ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್ ಉಚ್ಚಾಟನೆ ಆದೇಶ ರದ್ದುಗೊಳಿಸುವಂತೆ ನೆಲ್ಯಾಡಿ ಕಾಂಗ್ರೆಸ್ ಗ್ರಾಮ ಸಮಿತಿಯಿಂದ ಡಿಸಿಸಿ ಅಧ್ಯಕ್ಷರಿಗೆ ಮನವಿ

0

ನೆಲ್ಯಾಡಿ: ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪದಲ್ಲಿ ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್‌ರವರನ್ನು ಉಚ್ಚಾಟಿಸಿ ಮಾಡಿರುವ ಆದೇಶ ರದ್ದುಗೊಳಿಸುವಂತೆ ನೆಲ್ಯಾಡಿ ಕಾಂಗ್ರೆಸ್ ಗ್ರಾಮ ಸಮಿತಿ ವತಿಯಿಂದ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ.


ಉಷಾ ಅಂಚನ್‌ರವರು 15 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿದ್ದು ಮೂರು ಸಲ ತಾ.ಪಂ.ಗೆ ಸ್ಪರ್ಧೆ ಮಾಡಿದ್ದಾರೆ. ತಾ.ಪಂ.ಸದಸ್ಯೆಯಾಗಿ 10 ವರ್ಷ ಸೇವೆ ಸಲ್ಲಿಸಿ ಪಕ್ಷ ಸಂಘಟನೆ ಮಾಡಿರುತ್ತಾರೆ. ಇವರ ಅವಧಿಯಲ್ಲಿ ನೆಲ್ಯಾಡಿಯಲ್ಲಿ ಪಕ್ಷದ ಸಂಘಟನೆ ಬಲಯುತವಾಗಿದ್ದು ಗ್ರಾ.ಪಂ.ಮತ್ತು ಜಿ.ಪಂ.ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವಲ್ಲಿ ಇವರ ಪಾತ್ರ ಅಮೂಲ್ಯವಾದದ್ದು. 25 ವರ್ಷಗಳಿಂದ ಬಿಜೆಪಿ ಆಡಳಿತದಲ್ಲಿರುವ ನೆಲ್ಯಾಡಿ ಸಿ.ಎ.ಬ್ಯಾಂಕ್ ಚುನಾವಣೆಯಲ್ಲಿ ಅಲ್ಲಿನ ಅಧ್ಯಕ್ಷರಿಗಿಂತಲೂ 150 ಹೆಚ್ಚು ಮತ ಪಡೆದು ನಿರ್ದೇಶಕಿಯಾಗಿ ಚುನಾಯಿತರಾಗಿದ್ದಾರೆ.


ಉಷಾ ಅಂಚನ್‌ರವರು ಕಡಬ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ 7 ವರ್ಷ ಸೇವೆ ಸಲ್ಲಿಸಿದ್ದು ಅವರ ಅವಧಿಯಲ್ಲಿ ಅನೇಕ ಮೆಡಿಕಲ್ ಕ್ಯಾಂಪ್ ಸೇರಿದಂತೆ ಹಲವು ಚಟುವಟಿಕೆಗಳು ನಡೆದಿವೆ. ಅವರು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ತಿರುಗೇಟು ಕೊಡುವಂತಹ ದಿಟ್ಟ ಮಹಿಳೆಯಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರಿಗೆ ಯಾವುದೇ ಕಷ್ಟದ ಸಂದರ್ಭದಲ್ಲೂ ಅವರ ನೋವಿಗೆ ಸ್ಪಂದನೆ ನೀಡುತ್ತಿದ್ದರು. ಆದ್ದರಿಂದ ಉಷಾ ಅಂಚನ್‌ರವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದಲ್ಲಿ ಪಕ್ಷಕ್ಕೆ ಕೆಟ್ಟ ಹೆಸರು ಮತ್ತು ಪಕ್ಷ ಸಂಘಟನೆ ಮಾಡಲು ತುಂಬಾ ತೊಂದರೆಯುಂಟಾಗುತ್ತದೆ. ಆದ್ದರಿಂದ ಅವರ ಉಚ್ಚಾಟನೆಯ ಆದೇಶವನ್ನು ರದ್ದುಗೊಳಿಸಿ ಅವರಿಗೆ ನ್ಯಾಯ ಕೊಡಬೇಕೆಂದು ಡಿಸಿಸಿ ಅಧ್ಯಕ್ಷರಿಗೆ ಸಲ್ಲಿಸಿರುವ ಮನವಿಯಲ್ಲಿ ವಿನಂತಿಸಲಾಗಿದೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಲ್ಲಿ ತಾ.ಪಂ.ಮಾಜಿ ಸದಸ್ಯೆಯರಾದ ಉಷಾ ಅಂಚನ್, ಆಶಾ ಲಕ್ಷ್ಮಣ್ ಸಹಿತ ಕಡಬ ಹಾಗೂ ಸುಳ್ಯ ಬ್ಲಾಕ್ ಕಾಂಗ್ರೆಸ್‌ನಲ್ಲಿ ವಿವಿಧ ಜವಾಬ್ದಾರಿ ಹೊಂದಿದ್ದ 17 ಮಂದಿಯನ್ನು ಇತ್ತೀಚೆಗೆ ಉಚ್ಚಾಟಿಸಲಾಗಿತ್ತು.

LEAVE A REPLY

Please enter your comment!
Please enter your name here