





ಕಡಬ: ಬಿಳಿನೆಲೆ ಗ್ರಾಮದ ಬೈಲು ಬಿಳಿನೆಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರ ವರ್ಗಾವಣೆ ವಿರೋಧಿಸಿ ಎರಡು ದಿನ ಮಕ್ಕಳ ಗೈರು ಕಂಡುಬಂದಿದ್ದ ಬೈಲು ಬಿಳಿನೆಲೆ ಶಾಲೆಗೆ ಮಂಗಳವಾರ ಮಕ್ಕಳು ಎಂದಿನಂತೆ ಹಾಜರಾಗಿ ತರಗತಿಯಲ್ಲಿ ಭಾಗವಹಿಸಿದರು.


ಬೈಲು ಬಿಳಿನೆಲೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ್ ಅವರ ವರ್ಗಾವಣೆಗೆ ವಿರೋಧಿಸಿ ಪ್ರತಿಭಟನೆ ಅಂಗವಾಗಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಿರಲಿಲ್ಲ. ಈ ಹಿನ್ನಲೆಯಲ್ಲಿ ಶನಿವಾರ ಹಾಗೂ ಸೋಮವಾರ ಮಕ್ಕಳು ಶಾಲೆಗೆ ಗೈರಾಗಿದ್ದರು. ಸೋಮವಾರ ಶಾಲೆಗೆ ಪುತ್ತೂರು ಬಿಇಒ ಲೋಕೇಶ್ ಭೇಟಿ ನೀಡಿ ವರ್ಗಾವಣೆಗೊಂಡಿರುವ ಚಂದ್ರಶೇಖರ್ ಅವರನ್ನು ವಾರದ ಮೂರು ದಿನ ಬೈಲು ಬಿಳಿನೆಲೆ ಶಾಲೆಗೆ ನಿಯೋಜಿಸುವುದಾಗಿ ತಿಳಿಸಿದ ಹಿನ್ನಲೆಯಲ್ಲಿ ಪೋಷಕರು ಪ್ರತಿಭಟನೆ ಕೈ ಬಿಟ್ಟು ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪಿಗೆ ಸೂಚಿಸಿದ್ದರು. ಅದರಂತೆ ಮಂಗಳವಾರ ಮಕ್ಕಳು ಶಾಲೆಗೆ ಹಾಜರಾಗಿದ್ದರು.













