ಕುಮಾರ್ ರೈ ಒತ್ತುವರಿದಾರರಿಗೆ ಸಹಕಾರ ನೀಡುವ ಮೂಲಕ ಕಾನೂನಾತ್ಮಕವಾಗಿ ತೆರವು ಮಾಡದಂತೆ ನೋಡಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು.ಒತ್ತುವರಿ ತೆರವು ಕಾರ್ಯಕ್ಕೆ ತಹಶೀಲ್ದಾರ್ ವತಿಯಿಂದ ನಿರಂತರ ತಕರಾರು ಉಂಟಾಗುವಂತೆ ಮಾಡಿದ್ದು ಜತೆಗೆ ಒತ್ತುವರಿದಾರರು ನ್ಯಾಯಾಲಯಗಳಿಂದ ಸ್ಟೇ ಆದೇಶ ತರಲು ಕೂಡ ನೆರವಾಗಿದ್ದರು ಎಂಬ ಆರೋಪದಲ್ಲಿ ಅಮಾನತುಗೊಂಡಿದ್ದರು.

ಅಮಾನತು ತೆರವಾಗಿ ಮತ್ತೆ ಕೆ.ಆರ್.ಪುರಂನಲ್ಲಿ ಕರ್ತವ್ಯ:
ತನ್ನ ಅಮಾನತು ಆದೇಶದ ವಿರುದ್ದ ಅಜಿತ್ ಕುಮಾರ್ ರೈಯವರು ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯ(ಕೆ.ಎ.ಟಿ)ದ ಮೆಟ್ಟಿಲೇರಿದ್ದರು.ಇವರ ಮೇಲ್ಮನವಿಯನ್ನು ಪುರಸ್ಕರಿಸಿದ್ದ ಕೆಎಟಿ ಅಮಾನತು ಆದೇಶಕ್ಕೆ ತಡೆಯಾಜ್ಞೆ ನೀಡಿ ಮತ್ತೆ ಕೆ.ಆರ್.ಪುರಂನಲ್ಲಿಯೇ ಕರ್ತವ್ಯದಲ್ಲಿ ಮುಂದುವರಿಯಲು ಅವಕಾಶ ನೀಡಿತ್ತು.ಅದರಂತೆ ಅಜಿತ್ ಕುಮಾರ್ ರೈಯವರು ಕೆ.ಆರ್.ಪುರಂ ತಹಸಿಲ್ದಾರ್ ಆಗಿ ಮತ್ತೆ ಕರ್ತವ್ಯ ಮುಂದುವರಿಸುತ್ತಿದ್ದಾರೆ.


ಬೆಳ್ಳಂಬೆಳಗ್ಗೆ ನಡೆದಿತ್ತು ದಾಳಿ
ನಾಲ್ಕು ಕಾರುಗಳಲ್ಲಿ ಬೆಳ್ಳಂಬೆಳಗ್ಗೆ 4.30ರ ಸಮಯದಲ್ಲಿ ಬೆಂಗಳೂರಿನಲ್ಲಿರುವ ಅಜಿತ್ ರೈ ಮನೆ ಮೇಲೆ ದಾಳಿ ನಡೆದಿದೆ.ಸುಮಾರು 15 ಕ್ಕೂ ಹೆಚ್ಚು ಅಧಿಕಾರಿಗಳು ಅಜಿತ್ ಕುಮಾರ್ ರೈ ವಾಕಿಂಗ್ ಹೋಗುವ ಮುನ್ನ ದಾಳಿ ಮಾಡಿದ್ದಾರೆ. ಅಜಿತ್ ಕುಮಾರ್ ರೈಯವರ ಮನೆಯ ಪಾರ್ಕಿಂಗ್‌ನಲ್ಲಿ ಬೈಕ್ ಹಾಗೂ ಕಾರ್‌ಗಳ ತಪಾಸಣೆ ನಡೆದಿದೆ.ಮನೆಯಲ್ಲಿ ಐಶಾರಾಮಿ ಕಾರು, ಜೀಪ್ ಪತ್ತೆಯಾಗಿದೆ.

11 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ
ಕೆಯ್ಯೂರು ಗ್ರಾಮದ ಸಾಗುವಿನಲ್ಲಿರುವ ಅಜಿತ್ ಕುಮಾರ್ ರೈಯವರ ತಾಯಿ ಮನೆ, ಬೆಂಗಳೂರಿನಲ್ಲಿರುವ ಅಣ್ಣನ ಮನೆ, ಆಪ್ತರ ಮನೆ, ಸೇರಿದಂತೆ ಒಟ್ಟು 11 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆದಿದೆ.ಅಜಿತ್ ಕುಮಾರ್ ರೈಯವರ ತಾಯಿ ಮನೆಯಾಗಿರುವ ಕೆಯ್ಯೂರು ಗ್ರಾಮದ ಸಾಗು ನಿವಾಸಕ್ಕೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಡಿವೈಎಸ್‌ಪಿ ಚೆಲುವರಾಜ್ ನೇತೃತ್ವದ ಅಧಿಕಾರಿಗಳ ತಂಡ ಎರಡು ವಾಹನಗಳಲ್ಲಿ ಬಂದು ದಾಳಿ ನಡೆಸಿದ್ದಾರೆ.ಮನೆಯಲ್ಲಿ ಅಜಿತ್ ರೈಯವರ ತಾಯಿ ಮಾತ್ರ ವಾಸವಿದ್ದು ಲೋಕಾಯುಕ್ತ ಪೊಲೀಸರು ಮನೆಯನ್ನು ಪರಿಶೀಲನೆ ಮಾಡಿದ್ದಾರೆ.ಕೆಲವೊಂದು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದ್ದು ಮಧ್ಯಾಹ್ನದ ತನಕವೂ ಶೋಧದಲ್ಲಿ ನಿರತರಾಗಿದ್ದರು.ಅಜಿತ್ ಕುಮಾರ್ ರೈಯವರ ದೇವನಹಳ್ಳಿಯ ಇಳತ್ತೋರೆನಲ್ಲಿರುವ ಮನೆ, ದೊಡ್ಡಬಳ್ಳಾಪುರದಲ್ಲಿರುವ ಮನೆ, ಚಂದ್ರಾ ಲೇಔಟ್ ಮನೆಗೂ ದಾಳಿ ನಡೆದಿದೆ.ಅಜಿತ್ ಕುಮಾರ್ ರೈಯವರಿಗೆ ಆಪ್ತ, ಬಸವೇಶ್ವರನಗರದಲ್ಲಿರುವ ಗೌರವ್ ಶೆಟ್ಟಿ ನೆಲ್ಲಿಕಟ್ಟೆ ಎಂಬವರ ಮನೆ ಮೇಲೂ ದಾಳಿ ನಡೆದಿದೆ.ಇಷ್ಟು ಮಾತ್ರವಲ್ಲದೆ ಅಜಿತ್ ಕುಮಾರ್ ರೈ ಸಂಬಂಧಿಕರ ಮನೆ ಮೇಲೂ ದಾಳಿ ನಡೆದಿದೆ ಎಂದು ವರದಿಯಾಗಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here